ಜಗತ್ತಿಗೆ ಸನಾತನ ಹಿಂದೂ ಧರ್ಮದ ಮಹತ್ವ ಏನು? ಕೊಡುಗೆ ಏನು ?

ಇಡೀಜಗತ್ತು ಅಜ್ಞಾನ ಹಾಗೂ ಅಶಿಕ್ಷಣದ ಅಂಧಕಾರದಲ್ಲಿ ಮುಳುಗಿರುವಾಗ ನಮ್ಮ ಪ್ರಾಚೀನ ಭವ್ಯ ಭಾರತದೇಶ ಜ್ಞಾನ ರಾಶಿಯೂ, ಸಂಪತ್ತಿನ ಕಣಜವೂ ಸಭ್ಯತೆಯ ಭವ್ಯರೂಪವೂ ಆಗಿ ಆಧ್ಯಾತ್ಮದ ವಿಶ್ವಕೋಶವಾಗಿ ವಿಶ್ವಮಾನ್ಯವೂ ಜಗದ್ವಿಖ್ಯಾತವೂ ಆಗಿತ್ತು. ಇಲ್ಲಿನ ಸಂಸ್ಕೃತಿ ಧರ್ಮ ಆಚಾರ ವಿಚಾರಗಳು ವಿಶ್ವ ವ್ಯಾಪಿಯಾಗಿತ್ತು ಹಾಗೂ ಇಡೀಜಗತ್ತು ಹಿಂದೂ ಧರ್ಮಾಚರಣೆಯಲ್ಲಿ ತೊಡಗಿತ್ತು ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಿತ್ತು. ಇಂತಹ ಉನ್ನತಿಯನ್ನು ಕ್ರಿ ಪೂ ಐದು ಸಾವಿರ ವರುಷಗಳಷ್ಟು ಹಿಂದೆಯೇ ಭಾರತ ಸಾಧಿಸಿತ್ತು. ಶ್ರೀರಾಮನ ರಾಜ್ಯಾಡಳಿತ, ಶ್ರೀ ಕೃಷ್ಣನ ರಾಜಕೀಯ ಚತುರತೆ,ಪಾಂಡವರ ಯುದ್ಧ ನೈಪುಣ್ಯತೆ, ಧರ್ಮರಾಯನ ಧರ್ಮ ಪರತೆ, ಭೀಮನ ಬಲ, ಅರ್ಜುನನ ಕಾರ್ಯಕ್ಷಮತೆ, ಸತ್ಯ ಹರಿಶ್ಚಂದ್ರನ ಸತ್ಯ ಪಾಲನೆ, ಶ್ರವಣ ಕುಮಾರನ ಮಾತಾ ಪಿತೃ ಭಕ್ತಿ, ಏಕಲವ್ಯನ ಏಕಾಗ್ರತೆ, ಶ್ರದ್ಧೆ,  ನಳನ ಅಶ್ವ ವಿದ್ಯೆ ಪಾಕ ಶಾಸ್ತ್ರ, ಭಾಸ್ಕರಾಚಾರ್ಯರ ಖಗೋಳ ಶಾಸ್ತ್ರ, ವರಾಹಮೀರನ ಜ್ಯೋತಿಶ್ಯ ಶಾಸ್ತ್ರ, ಪತಂಜಲಿಯ ಯೋಗ ಶಾಸ್ತ್ರ, ಕಣಾದನ ಅಣು ವಿಜ್ಞಾನ, ಕೌಟಿಲ್ಯನ ಅರ್ಥ ಶಾಸ್ತ್ರ , ಭರತನ ನಾಟ್ಯ ಶಾಸ್ತ್ರ, ವಾತ್ಸಯಾಯನನ ಕಾಮ ಶಾಸ್ತ್ರ , ಚರಕರ ಆಯುರ್ವೇದ. ಪರಷುರಾಮನ ಶೌರ್ಯ ಭೀಷ್ಮನ ಪ್ರತಿಜ್ಞೆಯ ಬ್ರಹ್ಮ ಚರ್ಯ, ಜ್ಞಾನ ರಾಶಿಗಳಾದ  ಋಗ್, ಯಜುರ್, ಸಾಮ, ಅಥರ್ವ, ಎನ್ನುವ ನಾಲ್ಕು ವೇದಗಳು ಅರ್ಥವೇದ , ಧನುರ್ವೇದ , ಗಂಧರ್ವ ವೇದ, ಆಯುರ್ವೇದ, ಎಂಬ ನಾಲ್ಕು ಉಪವೇದಗಳು ಆದರ್ಷಪ್ರಾಯವಾದ ರಾಮಾಯಣ ಮಹಾಭಾರತ ಮುಂತಾದ ಮಹಾಕಾವ್ಯಗಳು ವೇದಸಾರಗಳಾದ ಉಪನಿಷತ್ತುಗಳು, ಜೀವನ ಆದರ್ಷವಾದ ಭಗವದ್ಗೀತೆ ಬ್ರಹ್ಮಸೂತ್ರಗಳು ಸಾಕಷ್ಟು ನೀತಿಕಥೆಗಳು ಸುಭಾಷಿತಗಳು ಅಸಂಖ್ಯಾತ ಋಷಿಮುನಿಗಳ ರಾಜ ಮಹಾರಾಜ ಚಕ್ರವರ್ತಿಗಳ ಜೀವನ ಆದರ್ಷಗಳು, ಹದಿನೆಂಟು ಪುರಾಣಗಳು, ಇವೆಲ್ಲದರ ಮೂಲಾಧಾರ ವಿಶ್ವ ಶ್ರೇಷ್ಠ ವಾದ ದೇವ ಭಾಷೆ ಸಂಸ್ಕೃತ, ವಿಶ್ವದ ಪ್ರಾಚೀನ  ಇತಿಹಾಸ, ವಿಶ್ವದ ಪ್ರಾಚೀನ ಸಂಸ್ಕೃತಿ, ಹೀಗೆ ಪಟ್ಟಿಮಾಡಲಾರದಷ್ಟು ಹಿಂದೂ ಧರ್ಮದ ಹೆಮ್ಮೆ ನಮ್ಮ ಮುಂದಿದೆ ಅದನ್ನು ಅರಿಯದ ನಾವು ಕಣ್ಣಿದ್ದೂ ಕುರುಡರಂತೆ ಆಗಿರುವುದು ಇಂದಿನ ವಿಪರ್ಯಾಸ ಹಿಂದುಗಳ ಕಣ್ಣಿಗೆ ಕಟ್ಟಿರುವ ಅಜ್ಞಾನದ ಪರದೆಯನ್ನು ತೆರೆಯುವ ಸಮಯ ಈಗ ಬಂದಿದೆ ಹಾಗೂ ಅನಿವಾರ್ಯವಾಗಿದೆ,

ನಮ್ಮ ವೇದ ಪುರಾಣಗಳಲ್ಲಿನ ಎಷ್ಟೋ ನಂಬಲಸಾಧ್ಯವಾದ ವಿವರಣೆಗಳೆಲ್ಲಾ ಇಂದು ಸತ್ಯವೆಂದು ಸಂಭವನೀಯವೆಂದೂ ಸಾಬೀತಾಗುತ್ತಿದೆ. ಕಲ್ಪನೆಯ ಕಟ್ಟುಕಥೆ ಎಂದು ಹೇಳಿ ಹೀಯಾಳಿಸುವವರಿದ್ದರೂ ಕಥೆಯ ಕಲ್ಪನೆಗೆ ಸಮಾಜದ ಎಷ್ಟೋ ಸತ್ಯ ಹಾಗೂ ವಾಸ್ತವ ಘಟನೆಗಳೇ ಒಸ್ತುಗಳಾಗಿರುತ್ತವೆಂಬುದು ಸುಳ್ಳಲ್ಲ. ಅದರಂತೆ ವಿಮಾನ ಯಾನ , (ಪುಷ್ಪಕ ವಿಮಾನ), ಅಂದೇ ಹೇಳಿದ್ದು ಇಂದು ಸತ್ಯವಾಗಿದೆ. ಅಂದು ಇದ್ದಿರಲೂ ಬಹುದೆಂಬುದಕ್ಕೆ ಸಾಕ್ಷಿ ಒದಗಿಸಲಾಗದಿದ್ದರೂ ಒಪ್ಪುವ ವಿಷಯವೇ ಆಗಿದೆ. ಅಗಾಂಗ ಕಸಿ, (ಗಣಪತಿ ) ಇದು ಕೂಡಾ ಇಂದು ಸಾಧ್ಯವಾಗಿದೆ. ಸದ್ಯದಲ್ಲಿಯೇ ಆಧುನಿಕ ವಿಜ್ಞಾನ ರುಂಡಕಸಿ ಮಾಡುವ ಪ್ರಯತ್ನದಲ್ಲಿದೆ. ಇದು ಸತ್ಯವಾಗಿದೆ. ಪ್ರಣಾಳ ಶಿಶು, (ಕೌರವರ ಜನನ ) ಇಂದು ಸಾಧ್ಯವಾಗಿದೆ. ಅಂಗಾಂಶದಿಂದ ಸೃಷ್ಠಿ. ಹೆಣ್ಣು ಗಂಡಿನ ಸಂಪರ್ಕ ಇಲ್ಲದೆ ಜನನಸಾದ್ಯ ಎಂಬುದು ನಮ್ಮ ಕಥೆಗಳ ಹಲವು ಉದಾಹರಣೆಗಳಲ್ಲಿದೆ. ಇಂದು ಇದೂ ಸಾಧ್ಯವಾಗಿ ತದ್ರೂಪಿಗಳನ್ನು ಮಾಡಲು ಸಾಧ್ಯ ಎಂದು ಸಾಬೀತಾಗಿದೆ. ಅಶರೀರವಾಣಿ ಎಲ್ಲೋ ಆಡಿದ ಮಾತು ಇನ್ನೆಲ್ಲೋ ಕೇಳುವುದು (ರೇಡಿಯೋ ಮೂಲಕ ಇದು ನಿಜವಾಗಿದೆ) ದೂರ ದರ್ಷನ ಕೂಡಾ ಮಹಾಭಾರತದಲ್ಲಿ ವಿದುರ ಅರಮನೆಯಲ್ಲಿಯೇ ಯುದ್ಧವನ್ನು ನೋಡಿ ದೃತರಾಷ್ಟ್ರನಿಗೆ ವಿವರಿಸುತ್ತಿದ್ದ ವಿವರಣೆಇದೆ. ಅಂತಚಕ್ಷು ಅಥವಾ ಐದನೆಯ ಇಂದ್ರಿಯ ಮೂರನಯ ಕಣ್ಣು ಇವೆಲ್ಲವೂ ನಿಜವೇ ಎನ್ನುವ ಕುರುಹುಗಳು ಇಂದು ಸತ್ಯವೆಂದು ಸಾಭೀತಾಗುತ್ತಿವೆ.  ಸಾಧನೆಯಿಂದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಅತೀಂದ್ರಿವಾದುದನ್ನು ಸಾಧಿಸಿದವರು ನಮ್ಮ ಹಿರಿಯರಾಗಿದ್ದರು.  ಅಂದು TV ಅಥವಾ ಟೆಲಿವಿಶನ್ ಇರದಿರಬಹುದು ಆದರೆ ಅತಿಂದ್ರಿಯಶಕ್ತಿಯಿಂದ ಅಂತಚಕ್ಷುವಿನಿಂದ ನೋಡುವ ಕಲೆ ವಿದುರನಿಗೆನಿಗೆ ಸಿದ್ದಿಸಿತ್ತು ನಾವೂ ಅದನ್ನು ತಿಳಿಯಬಹುದಾದ ಅವಕಾಶ ಹೊಂದಿದ್ದೇವೆ. ಇಂದಿಗೂ ಆಧುನಿಕ ತಂತ್ರಾಂಶದ ನೆರವಿಲ್ಲದೆ ಅಂಜನ ಹಾಕಿ ವಿಶ್ವನೋಡುವ ಜನರಿರುವುದು ಸುಳ್ಳಲ್ಲ. ಅಷ್ಟಮಂಗಲ ಪ್ರಶ್ನೆಯಲ್ಲಿ ಎಷ್ಟೋ ರಹಸ್ಯಗಳನ್ನು ಹೊರತೆಗೆಯಲಾಗುತ್ತದೆ. ಇಂದಿನ ಗ್ರಹಣ ಸೂರ್ಯನ ಮೂಡುವ ಮುಳುಗುವ ಸಮಯ ಎಲ್ಲವೂ ನಮ್ಮ ಪಂಚಾಂಗ ಕರಾರುವಾಕ್ಕಾಗಿ ಹೇಳುತ್ತವೆ. ಇವೆಲ್ಲಾ ಹಿಂದೂಗಳ ಜ್ಞಾನದ ಮಹತ್ವ ಧರ್ಮದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಇಂದಿನ ಸಂಶೋಧನೆಯನ್ನು ಆಂಗ್ಲಭಾಷೆಯಲ್ಲಿ Resurch ಎಂದು ಕರೆಯುತ್ತಾರೆ ನಿಜವಾಗಿಯೂ ಇದು  Re – Surch ಆಗಿದೆ ಇವೆಲ್ಲವೂ ಒಂದುಕಾಲದಲ್ಲಿ ಹಿಂದೂಗಳು ಭಾರತೀಯರು ಕಂಡುಹುಡುಕಿದ್ದೇ ಕಾಲಾನಂತರದಲ್ಲಿ ಅವನತಿ ಹೊಂದಿದ ಜ್ಞಾನವನ್ನು ಇಂದು ಪುನಃ ವಿಜ್ಞಾನಿಗಳು ಶೋಧಿಸುತ್ತಿದ್ದಾರೆ  ಆದುದರಿಂದ ಇದನ್ನು ರೀ ಸರ್ಚ್ ಪುನಃ ಶೋಧಿಸುವುದು ಎನ್ನುವ ಹೆಸರಿನಿಂದ ಕರೆಯುವುದು ಅನ್ವರ್ಥವಾಗಿದೆ.

ಪುರಾಣ ಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ?

ನಮ್ಮ ಪುರಾಣ ಕಥೆಗಳಲ್ಲಿ ಬರುವ ಅದೃಷ್ಯರಾದರು, ಪ್ರತ್ಯಕ್ಷರಾದರು, ಅಶರೀರವಾಣಿ ಕೇಳಿಸಿತು, ಶಾಪಕೊಟ್ಟರು , ಶಾಪದಿಂದ ಅಹಲ್ಯೆ ಕಲ್ಲಾದಳು, ಯಜ್ಞದಿಂದ ಮಳೆಭರಿಸಿದರು,ಕೋಪದಿಂದ ನೋಡಿದಾಗ ಭಸ್ಮವಾದರು, ತಪಸ್ವಿಗಳು ಆಡಿದ ಮಾತು ಅಥವಾ ಕೊಟ್ಟ ಶಾಪ ಎಂದಿಗೂ ಸುಳ್ಳಾಗಲಾರದು ಎಂಬೆಲ್ಲಾ ಘಟನೆ ಗಳನ್ನು ನೊಡುತ್ತೇವೆ ಇದು ಸುಳ್ಳು ಎನ್ನುವಂತಿಲ್ಲ ಇಂದಿಗೂ ಸಾಧನೆ ಮಾಡಿದರೆ ಸಾಧಕರ ಮಾತಿನಂತೆಯೇ ಪ್ರಕೃತಿ ವರ್ತಿಸುವುದು ಸಾಧ್ಯವಿದೆ, ಇಂತಹ ಪ್ರಕೃತಿಯನ್ನು ದೈವಿಕ ಶಕ್ತಿಯನ್ನು ಒಲಿಸಿಕೊಳ್ಳುವ ರಹಸ್ಯವನ್ನು ಮಂತ್ರಗಳಲ್ಲಿ ಹುದುಗಿಸಿ ನಮ್ಮ ಹಿರಿಯರು ನಮಗೆ ನೀಡಿದ್ದಾರೆ ಇಂತಹ ಮಂತ್ರಸಿದ್ದಿಯಿಂದ ನಾವುಕೂಡಾ ಅತೀಂದ್ರಯವಾದುದನ್ನು ಸಾಧಿಸಬಹುದಾಗಿದೆ. ಕುಳಿತಲ್ಲಿಂದಲೇ ವಿಶ್ವವನ್ನು ನೋಡಬಹುದಾಗಿದೆ. ನೆನೆಸಿದಲ್ಲಿ ಕ್ಷಣ ಮಾತ್ರದಲ್ಲಿ ನಾವು ತಲುಪುವುದೂ ಸಾಧ್ಯವಿದೆ. ಇಂತಹ 64 ವಿದ್ಯೆಗಳು ಭಾರತೀಯ ಪರಂಪರೆಯಲ್ಲಿ ಇವೆ ಹಾಗೆಯೇ ಅಷ್ಠ ಸಿದ್ದಿಗಳೂ ಕೂಡಾ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಸಾಧಕರ ಕೊರತೆ ಇದೆ ಮತ್ತು ವಿದ್ಯೆಯನ್ನು ದರುಪಯೋಗ ಪಡಿಸಿಕೊಳ್ಳವ ನೀಚಜನರು ಅಧಿಕ ವಾಗಿದ್ದಾರೆ ಆದುದರಿಂದ ತಿಳಿದವರೂ ಅದನ್ನು ಇತರರಿಗೆ ಕಲಿಸುವ ಧೈರ್ಯ ಮಾಡುವುದಿಲ್ಲ.

ನೂರುವರುಷಗಳ ಹಿಂದೆ ನಮ್ಮ ಪುರಾಣಗಳಲ್ಲಿ ವರ್ಣಿಸಿದ ದೇವತೆಗಳು ವಿಮಾನದಲ್ಲಿ ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದರು ಎನ್ನುವ ಕಥೆ ಹಾಸ್ಯಾಸ್ಪದವಾಗಿತ್ತು. ಆದರೆ ಇಂದು ಸತ್ಯವಾಗಿದೆ. ಅಶರೀರವಾಣಿ ಕೇಳುತ್ತಿತ್ತು ಎಂದರೆ ಆಕಾಶದಿಂದ ಕೇಳುವ ಮಾತು ಯಾವುದೇ ಶರೀರ ಇಲ್ಲದೆ ಎಲ್ಲಿಂದಲೋ ಹೇಳಿದ ಮಾತು ಎಲ್ಲಿಯೋ ಇರುವವರಿಗೆ ಕೇಳುವುದು. ವಿಚಿತ್ರವಾಗಿತ್ತು ಇಂದು ಮೋಬೈಲ್ ದೂರವಾಣಿಯಿಂದ ಇದು ನಿಜವಾಗಿದೆ. ಅಮೇರಿಕಾದಿಂದ ಹೇಳಿದ ಮಾತು ನಮ್ಮ ಮನೆಯ ಜಗಲಿಯಲ್ಲಿ ಕೇಳುತ್ತದೆ. ವಿದುರ ಅರಮನೆಯಿಂದಲೇ ಯುಧ್ಧಭೂಮಿಯನ್ನು ನೋಡಿ ಯುದ್ಧದ ಗತಿಯನ್ನು ಧೃತರಾಷ್ಟ್ರನಿಗೆ ವಿವರಿಸಿದ ಎನ್ನುವ ಕಥೆ ವಿಚಿತ್ರವಾಗಿ ಕಂಡರೂ ಇಂದಿನ ಟೆಲಿವಿಷನ್ ಆ ಸಾಧ್ಯತೆಯನ್ನು ಸತ್ಯವಾಗಿಸಿದೆ ಎಲ್ಲೋ ಆಡುವ ಕ್ರಿಕೆಟ್ ಆಟ ಎಲ್ಲೋ ಮರುಭೂಮಿಯಲ್ಲಿ ನಡೆಯುವ ಯುದ್ಧವನ್ನು ನಾವು ಇಂದು ನೇರವಾಗಿ TV ಯಲ್ಲಿ ನೋಡುತ್ತಿದ್ದೇವೆ. ಧುರ್ಯೋಧನಾದಿಗಳನ್ನು ವ್ಯಾಸರು ನೂರು ಮಡಕೆಗಳಲ್ಲಿಟ್ಟು ಅದರಿಂದ ಮಕ್ಕಳಾಗಿ ಹೊರಬಂದರು ಎನ್ನುವ ಕಥೆಇದೆ ಇಂದು ಪ್ರಣಾಳ ಶಿಶುಗಳಮೂಲಕ  ವಿಜ್ಞಾನಿಗಳು ಗರ್ಭದ ಹೊರಗೇ ಜೀವಸೃಷ್ಠಿಯನ್ನು ಮಾಡುವುದನ್ನು ಸಾಧ್ಯವಾಗಿಸಿದ್ದಾರೆ. ದ್ರೋಣರು ದೊನ್ನೆಯಲ್ಲಿ ಹುಟ್ಟಿದರು, ಅಗಸ್ತ್ಯರು ಮಡಕೆಯಲ್ಲಿ ಹುಟ್ಟಿದರು ಹೆಣ್ಣಿನ ಸಂಪರ್ಕವಿಲ್ಲದೆ ಹುಟ್ಟಿದವರು, ಕೇವಲ ಗಂಡಿನಿಂದಮಾತ್ರ ಹುಟ್ಟಿದವರು, ಕೇವಲ ಹೆಣ್ಣಿನಿಂದ ಹುಟ್ಟಿದವರು, ಯಜ್ಞದಿಂದ ಹುಟ್ಟಿದವರು ಎಂಬೇಲ್ಲಾ ಕಥೆ ಕೇಳುತ್ತೇವೆ ಇಂದು ತದ್ರೂಪಿ ಸೃಷ್ಟಿಯ ಮೂಲಕ ಹೆಣ್ಣಿನ ಅಗತ್ಯವೇ ಇಲ್ಲದೆ ಜೀವ ಸೃಷ್ಠಿಸಾಧ್ಯ ಎನ್ನುವುದನ್ನು ವಿಜ್ಞಾನ ಸಾಧಿಸಿದೆ ಕೇವಲ ಮನುಷ್ಯನ ಒಂದು ಜೀವಕಣದಿಂದ ಅವನಂತಹುದೇ ಇನ್ನೊಂದು ಜೀವಿಯನ್ನು ಸೃಷ್ಟಿಸುವುದು ಅಸಾಧ್ಯವಲ್ಲ ಎನ್ನುವುದು ಇಂದು ಸತ್ಯವಾಗಿದೆ. ಅದನ್ನು ಇಂದು ಅಂಗಾಂಶ ಕೃಷಿ ಎಂಬುದಾಗಿ ಕೃಷಿ ಇಲಾಖೆಯಲ್ಲಿ ಬಳಸಿಕೊಂಡಿದ್ದಾರೆ ಇದನ್ನು ಟಿಶ್ಯೂ ಕಲ್ಚರ್ ಎನ್ನುತ್ತಾರೆ. ಒಬ್ಬ ಮನುಷ್ಯನ ಜೀವ ಕಣಗಳಿಂದ ಅದೇರೂಪದ ಸಾವಿರಾರು ಜೀವಿಗಳನ್ನು ಇಂದಿನ ವಿಜ್ಞಾನದಿಂದ ಸೃಷ್ಟಿಸಬಹುದಾಗಿದೆ. ಇದು ಸತ್ಯವೆಂದ ಮೇಲೆ ಸಗರನಿಗೆ ಐವತ್ತು ಸಾವಿರ ಮಕ್ಕಳಿದ್ದರು ಎನ್ನುವ ಕಥೆ ಸುಳ್ಳು ಎನ್ನಲಾಗುವುದಿಲ್ಲ ಐವತ್ತು ಸಾವಿರ ಮಕ್ಕಳು ಹೇಗೆ ಹುಟ್ಟಿದರು ಎನ್ನುವುದನ್ನು ವಿವರಿಸಿಲ್ಲ ಆದರೂ ರಘುವಂಶದಲ್ಲಿ ಮಡಕೆಗಳಲ್ಲಿ ಅವರನ್ನು ಸಂಸ್ಕಾರ ಮಾಡಿ ಪಡೆಯಲಾಯಿತು ಎನ್ನುವ ಉಲ್ಲೇಖವನ್ನು ಸೂಚಿಸುತ್ತಾರೆ ಪ್ರತಿ ಹತ್ತು ಮಡಕೆಗಳಿಗೆ ಒಬ್ಬೊಬ್ಬರು ದಾಸಿಯರು ನೋಡಿಕೊಂಡರು ಎನ್ನುವ ಉಲ್ಲೇಖವಿರುವುದಾಗಿ ಉಪನ್ಯಾಸಕಾರರೊಬ್ಬರು ಉಲ್ಲೇಖಿಸಿದ್ದಾರೆ ಅಲ್ಲದೆ ಮಗುವಿನ ಜನನವಾಗುವಾಗ ಆಗುವ ರಕ್ತಸ್ರಾವದ ಪ್ರತಿಯೊಂದು ರಕ್ತಕಣದಲ್ಲಿಯೂ ಮಗುವನ್ನು ಪಡೆಯಲುಸಾಧ್ಯವಿದೆ ಎಂಬುದಾಗಿ ಒಂದುಕಡೆ ಹಿಂದೂ ಶಾಸ್ತ್ರಗಳಲ್ಲಿ ಉಲ್ಲೇಖವಿದೆ ಎಂಬೂದಾಗಿಯೂ ಪಂಡಿತರು ಪ್ರವಚನದಲ್ಲೊಮ್ಮೆ ಹೇಳಿದ್ದು ಕೇಳಿದ್ದೇನೆ. ಅಂದರೆ ಇಂದಿನ ವಿಜ್ಞಾನ ಕಂಡುಹಿಡಿದಿರುವ ತಂತ್ರಜ್ಞಾನ ಅಂದೇ ನಮ್ಮ ಋಷಿಮುನಿಗಳಿಗೆ ತಿಳಿದಿತ್ತು ಎನ್ನುವುದು ಸ್ಪಷ್ಠವಾಗುತ್ತದೆ. ಇಂದು ಅದಕ್ಕೆ ಸಾಕ್ಷಿಕೊಡಲಾಗದಿದ್ದರೂ ನಾವು ಅಭಿಮಾನ ಪಡಲು ಹಿಂಜರಿಕೆ ಬೇಕಿಲ್ಲ.  ಬೇರೆಯವರ ಅಂಗಾಂಗವನ್ನು ಜೋಡಿಸುವ ಇಂದಿನ ವಿಜ್ಞಾನಕ್ಕೆ ಸವಾಲೋ ಎಂಬಂತೆ ನಮ್ಮ ಗಣಪತಿಯ ಕಥೆ ಇದೆ. ಇಂದಿನ ಎಷ್ಟೋ ಸಾಧ್ಯತೆಯನ್ನು ಅಂದೇ ಸಾಧಿಸಿರುವುದು ಭಾರತೀಯರ ಸಾಧನೆಯಾಗಿದೆ. ಆದರೆ ಅದನ್ನೆಲ್ಲಾನಾವಿಂದು ಮರೆತಿದ್ದೇವೆ. ನಮ್ಮವರ ಬಗ್ಗೆ ನಮಗೆ ಅನಾದರವಿದೆ ಗೊಡ್ಡುಸಂಪ್ರದಾಯವೆಂದು ಅಜ್ಞಾನದಿಂದ ತಿರಸ್ಕರಿಸುತ್ತಿದ್ದೇವೆ ಇದಕ್ಕೆಲ್ಲಾ ಧಾರ್ಮಿಕ ವೈಚಾರಿಕ ಜ್ಞಾನವಿಲ್ಲದೆ ಗೊಡ್ಡು ಸಂಪ್ರದಾಯವಾದಿಗಳೂ ಹಾಗೂ ಮೂರ್ಖ ಅಂಧಾಭಿಮಾನಿಗಳೂ ಕಾರಣರಾಗಿದ್ದಾರೆ. ಮಹಾಸ್ಪೋಟದಿಂದ ಸೃಷ್ಟಿಯಾಯಿತೆನ್ನುವ ಭಾರತೀಯರ ಸಿದ್ದಾಂತವನ್ನು ಇಂದು ವಿಜ್ಞಾನ ಒಪ್ಪುತ್ತಿದೆ. ಸೃಷ್ಟಿಯ ಶಬ್ಧ ಓಂಕಾರ ವೆನ್ನುವುದು ಇಂದು ನಾಸಾ ಕಂಡುಕೊಂಡಿದೆ. ಇಂದಿನ ಗಣಕ ಯಂತ್ರ (computer )  ಕ್ಕೆ ಅತ್ಯಂತ ಸೂಕ್ತ ಜಗತ್ತಿನ ಭಾಷೆ ಸಂಸ್ಕೃತವೆಂದು ಅಮೇರಿಕಾದ ವಿಜ್ಞಾನಿಗಳು ಒಪ್ಪಿದ್ದಾರೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸಂಸ್ಕೃತ ಕಲಿಯುವುದು ಕಡ್ಡಾಯವಾಗಿದೆ ಎಂದರೆ ಸಂಸ್ಕೃತದ ಮಹತ್ವದ ಅರಿವಾಗಬೇಕು. ಶಂಕರಾಚಾರ್ಯರ ಕಥೆಯಲ್ಲಿ ಪರಕಾಯ ಪ್ರವೇಷಮಾಡಿದರು ಎನ್ನುವ ಕಥೆ ಬರುತ್ತದೆ. ಇದು ಅಸಾಧ್ಯವಲ್ಲ ಎಂಬುದು ಸತ್ಯವಾಗಿದೆ. ಅಂತಚಕ್ಷುವಿನಿಂದ ಕುಳಿತಲ್ಲಿಂದಲೇ ಎಲ್ಲವನ್ನೂ ನೋಡಲು ಮನುಷ್ಯನಿಗೆ ಸಾಧ್ಯವಿದೆ . ಜಗತ್ತಿನ ಎಲ್ಲಿಯದೋ ಧ್ವನಿಯನ್ನು ಕೇಳುವುದು ಸಾಧ್ಯವಿದೆ ಎಲ್ಲಿಯೂ ಮಾಯವಾಗಿ ಎಲ್ಲಿಯೋ ಪ್ರತ್ಯಕ್ಷವಾಗುವುದು ಸಾಧ್ಯವಿದೆ. ಇವುಗಳನ್ನು ದೂರ ಶ್ರವಣ, ದೂರಗಮನ, ದೂರ ದರ್ಷನ ಎನ್ನಬಹುದು. ಯಾವುದೇ ಯಂತ್ರದ ಸಾಹಾಯವಿಲ್ಲದೆ ಕೇವಲ ಸಾಧನೆಯಿಂದ ನಮ್ಮ ಇಂದ್ರಿಯಗಳಿಂದಲೇ ಇವುಗಳನ್ನು ಸಾಧಿಸಬಹುದಾಗಿದೆ. ಇಂತಹ ಸಿದ್ದಿಯನ್ನು ಸಾಧಿಸಿಕೊಂಡವರೇ ಮಹಾಮಹಿಮರು ಅವತಾರ ಪುರುಷರು ಆಗಿದ್ದಾರೆ.  ಇಂದಿಗೂ ನಮ್ಮ ದೇಶದಲ್ಲಿ ಸಾಂಪ್ರದಾಯಕ ಅಂಜನ ಹಾಕಿ ಎಲ್ಲಿಯೋ ಇರುವವರನ್ನು ತಿಳಿದು ಹೇಳುವ ಕ್ರಮ ಇರುವುದು ಸುಳ್ಳಲ್ಲ. ನಾಗ ಪಾದ್ರಿಗಳು ದರ್ಷನ ಪಾದ್ರಿಗಳು ಭೂಮಿಯಲ್ಲಿ ಹುದುಗಿರುವ ದೇವರ ವಿಗ್ರಹಗಳನ್ನು ಜಾಗಗಳನ್ನು ತೋರಿಸಿ ತೆಗೆಸುವುದನ್ನು ಇಂದೂ ನಾವು ನೋಡುತ್ತಿದ್ದೇವೆ. ಇವುಗಳಿಗೆ ವಿಕೃತವಾದಿಗಳಲ್ಲಿ ಉತ್ತರ ಇಲ್ಲ.

  • ಶ್ರೀಜಿ