ನಿರಾಕಾರ ರೂಪಿ ಭಗವಂತ ಸಾಕಾರರೂಪ ಪಡೆದ ಹಂತಗಳು ಯಾವುವು? ಕಲ್ಲು ದೇವರು ದೇವರೇ? ಮೂರ್ತಿಪೂಜೆ ಅನಿವಾರ್ಯವೇ ?
ಈ ಮೊದಲು ನಾವು ಈವಿಚಾರವಾಗಿ ಸಾಕಷ್ಟು ವಿಚಾರವನ್ನು ತಿಳಿದುಕೊಂಡಿದ್ದೇವೆ ಹಾಗೆಯೇ ವೇದಕಾಲದಲ್ಲಿ ಭಗವಂತನನ್ನು ಜ್ಞಾನ ಸ್ವರೂಪನಾಗಿಯೂ ನಂತರದಲ್ಲಿ ಜ್ಯೋತಿ ಸ್ವರೂಪನಾಗಿಯೂ ಕಾಣಲಾಗುತ್ತಿತ್ತು, ಈ ಹಂತದಲ್ಲಿ ಮಂತ್ರ ಹಾಗೂ ಯಜ್ಞ ಯಾಗ ಗಳಿಂತ ಭಗವಂತನ ಆರಾಧನೆ ನಡೆಯುತ್ತಿತ್ತು. ಮುಂದೆ ಜೀವಿಯ ಸೃಷ್ಠಿ ಲಿಂಗಸಮಾಗಮದಿಂದ ಆಗುವುದನ್ನು ಸೂಚ್ಯವಾಗಿಟ್ಟುಕೊಂಡು ಜೀವಿಯ ಜನ್ಮ ಸ್ಥಾನ ಪವಿತ್ರ ಹಾಗೂ ಅದು ಭಗವಂತನಿಂದ ಜೀವ ಸೃಷ್ಠಿಯ ಮೂಲ ಸ್ಥಾನ ಎಂಬುದಾಗಿ ಕಲ್ಪಿಸಿ ಹುಟ್ಟಿಗೆ ಕಾರಣವಾಗುವ ಲಿಂಗರೂಪದಲ್ಲಿ ಭಗವಂತನ ಅಸ್ಥಿತ್ವವನ್ನು ಗುರುತಿಸಿ ಲಿಂಗ ಪೂಜೆ ಆರಂಭ ವಾಯಿತು (ಖುಜರಾಹು ದೇವಾಲಯದಲ್ಲಿ ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ. ಲೈಂಗಿಕ ಸಮಾಗಮ ಪ್ರಾಚೀನರಲ್ಲಿ ಪವಿತ್ರತೆಯನ್ನು ಪಡೆದಿತ್ತು ವಾತ್ಸಾಯನ ಮುನಿ ಈ ಸಂಬಂಧವಾಗಿ ಕಾಮಶಾಸ್ತ್ರವನ್ನೇ ಬರೆದಿದ್ದಾನೆ. ಇದಕ್ಕೆ ಪಾವಿತ್ರತೆಯ ಸಂಸ್ಕಾರದ ಚೌಕಟ್ಟನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದಾರೆ. ಆದರೆ ಇಂದು ಈ ವಿಷಯ ಮಡಿ ಮೈಲಿಗೆಯ ವಿಷಯವಾಗಿದೆ. ಹಾಗೂ ಅನ್ಯಮತಗಳ ಪ್ರಭಾವದಿಂದ ಅಶ್ಲೀಲತೆ ಅನೈತಿಕೆತೆ ಸಮಾಜದಲ್ಲಿ ತಲೆ ಎತ್ತುತ್ತಿದೆ,) ಹೀಗೆ ಎಲ್ಲೆಡೆ ಶಿವಲಿಂಗ ಸ್ಥಾಪನೆ ಶಿವಾಲಯಗಳ ನಿರ್ಮಾಣ ಪ್ರಾರಂಭವಾಯಿತು. ನಮ್ಮ ಅತಿ ಪ್ರಾಚೀನ ಇತಿಹಾಸ ಇರುವ ದೇವಾಲಯಗಳೆಲ್ಲವೂ ಲಿಂಗರೂಪೀ ಶಿವನ ದೇವಾಲಯಗಳೇ ಆಗಿವೆ. ಇಲ್ಲಿಯವರೆಗೂ ಭಗವಂತನ ನಿರಾಕಾರ ಸ್ವರೂಪವೇ ಆರಾಧನೆಯಲ್ಲಿತ್ತು ಮುಂದೆ ವೈಷ್ಣವ ಪಂಥದ ಪ್ರಭಾವದಿಂದ ಪುರಾಣೋಕ್ತ ದೇವರ ವರ್ಣನೆ ರೂಪಗಳೆಲ್ಲವೂ ಮೂರ್ತಿರೂಪ ಪಡೆದು ಇಂದು ಎಲ್ಲಾ ದೇವರ ದೇವಾಲಯಗಳೂ ಮೂರ್ತಿಗಳೂ ಇವೆ. ಮೂರ್ತಿಪೂಜೆಗೆ ವಿಷೇಷ ಮನ್ನಣೆಕೊಟ್ಟವರು ವೈಷ್ಣವರು ಎನ್ನಬಹುದು ದಶಾವತಾರ ಕಲ್ಪನೆಯಿಂದಲೇ ಇವಕ್ಕೆ ಪ್ರೇರಣೆ ಸಿಕ್ಕಿದೆ. ಬೌದ್ಧ ಹಾಗೂ ಜೈನರ ಶೀಲ್ಪಗಳೂ ಸಾಕಷ್ಟು ಕಡೆಗಳಲ್ಲಿ ಸ್ಥಾಪಿತ ವಾಗಿವೆ.
ಕಲ್ಲು ಹೇಗೆ ದೇವರಾಗುತ್ತದೆ ? ಕಲ್ಲು ದೇವರು ದೇವರೆ? ಪ್ರಾಣಿ ಹೇಗೆ ದೇವರಾಗುತ್ತದೆ ? ಪ್ರಾಣಿದೇವರೆ? ಮೂರ್ತಿಪೂಜೆ ತಪ್ಪೇ?
ಇದು ಹಲವಲ್ಲಿರುವ ಗೊಂದಲದ ಪ್ರಶ್ನೆ ಕಲ್ಲು ದೇವರೇ? ಕಲ್ಲು ದೇವರಲ್ಲ: ಹಾಗಿದ್ದರೆ ಕಲ್ಲಿಗೆ ಯಾಕೆ ಪೂಜೆಮಾಡಬೇಕು? ಯದ್ಭಾವಂ ತದ್ಭವತಿ ಎಂದು ಶಾಸ್ತ್ರಕಾರರು ಹೇಳಿದ್ದಾರೆ ಇಲ್ಲಿ ಕಲ್ಲು ದೇವರಲ್ಲ ಆದರೆ ಕಲ್ಲಿನಲ್ಲಿಯೂ ದೇವರಿದ್ದಾನೆ ಎನ್ನುವುದು ನಂಬಿಕೆ ಏಕೆಂದರೆ ಎಲ್ಲೆಡೆಯೂ ದೇವರಿದ್ದಾನೆ ಎನ್ನುವುದು ಹಿಂದುಗಳ ಅಭಿಪ್ರಾಯ. ಇದಕ್ಕಾಗಿಯೇ ಪ್ರಹಲ್ಲಾದನ ಕಥೆ ಹೇಳಲಾಗಿದೆ. ಆತ್ಮ ಹೇಗೆ ದೇಹದಲ್ಲಿ ನೆಲೆಸಿದೆಯೋ ಅದರಂತೆಯೇ ಪರಮಾತ್ಮನು ಸೃಷ್ಠಿಯಲ್ಲಿ ನೆಲೆಸಿದ್ದಾನೆ, ಸೃಷ್ಠಿಯ ಪ್ರತಿಯೊಂದು ಕಣದಲ್ಲೂ ರೂಪದಲ್ಲೂ ಈ ವಿಶ್ವ ಚೇತನ ಶಕ್ತಿ ಇದೆ, ಇಂತಹ ಶಕ್ತಿಯನ್ನು ಗುರುತಿಸಲು ಜ್ಞಾನದ ಅವಶ್ಯಕತೆ ಇದೆ, ನಮ್ಮ ಹಿರಿಯರು ತಮ್ಮ ವಿಶೇಷ ವಾದ ತಪಸ್ಸಿನಿಂದ ಅತಿಂದ್ರಯವಾದುದನ್ನು ಗ್ರಹಿಸಿ ಅದನ್ನು ಕೆಲವು ಮಂತ್ರ ಹಾಗೂ ತಂತ್ರಗಳ ಮುಖಾಂತರ ಒಲಿಸಿಕೊಂಡು ಅಂತಹ ದಿವ್ಯಚೇತನ ಶಕ್ತಿಯನ್ನು ತಮ್ಮ ಜೀವನ ಹಾಗೂ ಆತ್ಮೋದ್ಧಾರಕ್ಕೆ ಬಳಸಿಕೊಂಡಿದ್ದಾರೆ. ಅಂತಹ ಕ್ರಿಯೆಗಳಲ್ಲಿ ವಿಷೇಶ ಬಗವದ್ ಚೇತನ ವನ್ನು ಶಿಲೆಗಳಿಗೆ ಆಹ್ವಾನಿಸಿ ಪ್ರಾಣ ಪ್ರತಿಷ್ಠೆ ಮುಂತಾದ ಸಂಸ್ಕಾರಗಳನ್ನು ಮಾಡಿ ಅಲ್ಲಿ ಚೈತನ್ನವನ್ನು ಆಕರ್ಷಿಸುವ ಕೆಲಸ ನಡೆಯುತ್ತದೆ ಇದಕ್ಕೆ ಕಲಾಕರ್ಷಣೆ ಎನ್ನುತ್ತಾರೆ. ಇಂತಹ ಶಿಲೆಗಳನ್ನೇ ದೇವರು ಎಂಬುದಾಗಿ ನಂಬಲಾಗುವುದು. ಇಂತಹ ಚೈತನ್ಯದ ಪ್ರಭಾವಲಯ ಭಕ್ತರ ಸಕಾರಾತ್ಮಕ ಮನಸ್ಥಿತಿಯಮೇಲೆ ಉತ್ತಮ ಪರಿಣಾಮವನ್ನು ಬೀರುವುದು ಅನೇಕ ಭಕ್ತರ ಅನುಭವಕ್ಕೆ ಬರುತ್ತದೆ. ಇದನ್ನು ಸಾಕ್ಷಿಸಮೇತ ತೋರಿಸುವುದು ಅಸಾಧ್ಯ. ಅಜ್ಞಾನಿಗಳು ಕಲ್ಲನ್ನು ಕೇವಲ ಕಲ್ಲಾಗಿಯೂ ಪ್ರಾಣಿಯನ್ನು ಕೇವಲಪ್ರಾಣಿಯಾಗಿಯೂ ಭಾವಿಸುತ್ತಾರೆ ಅವುಗಳು ತಮ್ಮ ಭೋಗಕ್ಕಾಗಿಯೇ ಇವೆ ಎನ್ನುವ ಅಸುರ ಭಾವ ಹೊಂದಿರುತ್ತಾರೆ. ನಾವು ಕಲ್ಲಿನಲ್ಲಿರುವ ದೇವರಿಗೆ ಪೂಜಿಸುತ್ತೇವೆಯೇ ಹೊರತು ಕಲ್ಲಿಗೆ ಪೂಜಿಸುವುದಿಲ್ಲ. ಮೂರ್ತಿಗೆ ರೂಪಕೊಟ್ಟು ಅದನ್ನು ಸಂಸ್ಕಾರ ಪೂರ್ವಕವಾಗಿ ಪ್ರತಿಷ್ಥಾಪಿಸಿ ಅದಕ್ಕೆ ದೇವರನ್ನು ಆಹ್ವಾನಿಸಿ ಅಷ್ಠಬಂಧ ಕಳಾಕರ್ಷಣೆ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಆ ನಂತರ ಆಶಿಲೆಯನ್ನು ದೇವರೆಂದು ಪೂಜಿಸಲಾಗುವುದೇ ಹೊರತು ಕೇವಲ ಕಲ್ಲನ್ನೂ ಮೂರ್ತಿಯ ರೂಪವನ್ನೋ ತಿಳಿದವರು ಪೂಜಿಸುವುದಿಲ್ಲ. ಇಲ್ಲಿ ಭಾವನೆಗೆ ಮಹತ್ವವೇ ಹೊರತು ಬಾಹ್ಯ ರೂಪಕ್ಕಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಯಾವುದೇ ದೇವಾಲಯದಲ್ಲಿರಲಿ ಯಾವುದೇ ಮೂರ್ತಿಯ ಎದುರಿರಲಿ ನಾವು ಕಣ್ಣುಮುಚ್ಚಿ ಭಕ್ತಿಯಿಂದ ನೋಡುವುದು ನಮ್ಮ ಇಷ್ಠದೈವವನ್ನೋ ಕುಲ ದೇವರನ್ನೋ ಆಗಿರಬಹುದು ನಮ್ಮ ಭಾವಕ್ಕೆ ತಕ್ಕಂತೆ ದೈವದ ಸಾಕ್ಷಾತ್ಕಾರವಾಗುವುದು. ಆಟಿಕೆಯ ದೇವರಮೂರ್ತಿಗಳನ್ನು ನಾವು ಅಂಗಡಿಗಳಲ್ಲಿ ಖರೀದಿಸುತ್ತೇವೆ ಇವು ಲೋಹ ಇರಬಹುದು ಪ್ಲಾಸ್ಟಿಕ್ ಇರಬಹುದು, ರಬ್ಬರ್ ಇರಬಹುದು , ಮರ ಅಥವಾ ಮಣ್ಣಿನ ಮೂರ್ತಿ ಇರಬಹುದು. ಅವುಗಳನ್ನು ನಾವು ಪೂಜಿಸುವುದಿಲ್ಲ ಅಲ್ಲವೇ? ಪ್ರತಿಷ್ಠೆ ಗೊಳ್ಳದ ಶಿಲೆ ಅಥವಾ ಮೂರ್ತಿ ಕೇವಲ ಶಿಲೆಯಾಗಿರುತ್ತದೆ. ನಾವು ರೂಪ ಇಲ್ಲದ ಶಿಲೆಯನ್ನೂ ದೇವರೆಂದು ಪೂಜಿಸುತ್ತೇವೆ ಅಲ್ಲಿಯೂ ದೇವರನ್ನು ಆಹ್ವಾನಿಸಿ ಪೂಜಿಸಿ ವಿಸರ್ಜಿಸುತ್ತೇವೆ, ಆಹ್ವಾನಕ್ಕೆ ಮೊದಲೂ ವಿಸರ್ಜನೆಯ ನಂತರವೂ ಆಮೂರ್ತಿ ಕೇವಲ ಮೂರ್ತಿ ಅಧವಾ ಮಣ್ಣೇ ಆಗಿರುತ್ತದೆ ಶಿವಲಿಂಗ ಶಾಲಿಗ್ರಾಮಗಳು ರೂಪರಹಿತವಾಗಿ ಪೂಜಿಸಲ್ಪಡುತ್ತವೆ. ಚೌತಿಗಣಪತಿ ನೀರಿನಲ್ಲಿ ವಿಸರ್ಜಿಸಲ್ಪಡುತ್ತದೆ. ಅವೆಲ್ಲಾ ಭಾವನೆಯಮೇಲೆ ನಿಂತಿರುವ ಶ್ರಧ್ಧೆಗಳಾಗಿವೆ.ಹಾಗೂ ಧರ್ಮ ಸೂಕ್ಷ್ಮಗಳಾಗಿವೆ. ಕಳಶದಲ್ಲಿಯೂ , ಹೋಮದಲ್ಲಿಯೂ ದೇವರನ್ನು ಪೂಜಿಸುತ್ತೇವೆ. ಇದನ್ನು ಅನ್ಯ ಮತದವರಿಗೆ ಹಾಗೂ ಅಲ್ಪ ಬುದ್ದಿಯವರಿಗೆ ಅಜ್ಞಾನದಿಂದ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ.
ನಮಗೆ ಉಪಕಾರಮಾಡಿದ ಪ್ರಾಣಿಗಳ ವಿಚಾರದಲ್ಲಿಯೂ ಇದೇ ದೈವಿಲೆ ಶ್ರದ್ಧೆ ಹಾಗೂ ಮಾನವೀಯ ಭಾವನೆ ಹೊಂದುವುದು ಹಿಂದೂಗಳ ವಿಶಾಲ ಮಾನವ ಧರ್ಮದ ಪ್ರತೀಕವಾಗಿದೆ. ಕೃಷಿಪ್ರದಾನ ಸಂಸ್ಕೃತಿಯಲ್ಲಿ ಜೀವನವಿಡೀ ಅತ್ಯಾವಶ್ಯಕವಾದ ಹಾಲುನೀಡುವ ಹಸು, ಉಳುಮೆಗೆ ಸಹಾಯಮಾಡುವ ಎತ್ತು. ರೈತಸ್ನೇಹಿಯಾಗಿ ಕ್ರಿಮಿ ಕೀಟಗಳನ್ನು ತಿನ್ನುವ ರೈತಸ್ನೇಹಿ ಹಾವುಗಳು ಹಾಗೂ ಅದರಲ್ಲಿ ವಿಶೇಷಗುಣ ಹೊಂದಿದ ನಾಗ ಮುಂತಾಗಿ ದೈವಸ್ವರೂಪದಲ್ಲಿ ಪೂಜಿಸಿ ಗೌರವಿಸುವ ಶ್ರದ್ಧೆಯನ್ನು ನಮ್ಮ ಸಂಸ್ಕೃತಿ ಕಲಿಸಿದೆ. ಇಲ್ಲಿಯೂ ಪ್ರಾಣಿಯೇ ದೇವರಲ್ಲ ಆದರೆ ಅವುಗಳಲ್ಲಿ ದೇವರಿದ್ದಾನೆ, ದೇವರಸದ್ಗುಣಗಳು ಅವುಗಳಲ್ಲಿವೆ. ಗುರುಹಿರಿಯರು ದೇವರಲ್ಲ ಆದರೆ ಗುರುಹಿರಿಯರಲ್ಲಿ ದೇವರಿದ್ದಾನೆ ಅಂದರೆ ದೇವರ ಸದ್ಗುಣಗಳಿವೆ. ಹಾಗಾಗಿ ಸಜ್ಜನರಾದ ಪ್ರತಿಯೊಬ್ಬರನ್ನೂ ಗೌರವಿಸವುದು ವಿಶೇಷಸಂದರ್ಭದಲ್ಲಿ ಪೂಜಿಸುವುದೂ ರೂಢಿಯಲ್ಲಿ ಬಂದಿದೆ. ಎಲ್ಲಾಪೂಜೆಗಳೂ ಸಲ್ಲುವುದು ಪರಮೋಚ್ಚ ಭಗವಂತನಿಗೇ ಹೊರತು ಆಯಾ ವ್ಯಕ್ತಿಗಳಿಗಲ್ಲ. ಹಿಂದುಗಳು ಗುಣಾರಾಧಕರೇ ಹೊರತು ವ್ಯಕ್ತಿಪೂಜಕರಲ್ಲ. ಆದುದರಿಂದಲೇ ಎಲ್ಲರಲ್ಲಿಯೂ ಭಗವಂತನಿದ್ದರೂ ಎಲ್ಲಾ ಜೀವದಲ್ಲಿಯೂ ಬಗವಂತನಿದ್ದರೂ ನಾವು ಎಲ್ಲರನ್ನೂ ಪೂಜಿಸುವುದಿಲ್ಲ ಏಕೆಂದರೆ ಯಾರಲ್ಲಿ ಭಗವಂತನ ಗುಣಗಳು ಪ್ರಕಟವಾಗಿವೆಯೋ ಹೆಚ್ಚು ಪ್ರತಿಫಲನ ಗೊಳ್ಳುತ್ತದೋ ಸದ್ಗುಣಗಳನ್ನು ಅಳವಡಿಸಿಕೊಂಡು ಬದುಕುತ್ತಾರೋ ಅಂತಹವರನ್ನು ಮಹಾತ್ಮರು ಭಗವತ್ ಸ್ವರೂಪರು ಎಂದು ಗೌರವಿಸುತ್ತೇವೆ. ಅನ್ಯ ಮತಗಳಲ್ಲಿ ಕೇವಲ ಭೊಗದ ವಸ್ತುವಿನಂತೆ ಬಳಸುವ ಮಹಿಳೆಯರನ್ನು ಹಿಂದೂಗಳು ಮಾತೆಯಾಗಿ ಸುಮಂಗಲೆಯಾಗಿ ದೇವಿಯಾಗಿ ಪೂಜಿಸುತ್ತಾರೆ. ಹೀಗೆಯೇ ತಮ್ಮ ಜೀವನದಲ್ಲಿ ಅತಿಹೆಚ್ಚು ದೈವಿಕಗುಣಗಳನ್ನು ಪ್ರದರ್ಷಿಸಿದವರನ್ನು ದೇವರೆಂದು, ದೇವರ ಅವತಾರವೆಂದು ಅವತಾರ ಪುರುಷರೆಂದೂ ಕರೆದು ಸ್ವಿಕರಿಸಿದ್ದೇವೆ. ಇದು ನಮ್ಮ ಸಂಸ್ಕೃತಿಯ ತಿರುಳಾಗಿದೆ.
ಮೂರ್ತಿಪೂಜೆ ತಪ್ಪೆ?
ಮೂರ್ತಿಪೂಜೆ ತಪ್ಪಲ್ಲ ಅದು ಕೇವಲ ಅಭಿನಯ ವಾಗಿರದೆ ಭಕ್ತಿ ಭಾವದಿಂದ ಕೂಡಿರಬೇಕು ಹಾಗೂ ಮೂರ್ತಿ ನಿಮಿತ್ತ ಮಾತ್ರವಾಗಿದ್ದು ಪೂಜಿಸುತ್ತಿರುವುದು ಕಲ್ಲನ್ನೋ ಕಲ್ಲಿನ ಆಕಾರವನ್ನೋ ಅಲ್ಲ ಅದರೊಳಗಿನ ಭಗವಂತನನ್ನು ಹಾಗೂ ಆತನ ಸದ್ಗುಣಗಳನ್ನು ಎನ್ನುವ ಅರಿವು ಪೂಜಿಸುವವನಿಗೆ ಇರಬೇಕು. ಭಾವರಹಿತ ಅಭಿನಯದಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನೇ ದಾಸರು ಎತ್ತು ಗಾಣವ ಸುತ್ತಿದಂತೆ ಭಕ್ತ ದೇವಾಲಯವನ್ನು ಸುತ್ತಿದರೆ ಏನು ಫಲ ಎಂದು ಕೇಳಿದ್ದಾರೆ. ನಮಗೆ ಎತ್ತು ಸುತ್ತುವುದರಿಂದ ಕನಿಷ್ಟ ಎಣ್ಣೆ ಸಿಗುವುದಾದರೂ ಎತ್ತಿಗೆ ಅದರ ಅರಿವಿರುವುದಿಲ್ಲ, ಅದು ಯಜಮಾನನ ಅಪೇಕ್ಷೆಯಂತೆ ಸುತ್ತುತ್ತದೆ, ದೇವಾಲಯದಲ್ಲಿಯೂ ಅನ್ಯ ಮನಸ್ಕರಾಗಿದ್ದರೆ ಅದು ಫಲನೀಡಲಾರಾದು. ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಎನ್ನುವ ಮಾತಿದೆ, ಹೀಗೆ ಅಜ್ಞಾನ ದಿಂದ ಕಾರ್ಯ ಮಾಡಬಾರದು. ಮಾಡಿದರೂ ಅದರಿಂದ ಶೂನ್ಯ ಫಲವೇ ಸಿಗುವುದು, ಇದನ್ನೇ ಮೂಢನಂಬಿಕೆ ಅಂಧಾನುಕರಣೆ ಎನ್ನುವುದು, ಕಾಯಾ, ಮನಸಾ, ವಾಚಾ, ಭಗವಂತನನ್ನು ಆರಾಧಿಸಬೇಕು. ಅಂಧ ಶ್ರಧ್ಧೆಯಿಂದ ಭಗವಂತನನ್ನು ಪೂಜಿಸುವುದು ತಪ್ಪು. ಅಂತಃಕರಣ ಪೂರ್ವಕವಾಗಿ ಅರ್ಥಮಾಡಿಕೊಂಡು ಪೂಜಿಸಬೇಕು, ಭಯದಿಂದಲೋ ಅಥವಾ ಯಾವುದೋ ವೈಯುಕ್ತಿಕ ವ್ಯಾವಹಾರಿಕ ಲಾಭದ ಆಸೆಯಿಂದಲೋ ಪೂಜಿಸುವುದು ಉಚಿತವಲ್ಲ. ಬದಲಾಗಿ ಕೃತಜ್ಞತೆಯಿಂದ ಭಗವಂತನನ್ನು ಪೂಜಿಸಬೇಕು ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಬೇಕು.
ಮೂರ್ತಿ ಪೂಜೆ ಅನಿವಾರ್ಯವೇ?
ಖಂಡಿತಾ ಅನಿವಾರ್ಯವಲ್ಲ ಹಿರಿಯರು “ಯದ್ಭಾವಂ ತದ್ಭವತಿ” ಎಂದಿದ್ದಾರೆ ಆದುದರಿಂದ ಸದ್ಗುಣಗಳೇ ದೇವರೆಂದು ಗುಣಗಳನ್ನು ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ಬದುಕುವುದು ಮುಖ್ಯವೇ ಹೊರತು ಮೂರ್ತಿ ಪೂಜೆ ಅನಿವಾರ್ಯವೇನೂ ಅಲ್ಲ. ಜ್ಞಾನಿಗೆ ಇದು ಅನಿವಾರ್ಯವಲ್ಲ ಆದರೆ ಸಾಮಾನ್ಯರಿಗೆ ಜ್ಞಾನದ ದಾರಿಯಲ್ಲಿ ಹೋಗುವ ಸಂಸ್ಕಾರ ಸಿಗುವುದು ನಮ್ಮ ಸಂಸ್ಕೃತಿ ಯಿಂದಾದುದರಿಂದ, ನಾವು ಮುಂದಿನ ಪೀಳಿಗೆಗಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ಉಚಿತವೂ ನಮ್ಮ ಕರ್ತವ್ಯವೂ ಆಗಿದೆ. ಪರಿಪೂರ್ಣ ಜ್ಞಾನಿ ಕರ್ಮ ಮಾರ್ಗತೊರೆದು ಜ್ಞಾನ ಧ್ಯಾನ ಭಕ್ತಿ ಯೋಗ ಹೀಗೆ ಯಾವುದೇ ಮಾರ್ಗಗಳಲ್ಲಿ ಭಗವಂತನನ್ನು ಅರ್ಚಿಸಬಹುದು. ಪೂಜೆ ಎನ್ನುವುದು ಭಗವಂತನನ್ನು ಅರಿಯುವ ಮಾರ್ಗವೇ ಹೊರತು ಅದೇ ಅಂತಿಮವಲ್ಲ ಕರ್ಮ ಮಾರ್ಗಕ್ಕಿಂತ ಜ್ಞಾನ ಮಾರ್ಗ ಹೆಚ್ಚು ಮಹತ್ವದ್ದಾಗಿದೆ. ಯೋಗ ವಿಧಾನದಿಂದಲೂ ಧ್ಯಾನದಿಂದಲೂ ಜಪತಪಗಳಿಂದಲೂ ಭಜನೆಯಿಂದಲೂ ಹೋಮ ಹವನ ಗಳಿಂದಲೂ ಭಗವಂತನನ್ನು ಆರಾಧಿಸುವ ಅವಕಾಶ ನಮಗೆ ಇದೆ. ಇದರಂತೆ ಪೂಜೆಯೂ ಒಂದು ವಿಧಾನವಾಗಿದೆ. ಈ ಎಲ್ಲಾ ಮಾರ್ಗಗಳು ಉತ್ತಮ ಸಂಸ್ಕಾರಗಳನ್ನು ಮನುಷ್ಯನಿಗೆ ಒದಗಿಸುವ ಉದ್ದೇಶದಿಂದ ರೂಪಿಸಲ್ಪಟ್ಟಿವೆ. ಇಂತಹಾ ಸಂಸ್ಕೃತಿಯನ್ನು ನಾವು ಉಳಿಸಿಕೊಂಡು ಹೋಗುವ ಅಗತ್ಯ ಇದೆ. ಸಂಸ್ಕೃತಿ ಇಲ್ಲದೆ ಸಂಸ್ಕಾರ ಇಲ್ಲ. ಸಂಸ್ಕಾರ ಇಲ್ಲದೆ ಧರ್ಮ ಇಲ್ಲ. ಇವುಗಳು ಒಂದಕ್ಕೊಂದು ಪರಸ್ಪರ ಪೂರಕವಾಗಿವೆ. ಹಾಗೂ ಸ್ವಸ್ಥ ಸಮಾಜಕ್ಕೆ ಅನಿವಾರ್ಯವೂ ಆಗಿದೆ ಆದರೆ ಅಂಧಾನುಕರಣೆ ಅಂದ ವಿಶ್ವಾಸ ಮೌಢ್ಯ ಡಂಭಾಚಾರ ಇರಬಾರದು. ಇವುಗಳ ಬಗ್ಗೆ ಎಚ್ಚರದಿಂದ ಇರಬೇಕು. ಉದಾಹರಣೆಗೆ > ಏಣಿ ಉಪ್ಪರಿಗೆಯನ್ನು ಏರಲು ಇರುವ ಸಾಧನ ಏಣಿಯ ಸಹಾಯದಿಂದ ನಾವು ಉಪ್ಪರಿಗೆಯನ್ನು ಏರಬೇಕು. ಈ ಉದ್ದೇಶಕ್ಕಾಗಿ ಏಣಿ ಶ್ರೇಷ್ಟವು ಹೌದು ಏಣಿಯಂತೆಯೇ ನಮ್ಮ ಸಾಧನಾಮಾರ್ಗಗಳು, ದೇವಾಲಯ, ದೇವರವಿಗ್ರಹ, ಪೂಜೆ, ಜಪ, ತಪ ಎಲ್ಲವೂ ಆಗಿದೆ. ಏಣಿ ನಮ್ಮ ಸಾಧನೆಗೆ ಸಹಕಾರಿ ಎಂದು ಏಣಿಯನ್ನು ಏರದೆ ಅದನ್ನು ಅಲಂಕರಿಸಿ ಅಭಿಷೇಕ ನೈವೇದ್ಯ ಉತ್ಸವ ಪೂಜೆಗಳಲ್ಲಿಯೇ ನಾವು ನಿರತರಾದಲ್ಲಿ ನಾವು ಉಪ್ಪರಿಗೆ ಏರಲು ಸಾಧ್ಯವೇ? ಇಂದು ನಮ್ಮ ದೇವಾಲಯ ದೇವರ ಪರಿಸ್ಥಿತಿ ಹಾಗೂ ಭಕ್ತರ ಕತೆ ಏಣಿಯ ಪೂಜೆ ಯಂತೆಯೇ ಆಗಿದೆ. ಪೂಜೆ ಮಾಡುವವರಲ್ಲಿಯೂ ಪೂಜೆ ಮಾಡಿಸುವವರಲ್ಲಿಯೂ ಜ್ಞಾನ ವೃದ್ಧಿ ಆಗುತ್ತಿಲ್ಲ. ಉದ್ದೇಶ ಮರೆತು ಆಚರಣೆಗಳು ವಿಜೃಂಬಿಸುತ್ತಿದೆ. ಫಲಿತಾಂಶವಿಲ್ಲದ ಆಚರಣೆಯಿಂದ ಜನ ನಿರಾಶರಾಗಿ ವಿಮುಖರಾಗುತ್ತಾರೆ. ಇದುವೇ ಹಿಂದೂ ಧರ್ಮ ಗೊಂದಲ ಗೊಳ್ಳಲು ದುರ್ಬಲವಾಗಲು ಕಾರಣ ವಾಗಿದೆ.
ಹೀಗೆ ಸಾಂಸ್ಕೃತಿಕ ಶ್ರೀಮಂತ ಆಚರಣೆಯ ಸುಭದ್ರ ವ್ಯವಸ್ಥೆಯನ್ನು ನಮ್ಮ ಹಿರಿಯರು ರೂಪಿಸಿದ ಫಲವಾಗಿಯೇ ಅನೇಕ ಶತಮಾನಗಳ ಕಾಲ ಅನೇಕ ದುರ್ಮತಿಗಳ ಆಕ್ರಮಣ ದಾಳಿ ಗಳಿಂದ ಆಘಾತ ಕ್ಕೊಳಗಾದರೂ ಹಿಂದು ಸಂಸ್ಕೃತಿ ನಾಶವಾಗಿಲ್ಲ ಹಾಗೂ ಇದೇ ಸಂಸ್ಕಾರ ಹಾಗೂ ಸಂಸ್ಕೃತಿಯ ಬಲದಿಂದ ಮತ್ತೆ ಮತ್ತೆ ಎದ್ದು ನಿಲ್ಲುತ್ತಿದೆ, ಆದರೆ ಮುಸಲ್ಮಾನರ ಹಾಗೂ ಕ್ರಿಶ್ಚಿಯನ್ನರ ಮತೀಯ ದಾಳಿಗಳಿಂದ ವಿಶ್ವದ ಅನೇಕ ದೇಶಗಳು ಸಂಪೂರ್ಣ ವಾಗಿ ತಮ್ಮ ಸಂಸ್ಕೃತಿಯನ್ನು ಕಳೆದುಕೊಂಡು ಪರಮತವನ್ನು ಅಂಗೀಕರಿಸಿವೆ ಇದು ಅಳಿದ ದೇಶಗಳಲ್ಲಿದ್ದ ದುರ್ಬಲ ಸಂಸ್ಕೃತಿಯಿಂದಾಗಿಯೇ ಆಗಿದೆ. ಎನ್ನಬಹುದು,
ಪ್ರಾರಂಭದಲ್ಲಿ ದೇವಸ್ಥಾನಗಳಿಂದಾದ ಪ್ರಯೋಜನ ವೇನು?
ಆರಂಭದಲ್ಲಿ ಬೌದ್ಧ ಜೈನ ತತ್ವಗಳಿಂದ ವೇದಗಳು ತಿರಸ್ಕರಿಸಲ್ಪಟ್ಟಾಗ ಯಜ್ನ ಯಾಗಗಳು ಖಂಡಿಸಲ್ಪಟ್ಟು ರಾಜಾಶ್ರಯವನ್ನು ಕಳೆದುಕೊಂಡಾಗ ಇವುಗಳನ್ನು ಎದುರಿಸಲು ದೇವಾಲಯಗಳು ರಚಿಸಲ್ಪಟ್ಟು ಯಾಗ ಯಜ್ಞ ಆಹುತಿಗಳಿಗೆ ಪರ್ಯಾಯವಾಗಿ ಪೂಜೆ ಉತ್ಸವ ನೈವೇದ್ಯ ಗಳಂತ ವಿಧಾನಬಳಕೆಗೆ ಬಂದುವು. ವೇದಮಂತ್ರಗಳನ್ನೇ ಇವುಗಳಿಗೂ ಬಳಸಿಕೊಳ್ಳಲಾಯಿತು ಹಾಗು ಈ ವಿಧಾನ ಜನಪ್ರಿಯವಾಗಿ ಹಾಗೂ ಪರಿಣಾಮಕಾರಿಯಾಗಿ ನಾಸ್ಥಿಕ ವಾದವನ್ನು ಎದುರಿಸಿ ನಿಲ್ಲಲು ಸಹಾಯವಾಯಿತು. ಮೂರ್ತಿಗಳ ಕೆತ್ತನೆ ದೇವಾಲಯಗಳ ನಿರ್ಮಾಣ ಹಾಗೂ ಪೂಜೆ ಪುನಸ್ಕಾರಗಳಿಗೆ ಅಗತ್ಯವಾದ ಶಿಲ್ಪ ಶಾಸ್ತ್ರ ವಾಸ್ತುಶಾಸ್ತ್ರ ಆಗಮ ಶಾಸ್ತ್ರ ಗಳು ರಚಿತಗೊಂಡು ಶ್ರೀಮಂತ ವೈವಿಧ್ಯಮಯ ಸಂಸ್ಕೃತಿ ಬೆಳೆಯಲು ಒಂದು ವೇದಿಕೆ ಕಲ್ಪಿಸಿದಂತಾಯಿತು ಹಾಗೂ ರಾಜಾಶ್ರಯ ರಾಜಮನ್ನಣೆಯೂ ಸಿಗಲಾರಂಭಿಸಿತು. ಇದರಿಂದ ವೇದಾಧಾರಿತ ಜೀವನ ಪದ್ದತಿ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಹಾಯವಾಯಿತು. ವೈದಿಕ ಧರ್ಮ ಪುನರುಜ್ಜೀವನ ಗೊಂಡಿತು.
-ಶ್ರೀಜಿ