ಬಹುದೇವತಾರಾಧನೆಯಿಂದ ಹುಟ್ಟಿಕೊಂಡ ಸಾಮಾಜಿಕ ಸಮಸ್ಯೆಗಳಾವುವು?
ಬುದ್ಧನ ಕಾಲಾನಂತರ ಶಂಕರಾಚಾರ್ಯರ ಅವಧಿಯ ಮಧ್ಯದಲ್ಲಿ ಹಿಂದೂ ಧರ್ಮದಲ್ಲಿ ಸರಿಯಾದ ಧಾರ್ಮಿಕ ಮಾರ್ಗದರ್ಷಕರಿಲ್ಲದ ಪರಿಸ್ಥಿತಿಯನ್ನು ಹಿಂದೂ ಧರ್ಮ ಎದುರಿಸಬೇಕಾಯಿತು. ಈ ಅವಧಿಯನ್ನು ಭಾರತೀಯ ಇತಿಹಾಸದಲ್ಲಿ ಹಿಂದು ಧರ್ಮದ ಕತ್ತಲೆಯ ಯುಗ ಎಂದೇ ಕರೆಯಲಾಗಿದೆ. ಬೌದ್ಧ ಹಾಗೂ ಜೈನರಿಗೆ ರಾಜಾಶ್ರಯದೊರೆತು ಅವರ ಮತ ಪ್ರಚಾರಪಡೆಯಿತು ಹಾಗೆಯೇ ವೇದಾಧಾರಿತ ವಿಷಯಗಳು ಆಚಾರಗಳು ಅವನತಿಹೊಂದತೊಡಗಿದುವು ಜನರಲ್ಲಿ ಅಜ್ಞಾನ ಆವರಿಸತೊಡಗಿತು. ಈ ಹಂತದಲ್ಲಿ ದೇವಾಲಯಗಳು ಉದಯಿಸಿ ಮೂರ್ತಿಪೂಜೆಯ ಕಲ್ಪನೆಯಿಂದ ಸನಾತನ ಧರ್ಮದ ಅಸ್ಥಿತ್ವ ಉಳಿಯಿತು. ಆದರೆ ನಂತರದಲ್ಲಿ ಇದು ಕೂಡಾ ಹಾದಿತಪ್ಪಿತು. ಜೈನರ ಬೌದ್ಧರ ಅಹಿಂಸಾವಾದ ಹಾಗೂ ಕಡ್ಡಾಯ ಸಸ್ಯಾಹಾರದಂತಹ ನಿಯಮಗಳು ಎಲ್ಲರಿಗೂ ಆಚರಿಸಿಕೊಂಡು ಬರುವುದು ಕಷ್ಟವಾಗಿ ಮಾಂಸಾಹಾರಿಗಳು ಅದರಿಂದ ಹೊರಬಂದರು. ಹಿಂದೂ ಧರ್ಮದಲ್ಲಿಯೂ ದೇವಸ್ಥಾನಗಳಲ್ಲಿ ಸಸ್ಯಾಹಾರವನ್ನೇ ಪ್ರತಿಪಾದಿಸಿ ದೇವರಿಗೆ ಹಾಲು ಹಣ್ಣು ತೆಂಗಿನಕಾಯಿ ಮುಂತಾದ ಸಾತ್ವಿಕ ನೈವೇದ್ಯ ರೂಡಿಗೆ ತಂದು ಮಾಂಸಾಹಾರಿಗಳ ಮಧ್ಯೆ ಅಂತರ ಕಾಪಾಡಿಕೊಂಡರು. ಇದರಿಂದಾಗಿ ಮಾಂಸಾಹಾರಿಗಳಿಗೆ ದೇವರು ದೊರೆಯದ ಸ್ಥಿತಿ ನಿರ್ಮಾಣವಾಯಿತು ಅವರಿಗೆ ಪ್ರತ್ಯೇಕತೆಯ ಅನುಭವ ಆಗತೊಡಗಿತು. ಅಂತಹ ಸಮಯದಲ್ಲಿ ಕೆಲವರು ಒಟ್ಟಾಗಿ ಅವರ ಪದ್ದತಿಗೆ ಒಗ್ಗುವಂತೆ ತಮ್ಮದೇ ಆದ ದೇವರು ದೇವತೆಗಳನ್ನು ಸ್ಥಾಪಿಸಿಕೊಂಡರು. ಹೀಗೆ ಶಕ್ತಿ ಆರಾಧನೆಯು ರೂಪುಗೊಂಡಿತು. ಕಾಳೀ ಮಾರಿ ಆರಾಧನೆ ಗಳು ಭೂತಾರಾಧನೆ ಮೂಂತಾದುವು ರೂಪುಗೊಂಡುವು. ಇಲ್ಲಿ ಪ್ರಾಣಿಬಲಿ ಸುರಾಪಾನ ಮುಂತಾದುವುಗಳನ್ನು ತಮ್ಮ ಆಚರಣೆಯಂತೆ ವೈಭವೀಕರಿಸಲಾಯಿತು. ಮಾಂಸಾಹಾರಿಗಳೇ ಇವುಗಳ ಪೂಜೆಯನ್ನು ನಡೆಸಿಕೊಂಡು ಮುಂದುವರೆಸಿಕೊಂಡು ಬಂದರು. ಇದಲ್ಲದೆ ಇನ್ನು ಕೆಲವು ಸಮಾಜದಿಂದ ಬಹಿಷ್ಕೃತವಾದ ಕೆಟ್ಟಜನರು ವಾಮಾಚಾರ ಹಾಗೂ ವಾಮಮಾರ್ಗಗಳನ್ನು ಅನುಸರಿಸಿಕೊಂಡು ನೀಚದೇವತೆಗಳನ್ನು ಸೃಷ್ಟಿಸಿಕೊಂಡು ಅನಿಷ್ಠಪದ್ದತಿಗಳನ್ನು ಜಾರಿಗೆತಂದು ತಮ್ಮ ವಿಕೃತ ಆಸೆಗಳನ್ನು ದೇವರ ಹೆಸರಿನಲ್ಲಿ ತೀರಿಸಿಕೊಳ್ಳ ತೊಡಗಿದರು, ಮಾಟ, ಮಂತ್ರ, ತಂತ್ರ, ಮಾಂಸ, ಮದ್ಯ, ಮಾನಿನಿಯರೂ ಇವರ ಪೂಜೆ ಭಾಗವಾಗಿ ಕಾಮವೂ ಇದರ ಅಂಗವಾಯಿತು ಇದು ಸಾಮಾಜಿಕ ಅನಿಷ್ಟವಾಗಿ ಸಭ್ಯರು ಇವರಿಂದ ದೂರ ಉಳಿದರು.
ಹೀಗೆ ಒಂದು ವಿಶೇಷ ವರ್ಗವೇ ಸೃಷ್ಟಿಯಾಯಿತು. ಇದರ ನಡುವೆ ವಿಷ್ಣು ಆರಾಧಕರು, ಶಿವನ ಆರಾಧಕರು, ಶಕ್ತಿ ಆರಾಧಕರು, ಗಾಣಪತ್ಯ ಮುಂತಾಗಿ ಒಂದೊಂದು ದೇವರ ಆರಾಧಕರದೂ ಪ್ರತ್ಯೇಕ ಗುಂಪುಗಳಾಗಿ ಅವರಲ್ಲಿಯೇ ಪೈಪೋಟಿ ಆರಂಭವಾಯಿತು. ಇಂದಿನ ಜಾತಿ ಪೈಪೋಟಿಯಂತೆ ಎಲ್ಲರೂ ತಮ್ಮ ದೇವರು ಶ್ರೇಷ್ಠವೆಂದು ಹೊಡೆದಾಡುವ ಮಟ್ಟಕ್ಕೆ ಸಮಾಜ ಬಂದಿತು. ತಮ್ಮದೇವರೇ ಶ್ರೇಷ್ಠವೆಂದು ನಿರೂಪಿಸಲು ಆಯಾದೇವರ ಪುರಾಣದ ಸೃಷ್ಠಿಆಯಿತು. ವಿವಿಧ ಆಗಮಶಾಸ್ತ್ರಗಳು ಬರೆಯಲ್ಪಟ್ಟವು ವಿವಿಧ ಪೂಜಾಪದ್ದತಿಗಳಿಗೂ ಅವರವರದೇ ಶಾಸ್ತ್ರ ರಚಿಸಿಕೊಂಡರು. ಒಂದೊಂದು ಗುಂಪಿನ ನಡುವೆಯೂ ಪರಸ್ಪರ ಹೊಡೆದಾಟ ಬಡಿದಾಟಗಳು ಮೇಲು ಕೀಳೆಂಬ ವಿಚಾರದಲ್ಲಿ ನಡೆಯುತ್ತಿತ್ತು. ಇವರು ಪರಸ್ಪರ ದ್ವೇಷಿಸುತ್ತಿದ್ದರು. ಹೀಗೆ ದೇವರ ಹೆಸರಿನಲ್ಲಿ ಹಿಂಸೆ ಕಲಹಗಳು ನಡೆದು ಸಮಾಜ ಕ್ಷೋಭೆಗೆ ಒಳಗಾಯಿತು. ಯಾರಿಗೂ ಸರಿಯಾದ ಧರ್ಮದ ಮಾರ್ಗದರ್ಷನ ಇರಲಿಲ್ಲ. ಇಂತಹ ಸಮಯದ ಲಾಭಪಡೆದು ಪುನಃ ಬೌದ್ಧ ಮತ ದೇಶದಲ್ಲಿ ವ್ಯಾಪಿಸ ತೊಡಗಿತು. ಎಲ್ಲೆಡೆ ಜೈನ ಸ್ಥೂಪಗಳೂ ಬೌದ್ಧವಿಹಾರಗಳೂ ತಲೆಎತ್ತತೊಡಗಿದುವು. ಅವರಿಗೆ ರಾಜಾಶ್ರಯಗಳೂ ದೊರೆತುವು. ರಾಜರುಗಳು ಅತಾರ್ಕಿಕ ಅಹಿಂಸಾವಾದವನ್ನು ಅಳವಡಿಸಿಕೊಂಡು ತಮ್ಮ ಸಹಜ ಧರ್ಮವಾದ ಕ್ಷತ್ರಯ ಧರ್ಮದ ಮೂಲ ಅಗತ್ಯವಾದ ಶಸ್ತ್ರಾಭ್ಯಸವನ್ನು ನಿರ್ಲಕ್ಷಿಸಿ ದುರ್ಬಲರಾದರು. ಸೈನ್ಯ ಸರಿಯಾದ ತರಬೇತಿ ಹಾಗೂ ಯುದ್ಧಗಳಿಲ್ಲದೆ ದುರ್ಬಲಗೊಂಡಿತು. ಸನಾತನ ಹಿಂದೂಧರ್ಮದ ಕ್ಷಾತ್ರಗುಣ ನಶಿಸತೊಡಗಿತು. ರಾಜರುಗಳು ಕ್ಷಾತ್ರಹೀನರಾಗಿ ದುರ್ಬಲರಾದರು. ಯಥಾರಾಜ ತಥಾಪ್ರಜ ಜನರು ಬೌದ್ಧಿಕ ವಾಗಿಯೂ ದುರ್ಬಲರಾಗಿ ದೇವರ ಹೆಸರಿನಲ್ಲಿ ಪಂಗಡಕಟ್ಟಿಕೊಂಡು ತಮ್ಮಲ್ಲಿಯೇ ಹೊಡೆದಾಡ ತೊಡಗಿದರು. ಮಾಂಸ ಮದ್ಯ ಪ್ರಾಣಿಬಲಿ ಮುಂತಾಗಿ ವಾಮಾಚಾರ ಮುಂತಾದ ಅನಿಷ್ಠ ಪದ್ದತಿಗಳೂ ಪುನಃ ಆಚರಣೆಗೆ ಬಂದುವು. ದೇವರ ಸಾತ್ವಿಕ ಗುಣಗಳನ್ನು ಆರಾಧಿಸಿ ಒಲಿಸಿಕೊಳ್ಳಲು ಪ್ರಯತ್ನಿಸುವವರು ಒಂದುಕಡೆ ಆದರೆ ದುಷ್ಠಶಕ್ತಿಗಳನ್ನು ಆರಾಧಿಸಿ ಒಲಿಸಿಕೊಳ್ಳುವವರೂ ಹುಟ್ಟಿಕೊಂಡರು. ಹೀಗೆ ಸಮಾಜವು ಅಶಾಂತಿಯಿಂದ ಕ್ಷೋಭೆಗೊಂಡಿತು.
ಈ ಸಂದಿಗ್ಧ ಸಮಯದಲ್ಲಿ ಕೇರಳದ ಕಾಲಟಿಯಲ್ಲಿ ಶಂಕಾಚಾರ್ಯರ ಜನ್ಮ ವಾಯಿತು ಅವರನ್ನು ಅವತಾರ ಪುರುಷ ಸನಾತನ ಧರ್ಮದ ಪುನರುದ್ಧಾರಕ ಎನ್ನಲಾಗಿದೆ. ಬಾಲ್ಯದಲ್ಲಿಯೇ ನಾಲ್ಕೂವೇದಗಳಲ್ಲಿ ಪಾಂಡಿತ್ಯಪಡೆದು ಸನ್ಯಾಸ ದೀಕ್ಷೆ ಪಡೆದು ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಕೇವಲ ಮೂವತ್ತೆರಡು ವರುಷಗಳ ತಮ್ಮ ಜೀವಿತಾವಧಿಯಲ್ಲಿ ನಾಲ್ಕು ಭಾರಿ ಇಡೀ ಭಾರತವನ್ನು ಪ್ರದಕ್ಷಿಣೆಮಾಡಿ ಜೈನ ಬೌದ್ಧ ಮತಾಚಾರ್ಯರುಗಳನ್ನು ವಾದದಲ್ಲಿ ಸೋಲಿಸಿ ಅದ್ವೈತ ಸಿದ್ದಾಂತವನ್ನು ಪ್ರಚಾರಮಾಡಿ ಪುನಃ ವೇದವನ್ನು ವೈದಿಕ ಧರ್ಮವನ್ನು ಜನ ಅಂಗೀಕರಿಸುವಂತೆ ಮಾಡಿದರು. ಇವರಿಂದ ಪ್ರಭಾವಿತರಾಗಿ ದೇಶಾದ್ಯಂತ ಜೈನ ಬೌದ್ಧ ಪಂಡಿತರುಗಳು ತಮ್ಮ ಶಿಶ್ಯರ ಸಮೇತ ಪುನಃ ಸನಾತನ ಧರ್ಮಾಚರಣೆಯಲ್ಲಿ ತೊಡಗಿಕೊಂಡರು ಹಾಗೂ ವೇದಾಧ್ಯಯನದತ್ತ ತಿರುಗಿದರು. ವಿವಿಧ ದೇವರ ಹೆಸರಿನಲ್ಲಿ ಹೊಡೆದಾಡುವವರನ್ನು ಒಂದುಗೂಡಿಸಿ ದೇವರು ಒಬ್ಬನೇ ನಾಮ ಹಲವು ಎಂದು ಬೋಧಿಸಿದರು. ಎಲ್ಲರನ್ನೂ ಸಾಮಾಜಿಕವಾಗಿ ಒಗ್ಗೂಡಿಸಲು ಪಂಚಾಯತನ ಪೂಜಾಪದ್ದತಿಯನ್ನು ಪರಿಚಯಿಸಿದರು. ಇದರಿಂದಾಗಿ ವಿವಿಧ ಪಂಗಡಗಳು ದ್ವೇಷತೊರೆದು ಒಂದಾಗಲು ಸಾಧ್ಯವಾಯಿತು. ಸಮಾಜದ ಏಕೀಕರಣಕ್ಕಾಗಿ ಅದ್ವೈತ ಸಿದ್ದಾಂತವನ್ನು ಬೋಧಿಸಿ ಅದರ ಪ್ರತಿಪಾದನೆಗಾಗಿ ಗ್ರಂಥಗಳನ್ನು ಬರೆದರು. ಉಪನಿಷತ್ತು ಬ್ರಹ್ಮಸೂತ್ರ ಹಾಗೂ ಭಗವದ್ಗೀತೆಗಳಿಗೆ ಬಾಷ್ಯವನ್ನು ಬರೆದರು. ಅನೇಕ ದೇವಾಲಯಗಳನ್ನು ದೇಶಾದ್ಯಂತ ಸ್ಥಾಪಿಸಿದರು ಜೀರ್ಣಾವಸ್ಥೆಯಲ್ಲಿದ್ದ ದೇವಾಲಯಗಳನ್ನು ಪುನರುಜ್ಜೀವನ ಗೊಳಿಸಿದರು. ಹಿಂದೂ ಧರ್ಮದ ಸಂರಕ್ಷಣೆಗಾಗಿ ದೇಶದ ನಾಲ್ಕುಮೂಲೆಗಳಲ್ಲಿ ಶೃಂಗೇರಿ , ಪುರಿ, ದ್ವಾರಕೆ, ಬದರಿ ಗಳಲ್ಲಿ ನಾಲ್ಕು ಧರ್ಮ ಪೀಠಗಳನ್ನು ಸ್ಥಾಪಿಸಿ ತಮ್ಮ ನಾಲ್ವರು ಶಿಶ್ಯರನ್ನು ನಾಲ್ಕು ವೇದಗಳನ್ನು ರಕ್ಷಿಸುವಂತೆ ನಾಲ್ಕು ಮಠಗಳಿಗೆ ಪೀಠಾಧಿಪತಿಗಳನ್ನಾಗಿ ಮಾಡಿದರು. ಹಾಗೂ ಸನಾತನ ಧರ್ಮ ಪ್ರಚಾರ ಸಮಾಜಕ್ಕೆ ಮಾರ್ಗದರ್ಷನ ಕೊಡುವ ಹಾಗೂ ವೇದ ಸಂಸ್ಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು. ಅಂದಿನಿಂದ ಇಂದಿನ ವರೆಗೂ ಈ ಮಠಗಳು ತಮ್ಮ ಕಾರ್ಯ ಕರ್ತವ್ಯವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿವೆ. ಹಿಂದೆ ಬಿಡಿ ಸನ್ಯಾಸಿಗಳಾಗಿ ದೇಶ ಸಂಚಾರಿಗಳಾಗಿದ್ದ ಸನ್ಯಾಸಿಗಳಿಗೆ ನೆಲೆಕಲ್ಪಿಸಿ ಹೊಸ ಸಂಪ್ರದಾಯಕ್ಕೆ ಕಾರಣರಾದರು. ಹೀಗೆ ಹಿಂದೂ ಧರ್ಮದಲ್ಲಿ ಮಠ ಸಂಸ್ಕೃತಿಯನ್ನು ಹುಟ್ಟುಹಾಕಿದ ಕೀರ್ತಿ ಶಂಕರಾಚಾರ್ಯರದ್ದಾಗಿದೆ. ಅವರ ದೂರದೃಷ್ಠಿಯ ಫಲವಾಗಿಯೇ ಇಂದು ಹಿಂದೂ ಸಂಸ್ಕೃತಿ ಅನೇಕ ಮಠಗಳಿಂದ ಮಠಾಧಿಪತಿಗಳಿಂದಾಗಿ ಉಳಿದಿದೆ. ಸಾಮಾಜಿಕ ಅಪಾಯ ಅರಿತ ಹಿರಿಯರು ದೇವರನ್ನು ಗುಡಿಯಿಂದ ಹೊರತಂದು ಸಾರ್ವಜನಿಕರಿಗೂ ಲಭ್ಯವಾಗುವಂತೆ ಸರ್ವರೂ ಭಾಗಿಯಾಗುವಂತೆ ರಥೋತ್ಸವ ಕುಂಭಮೇಳ ಮುಂತಾದುವನ್ನು ಆಯೋಜಿಸಿ ಸಮಾಜವು ಆದಷ್ಟು ಒಂದಾಗುವಂತೆ ಮಾಡುವ ಪ್ರಯತ್ನ ಮಾಡಿದರು. ಆಚರಣೆಗೆ ಸುಲಭವಾದ ಭಕ್ತಿಮಾರ್ಗವು ನಂತರದಲ್ಲಿ ಪ್ರಭಾವಿಯಾಗಿ ಬೆಳೆಯಿತು.
ಹಿಂದೂ ವಿರೋಧಿ ಜಾತ್ಯಾತೀತ ಎನ್ನುವ ದುಷ್ಠ ಸರಕಾರಗಳು ದೇವಸ್ಥಾನಗಳನ್ನು ವಶಪಡಿಸಿಕೊಂಡು ಹಿಂದೂ ಸಂಸ್ಕೃತಿಯನಾಶಕ್ಕೆ ಮುಂದಾಗಿದ್ದರೂ ಮಠಗಳು ಮಠಾಧಿಪತಿಗಳು ಸಮಾಜಕ್ಕೆ ಮಾರ್ಗದರ್ಷನ ನೀಡುತ್ತಾ ಇವರ ಸಾಂಸ್ಕೃತಿಕ ದಾಳಿಯನ್ನು ದಿಟ್ಟವಾಗಿ ಎದುರಿಸಿ. ಸನಾತನ ಸಂಸ್ಕೃತಿ ಉಳಿಸಿವೆ. ಅನ್ನದಾನ ವಿದ್ಯಾದಾನ ಗಳಿಂದ ಮನೆಮಾತಾಗಿವೆ. ಸಾಂಸ್ಕೃತಿಕ ಧಾರ್ಮಿಕ ತಾಣಗಳಾಗಿವೆ. ಇಂದು ದೇಶಾದ್ಯಂತ ಹಲವು ಮಠಗಳಿದ್ದು ಹೆಚ್ಚಿನವು ಸಮಾಜದ ಗೌರವಕ್ಕೆ ಪಾತ್ರವಾಗಿವೆ.
ಶಂಕರಾಚಾರ್ಯರ ಕಾಲಕ್ಕಿಂತ ಮೊದಲು ಸನ್ಯಾಸಿಗಳು ಸಂಚಾರಜೀವಿಗಳಾಗಿದ್ದರು ಅವರಿಗೆ ನಿಶ್ಚಿತ ನೆಲೆ ಇರಲಿಲ್ಲ. ಅಂತಹ ಸನ್ಯಾಸಿಗಳನ್ನು ಒಂದುಕಡೆ ಸ್ಥಿರವಾಗಿ ನಿಂತು ಧರ್ಮ ಬೋಧನೆ ಹಾಗೂ ಧಾರ್ಮಿಕ ಮಾರ್ಗದರ್ಷನ ಕೊಡುವ ಅಗತ್ಯ ಮನಗೊಂಡು ಮಠಗಳಲ್ಲಿ ನಿಲ್ಲಿಸಿಮಠಾಧೀಶರನ್ನಾಗಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲಬೇಕು. ಇದು ಅವರ ದೂರದೃಷ್ಠಿಯ ಫಲವಾಗಿದೆ. ಅದೇ ಇಂದು ಸನಾತನ ಧರ್ಮವನ್ನು ಕಾಪಾಡಿದೆ. ಜೈನ ಮಠಗಳೇ ಶ್ರೀ ಶಂಕರರಿಗೆ ಪ್ರೇರಣೆ ಇರಬಹುದು. ಹೀಗೆ ವೈದಿಕ ಸಂಸ್ಕೃತಿಯ ರಕ್ಷಣೆಗೆ ಭದ್ರಬುನಾದಿ ಶಂಕರಾಚಾರ್ಯರಿಂದ ದೊರೆಯಿತು. ಹಾಗೂ ಸಂಸ್ಕೃತಿ ಉಳಿಯಿತು ಹಾಗೂ ಬೆಳೆಯಿತು ಸಮಾಜ ಒಂದಾಗಲು ಅವರ ಅದ್ವೈತ ತತ್ವ ಮಾರ್ಗದರ್ಷನ ನೀಡಿತು. ನಂತರದಲ್ಲಿ ಹಲವು ತತ್ವವಾದ ಬೇಧವಾದವು ಬೆಳೆದು ಸಮಾಜ ಸ್ವಲ್ಪ ಸಂಕುಚಿತತೆಯತ್ತ ಪಲ್ಲಟವಾಗುವಂತ ಕೆಲವು ಘಟನೆಗಳು ನಡೆದರೂ ಅವು ಪಂಡಿತವರ್ಗದಿಂದ ಹೊರಬರಲಾರದೆ ಕೆಲವೇಜನರಿಗೆ ಸೀಮಿತವಾದುವು ಹಾಗೂ ಬಹುಮುಖಿ ಸಮಾಜದಿಂದ ತಿರಸ್ಕರಿಸಲ್ಪಟ್ಟವು
–ಶ್ರೀಜಿ