ಹಿಂದೂ ಸಂಸ್ಕೃತಿಯ ಮೂಲಭೂತ ತಿಳುವಳಿಕೆ
- ದೇವರ ಅಸ್ಥಿತ್ವವನ್ನು ಒಪ್ಪುವುದು,
- ಪ್ರಕೃತಿ ಆರಾಧನೆ
- ಪುನರ್ಜನ್ಮದಲ್ಲಿ ನಂಬಿಕೆ
- ಕರ್ಮ ಸಿದ್ದಾಂತದಲ್ಲಿ ನಂಬಿಕೆ
- ಜೀವನದ ಪರಮ ಗುರಿ ಮೋಕ್ಷ
- ಹಿಂದೂ ಸಂಸ್ಕೃತಿಯಲ್ಲಿ ಜಗದೊಡೆಯ ನೊಬ್ಬನಿದ್ದಾನೆ ಅವನು ಸೃಷ್ಠಿಕರ್ತನಾಗಿದ್ದಾನೆ ಅವನ ಅನುಗ್ರಹದಿಂದ ನಾವು ಜೀವಿಸುತ್ತಿದ್ದೇವೆಂಬುದಾಗಿ ನಂಬಲಾಗುವುದು. ಇಂತಹ ಜ್ಞಾನದ ಮೂಲ ವೇದಗಳಾಗಿವೆ. ಧರ್ಮದ ಮೂಲ ಆಧಾರ ಮನುಕುಲದ ಪ್ರಾಚೀನ ಸಾಹಿತ್ಯಗಳಾದ ವೇದ, ಉಪನಿಷತ್ತುಗಳಾಗಿವೆ.ಇವುಗಳ ಸಾರ ರೂಪವಾದ ಭಗವದ್ಗೀತೆ ಹಿಂದೂ ಧರ್ಮ ಗ್ರಂಥಗಳ ಸಾರ ರೂಪವಾಗಿದ್ದು ವಿಶ್ವದ ಧರ್ಮಗ್ರಂಥಗಳಲ್ಲಿ ಸಾರ್ವಕಾಲಿಕ ಶ್ರೇಷ್ಟತೆಯನ್ನು ಹೊಂದಿದೆ.
ಶ್ರೀ ರಾಮ ಹಾಗು ಶ್ರೀ ಕೃಷ್ಣರ ಚರಿತ್ರೆಗಳಾದ ರಾಮಾಯಣ ಹಾಗೂ ಮಹಾಭಾರತಗಳು ಭಾರತೀಯ ಸಾಂಸ್ಕೃತಿಕ ವೈಭವದ ಜೀವಾಳವಾಗಿವೆ. ಹಿಂದೂ ಧರ್ಮ ಹಲವು ಕವಲುಗಳಲ್ಲಿ ವಿಘಟಿತಗೊಂಡು ಅಂಧಕಾರದಲ್ಲಿದ್ದಾಗ ಸಮಾಜದ ಒಳಿತಿಗಾಗಿ ಶ್ರೀ ಶಂಕರಾಚಾರ್ಯರು ವೇದ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದು ಅದ್ವೈತ ತತ್ವವನ್ನು ಬೋಧಿಸಿ ಎತ್ತಿಹಿಡಿದು ಹಿಂದೂಗಳನ್ನು ಹಿಂದೂಸ್ಥಾನವನ್ನು ಸಮಗ್ರವಾಗಿ ಬೆಸೆದು ಒಂದುಗೂಡಿಸಿದರು ಧರ್ಮ ರಕ್ಷಣೆಗಾಗಿ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಧರ್ಮಪೀಠಗಳನ್ನು ಸ್ಥಾಪಿಸಿ ತಮ್ಮ ನಾಲ್ಕು ಶಿಶ್ಯರನ್ನು ಅಲ್ಲಿ ಪ್ರತಿಷ್ಠಾಪಿಸಿ ನಾಲ್ಕು ವೇದಗಳ ರಕ್ಷಣೆಯ ಜವಾಭ್ಧಾರಿಯನ್ನು ನೀಡಿ ಹಿಂದೂ ಧರ್ಮವನ್ನು ಉದ್ದರಿಸಿದರು ಈ ಮಠಗಳಿಂದಾಗಿಯೇ ಇಂದು ಅನೇಕ ಆಕ್ರಮಣ ಹಾಗೂ ಪರಕೀಯರ ದಾಳಿ ಹಾಗೂ ದುರಾಡಳಿತಕ್ಕೊಳಗಾಗಿಯೂ ಹಿಂದೂ ಸ್ಥಾನ ಹಿಂದೂಗಳದ್ದಾಗಿ ಉಳಿದಿದೆ. ಇಂತಹ ದೂರದೃಷ್ಟಿಯುಳ್ಳ ಮಹಾಪುರುಷರ ಮಾರ್ಗದರ್ಷನದಂತೆ ದೇವರು ಒಬ್ಬನೆ, ನಾಮಹಲವು ಎನ್ನುವ ತತ್ವ ಎಲ್ಲರನ್ನೂ ಬೆಸೆಯುವಲ್ಲಿ ನೆರವಾಗಿದೆ, ಅಬೇಧ ಸಿದ್ದಾಂತವನ್ನು ಶಂಕರರು ಪ್ರತಿಪಾದಿಸಿದ್ದಾರೆ. ಸಂಸ್ಕಾರದಿಂದ ಶ್ರೇಷ್ಠತೆಯನ್ನು ಸದ್ಗತಿಯನ್ನು ಆತ್ಮವು ಹೊಂದುತ್ತದೆ ಎನ್ನುವುದು ಅದ್ವೈತದ ಮುಖ್ಯ ಪ್ರತಿಪಾದನೆಯಾಗಿದೆ. ಅಜ್ಞಾನದಿಂದ ಕೂಡಿದ ಆತ್ಮವು ಸುಜ್ಞಾನವನ್ನು ಹೊಂದಿದಾಗ ಕರ್ಮ ಬಂಧದಿಂದ ಬಿಡುಗಡೆಗೊಂಡು ಭಗವಂತನಲ್ಲಿ ಲೀನವಾಗುವುದೇ ಮೋಕ್ಷ ಎನ್ನುವುದು ಸರಳ ಅರ್ಥವಾಗಿದೆ.
ಮುಂದೆ ಮಧ್ವಾಚಾರ್ಯರು ಇದಕ್ಕೆ ವಿರುದ್ಧವಾದ ತಾರತಮ್ಯ ಸಿದ್ದಾಂತವನ್ನು ಪ್ರಚಾರಮಾಡಿದ್ದಾರೆ ಆದರೆ ಇದು ಸಮಾಜದ ವಿಘಟನೆಗೆ ಎಡೆಮಾಡಿಕೊಡುವುದರಿಂದಲೂ ಹಾಗೂ ಪರಸ್ಪರರಲ್ಲಿ ಮನಸ್ತಾಪಕ್ಕೆ ಮೇಲು ಕೀಳೆಂಬ ವಿವಾದಕ್ಕೆ ಕಾರಣವಾಗುವುದರಿಂದಲೂ ಸಮಾಜದಲ್ಲಿ ಪ್ರಸಿದ್ಧಿಯನ್ನು ಪಡೆಯುವಲ್ಲಿ ವಿಫಲವಾಗಿದೆ ಹಾಗೂ ವಿವಾದಾತ್ಮಕ ಸಿದ್ಧಾಂತವಾಗಿ ನಿರಂತರ ಕೆಳವರ್ಗಗಳಿಂದ ಟೀಕೆಗೊಳಗಾಗುತ್ತಿದೆ. ಹಾಗೂ ಇದನ್ನು ಸಾರ್ವತ್ರಿಕವಾಗಿ ಸಮಾಜ ಸ್ವೀಕರಿಸುವುದು ಅಸಾಧ್ಯವಾಗಿದೆ. ಇದು ವಿದ್ವಜ್ಜನರ ಮಧ್ಯೆ ತಾತ್ವಿಕ ನೆಲೆಯಲ್ಲಿ ಚರ್ಚೆಗೆ ಸೂಕ್ತ ವಿಷಯವಾಗಬಹುದಾದರೂ ಸಾಮಾನ್ಯಜನರಲ್ಲಿ ಸರ್ವಾನುಕರಣೆಗೆ ಹಿನ್ನೆಡೆಯನ್ನು ಒದಗಿಸುವಂತಿದೆ, ನಾವೆಲ್ಲಾ ಒಂದು ನಾವೆಲ್ಲ ಹಿಂದು ಎನ್ನುವುದೇ ಇಂದು ನಮ್ಮ ಅಸ್ಥಿತ್ವಕ್ಕೆ ಅನಿವಾರ್ಯವಾದ ಸಿದ್ಧಾಂತ ವಾಗಿದ್ದು ನಾವೆಲ್ಲಾ ಆ ನೆಲೆಯಲ್ಲಿ ಮತ ಬೇದದ ತಾರತಮ್ಯವನ್ನು ಅಳಿಸಿ ಸಮಾಜವನ್ನು ಒಗ್ಗೂಡಿಸಬೇಕಿದೆ. ಭೇಧಸಿದ್ಧಾಂತದಿಂದ ಸಮಾಜ ಹಾಗೂ ದೇಶವು ದುರ್ಬಲಗೊಳ್ಳದಿರಲಿ. ವಿಶಾಲ ಮನಸ್ಸಿನಿಂದ ಸಾಮರಸ್ಯ ಹಾಗೂ ಏಕತೆ ಯತ್ತ ಮಾರ್ಗದರ್ಷನ ಕೊಡುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಲಿ ಶಾಂತಿ ಸಾಮರಸ್ಯ ನೆಲೆಯಾಗಲಿ. ಎನ್ನುವುದೇ ನಮ್ಮ ಅಪೇಕ್ಷೆಯಾಗಿದೆ.
ಪ್ರಕೃತಿ ಆರಾಧನೆ ಹಿಂದೂ ಸಂಸ್ಕೃತಿಯ ಮೂಲಭೂತವಾದ ಅಡಿಪಾಯವಾಗಿದೆ ಪಂಚಭೂತಗಳಿಂದ ಸೃಷ್ಠಿ ಹಾಗೂ ಅವುಗಳ ವಿಸ್ಥಾರ ರೂಪವೇ ಪ್ರಕೃತಿಯಾಗಿದೆ ಇವುಗಳ ಸೃಷ್ಠಿಕರ್ತನೇ ಪರಮಾತ್ಮನಾಗಿದ್ದು ಪರಮಾತ್ಮನ ಭೌತಿಕ ರೂಪವೇ ಸೃಷ್ಠಿಯಾಗಿದೆ. ಪರಮಾತ್ಮನು ಸರ್ವತ್ರ ಇದ್ದಾನೆ ಎನ್ನುವುದು ಹಿಂದೂಗಳ ಅಛಲನಂಬಿಕೆ ಅಂದರೆ ಇಡೀಸೃಷ್ಠಿ ಭಗವಂತನ ಅಸ್ಥಿತ್ವವನ್ನು ಹೊಂದಿದೆ ಅಂದರೆ ಸಮಸ್ಥ ಸೃಷ್ಠಿಯೇ ಭಗವಂತನ ದೇಹ ಎನ್ನಬಹುದು. ಭಗವಂತ ಈ ಸೃಷ್ಠಿಯ ಆತ್ಮ ನಾಗಿದ್ದಾನೆ.
ಒಬ್ಬ ಹಿಂದು ಈ ಸೃಷ್ಠಿಗೆ ಒಬ್ಬ ಒಡೆಯನಿದ್ದಾನೆ ಆತನೇ ದೇವರು ಅಥವಾ ಭಗವಂತ ಅವನೇ ಸೃಷ್ಠಿಕರ್ತ ಎಂದು ಒಪ್ಪುತ್ತಾನೆ, ದೇವರೊಬ್ಬ ನಾಮ ಹಲವು ಇದು ಅದ್ವೈತ ತತ್ವವಾಗಿದೆ , ಹಾಗೂ ಸಮಾಜದ ಏಕತೆಗೆ ಭದ್ರತೆಗೆ ಅನಿವಾರ್ಯ ವಾಗಿದೆ. ಬಹುದೇವತಾರಾಧನೆ ನಮ್ಮ ಸಂಸ್ಕೃತಿಯಾಗಿ ಬೆಳೆದು ಬಂದಿದೆ ವಿಗ್ರಹಾರಾಧನೆ ಸಂಸ್ಕೃತಿಯ ಭಾಗವಾಗಿದೆ, ಹಲವು ದೇವರಿದ್ದಾರೆ ಅವರಲ್ಲಿ ಮೇಲು ಕೀಳು ಹೆಚ್ಚುಕಡಿಮೆ ಇದೆ ಎನ್ನುವುದು ಅಜ್ಞಾನಿಗಳ ನಂಬಿಕೆ ಎನ್ನಬಹುದು, ಹಲವು ರೂಪಗಳು ಹಲವು ಶಕ್ತಿಗಳು ನಾವು ಕಲ್ಪಿಸಿಕೊಂಡ ಒಂದೇ ಭಗವಂತನ ವಿವಿಧ ರೂಪಗಳಾಗಿವೆವೇ ಹೊರತು ವಿವಿಧ ವಿಭಿನ್ನ ದೇವರುಗಳೆನ್ನುವುದು ಉಚಿತವಲ್ಲ. ಜ್ಞಾನದ ಸಾರವನ್ನು ನಮ್ಮ ಹಿರಿಯರು ಪುರಾಣ ಕಥೆಗಳ ರೂಪದಲ್ಲಿ ನಮಗೆ ತಿಳಿಸಿದ್ದಾರೆ. ಇಂತಹ ಪುರಾಣಗಳ ಪಾತ್ರಧಾರಿಗಳನ್ನು ನಾವು ದೇವರೆಂದು ಪೂಜಿಸಿಕೊಂಡು ಬಂದಿದ್ದೇವೆ, ಸರ್ವದೇವ ನಮಸ್ಕಾರಃ ಕೇಶವಂಪ್ರತಿ ಗಚ್ಚತಿ ಎನ್ನುವುದು ಅತ್ಯಂತ ಉಚಿತವಾದ ಮಾತು ಇದನ್ನು ನಾವು ಶ್ರದ್ಧೆ ಹಾಗೂ ನಂಬಿಕೆಯಿಂದ ಪಾಲಿಸುವುದು ಗೊಂದಲ ರಹಿತ ನಿರ್ಧಾರಕ್ಕೆ ಉಚಿತವಾದುದಾಗಿದೆ.
- ಪ್ರಕೃತಿ ಆರಾಧನೆ :- ನಿರಾಕಾರ ನಾದ ದೇವರನ್ನು ಪ್ರಕೃತಿಯ ರೂಪದಲ್ಲಿ ಕಂಡು ಅದನ್ನು ಆರಾಧಿಸಿಕೊಂಡು ಪೂಜಿಸಿಕೊಂಡು ರಕ್ಷಿಸಿಕೊಂಡು ನಗೌರವಿಸಿಕೊಂಡು ಬಂದಿರುವುದು ಹಿಂಧೂ ಸಂಸ್ಕೃತಿಯ ಮುಖ್ಯ ಲಕ್ಷಣಗಳಲ್ಲೊಂದಾಗಿದೆ. ಸೃಷ್ಠಿ ಪಂಚಭೂತಗಳಿಂದಾಗಿದೆ. ಅಗ್ನಿ ವಾಯು ಜಲ ಮಣ್ಣು ಹಾಗೂ ಆಕಾಶ ಇವುಗಳೇ ಪರಮಾತ್ಮನ ಸ್ಥೂಲ ರೂಪಗಳೆಂದು ಪ್ರಕೃತಿ ಆರಾಧನೆ ಮಾಡಿಕೊಂಡುಬಂದಿರುವುದು ಹಿಂದೂಗಳ ಸಂಸ್ಕೃತಿಯ ಮೂಲ ಆಧಾರವಾಗಿದೆ. ಹೋಮ ಹವನ ಯಜ್ಞ ಯಾಗ ಭೋಮಿಪೂಜೆ ನದಿಗಳ ಪೂಜೆ ಪ್ರಾಣಿ ಪಕ್ಷಿ ಮರ ಇವೆಲ್ಲವುಗಳಲ್ಲೂ ಭಗವಂತನ ಅಸ್ಥಿತ್ವವನ್ನು ಕಂಡು ಪೂಜಿಸುವುದು ಹಿಂದುಗಳ ಜೀವನ ಸಂಸ್ಕೃತಿಯ ಅವಿನಾಭಾವ ಅಂಗವಾಗಿದೆ.
- ಪುನರ್ಜನ್ಮದಲ್ಲಿ ನಂಬಿಕೆ , ಹಿಂದೂ ಗಳು ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದಾರೆ ದೇಹ ಜಡ ಹಾಗೂ ಅಶಾಶ್ವತ ಆದರೆ ಜೀವ ಅಮರಚೇತನ ಶಾಶ್ವತ. ಇದು ಹಿಂದೂಗಳ ಸಿದ್ಧಾಂತ. ದೇಹಕ್ಕೆ ಸಾವಿದೆ ಆದರೆ ಜೀವಕ್ಕೆ ಸಾವಿಲ್ಲ ಜೀವ ದೇಹ ದಿಂದ ದೇಹಕ್ಕೆ ಸಂಚರಿಸುತ್ತಿರುತ್ತದೆ ಒಂದು ಜೀವವನ್ನು ತೊರೆದ ಜೀವ ಇನ್ನೊಂದು ದೇಹದಲ್ಲಿ ಪುನಃ ಆಶ್ರಯ ಪಡೆಯುತ್ತದೆ ಇದುವೇ ಪುನರ್ಜನ್ಮ ಎನ್ನುವ ಹಿಂದುಗಳ ನಂಬಿಕೆಯಾಗಿದೆ,
- ಕರ್ಮ ಸಿದ್ದಾಂತ :- ಪುನರ್ಜನ್ಮಕ್ಕೆ ಕಾರಣ ಕರ್ಮ ಸಿದ್ದಾಂತವೇ ಆಗಿದೆ ಹುಟ್ಟಿದ ಮನುಷ್ಯ ಉತ್ತಮ ಹಾಗೂ ಕೆಟ್ಟ ಕರ್ಮ ಗಳನ್ನು ಮಾಡುತ್ತಾನೆ ಇದರ ಪ್ರತಿಫಲವನ್ನು ಆತನು ಅನುಭವಿಸಲೇ ಬೇಕು ಎನ್ನುವುದು ಕರ್ಮ ಸಿದ್ದಾಂತ. ಉತ್ತಮ ಕೆಲಸದಿಂದ ಪೂಣ್ಯವೂ ಕೆಟ್ಟ ಕೆಲಸದಿಂದ ಪಾಪವೂ ಸಂಗ್ರಹ ವಾಗುವುದು. ಇಂತಹ ಪುಣ್ಯ ಹಾಗೂ ಪಾಪಗಳಿಗೆ ಸುಖ ಹಾಗೂ ದುಃಖ ವನ್ನು ಅನುಭವಿಸಬೇಕು ಇದನ್ನು ಪ್ರಸ್ತುತ ಜನ್ಮದಲ್ಲಿ ಅನುಭವಿಸಬೇಕು ಇಲ್ಲವಾದಲ್ಲಿ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುವುದು ಇದುವೇ ಕರ್ಮ ಸಿದ್ದಾಂತ, ಕೆಲವರು ಹುಟ್ಟುವಾಗಲೇ ಸುಖದ ಸುಪ್ಪತ್ತಿಗೆ ಯಲ್ಲಿ ಹುಟ್ಟುತ್ತಾರೆ ಕೆಲವರು ಅಂಗವಿಕಲರಾಗಿಯೂ ಕಡು ಬಡವರಾಗಿಯೂ ಹುಟ್ಟಿರುತ್ತಾರೆ ಇದು ಏಕೆ? ಇದಕ್ಕೆ ಅವರ ಪೂರ್ವಜನ್ಮದ ಕರ್ಮ ಫಲವೇ ಕಾರಣವಾಗಿರುವುದು, ಈಜನ್ಮದ ನಮ್ಮ ಸತ್ಕರ್ಮದ ಫಲ ಮುಂದಿನ ದಿನ ಅಥವಾ ಜನ್ಮದಲ್ಲಿ ನಮ್ಮನ್ನು ಕಾಪಾಡುವುದು ಇದುವೇ ಕರ್ಮ ಫಲ ಸಿದ್ದಾಂತ. ಇದನ್ನೇ ಧರ್ಮೋರಕ್ಷತಿ ರಕ್ಷಿತಃ ಎಂದಿರುವುದು. ಈ ಕರಮಫಲ ಸಿದ್ಧಾಂತವನ್ನು ಹಿಂದೂಗಳು ನಂಬುತ್ತಾರೆ. ಇಂತಹ ನಂಬಿಕೆಯೇ ಬದುಕಿನಲ್ಲಿ ಸತ್ಕರ್ಮಮಾಡಲು ಮನುಷ್ಯನನ್ನು ಪ್ರೇರೇಪಿಸುತ್ತದೆ.
- ಮೋಕ್ಷ ವೇ ಜೀವನದ ಪರಮ ಗುರಿ:
ಒಬ್ಬ ಹಿಂದುವಿನ ಬದುಕಿನ ಅಂತಿಮ ಗುರಿ ಮೋಕ್ಷವಾಗಿರುವುದು. ಹಿಂದೂ ಸಂಸ್ಕೃತಿಯ ಇನ್ನೊಂದು ಮುಖ್ಯ ಉದ್ದೇಶ ಅಥವಾ ನಂಬಿಕೆ ಮೋಕ್ಷವಾಗಿದೆ ಮೋಕ್ಷ ಎಂದರೆ ಬಿಡುಗಡೆ ಎಂದು ಅರ್ಥ ಜೀವವು ಕರ್ಮ ಬಂಧಗಳಿಂದಾಗಿ ಜೀವನಚಕ್ರದಲ್ಲಿ ಜನನ ಮರಣ ಗಳ ನಿರಂತತೆಗೆ ಒಳಗಾಗುವುದು. ಇಂತಹ ಹುಟ್ಟು ಸಾವುಗಳ ಬಂಧದಿಂದ ಬಿಡಗಡೆಯೇ ಮುಕ್ತಿ ಅಥವಾ ಮೋಕ್ಷ ಎಂಬುದಾಗಿದೆ. ಮನುಷ್ಯನು ಪುಣ್ಯ ಸಂಪಾದನೆ ಮಾಡಿದಾಗ ಅದರ ಫಲ ಸ್ವರೂಪವಾದ ಸುಖವನ್ನು ಅನುಭವಿಸುವುದಕ್ಕಾಗಿ ಹುಟ್ಟುವುದು ಅನಿವಾರ್ಯವಾಗಿದೆ ಹಾಗೆಯೇ ಪಾಪ ಸಂಚಯನದಲ್ಲಿಯೂ ಪಾಪದ ಫಲಸ್ವರೂಪವಾದ ಕಷ್ಟಗಳನ್ನು ಅನುಭವಿಸಲು ಹುಟ್ಟುವುದು ಅನಿವಾರ್ಯವಾಗಿದೆ. ಹೀಗೆ ಪಾಪಪುಣ್ಯಗಳಲ್ಲಿನ ವ್ಯತ್ಯಾಸವು ಪುನರ್ಜನ್ಮಕ್ಕೆ ಕಾರಣವಾಗಿದೆ. ಆದರೆ ಪಾಪ ಪುಣ್ಯ ರಹಿತ ಸ್ಥಿತಿಯಲ್ಲಿ ಮನುಷ್ಯನು ದೇಹತೊರೆದಾಗ ಮೋಕ್ಷವನ್ನು ಹೊಂದುವನು ಇಲ್ಲವೇ ಭಗವಂತನಲ್ಲಿ ಸೇರುವನು ಅಥವಾ ಭಗವಂತನ ಸಾಮೀಪ್ಯವನ್ನು ಹೊಂದುವನು ಎನ್ನುವುದು ಮೋಕ್ಷದ ಅರ್ಥವಾಗಿದೆ. ಹೀಗೆ ದೇಹಮುಕ್ತನಾದ ಆತ್ಮನಿಗೆ ಪುನರ್ಜನ್ಮ ಇರುವುದಿಲ್ಲ. ಇಂತಹ ಹುಟ್ಟು ಸಾವುಗಳ ಬಂಧ ದಿಂದ ಬಿಡುಗಡೆಯನ್ನು ಹೊಂದಲು ನಿಷ್ಕಾಮ ಕರ್ಮವನ್ನು ಮಾಡಬೇಕು ಮಾಡುವ ಕೆಲಸವನ್ನು ಭಗವತ್ಕಾರ್ಯ ಎಂಬುದಾಗಿ ಫಲಾಪೇಕ್ಷೆ ಇಲ್ಲದೆ ಕರ್ತವ್ಯದೃಷ್ಠಿಯಿಂದ ಮಾಡಿದಾಗ ಅಂತಹ ಕಾರ್ಯವು ಪಾಪ ಪುಣ್ಯದಿಂದ ವಿಮುಖವಾಗಿದ್ದು ಮೋಕ್ಷಕ್ಕೆ ಮಾರ್ಗವಾಗುವುದೆಂಬುದು ಹಿಂದುಗಳ ನಂಬಿಕೆ. ಇದನ್ನೇ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ಥೆ ಮಾಫಲೇಷು ಕದಾಚನ ಎಂಬುದಾಗಿ ಹೇಳಿದ್ದಾನೆ. ದೇಹಾಭಿಮಾನವನ್ನು ತೊರೆದು ಬಗವಂತನ ಚಿಂತನೆಯಲ್ಲಿ ಅವನನ್ನೇ ಹೊಂದಬೇಕೆಂಬ ಉತ್ಕಟ ಇಚ್ಚೆಯಲ್ಲಿ ಜೀವನವನ್ನು ಕೊನೆಗಾಣಿಸುವುದೇ ಮೋಕ್ಷದ ಸಾಧನೆಯ ಹಾದಿ ಎನ್ನುವುದಾಗಿ ಹೇಳಲಾಗಿದೆ.
ಇವು ಹಿಂದೂ ಧರ್ಮದ ಮೂಲಭೂತ ತಿಳುವಳಿಕೆ ಯಾಗಿದೆ.
-ಶ್ರೀಜಿ