ಸನಾತನ ಸಂಸ್ಕೃತಿ ಬೆಳೆದು ಬಂದ ಬಗೆ ಹಾಗೂ ಅದರ ಅನಿವಾರ್ಯತೆ ಏನು?

ಪ್ರಾಚೀನ ಭಾರತದಲ್ಲಿ ವೇದಪ್ರಧಾನ ಜೀವನ ಪದ್ದತಿ ಜಾರಿಯಲ್ಲಿತ್ತು, ಹಿಂದು ಗಳು ಪ್ರಕೃತಿಪ್ರಿಯರಾಗಿದ್ದು ಪ್ರಕೃತಿಯನ್ನೇ ಭಗವಂತನ ಸ್ವರೂಪ ಎಂದು ಭಾವಿಸಿದ್ದರು. ಸೃಷ್ಟಿಯ ಮೂಲವನ್ನು ಶೋಧಿಸಿದ ನಮ್ಮ ಋಷಿಮುನಿಗಳು ಸೃಷ್ಟಿಯು ಪಂಚ ಭೂತಗಳಿಂದಾಗಿವೆ ಎನ್ನುವುದನ್ನು ಸಂಶೋಧಿಸಿ ಜಗತ್ತಿಗೆ ತಿಳಿಸಿದರು. ಇದು ಇಂದಿಗೂ ವೈಜ್ಞಾನಿಕವಾಗಿ ಸತ್ಯವಾಗಿದೆ. ವೇದಗಳೆಂದರೆ ಜ್ಞಾನವಾಗಿದೆ , ಶ್ರೇಷ್ಠಮಟ್ಟದ ಜ್ಞಾನ ನಿಧಿಯಾಗಿದೆ. ದೇಹದಿಂದ ಜೀವದ ಬಿಡುಗಡೆಯನ್ನು ಸಾವು ಎಂದು ಕರೆದರು. ಪಂಚಭೂತಗಳಿಂದ ಜೀವದ ಶಾಶ್ವತ ಬಿಡುಗಡೆಯೇ ಮುಕ್ತಿ ಇದನ್ನು ಮೋಕ್ಷ ಎಂದು ಕರೆದರು. ಮೋಕ್ಷವನ್ನು ಜೀವನದ ಪರಮೋಚ್ಚ ಗುರಿ ಎಂದು ಸಾರಿದರು. ಇದಕ್ಕೆ ಸಾಧನೆಯ ಮಾರ್ಗಗಳನ್ನು ಶೋಧಿಸಿ ತಿಳಿಸಿದರು. ಇವುಗಳಲ್ಲಿ ಮೋಕ್ಷದ ಸಾಧನೆಗೆ ಶ್ರೇಷ್ಠ ಮಾರ್ಗ “ಜ್ಞಾನ ಮಾರ್ಗ”. ಜ್ಞಾನಕ್ಕೆ ಪೂರಕವಾಗುವ ಎರಡನೆಯ ವಿಧಾನ ಕರ್ಮ ಮಾರ್ಗ, ಹಾಗೆಯೇ ಇದಕ್ಕೆ ಪೂರಕವಾದ ಇನ್ನೊಂದು ಮಾರ್ಗ ಭಕ್ತಿಮಾರ್ಗವಾಗಿದೆ. ಭಾರತೀಯ ದರ್ಷನ ಶಾಸ್ತ್ರದಲ್ಲಿ ವಿಭಿನ್ನ ದಾರಿಗಳ ಮೂಲಕ ಒಂದೇಗುರಿತಲುಪುವ ಅವಕಾಶವಿದೆ. ಗಮಿಸುವ ದಾರಿ ಬೇರೆ ಬೇರೆ ಇದ್ದರೂ ತಲುಪುವ ಗುರಿ ಒಂದೇ ಆಗಿದೆ.

ಇಲ್ಲಿ ಜ್ಞಾನ ಮಾರ್ಗ ಅರಿವಿನ ಮಾರ್ಗವೂ, ಕರ್ಮ ಮಾರ್ಗ ಪರಿಶ್ರಮದ ಮಾರ್ಗವೂ ಆಗಿದ್ದರೆ ಭಕ್ತಿ ಭಾವಪರವಶತೆಯ ಮಾರ್ಗವಾಗಿದೆ. ಕರ್ಮ ಹಾಗೂ ಭಕ್ತಿ ಈ ಎರಡು ಆಯ್ಕೆಗಳಲ್ಲಿ ಪ್ರಾಥಮಿಕ ಸಾಧನೆ ನಡೆದರೂ ಅಂತಿಮವಾಗಿ ಜ್ಞಾನದ ಅರಿವಾಗದಿದ್ದಲ್ಲಿ ಜೀವನ ಶ್ರಮ ವ್ಯರ್ಥವೇ ಆಗುವುದು. ಆದುದರಿಂದಲೇ ನಹಿಜ್ಞಾನೇನ ಸದೃಷಂ ಎಂದಿದ್ದಾರೆ. ಇಂದಿನ ಬಹುಪಾಲು ಭಕ್ತರು ಅಜ್ಞಾನಿಗಳೂ ಅಂಧಾನುಕರುಣಿಗಳೂ ಆಗಿರುವುದು ಹಿಂದೂಧರ್ಮದ ದುರಂತವಾಗಿದೆ.

ಪಂಚ ಭೂತಗಳೆಂದರೆ ಅಗ್ನಿ ವಾಯು ಜಲ ಮಣ್ಣು ಹಾಗೂ ಆಕಾಶ ಆಗಿದೆ. ಇವೆಲ್ಲವನ್ನೂ ದೈವ ಸ್ವರೂಪ ಎಂದು ಭಾವಿಸಿ ಇವುಗಳಿಂದ ಉಂಟಾದ ಪ್ರತಿಯೊಂದು ಒಸ್ತುವಿನಲ್ಲಿಯೂ ಪರಮಾತ್ಮನ ಸನ್ನಿಧಾನವನ್ನು ಕಂಡುಕೊಂಡು ನಮ್ಮ ಹಿರಿಯರು ಗೌರವಿಸಿ ಆರಾಧಿಸಿದರು. ಯಜ್ಞ ಯಾಗಗಳ ಮೂಲಕ ಪ್ರಕೃತಿ ಆರಾಧನೆ ಮಾಡುತ್ತಿದ್ದರು, ಯಜ್ಞೇಶ್ವರನಿಗೆ ತಾವು ಸೇವಿಸುವ ಧವಸ ಧಾನ್ಯಗಳನ್ನು ಆಹುತಿ ನೀಡುತ್ತಿದ್ದರು. ಇದು ತಾವು ಸೇವಿಸುವ ಆಹಾರವನ್ನು ಅಗ್ನಿಗೆ ಅರ್ಪಿಸಿ ಆ ಮೂಲಕ ಭಗವಂತನಿಗೆ ಕೃತಜ್ಞತೆ ಸಲ್ಲಿಸುವ ವಿಧಾನ ವಾಗಿದೆ ನಂತರದಲ್ಲಿ ಪ್ರಸಾದವೆಂದು ಇದನ್ನು ತಾವು ಸ್ವೀಕರಿಸುತ್ತಿದ್ದರು,

ಪ್ರಕೃತಿಯಿಂದಲೇ ತಮ್ಮ ಬದುಕೆಂದು ಕಂಡುಕೊಂಡ ಹಿಂದೂಗಳು ಪ್ರಕೃತಿಗೆ ಕೃತಜ್ಞತೆಸಲ್ಲಿಸಲು ಸೃಷ್ಠಿಯ ಮೂಲರೂಪವಾದ ಪಂಚಭೂತಗಳನ್ನು ಪೂಜಿಸುವ ಕ್ರಮ ಅಳವಡಿಸಿಕೊಂಡರು, ಇವುಗಳನ್ನು ದೇವತೆಗಳೆಂದು ಕರೆದರು ಇರುಗಳ ರಾಜನನ್ನು ಇಂದ್ರ ಎಂದು ಕರೆದರು. ಇವೇ ಅಗ್ನಿ ವರುಣ ವಾಯು ಭೂಮಿ ಹಾಗೂ ಆಕಾಶ ಇವುಗಳ ಆರಾಧನೆ, ಅಗ್ನಿಯ ಮೂಲಕ ಎಂದರೆ ಯಾಗಗಳ ಮೂಲಕ ವರುಣ ಹಾಗೂ ವಾಯುವನ್ನು ಖುಷಿಪಡಿಸುವ ಎಂದರೆ ಶುದ್ಧಗೊಳಿಸುವ ಪ್ರಕ್ರಿಯೆಯೇ ಯಜ್ಞಗಳ ಮಹತ್ವ. ಇಂತಹ ಕಾರ್ಯದಿಂದ ಪ್ರಕೃತಿ ಶುದ್ಧವಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಉತ್ತಮವಾಗಿ ಆಗುವುದು ಹಾಗೂ ಮನುಷ್ಯನ ಆರೋಗ್ಯ ಸುಧಾರಿಸುವುದೆಂದು ಕಂಡುಕೊಂಡಿದ್ದರು. ವಿಶ್ವದಲ್ಲಿಯೇ ಅತಿಫಲವತ್ತಾದ ಭೂಮಿ ಸಸ್ಯಸಂಕುಲ ಬೆಳೆ ವನಮೂಲಿಕೆಗಳು ಭಾರತದಲ್ಲಿದೆ ಇದಕ್ಕೆ ನಮ್ಮ ಋಷಿಮುನಿಗಳ ಯಜ್ಞ ಯಾಗಗಳೇ ಕಾರಣ. ಋಷಿಗಳು ಸೃಷ್ಠಿಯಲ್ಲಿನ ಪ್ರಕೃತಿಯ ನಾಡಿಯನ್ನು ಅರಿತಿದ್ದರು ಅತಿಂದ್ರಯ ಶಕ್ತಿ ಹಾಗೂ ಅಗೋಚರ ಸತ್ಯಗಳನ್ನು ತಪಸ್ಸು ಹಾಗೂ ಧ್ಯಾನ ಯೋಗಗಳಿಂದ ಶೋಧಿಸಿ ತಿಳಿದಿದ್ದರು.  ಗ್ರಹಗಳ ಚಲನೆ ಅವುಗಳಿಂದ ಪರಿಸರ, ಪ್ರಕೃತಿ, ಪ್ರಾಣಿ, ಪಕ್ಷಿ, ಮನುಷ್ಯರ ಮೇಲಾಗುವ ಪರಿಣಾಮಗಳಬಗ್ಗೆ ಸಂಶೋಧನೆ ನಡೆಸಿ ಉತ್ತರವನ್ನು ಕಂಡುಕೊಂಡಿದ್ದರು. ವೈಜ್ಞಾನಿಕವಾಗಿಯೂ ನಮ್ಮ ಯಜ್ಞ ಯಾಗಗಳ ಪರಿಣಾಮ ಪ್ರಕೃತಿಗೆ ಪೂರಕವಾಗಿರುವುದು ಸಾಬೀತಾಗಿದೆ. ಯಜ್ಞ ಯಾಗಗಳು ಪ್ರಕೃತಿಯಮೇಲೆ ಪರಿಣಾಮ ಬೀರಲು ಯೋಗ್ಯವಾದ ವಿಧಾನವನ್ನು ಸೂಚಿಸಿದರು. ಯಾವ ಯಜ್ಞದಿಂದ ಏನು ಫಲ? ಅದನ್ನು ಹೇಗೆ ಮಾಡಬೇಕು? ಯಾವ ವನಸ್ಪತಿ ಬಳಸಬೇಕು? ಯಾವ ದ್ರವ್ಯ ಬೇಕು? ಯಾವ ಮಂತ್ರ ಹೇಗೆ ಹೇಳಬೇಕು? ಹೇಗೆ ಕ್ರಿಯೆ ಇರಬೇಕು? ಎಷ್ಟು ಜನ ಇರಬೇಕು? ಯಜ್ಞಕುಂಡ ಹೇಗಿರಬೇಕು? ಮುಂತಾಗಿ ಎಲ್ಲಾವಿಚಾರವನ್ನೂ ಗ್ರಂಥಗಳಲ್ಲಿ ವಿವರಿಸಿದ್ದಾರೆ. ಪ್ರಕೃತಿ ಪೂಜಕರಾದ ಹಿಂದೂಗಳು ನದಿಗಳನ್ನು ಪರ್ವತಗಳನ್ನು ಬೆಂಕಿಯನ್ನೂ ವನಸ್ಪತಿಗಳನ್ನೂ ಹಾಗೂ ಪ್ರಾಣಿ ಪಕ್ಷಿಗಳಲ್ಲಿಯೂ ದೈವ ಸ್ವರೂಪವನ್ನು ಕಂಡು ಪೂಜಿಸಿಕೊಂಡು ಬಂದರು. ಇದೇ ಹಿಂದೂ ಸಂಸ್ಕೃತಿಯ ಉದಯಕ್ಕೆ ಕಾರಣ ವಾಗಿದೆ. ಹಾಗೆಯೇ ಜನ್ಮ ನೀಡಿದ ತಂದೆ ತಾಯಿಯನ್ನು ದೇವರಂತೆ ಕಂಡರು ವಿದ್ಯೆಕಲಿಸಿಕೊಡುವ ಗುರುವಿಗೂ ದೇವರ ಸ್ಥಾನ ಕೊಟ್ಟರು. ಹಾಗೆಯೇ ಮಾನವೀಯತೆಯಿಂದ ಅಥಿತಿ ಸತ್ಕಾರಕ್ಕೆ ವಿಶೇಷ ಮನ್ನಣೆ ಕೊಟ್ಟು ಅಥಿತಿ ದೇವೋ ಭವ ಎಂದಿದ್ದಾರೆ. ಹಾಗೆಯೇ ಮಾತೃದೇವೋಭವ, ಪಿತೃದೇವೋ ಭವ ಆಚಾರ್ಯದೇವೋ ಭವ ಎಂದ ಶ್ರೇಷ್ಠ ಸಂಸ್ಕೃತಿ ಹಿಂದೂಗಳದ್ದಾಗಿದೆ.

ಕಾಲಾನಂತರದಲ್ಲಿ ಯಜ್ಞಗಳ ಸ್ವರೂಪ ಬದಲಾಯಿಯಿತು.  ಜ್ಞಾನಕ್ಕಿಂತ ಬಾಹ್ಯ ಆಚರಣೆಗೆ ಹೆಚ್ಚು ಮಹತ್ವ ಸಿಗ ತೊಡಗಿತು. ಶ್ರಧ್ಧೆಯೊಂದಿಗೆ ಅಂಧ ಶ್ರಧ್ಧೆ ಯೂ ಸೇರಿಕೊಂಡಿತು. ಕೆಲವು ಅನಿಷ್ಠ ಪದ್ದತಿಗಳೂ ಬಳಕೆಗೆ ಬಂದುವು. ಶ್ರಧ್ಧೆಯೊಂದಿಗೆ ಅಂಧಶ್ರಧ್ಧೆಯೂ ಸೇರಿಕೊಂಡು ಆಹುತಿಯ ಜಾಗವನ್ನು ಬಲಿ ಆಕ್ರಮಿಸಿಕೊಂಡಿತು. ಇದರಿಂದಾಗಿ ಪ್ರಾಣಿಬಲಿಗಳು ಯಜ್ಞಯಾಗದ ಹೆಸರಿನಲ್ಲಿ ನಡೆಯಲಾರಂಭಿಸಿದವು. ಇದರಿಂದ ಸಮಾಜದಲ್ಲಿ ಹಿಂಸೆಯ ವಾತಾವರಣ ಸೃಷ್ಟಿಯಾಯಿತು ಪ್ರಕೃತಿಯ  ಆರಾಧಕರಾಗಿದ್ದ, ಪ್ರಕೃತಿಯನ್ನು ಪ್ರೀತಿಸುತ್ತಿದ್ದ, ಪ್ರಾಣಿಪಕ್ಷಿಗಳನ್ನು ಪ್ರೀತಿಸಿ ಪೂಜಿಸುವ ಸಂಪ್ರದಾಯವನ್ನು ಹೊಂದಿದ್ದವರೇ ಅವುಗಳನ್ನು ಕೊಲ್ಲುವ ಬಲಿಕೊಡುವ ಮಟ್ಟಕ್ಕೆ ಬಂದರು. ಧರ್ಮ ಕ್ಷೀಣಿಸಿ ಕರ್ಮಾಚರಣೆ ಪ್ರಚಾರ ಪಡೆದುಕೊಂಡಿತು. ಈ ಹಂತದಲ್ಲಿ ಯಜ್ಞ ಯಾಗ ಪ್ರಕೃತಿಪೂಜೆ ಮಾತ್ರ ಸಂಸ್ಕೃತಿಯ ಭಾಗವಾಗಿತ್ತು ಬದಲಾಗಿ ಮೂರ್ತಿಪೂಜೆ ಬಳಕೆಗೆ ಬಂದಿರಲಿಲ್ಲ. ಅಥವಾ ಪುರಾಣೋಕ್ತವಾದ ಬಹುದೇವತಾರಾಧನೆ ಕೂಡಾ ಆರಂಭವಾಗಿರಲಿಲ್ಲ,  ಆಗಮ ಶಾಸ್ತ್ರ ವಿಗ್ರಹ ಪೂಜೆಗೆ ರೂಪುಗೊಂಡಿರಲಿಲ್ಲ,  ನಂತರದಲ್ಲಿ ಕಲಿಯುಗದಲ್ಲಿ ಸಮಾಜ ಅವನತಿಯ ಹಾದಿಹಿಡಿದು ಯಜ್ಞ ಯಾಗಗಳ ಹೆಸರಿನಲ್ಲಿ ಪ್ರಾಣಿಬಲಿ ಯಂತಹ ಹಿಂಸೆಯ ವೈಭವೀಕರಣ ಶುರುವಾದಾಗ ಸಮಾಜ ಸುಧಾರಕರ ಉದಯವಾಯಿತು. ಆಗ ಪ್ರಚಾರಕ್ಕೆ ಬಂದವರೇ ವರ್ಧಮಾನ ಮಹಾವೀರ ಹಾಗೂ ಗೌತಮ ಬುದ್ಧ ಇವರುಗಳು ಹಿಂಸೆಯನ್ನು ವಿರೋಧಿಸಿ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಅಪಾರ್ಥಗೊಂಡಿದ್ದ ಅಜ್ಞಾನದಿಂದ ವಿಕಾರ ರೂಪದಲ್ಲಿ ಆಚರಣೆಯಲ್ಲಿದ್ದ ವೇದ ವಿಧಿ ವಿಧಾನಗಳನ್ನು ಖಂಡಿಸಿ ಯಜ್ಞಯಾಗಗಳನ್ನು ಖಂಡಿಸಿ “ಅಹಿಂಸಾ ಪರಮೋಧರ್ಮಃ” ಎಂದು ಬೋಧಿಸಿದರು. ತ್ಯಾಗಜೀವನ ಸನ್ಯಾಸ ಪರಂಪರೆಯನ್ನು ಹುಟ್ಟು ಹಾಕಿದರು. ಯಜ್ಞ ಯಾಗ ರಹಿತ ಜೀವನ ವಿಧಾನವನ್ನು ಬೋಧಿಸಿ ಅಹಿಂಸೆ ತ್ಯಾಗ ಇಂದ್ರಿಯ ನಿಗ್ರಹ ಮುಂತಾದ ವಿಷಯಗಳನ್ನು ಪ್ರಮುಖವಾಗಿ ಪ್ರತಿಪಾದಿಸಿ ಪ್ರಚಾರಮಾಡಿ ಅಪಾರ ಶಿಷ್ಯ ಸಮೂಹವನ್ನು ಗಳಿಸಿಕೊಂಡರು. ರಾಜಾಶ್ರಯ ರಾಜಮನ್ನಣೆಯನ್ನು ಗಳಿಸಿಕೊಂಡರು. ಇದರಿಂದಾಗಿ ಹಿಂದೂ ಧರ್ಮದ ಸನಾತನ ವೇದಾಧಾರಿತ ಯಜ್ಞಯಾಗ ಸಂಸ್ಕೃತಿಯು ಅವನತಿಯ ಹಾದಿ ಹಿಡಿಯಿತು. ಒಂದು ಹಂತದಲ್ಲಿ ದಾರಿತಪ್ಪಿದ ಜನರನ್ನು ಸರಿಮಾಡಲು ಬೋಧಿಸಿದ ಅಹಿಂಸೆಯೇ ಮುಂದೊಂದು ದಿನ  ಈ ದೇಶದ ನಾಶಕ್ಕೆ ಪರಕೀಯರ ಆಡಳಿತಕ್ಕೆ ಕಾರಣ ವಾದುದು ಇತಿಹಾಸದ ಹಾಗೂ ವಿಧಿಯ ಕರಾಳ ವಿಪರ್ಯಾಸಗಳಲ್ಲಿ ಒಂದು.

ಸನಾತನ ಧರ್ಮ  ಅಥವಾ ಹಿಂದೂ ಧರ್ಮ ಕ್ಷಾತ್ರ ಹಾಗೂ ತೇಜಸ್ಸಿನಿಂದ ಪ್ರಜ್ವಲಿಸಿದ ಧರ್ಮ. ನಮ್ಮ ಪುರಾಣೋಕ್ತ  ಎಲ್ಲಾ ದೇವ ದೇವತೆಗಳೂ ಧರ್ಮರಕ್ಷಣೆಗಾಗಿ ಹಾಗೂ ದುರ್ಮತಿಗಳ ನಾಶಕ್ಕಾಗಿ ಶಸ್ತ್ರಹಿಡಿದು ಪ್ರೇರಣೆಯಾಗಿದ್ದಾರೆ. ಹಿಂದೂಸ್ಥಾನದ ಚಕ್ರವರ್ತಿಗಳು ಅಪ್ರತಿಮ ಶೂರರೂ ಅಪ್ರತಿಮ ಜ್ಞಾನಿಗಳೂ ಸತ್ಯವಂತರೂ ದಯಾಶೀಲರೂ ಆಗಿದ್ದುದು ಇತಿಹಾಸದಲ್ಲಿನ ಶ್ರೀ ರಾಮ ,ಶ್ರೀ ಕೃಷ್ಣ , ಪಾಂಡವರೆಲ್ಲಾ ಇದಕ್ಕೆ ಉದಾಹರಣೆಯಾದವರು, ಅಂತಹ ಕ್ಷಾತ್ರಧರ್ಮ ಅಹಿಂಸಾ ಮತಪ್ರಚಾರದಿಂದ ದುರ್ಬಲವಾಯಿತು. ಅಶೋಕನಂಥ ಚಕ್ರವರ್ತಿಗಳು ಶಸ್ತ್ರ ತ್ಯಜಿಸಿ ಬೌದ್ಧ ಮತ ಸ್ವೀಕರಿಸಿದರು. ಸಮಾಜದಲ್ಲಿ ಬೌದ್ಧಮತ ರಾಜಾಶ್ರಯಪೂರಿತವಾಗಿ ವೇಗವಾಗಿ ಬೆಳೆಯ ತೊಡಗಿತು ಆಗ ಹಿಂದೂ ಧರ್ಮ ಅವನತಿಯ ಹಾದಿ ಹಿಡಿಯಿತು ಯಜ್ಞಯಾಗಾದಿಗಳು ನಿಂತು ಹೋದುವು ಅಥವಾ ರಾಜಾಶ್ರಯವಿಲ್ಲದೆ ಸೊರಗಿದವು. ಇಂತಹ ಸಮಯದಲ್ಲಿ ಯಜ್ಞಯಾಗಾದಿಗಳನ್ನು ಮಾಡಲಾಗದ ಸನ್ನಿವೇಶಬಂದಾಗ ಪುರಾಣಗಳು ರಚನೆಯಾಗಿ ಅದರಮೂಲಕ ವೇದಜ್ಞಾನವನ್ನು ಸರಳವಾಗಿ ಕಥೆಗಳಮೂಲಕ ಜನರಿಗೆ ತಿಳಿಸುವ ಕೆಲಸ ಆರಂಭ ವಾಯಿತು. ಇತಿಹಾಸದ ಘಟನೆಗಳಿಂದ ಹಾಗೂ ಸಮಕಾಲೀನ ಹಲವು ಉತ್ತಮ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು. ಸಕಾರಾತ್ಮಕ ದೈವಿಕ ಗುಣಗಳನ್ನು ದೇವರಲ್ಲಿಯೂ ಹಾಗೆಯೇ ನಕಾರಾತ್ಮಕ ಗುಣಗಳನ್ನು ರಾಕ್ಷಸರಲ್ಲಿಯೂ ಆರೋಪಿಸಿ ರಚಿಸಿ ರಸವತ್ತಾಗಿ ನಿರೂಪಿಸಿದ ಕಥೆಗಳೇ ಪುರಾಣ ಆಗಿದೆ. ಪುರಾಣ ಕಥೆಗಳ ವರ್ಣನೆಗೆ ತಕ್ಕಂತೆ ದೇವರ ರೂಪ ವಿಗ್ರಹಗಳು ರಚನೆಗೊಂಡವು. ವಿಗ್ರಹಗಳಿಂದಾಗಿ ಅವುಗಳಿಗೆ ಮಂದಿರಗಳಾದುವು, ಮುಂದೆ ದೇವರಿಗೆ ಕೃತಜ್ಞತೆಸಲ್ಲಿಸಲು ಯಜ್ಞದ ಜಾಗದಲ್ಲಿ ಪ್ರಾಣಿ ಬಲಿ ರಹಿತ ಪೂಜೆ, ಹಾಗು ಹವಿಸ್ಸು ಅತವಾ ಬಲಿಯ ಜಾಗದಲ್ಲಿ ನೈವೇದ್ಯಗಳೂ ಆರಂಭ ವಾದುವು. ವೇದಮಂತ್ರಗಳ ಭಾಗಗಳನ್ನೇ ಇದಕ್ಕೆ ಬಳಸಿಕೊಳ್ಳ ಲಾಯಿತು. ಪಂಚಭೂತ ಪ್ರತೀಕವಾದ ಅಗ್ನಿಯ ಕುರುಹಾಗಿ ಮಂಗಳಾರತಿಯೂ, ನೀರಿನ ಸಂಕೇತವಾಗಿ ಅಭಿಶೇಕವೂ, ವಾಯುವಿಗೆ ಚಾಮರವೂ ,ಮಣ್ಣಿಗೆ ಗಂಧವೂ ,ಆಕಾಶಕ್ಕೆ ಧೂಪವೂ, ಬಳಕೆಗೆ ಬಂದಿತು. ಹೀಗೆ ವಿಗ್ರಹಾರಾಧನೆ ಶುರುವಾಯಿತು. ಇದಕ್ಕನುಗುಣ ವಾಗಿ ಪೂಜಾವಿಧಾನವನ್ನು ತಿಳಿಸುವ ಆಗಮ ಶಾಸ್ತ್ರವೂ, ದೇವಾಲಯ ನಿರ್ಮಾಣಕ್ಕನುಗುಣವಾಗಿ ವಾಸ್ತುಶಾಸ್ತ್ರವೂ, ವಿಗ್ರಹ ರಚನೆಗೆ ಸಂಬಂಧಿಸಿದ ಶಿಲ್ಪಶಾಸ್ತ್ರವೂ ರಚಿಸಲ್ಪಟ್ಟವು, ಹೀಗೆ ಬೌದ್ಧ ಮತದ ಪ್ರಭಾವದ ನಡುವೆಯೂ ಹಲವು ಹಿಂದೂ ಮನಸ್ಥಿತಿಯ ರಾಜರುಗಳು ದೇವಸ್ಥಾನಗಳ ರಚನೆಗೆ ಮುಂದಾದರು. ಹಿಗೆ ವೈಚಾರಿಕ ಭಿನ್ನತೆ ಇದ್ದರೂ ಸನಾತನ ಧರ್ಮ ಹಾಗೂ ಬೌದ್ಧಮತದ  ಅನುಯಾಯಿಗಳ ನಡುವೆ ಪರಸ್ಪರ ಗೌರವ ಹಾಗೂ ಸಾಮರಸ್ಯ ಇತ್ತು ಅದಕ್ಕೆ ಧಕ್ಕೆ ಬಂದಿರಲಿಲ್ಲ. ಎಲ್ಲೂ ಮತಬೇಧದಿಂದಾಗಿ ಗುಂಪು ಘರ್ಷಣೆ ರಕ್ತಪಾತ ಆಗಿರಲಿಲ್ಲ ವೈಚಾರಿಕತೆಯನ್ನು ಒಪ್ಪುವ ಅಥವಾ ವಿರೋಧಿಸುವ ಮುಕ್ತ ಸ್ವಾತಂತ್ರ್ಯ ಅಭಿಪ್ರಾಯಬೇಧಗಳನ್ನು ಗೌರವಿಸುವ ಸತ್ಸಂಪ್ರದಾಯ ಹಿಂದೂಸ್ಥಾನದಲ್ಲಿತ್ತು. ಹೆದರಿಸಿ ಬೆದರಿಸಿ ಬಾಯಿಮುಚ್ಚಿಸುವಂತಹ ಸಂಕುಚಿತ ಬುದ್ದಿ ಹಿಂದೂಗಳಿಗಿರಲಿಲ್ಲ.

ಜೈನರಲ್ಲಿಯೂ ತೀರ್ಥಂಕರರ ಶಿಲ್ಪಗಳು ಕೆತ್ತಲ್ಪಡುತ್ತಿದ್ದವು ಬುದ್ಧನ ನಂತರ ಬುದ್ಧ ನಪ್ರತಿಮೆಗಳೂ ರಚಿಸಲ್ಪಟ್ಟವು, ಹೀಗೆ ಮೂರ್ತಿಪೂಜೆಗಳು ಆರಂಭ ವಾದುವು. ಈ ಸಂದಿಗ್ಧ ಕಾಲಘಟ್ಟದಲ್ಲಿ ಅಂದರೆ ಬುದ್ಧ ಹಾಗೂ ಮಹಾವೀರರ ಕಾಲಾನಂತರ ಕ್ರಿಸ್ತಶಕ ಎಂಟನೇ ಶತಮಾನದವರೆಗೂ ಜನರಲ್ಲಿ ಇಂದಿನಂತೆಯೇ ಹಲವು ಗೊಂದಲಗಳಿದ್ದು ಸರಿಯಾದ ಮಾರ್ಗದರ್ಷನ ಸಿಗದೆ ಮೂಲ ಸನಾತನ ಆಚಾರವಿಚಾರಗಳು ಶಿಥಿಲ ಗೊಂಡು ಜೈನ ಹಾಗೂ ಬೌದ್ಧ ವಿಚಾರಗಳ ತಾಕಲಾಟದಲ್ಲಿ ವೇದೋಕ್ತ ವಿಚಾರಗಳು ಮೂಲೆಗುಂಪಾದುವು. ಈ ಕಾಲಘಟ್ಟವನ್ನು ಹಿಂದೂ ಧರ್ಮದ ಕತ್ತಲೆ ಯುಗ ಎಂದು ಕರೆಯಲಾಗಿದೆ. ಇಂತಹ ಹಂತದಲ್ಲಿ ಜನರಿಗೆ ಯಾವುದನ್ನು ಆಚರಿಸಬೇಕೆನ್ನುವ ಗೊಂದಲದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿತ್ತು. ಜೈನರು ಪ್ರಾಣಿಹತ್ಯೆ ಮಹಾಪಾಪ ಎಂದು ಮಾಂಸಾಹಾರವನ್ನು ತ್ಯಜಿಸಿ ನಿಷೇಧಿಸಿದರು. ವಿರಕ್ತಿಯ ಸನ್ಯಾಸವನ್ನು ಬೋಧಿಸಿದರು ಲಕ್ಷಾಂತರ ಜನ ಜೈನ ಸನ್ಯಾಸಿಗಳಾದರು. ಜೈನ ಮಠಗಳು ಎಲ್ಲೆಡೆ ತಲೆ ಎತ್ತತೊಡಗಿದವು. ಗೌತಮ ಬುದ್ಧನೂ ಅಹಿಂಸಾಬೋಧನೆ ಮಾಡಿ ಯಜ್ಞಯಾಗಾದಿಗಳನ್ನು ಖಂಡಿಸಿದನು.  ಇವನ ಪ್ರಭಾವದಿಂದ ಲಕ್ಷಾಂತರ ಜನ ಬೌದ್ಧಭಿಕ್ಷುಗಳಾಗಿ ಬೌದ್ಧಮತ ಪ್ರಚಾರದಲ್ಲಿ ತೊಡಗಿದರು. ಎಲ್ಲೆಡೆ ಬೌದ್ಧವಿಹಾರಗಳು ತಲೆ ಎತ್ತ ತೊಡಗಿದವು.  ಜನರಿಗೆ ಆರಂಭದ ಕಾಲದಲ್ಲಿ ಇವೆಲ್ಲವೂ ಉತ್ತಮವಾಗಿ ಗೋಚರಿಸಿದರೂ ತಾವು ಆಚರಿಸಿಕೊಂಡು ಬಂದ ಪದ್ದತಿಯನ್ನು ಸಂಪೂರ್ಣ ವಾಗಿ ಬಿಡಲಾಗಲಿಲ್ಲ. ಮಾಂಸಾಹಾರವನ್ನು ಸ್ವೀಕರಿಸುತ್ತಿದ್ದ ಬಹುಸಂಖ್ಯಾತ ಶ್ರಮಿಕವರ್ಗದವರು  ಗೊಂದಲ ಗೊಂಡರು. ಮೇಲ್ವರ್ಗದವರು ಮಾಂಸಾಹಾರ ಸೇವಿಸುವವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲಿಲ್ಲ. ಆಗ ಅಂತಹವರು ಪರ್ಯಾಯ ಮಾರ್ಗ ಹುಡುಕಿಕೊಂಡರು. ಬೌದ್ಧ ಹಾಗೂ ಜೈನರ ಕಟ್ಟುನಿಟ್ಟಿನ ವ್ರತಾಚರಣೆಗಳು ಹೆಚ್ಚಿನವರಿಗೆ ಸಹ್ಯವಾಗಲಿಲ್ಲ. ಹಾಗಾಗಿ ಕೆಲವೆಡೆ ಶಕ್ತಿ ಆರಾಧನೆಯ ಹೆಸರಿನಲ್ಲಿ ದೇವರಿಗೆ ಪ್ರಾಣಿ ಬಲಿಕೊಡುವ ಪದ್ದತಿ ಆರಂಭ ವಾಯಿತು ನೀಚ ಪದ್ದತಿಗಳೂ ಆರಂಭ ವಾದುವು ಪುರಾಣೋಕ್ತ ದೇವರುಗಳನ್ನು ವಿವಿಧ ಹೆಸರಿನಲ್ಲಿ ವಿವಿಧ ರೂಪದಲ್ಲಿ ವಿವಿಧ ಬಗೆಯಲ್ಲಿ ಪೂಜಿಸುವ ವಿಧಾನ ಬಳಕೆಗೆ ಬಂದಿತು. ಯಾವುದಕ್ಕೂ ಸ್ಪಷ್ಟವಾದ ಏಕವಿಧಾನ ಇರಲಿಲ್ಲ. ಆಯಾ ಪ್ರದೇಶಕ್ಕೆ ತಕ್ಕಂತೆ ಪದ್ದತಿಗಳು ಬೆಳೆದುಬಂದುವು. ಈ ಎಲ್ಲಾ ಕಾಲಘಟ್ಟದಲ್ಲಿಯೂ ಗ್ರಾಮ್ಯ ಭಾಷೆ ಹಲವು ಇದ್ದರೂ ವಿಧ್ವಾಂಸರ ಭಾಷೆ ಸಂಸ್ಕೃತವಾಗಿತ್ತು. ಹಾಗೂ ಜೈನ ಹಾಗೂ ಬೌದ್ಧ ಸಾಹಿತ್ಯಗಳೂ ಇದೇ ಭಾಷೆಯಲ್ಲಿ ರಚಿಸಲ್ಪಟ್ಟಿವೆ. ಈ ಸಮಯದಲ್ಲಿ ಭಾರತ ದೇಶ ಜ್ಞಾನದಿಂದ ವಿದ್ವತ್ತಿನಿಂದ ಸಂಪತ್ತಿನಿಂದ ಸಭ್ಯತೆಯಿಂದ ಜಗತ್ತಿನಲ್ಲಿಯೇ ಶಿಖರ ಪ್ರಾಯವಾಗಿ ಕಂಗೊಳಿಸುತ್ತಿತ್ತು. ನಳಂದಾ ಹಾಗೂ ತಕ್ಷಶಿಲಾ ವಿಶ್ವವಿದ್ಯಾಲಯಗಳಿಗೆ ವಿಶ್ವಾಧ್ಯಂತ ಕಲಿಯಲು ವಿದ್ಯಾರ್ಥಿಗಳು ಬರುತ್ತಿದ್ದರು ಎನ್ನುವುದು ಇತಿಹಾಸವಾಗಿದೆ.

                                                                                                                                                                                                 -ಶ್ರೀಜಿ