ದೇವರು ಧರ್ಮ ಮತ ಜಿಜ್ಞಾಸೆ
ಧರ್ಮಜಿಜ್ಞಾಸು ಹಿಂದು ಭಾಂಧವರೇ ನಮ್ಮ ಧರ್ಮದ ತಳಹದಿ ವೇದಗಳು ;- ವೇದ ಎಂದರೆ ಜ್ಞಾನ ಎಂದರ್ಥ. ವೇದವು ಗಹನವಾದ ಜ್ಞಾನವಾದುದರಿಂದ ಸಾಮಾನ್ಯ ಜನರಿಗೆ ಅರ್ಥವಾಗದಿರುವಷ್ಟು ಕ್ಲಿಷ್ಟವಾಗಿತ್ತು. ಹಾಗಾಗಿ ವೇದವನ್ನು ಜನಸಾಮಾನ್ಯರಿಗೆ ತಿಳಿಸಲು ಸುಲಭವಾಗುವಂತೆ ಅನೇಕ ಋಷಿಮುನಿಗಳು ಅದನ್ನು ಸರಳೀಕರಿಸಿ ವಿಭಜಿಸಿ ಕೊಟ್ಟಿದ್ದಾರೆ, ಉಪನಿಷತ್ತುಗಳು ಆರಣ್ಯಕ ಗಳು , ಬ್ರಹ್ಮ ಸೂತ್ರಗಳು , ಪುರಾಣಗಳು ,ಭಾಷ್ಯಗಳು ಮುಂತಾಗಿ ಹಲವು ಆಯಾಮಗಳಲ್ಲಿ ನಾವು ಇವುಗಳಲ್ಲಿನ ತತ್ವಗಳನ್ನು ತಿಳಿಯಬಹುದಾಗಿದೆ, ಇಂದು ನಮ್ಮ ಬಹುಜಾತಿ, ಹಾಗೂ ಬಹು ದೇವರ ಗೊಂದಲ ನಿವಾರಣೆಗೆ ನಾವು ಸತ್ಯವನ್ನು ಶೋಧಿಸುವ ಅವಶ್ಯಕತೆ ಇದೆ, ವೇದಗಳಲ್ಲಿ ವರ್ಣಿತ ದೇವರು ಒಬ್ಬನೇ ಅವನನ್ನು ಹಲವು ನಾಮದಿಂದ ಕರೆಯುತ್ತಾರೆ ಎನ್ನಲಾಗಿದೆ, “ ಏಕಂ ಸತ್ ವಿಪ್ರಾಃ ಬಹುದಾ ವದಂತಿ” ಆತನನ್ನು ನಿರಾಕಾರ ನಿರ್ಗುಣ ಎಂದಿದ್ದಾರೆ. ಅಂದರೆ ಆತ ಸರ್ವ ವ್ಯಾಪಿ ಎಂದೇ ಅರ್ಥ. ಯಾವ ಆಕಾರದಲ್ಲಿ ನಾವು ನೋಡುತ್ತೇವೋ ಆ ಆಕಾರ ದಲ್ಲಿ ಆತನಿರುತ್ತಾನೆ, ಯಾವ ಗುಣದಲ್ಲಿ ಮನೋಭಾವದಲ್ಲಿ ನಾವು ಅವನನ್ನು ನೋಡುತ್ತೇವೋ ಆ ಗುಣದಲ್ಲಿ ಆತ ನಮ್ಮನ್ನು ಅನುಗ್ರಹಿಸುತ್ತಾನೆ ಎಂದು ತಿಳಿಯಬಹುದು. ಆದುದರಿಂದಲೇ ನಾವು ಹಲವು ದೇವರ ರೂಪಗಳನ್ನು ಆರಾಧಿಸುತ್ತೇವೆ ಅಂದರೆ ದೇವರ ತತ್ವವನ್ನು ಆರಾಧಿಸತ್ತೇವೆ, ದೇವರ ವಿಗ್ರಹ ರೂಪದಲ್ಲಿ ನಾವು ಬದಲಾವಣೆ ಕಾಣಬಹುದು ಆದರೆ. ದೇವರ ತತ್ವ ಸರ್ವತ್ರ ಏಕರೀತಿಯಲ್ಲಿಯೇ ಕ್ರಿಯಾತ್ಮಕ ವಾಗಿರುತ್ತದೆ. ಹಲವು ದೇವತೆಗಳೆಲ್ಲಾ ಭಗವಂತನ ಗುಣಸ್ವಾಭಾವ ರೂಪಗಳೇ ಹೊರತು ಪೂರ್ಣ ರೂಪದ ಚಿಂತನೆ ಅಲ್ಲ. ನಾವು ನದಿ ಬೆಟ್ಟ, ಪರ್ವತ, ಅಗ್ನಿ, ವಾಯು, ಶಿಲೆ, ಸೂರ್ಯ, ಗೋವು, ನಾಗ, ಎಲ್ಲದರಲ್ಲೂ ದೇವರನ್ನು ಪೂಜಿಸುತ್ತೇವೆ, ನಮಗೆ ಉಪಕಾರವಾಗುವ ಪ್ರತಿಯೊಂದನ್ನೂ ಪೂಜ್ಯ ಭಾವದಿಂದ ಕೃತಜ್ಞತಾ ಪೂರ್ವಕ ಪೂಜಿಸುವುದರ ಮುಖಾಂತರ ಗೌರವಿಸುವುದು ನಮ್ಮ ಶ್ರೇಷ್ಟ ಸಂಸ್ಕೃತಿ. ನಾವು ನಮ್ಮ ವಾಹನವನ್ನೂ, ಆಯುಧವನ್ನೂ, ಅಂಗಡಿಯನ್ನೂ, ಪುಸ್ತಕವನ್ನೂ ಮಕ್ಕಳನ್ನೂ, ಕುಮಾರಿಯರನ್ನೂ, ಸುಮಂಗಲೆಯರನ್ನೂ, ಗುರುಗಳನ್ನೂ, ಅಥಿತಿಗಳನ್ನೂ, ಹಿರಿಯರನ್ನೂ, ತಂದೆತಾಯಿಯರನ್ನೂ, ಗೋವನ್ನೂ ದೇವರಂತೆಯೇ ಪೂಜ್ಯ ಭಾವದಿಂದ ಗೌರವಿಸುತ್ತೇವೆ ಇದು ಈ ದೇಶದ ಧರ್ಮ ಹಾಗೂ ಸಂಸ್ಕೃತಿ. ಇಂತಹ ಕೃತಜ್ಞತೆಯ ಸಂಸ್ಕಾರ ಭೋಗ ಹಾಗೂ ಅಸುರ ಮತಗಳಲ್ಲಿಇಲ್ಲ, ಹಿಂದೂಗಳು ಮಾತ್ರ ಇವೆಲ್ಲದರಲ್ಲಿಯೂ ದೇವರ ಅಂಶ ಇದೆ ಎಂದು ಗೌರವಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಇವರೇ ದೇವರಲ್ಲ, ಆದರೆ ಇವರಲ್ಲಿಯೂ ದೇವರಿದ್ದಾನೆ. ಇವರಲ್ಲಿ ದೈವಿಕ ಗುಣ ಅಂದರೆ ಪರೋಪಕಾರ ಮಾಡುವ ಗುಣ ಇರುವುದರಿಂದ ಗೌರವಿಸುತ್ತೇವೆ, ಮನುಶ್ಯನಿಗೆ ಹಾಗೂ ಸಕಲ ಜೀವಜಂತುಗಳಿಗೆ ಒಳ್ಳೆಯದನ್ನು ಮಾಡುವುದು ದೇವರ ಗುಣ, ಅಂತಹ ಗುಣವನ್ನು ಗೌರವಿಸುವುದು ಪೂಜಿಸುವುದು ಮನುಶ್ಯನ ಧರ್ಮ. ಇಂತಹ ಗುಣ ಗ್ರಾಹಿಯಾದ ಯಾವುದೇ ಜೀವ ಅಥವಾ ಜಡರೂಪವನ್ನು ಪೂಜಿಸಲು ಹಿಂದುಗಳಿಗೆ ಹಿಂಜರಿಕೆ ಅಥವಾ ಕೀಳರಿಮೆ ಇಲ್ಲ, ಆದರೆ ಮಾಡುವ ಕಾರ್ಯವನ್ನು ಮೌಢ್ಯದಿಂದ ಮಾಡದೆ ಅರಿವಿನಿಂದ ಮಾಡಬೇಕು, ಭಗವಂತನಿಂದ ತನ್ನ ಜೀವನ ನೆಮ್ಮದಿಯಿಂದ ನಡೆಯುತ್ತಿದೆ ಎಂದು ತಾಯಿ ಮಾಡುವ ದೇವರ ವಂದನೆ ತಿಳುವಳಿಕೆಯಿಂದ ಕೂಡಿದ್ದು ಅದುವೇ ತಾಯಿ ಹೇಳಿದ್ದಾಳೆಂದು ಮಗು ದೇವರಿಗೆ ಅಡ್ಡಬೀಳುವುದು ಮುಗ್ಧತೆ ಬೇರೆಯವರು ಪಕ್ಕದಮನೆಯವನಿಗೆ ಪೂಜೆಮಾಡಿಸಿದ ಮರುದಿನ ಲಾಟರಿ ಎದ್ದಿದೆ ಎಂದು ತಾನೂ ಪೂಜೆಮಾಡಿಸಲು ಹೋಗುವುದು ಮೌಢ್ಯ. ಸಂಪತ್ತಿದೆ ಎಂದು ತೋರಿಕೆಗೆ ಮಾಡುವ ಪೂಜೆ ಅಹಂಕಾರ ದೇವರೇಇಲ್ಲ ನಾನೇ ಬುದ್ದಿವಂತ ಸರ್ವ ಸಮರ್ಥ ಎಂದು ದೇವರನ್ನು ದೂರುವುದು ಅಜ್ಞಾನ, ತನ್ನ ಹೊಟ್ಟೆಪಾಡಿಗಾಗಿ ಮುಗ್ಧರನ್ನು ಅವರ ಸಾಮರ್ಥ್ಯಕ್ಕೆ ಮೀರಿದ ಪೂಜೆಗೆ ಸಲಹೆಕೊಡುವುದು ಪ್ರೇರೇಪಿಸುವುದು ವಂಚನೆ, ಇವುಗಳ ಸ್ಪಷ್ಟತಿಳುವಳಿಕೆಯಿದ್ದು ಬದುಕುವುದೇ ಶ್ರೇಷ್ಠ ಸನಾತನ ಹಿಂದೂ ಧರ್ಮ, ಇದಕ್ಕೆ ವಿರುಧ್ಧವಗಿ ವರ್ತಿಸುವುದು ಅಸುರಧರ್ಮ. ಹೆಚ್ಚಿನ ಬೇರೆಲ್ಲರೂ ಅಜ್ಞಾನದಿಂದ ಅಧರ್ಮಗಳನ್ನು ಅನುಸರಿಸುವವರಾಗಿದ್ದಾರೆ. ಜಗತ್ತಿನಲ್ಲಿರುವ ಒಂದೇ ಶ್ರೇಷ್ಟ ಜೀವನ ಧರ್ಮ, ಆದಿ ಅಂತ್ಯಗಳಿಲ್ಲದ ಪಾವನ ಧರ್ಮ, ಅದುವೇ ಸನಾತನ ಹಿಂದೂ ಧರ್ಮ. ಅದಕ್ಕಾಗಿ ಹಿಂದೂ ಗಳು ಹೆಮ್ಮೆ ಪಡಬೇಕು, ಮತ್ತೆಲ್ಲಾ ಧರ್ಮದ ಹೆಸರಿನಲ್ಲಿ ನಾಟಕ ಮಾಡುತ್ತಿರುವುದು, ಪ್ರಚಾರಮಾಡುತ್ತಿರುವುದು ಮತಗಳು ಮಾತ್ರ ಅವು ಧರ್ಮ ಅಲ್ಲ. ದರ್ಮಕ್ಕೂ ಮತಕ್ಕೂ ಬಹಳ ವ್ಯತ್ಯಾಸವಿದೆ, ಹೆಚ್ಚಿನವರಿಗೆ ಇದರ ಅರಿವೇ ಇಲ್ಲವಾಗಿದೆ. ಧರ್ಮ ಎಂಬ ಶಬ್ಧಕ್ಕೆ ಆಂಗ್ಲ ಭಾಷೆಯಲ್ಲಿ ಸರಿಯಾದ ಶಬ್ಧ ಇಲ್ಲ ಅಂದರೆ ಪಾಶ್ಚಾತ್ಯರಿಗೆ ಧರ್ಮವೇ ತಿಳಿದಿಲ್ಲ ಅವರು ಬಳಸುವ ರಿಲಿಜನ್ ಎನ್ನುವ ಶಬ್ಧ ಮತ ವಾಗಿದೆಯೇ ಹೊರತು ಧರ್ಮವಾಗಿಲ್ಲ ನಾವು ರಿಲಿಜನ್ ಶಬ್ಧವನ್ನೇ ಧರ್ಮ ಎಂಬುದಾಗಿ ಅಪಾರ್ಥಮಾಡಿ ಬಳಸುತ್ತಿದ್ದೇವೆ. ಇದುವೇ ನಮ್ಮೆಲ್ಲ ಗೊಂದಲಗಳಿಗೆ ಕಾರಣ. ಈ ಅಜ್ಞಾನವನ್ನು ಬಿಡಬೇಕಿದೆ ರಿಲಿಜನ್ ಎಂದರೆ ಮತ ಮಾತ್ರ. ಮತ ಎನ್ನುವುದು ಧರ್ಮವೆಂಬ ಸಮುದ್ರಕ್ಕೆ ಹೋಲಿಸಿದರೆ ಒಂದು ಚಿಕ್ಕಕೆರೆಯಾಗಿದೆ ಅಷ್ಟೇ. ಹಾಗೂ ಮತವು ಸಂಕುಚಿತ ಮನೋಭಾವದ ಸಮಾಜವನ್ನು ಸೃಷ್ಠಿಸುವ ಅನಿಷ್ಠ ಸಾಮಾಜಿಕ ಪಿಡುಗಾಗಿದೆ.
ಹಿಂದೂ ಧರ್ಮ: ಉಪಕಾರಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು. ನಾವು ಯಾರಿಗೂ ತೊಂದರೆ ಮಾಡದಿರುವುದು, ಹಾಗೂ ಸಾತ್ವಿಕ ಜೀವನವನ್ನು ಬದುಕುವುದು ಮುಂತಾಗಿ ಮನುಶ್ಯನ ಉತ್ಕೃಷ್ಟ ಬದುಕಿಗೆ ಬೇಕಾದ ಜ್ಞಾನವನ್ನು ಜಾತಿ ಮತ ಬೇಧ ವಿಲ್ಲದೆ ಜಗತ್ತಿಗೆ ಸಾವಿರಾರು ಜ್ಞಾನಿಗಳ ಜ್ಞಾನದಿಂದ ಕೊಟ್ಟ ಕೊಡುಗೆಯೇ ಸನಾತನ ಧರ್ಮ ಅಥವಾ ಮಾನವ ಧರ್ಮ ಅಥವಾ ಜೀವನ ಧರ್ಮ ಅದು ಹಿಂದೂ ಧರ್ಮ, ಇದು ಜಗತ್ತಿನಲ್ಲಿರುವ ಏಕಮಾತ್ರ ಪೂರ್ಣಜ್ಞಾನದ ಧರ್ಮ ಹಾಗೂ ಅತಿಪ್ರಾಚೀನ ಅತಿಶ್ರೇಷ್ಟ ಜ್ಞಾನ ಹೊಂದಿದ ಧರ್ಮ. ಹಾಗೂ ಹಿಂದೂಧರ್ಮಕ್ಕೆ ಪರಬ್ರಹ್ಮನೇ ಸೃಷ್ಟಿಕರ್ಥ, ಆತನೇ ಧರ್ಮ ಸಂಸ್ಥಾಪಕ ಹಿಂದು ಧರ್ಮವು ಸಾಮಾನ್ಯರ ತಿಳುವಳಿಕೆಗೆ (ಮತಿ) ಗೆ ನಿಲುಕದ್ದು, ಇದು ಧರ್ಮ ಸಾಗರವೂ ಜ್ಞಾನ ಸಾಗರವೂ ವಾಗಿದೆ.
ಧರ್ಮದಕೆಲವು ಸೀಮಿತ ಅಂಶಗಳನ್ನು ಜಗತ್ತಿನಲ್ಲಿ ಕೆಲವುಜನ ಪಂಡಿತರು, ಮತಾಚಾರ್ಯರು ತಮ್ಮ ಮನಸ್ಸಿಗೆ ತೋಚಿದಂತೆ ಅರ್ಥೈಸಿ ಅದನ್ನು ತಮ್ಮ ಶಿಷ್ಯರಿಗೆ ಭೋಧಿಸಿದ್ದಾರೆ ಹಾಗೂ ಅವರ ಭೋಧನೆಗಳಿರುವ ಪುಸ್ತಕಗಳು ಅವರವರ ಮತದವರ ಆಧಾರ ಗ್ರಂಥ ಗಳಾಗಿವೆ. ಹೀಗೆ ಒಬ್ಬ ವ್ಯಕ್ತಿಯ ಸೀಮಿತ ಮತಿ(ಬುದ್ದಿ) ಯಿಂದ ಕೂಡಿದ ಉಪದೇಶದ ಪ್ರತಿಫಲದಿಂದ ಹುಟ್ಟಿದ್ದೇ ಮತ, ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ಅವರವರ ಮತದವರಿಗೆ ಅವರವರ ಬೋಧಕರು ಬೋಧಿಸಿದ್ದೇ ಧರ್ಮ ಆಗಿದೆ, ಕೆಲವು ಮತಗಳಲ್ಲಿ ಭೂಮಿ ಚಪ್ಪಟೆಯಾಗಿದೆ ಎಂದಿದ್ದಾರೆ ಆಕಾಶ ಭೂಮಿ ಸಮಾನಾಂತರ ವಾಗಿದೆ ಅಂದಿದ್ದಾರೆ, ಆದರೆ ಹಿಂದೂ ಧರ್ಮ ಹಾಗೂ ವಿಜ್ಞಾನ ಎರಡೂ ಇದನ್ನು ಸ್ಪಷ್ಟವಾಗಿ ತಪ್ಪೆಂದು ತೋರಿಸಿದೆ, ಕೆಲವು ಮತದವರು ಅದಮ ನಿಂದ ಮನುಶ್ಯನ ಸೃಷ್ಟಿ ಆಯಿತು ಆತನೇ ಮೂಲ ಪುರುಷ ಎಂದಿದ್ದಾರೆ, ವಿಜ್ಞಾನ ಜೈವಿಕ ವಿಕಾಸವಾದ ವನ್ನು ಹೇಳಿದೆ, ಕೆಲವು ಮತದವರು ಪ್ರಾಣಿಗಳನ್ನು ಮನುಶ್ಯನಿಗೆ ತಿನ್ನಲಾಗೇ ದೇವರು ಸೃಷ್ಟಿಸಿದ್ದಾನೆ ಎಂದು ಬೋಧಿಸಿದ್ದಾರೆ ಇದು ಭೋಗಕ್ಕಾಗಿ ನಾಲಿಗೆ ಚಪಲಕ್ಕೆ ನೀಡಿದ ಸಾಕ್ಷಿಯಂತಿದೆ, ಹಿಂದೂ ಧರ್ಮ ಸಸ್ಯಾಹಾರವೇ ಶ್ರೇಷ್ಟ ಆಹಾರ ಎಂದು ಶೋಧಿಸಿ ಬೋಧಿಸಿದೆ ಹಾಗೂ ಜೀವಜಗತ್ತಿನ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಮನುಶ್ಯನಿಗೆ ಮಾತ್ರ ಸರಿತಪ್ಪು ಅರಿಯುವ ಬುದ್ದಿ ಇದೆ. ಆದ್ದರಿಂದ ಮನುಶ್ಯರು ಸೃಷ್ಟಿನಿಯಮವನ್ನು ಧಿಕ್ಕರಿಸ ಬಾರದು ಎಂದಿದೆ, ಆರಂಭದಲ್ಲಿ ಮನುಷ್ಯರೆಲ್ಲರೂ ಮಾಂಸಾಹಾರಿಗಳೇ ಆಗಿದ್ದರು ಆದರೆ ಅದನ್ನು ಋಷಿಮುನಿಗಳು ಬಲಾತ್ಕಾರದಿಂದ ನಿಷೇಧಿಸಲ್ಲಿಲ್ಲ ಸರಿತಪ್ಪಿನ ಜ್ಞಾನವನ್ನುಕೊಟ್ಟು ಆಯ್ಕೆಯನ್ನು ಜನರಿಗೇ ಬಿಟ್ಟಿದ್ದಾರೆ. ಪ್ರಕೃತಿಯನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕೇ ಹೊರತು ಭೋಗಕ್ಕಾಗಿ ಬಳಸಬಾರದು ಎನ್ನುವುದು ಹಿಂದೂ ತತ್ವ ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿದೆ. ಪ್ರಕೃತಿ ಮಾನವನ ಆಸೆಯನ್ನೂಪೂರೈಸಬಲ್ಲುದು ಆದರೆ ದುರಾಸೆಯನ್ನಲ್ಲ. ಮನುಷ್ಯ ನಾಗರೀಕತೆಯ ಮೊದಲು ಪ್ರಾಣಿಗಳಂತೆಯೇ ಕಾಡುಗಳಲ್ಲಿ ಬದುಕುತ್ತಿದ್ದ ಪುರುಷ ದೈಹಿಕವಾಗಿ ಬಲಿಷ್ಟನಾದುದರಿಂದ ಹೆಣ್ಣನ್ನು ತನ್ನ ಅಪೇಕ್ಷೆಗೆ ಬಲಾತ್ಕರಿಸುತ್ತಿದ್ದ. ಇದು ತಪ್ಪೆಂದು ಜಗತ್ತಿಗೆ ಸಂಸ್ಕಾರ ರೂಪಿಸಿಕೊಟ್ಟವರು ಹಿಂದುಗಳು ಹಿಂದೂ ಧರ್ಮದಲ್ಲಿ ಏಕಪತ್ನಿ ವ್ರತ ಶ್ರೇಷ್ಟ ಎಂದಿದೆ, ರಾಮ ಇದಕ್ಕೆ ಶ್ರೇಷ್ಠ ಉದಾಹರಣೆ. ಹೆಣ್ಣು ಗಂಡಿನ ಮಿಲನಕ್ಕೆ ಮದುವೆ ಎಂಬ ಶ್ರೇಷ್ಟ ಸಂಸ್ಕಾರ ನೀಡಿದೆ. ವಿಚ್ಚೇದನೆ ಎನ್ನುವುದು ಹಿಂದೂ ಸಂಸ್ಕೃತಿ ಹೇಳಿಲ್ಲ ಇಲ್ಲಿ ವಿಚ್ಚೇದನಕ್ಕೆ ಅವಕಾಶ ಇಲ್ಲ. ಪತಿಪತ್ನಿ ಸಂಬಂಧವನ್ನು ಏಳೇಳು ಜನ್ಮಕ್ಕೆ ಬೆಸೆಯಲಾಗಿದೆ. ಈಗ ಪಾಶ್ಚಿಮಾತ್ಯ ಪ್ರಭಾವದಿಂದ ಕುಟುಂಬ ವ್ಯವಸ್ಥೆ ಶಿಥಿಲವಾಗಿ ವಿಚ್ಚೇದನವೇ ಹೆಚ್ಚುತ್ತಿರುವುದು ನೋಡಬಹುದು ಇದು ದುರ್ಮತಗಳ ಪ್ರಭಾವ. ಕೆಲವುಮತಗಳಲ್ಲಿ ಹೆಂಗಸರನ್ನು ಬೋಗಿಸುವುದೇ ಧರ್ಮಎನ್ನುವಂತೆ ಅವಕಾಶ ಮಾಡಿಕೊಟ್ಟಿದೆ, ಇನ್ನು ಕೆಲವು ಮತಗಳಲ್ಲಿ ಮದುವೆ ಎನ್ನುವುದು ಲೈಂಗಿಕಸಮಾಗಮಕ್ಕೆ ಅನುಮತಿ ಅಷ್ಟೇ ಬೇರಾವ ಪಾವಿತ್ರತೆಯೂ ಅಲ್ಲಿ ಇಲ್ಲ. ಬೇಕಾದಾಗ ಒಟ್ಟಾಗಬಹುದು ಬೇಸರವಾದಾಗ ಬಿಡಬಹುದು, ಒಂದು ಪೇಪರಿನಲ್ಲಿ ಸಹಿಹಾಕಿದರಾಯಿತು, ಇದು ಒಂದು ವ್ಯಾಪಾರ ದಂತೆ,(sexual contract) ಇದು ಪಶು ಧರ್ಮ ವಾಗಿದೆ, ಇವುಗಳಿಂದ ನಾವು ಹಿಂದೂ ಧರ್ಮದ ಶ್ರೇಷ್ಟತೆಯನ್ನೂ ಇತರ ಅನ್ಯ ಮತಗಳಲ್ಲಿನ ಅನಿಷ್ಟಗಳನ್ನೂ ಸ್ಪಷ್ಟವಾಗಿ ನೋಡಬಹುದು. ಇದುವೇ ಧರ್ಮ ಹಾಗೂ ಮತಕ್ಕಿರುವ ವ್ಯತ್ಯಾಸ. ಭಾರತದಲ್ಲಿ ಹಿಂದೂ ಗಳಲ್ಲಿಯೂ ಹಲವು ಮತಾಚಾರ್ಯರು ಹಲವು ಭಿನ್ನ ವಿಚಾರಗಳನ್ನು ಬೋಧಿಸಿದ್ದಾರೆ. ಇವೆಲ್ಲವೂ ಹೊಸ ಮತ ಗಳಾಗಿ ಉದಯಿಸಿವೆ. ಇಂತಹ ಸೀಮಿತ ವಿಚಾರಗಳತ್ತ ಬೆಳಕುಚೆಲ್ಲುವ ಮತಗಳು ಸಮಾಜವನ್ನು ತಿದ್ದಿ ಒಗ್ಗೂಡಿಸುವಂತಿದ್ದರೆ ಸ್ವೀಕಾರಯೋಗ್ಯ ಸಮಾಜವನ್ನು ವಿಘಟಿಸುವಂತಿದ್ದರೆ ಇವುಗಳನ್ನು ತಿರಸ್ಕರಿಸಬೇಕು. ಹಲವು ಮತಗಳಲ್ಲಿ ಪಂಡಿತರು ಇರುವ ವಿಚಾರವನ್ನೇ ವಿಭಿನ್ನ ದೃಷ್ಟಿಕೋನದಲ್ಲಿ ತಿರುಚಿ ಬೋಧಿಸಿ ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗವಂತೆ ಪಾಂಡಿತ್ಯ ಪ್ರದರ್ಷನ ಮಾಡಿದವರಿದ್ದಾರೆ, ಇದು ಉತ್ತಮ ಪಾಂಡಿತ್ಯಪ್ರದರ್ಷನವಾದರೂ, ಅದರ ಪರಿಣಾಮ ಸಮಾಜದಮೇಲೆ ಋಣಾತ್ಮಕ ವಾಗಿದೆ. ಮತಗಳು ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ಒಡೆಯಬಾರದು. ಅವುಗಳಲ್ಲಿ ಸಂಕುಚಿತ ಮನೋಭಾವ ಸಲ್ಲದು. ಒಟ್ಟಿನಲ್ಲಿ ಮತಿಇಲ್ಲದವರಿಂದ ಅಥವಾ ಅಲ್ಪಮತಿಗಳಿಂದ ಭೋಧಿಸಲ್ಪಟ್ಟಿದ್ದು ಅಥವಾ ಬೆಳೆಸಲ್ಪಟ್ಟಿದ್ದು ಮತ ಎನ್ನ ಬಹುದು, ಮತಗಳು ಎಂದಿಗೂ ಧರ್ಮಕ್ಕೆ ಪರಯಾಯ ಅಲ್ಲ. ಇನ್ನು ಕೆಲವು ಮತಾಚಾರ್ಯರು ಅಂದಿನ ಸಾಮಾಜದ ಅನಿಷ್ಠಗಳನ್ನು ಸರಿಮಾಡಲು ಕೆಲವು ವಿಚಾರಗಳನ್ನು ಕಾಲಕ್ಕನುಗುನವಾಗಿ ಬೋಧಿಸಿದರು ಅಂದಿನ ಪರಿಸ್ಥಿತಿಗೆ ಅವರು ಹೇಳಿದ್ದು ಉಚಿತವಾಗಿಯೇ ಇದ್ದಿರಬಹುದು ಎಂದೋ ಹೇಳಿದ ಶಾಸ್ತ್ರವನ್ನು ಇಂದು ಹಿಡಿದು ನೇತಾಡುವುದು ಅಜ್ಞಾನವೇ ಆಗಿದೆ. ಭಿನ್ನಮತದ್ವೇಶ ದಿಂದ ಏನೂ ಸಾಧಿಸಲಾಗುವುದಿಲ್ಲ ಧರ್ಮ ಶಿಥಿಲವಾಗುತ್ತದೆ. ಅನ್ಯ ಮತವನ್ನು ನಿಂದಿಸುವುದರಿಂದ, ಖಂಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ ಕಾಲಾ ನಂತರದಲ್ಲಿ ಮತಾಚಾರ್ಯರು ಹೇಳಿದ್ದನ್ನೇ ಅನುಸರಿಸುವ ಪಂಗಡ ಹುಟ್ಟಿಕೊಂಡು ಅದುವೇ ಒಂದು ಮತವಾಯಿತು ಕಾಲಬದಲಾದರೂ ಈ ವಿಚಾರಬದಲಾಗದೆ ಪುನಃ ಸಮಾಜದ ಗೊಂದಲಕ್ಕೇ ಇದು ಕಾರಣ ವಾಯಿತು. ಇಂತಹ ಮತಿವಿಕಲ ಮತೀಯ ಬದುಕನ್ನು ತೊರೆದು ಧರ್ಮದಲ್ಲಿ ಬದುಕುವಂತೆ ಜನರನ್ನು ಪ್ರೇರೇಪಿಸಬೇಕಾಗಿದೆ, ಅದಕ್ಕೆ ಹಿಂದೂ ಧರ್ಮವನ್ನು ಪೂರ್ವಾಗ್ರಹ ವಿಲ್ಲದೆ ಅರಿಯಬೇಕಾಗಿದೆ, ಅಜ್ಜ ನೆಟ್ಟ ಆಲದ ಮರ ಎಂಬಂತೆ ಸಾಮರಸ್ಯಕ್ಕೆ ಧಕ್ಕೆತರುವ ಅಂಶಗಳನ್ನು ತತ್ವ ಶಾಸ್ತ್ರಗಳಿಂದ ನಿರ್ಲಕ್ಷಿಸಿ ಸಾಕಾರಾತ್ಮಕ ಬದುಕಿಗೆ ಅಗತ್ಯವಾಗಿ ಧರ್ಮ ರಕ್ಷಣೆಗೆ ಧಕ್ಕೆಯಾಗದಂತೆ ಸಂಸ್ಕೃತಿಯ ಪುನರ್ವಿಮರ್ಷೆ ಹಾಗೂ ಹೊಂದಾಣಿಗೆಗೆ ನಾವು ಮುಕ್ತಮನಸ್ಕರಾಗಿರಬೇಕು, ಮತಾಂಧರ ಗೊಡ್ಡುವಾದದಿಂದ ಬಿಡುಗಡೆಹೊಂದಿ ಸ್ವತಂತ್ರ ಚಿಂತನೆಯಿಂದ ಶ್ರೇಷ್ಠ ಜ್ಞಾನವನ್ನು ಒಪ್ಪುವ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿ ಮಾತ್ರ ಸಾದ್ಯವಿದೆ, ಯಾಕೆಂದರೆ ಇಲ್ಲಿ ಯಾರ ವಿಚಾರಧಾರೆಗೂ ಪೇಟೆಂಟ್ ಪಡೆಯಲಾಗಿಲ್ಲ, ವಿಶ್ವದ ಎಲ್ಲಕಡೆಗಳಿಂದಲೂ ಒಳ್ಳೆಯದು ನನ್ನತ್ತ ಬರಲಿ ಎನ್ನುವುದು ಪ್ರತಿದಿನ ಭ್ರಾಹ್ಮಣ ವಟು ಸಂಧ್ಯಾವಂದನೆಯಲ್ಲಿ ಹೇಳುವ ವೇದ ವಾಕ್ಯವಾಗಿದೆ ಪ್ರಾರ್ಥನೆಯಾಗಿದೆ ಹಿಂದೂಗಳ ಮನ ಹಾಗೂ ಹೃದಯ ಯಾವಾಗಲೂ ಸದ್ವಿಚಾರಗಳಿಗೆ ತೆರೆದಿರುತ್ತದೆ ಇದು ಭಾರತೀಯ ಸಂಸ್ಕೃತಿಯ ವಿಶಾಲತೆಗಿರುವ ಉತ್ತಮ ನಿದರ್ಷನ ವಾಗಿದೆ. ದಾರಿ ತೋರಿಸುವುದು ಮಾತ್ರ ಸನಾತನ ಧರ್ಮದ ಕೆಲಸ ಇದರಲ್ಲಿ ನಡೆಯುವುದು ಬಿಡುವುದು ಸಾಧಕನಿಗೆ ಬಿಟ್ಟ ವಿಷಯ ಇಲ್ಲಿ ಬಲವಂತವಾಗಿ ಯಾವುದನ್ನೂ ಹೇರಲಾಗುವುದಿಲ್ಲ. ಅನುಭವದಿಂದಲೇ ಸತ್ಯವನ್ನು ಅರಿಯುವ ಮಾರ್ಗ ನಮ್ಮ ಆಧ್ಯತ್ಮ ಸಾಧನೆಯ ಗುರಿಯಾಗಿದೆ.
ವೇದಗಳಲ್ಲಿರ್ಣಿತವಾಗಿರುವ ದೇವರು ಪರಮತ್ಮ ಅಥವಾ ಪರಬ್ರಹ್ಮ ಶಕ್ತಿ. ಆತ ಜ್ಯೋತಿರ್ಬಿಂದುವಿನ ರೂಪಾವಾಗಿದ್ದಾನೆ. ಸೂಕ್ಮಾತಿಸೂಕ್ಷ ಬೆಳಕಿನ ಪ್ರಕಾಶವಾಗಿದ್ದಾನೆ. ಅವನನ್ನು ನಾವು ಬಹುವಿಧದಲ್ಲಿ ಗ್ರಹಿಸಿ ನಂಬಿ ಪೂಜಿಸುತ್ತಿದ್ದೇವೆ, ಒಂದೇ ವಸ್ತು ಒಂದೊಂದು ಕೋನದಲ್ಲಿ ಒಂದೊಂದು ರೀತಿ ಕಾಣುತ್ತದೆ, ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿ ಗೋಚರಿಸುತ್ತದೆ, ಹಾಗೆಯೇ ದೇವರು ಹಲವರ ಭಿನ್ನ ದೃಷ್ಟಿಕೋನದ ವಿಭಿನ್ನರೂಪದ ಸೃಷ್ಟಿಯಾಗಿದೆ ಎಲ್ಲದೇವರರೂಪದ ಚೈತನ್ಯನೂ ಸರ್ವಶಕ್ತ ಪರಬ್ರಹ್ಮ ನಾಗಿದ್ದಾನೆ ಎನ್ನುವುದು ವೇದದ ಸಾರ. ಆದುದರಿಂದ ಬಹುದೇವರ ಗೊಂದಲ ಬೇಡ ಎಲ್ಲವೂ ಆತನ ರೂಪವೇ ಆಗಿದೆ ಇದನ್ನೇ ವಿಶ್ವರೂಪ ಎನ್ನುತ್ತೇವೆ ಜಗತ್ತಿನ ಎಲ್ಲಾರೂಪದಲ್ಲಿಯೂ ನೋಡುವ ಕಣ್ಣು ಮನಸ್ಸು ಭಕ್ತಿ ಇದ್ದರೆ ದೇವರು ಗೋಚರಿಸುತ್ತಾನೆ, ಯಾವ ದೇವರೂ ಹೆಚ್ಚಲ್ಲ ಕಡಿಮೆ ಅಲ್ಲ ಅವರೆಲ್ಲಾ ಒಬ್ಬನೇ ಭಗವಂತನ ವಿಭಿನ್ನ ಶಕ್ತಿಗುಣ ರೂಪಗಳು, ಸೃಷ್ಟಿಗೆ ಬ್ರಹ್ಮರೂಪವೂ, ಸ್ಥಿತಿಗೆ ವಿಷ್ಣು ರೂಪವೂ, ಲಯಕ್ಕೆ ಮಹೇಶ್ವರ ರೂಪವೂ (ಇದನ್ನೇ ಇಂಗ್ಲಿಶಿನಲ್ಲಿ “GOD” generator operator destroyer ಎಂದಿದ್ದಾರೆ,) ವಿದ್ಯೆಗೆ ಸರಸ್ವತಿರೂಪವೂ , ಸಂಪತ್ತಿಗೆ ಲಕ್ಷಿ ರೂಪವೂ , ವಿಘ್ನ ನಿವಾರಣೆಗೆ ಗಣಪತಿ ರೂಪವೂ ಹಿಂದೂಗಳಲ್ಲಿ ಪೂಜಿಸಲ್ಪಡುತ್ತಿದೆ ಹಾಗೂ ನಾವು ಆಯಾಗುಣಗಳ ಅನುಗ್ರಹಕ್ಕೆ ಭಗವಂತನ ಆಯಾ ರೂಪವನ್ನು ಪೂಜಿಸುತ್ತೇವೆ. ಆ ಫಲ ಆರೂಪದಲ್ಲಿನ ದೇವರು ಅನುಗ್ರಹಿಸುತ್ತಾನೆಂದು ನಂಬುತ್ತೇವೆ. ನಮ್ಮ ನಂಬಿಕೆಯೇ ನಮಗೆ ಯಶಸ್ಸನ್ನು ಕೊಡುತ್ತದೆ, ಯದ್ ಭಾವಂ ತದ್ ಭವತಿ ಎಂದಿದ್ದಾರೆ, ಇದು ಹಣಕಾಸಿಗೆ ಬ್ಯಾಂಕಿಗೂ, ವಿದ್ಯೆಕಲಿಯಲು ಗುರುಕುಲಕ್ಕೂ, ರಕ್ಷಣೆಗೆ ಪೋಲಿಸ್ ಸ್ಟೇಶನ್ನಿಗೂ, ಹೋದಂತೆ ಹೊರತು ಬೇರೇನಲ್ಲ, ಆಯಾಕಾಲಕ್ಕೆ ನಮಗೆ ಅಗತ್ಯ ಯಾವುದಿದೆಯೋ ಅದೇ ಆ ಹೊತ್ತಿಗೆ ಪ್ರಾಮುಖ್ಯ ಹಾಗಾಗಿ ದೇವರಲ್ಲಿ ಗೊಂದಲ ಸಂಶಯ ಬೇಡ ದೇವರು ಹಿಂದುಗಳಿಗೂ ಒಬ್ಬನೇ ದೇವರು. ಅವನು ಪ್ರರಬ್ರಹ್ಮ. ಆತನು ಚೇತನ ಸ್ವರೂಪ ಎಲ್ಲೆಲ್ಲೂ ಇದ್ದಾನೆ ಅವನಿಗೆ ನಿರ್ಧಿಷ್ಟ ರೂಪ ಇಲ್ಲ ಸರ್ವ ಗುಣ ಭರಿತ, ಕರುಣಾಳುವಾಗಿದ್ದಾನೆ, ಇದೇ ವೇದಗಳಲ್ಲಿ ದೇವರ ಸತ್ಯ. ಅವನನ್ನು ನಾವು ಭಕ್ತಿಯಿಂದ ಯಾವರೂಪದಲ್ಲಿ ಅರ್ಚಿಸಿದರೂ ಅದು ಆತನಿಗೇ ಸಲ್ಲುತ್ತದೆ ನಮಗೆ ಅನುಗ್ರಹವಾಗುತ್ತದೆ. ಅದು ಕಲ್ಲಿರಬಹುದು, ವಿಗ್ರಹವಿರಬಹುದು, ಪ್ರಕೃತಿ ಇರಬಹುದು, ಕಳಶಪೂಜೆ (ಸತ್ಯನಾರಾಯಣ ಪೂಜೆಯಲ್ಲಿ) ವಿರಬಹುದು, ಅಥವಾ ಅದೊಂದು ದೀಪವೋ , ಅಗ್ನಿಯೋ (ಗಣಹೋಮದಲ್ಲಿ) ಅಥವಾ ನಿರ್ಜನ ಪ್ರದೇಶವೋ (ಧ್ಯಾನ) ಆಗಿರ ಬಹುದು ಯಾವ ರೂಪದಲ್ಲಿ ಪೂಜಿಸಿದ್ದೇವೆ ಯಾವ ಸ್ಥಳದಲ್ಲಿ ಪೂಜಿಸಿದ್ದೇವೆ ಎನ್ನುವುದು ಮುಖ್ಯವಲ್ಲ, ಸಂಪೂರ್ಣ ಭಕ್ತಿ ಏಕಾಗ್ರತೆಯೇ ಅನುಗ್ರಹಕ್ಕೆ ಮೂಲಅಗತ್ಯವಾಗಿದೆ,
ದೇವರು ಒಬ್ಬನೆ ಎನ್ನುವ ಸತ್ಯವನ್ನು ಹಿಂದೂಗಳು ವಿಶ್ವಕ್ಕೆ ಯಾವಾಗಸಾರಿದ್ದಾರೆ?
ಈ ಸತ್ಯವನ್ನು ನಮ್ಮ ಋಷಿಮುನಿಗಳು ಹಲವು ಸಾವಿರ ವರುಷಗಳ ಹಿಂದೆಯೇ ಸಾರಿದ್ದಾರೆ. ವೇದಗಳಲ್ಲಿ ಈ ವಿಚಾರಗಳನ್ನು ವಿಮರ್ಷಿಸಿದ್ದಾರೆ. ಆರೇಳು ಸಾವಿರ ವರುಷಗಳ ಹಿಂದನ ವರೆಗಿನ ಐತಿಹಾಸಿಕ ಕುರುಹುಗಳು ಸಾಕ್ಷಿಗಳು ನಮಗೆ ದೊರೆತಿವೆ. ಆದರೆ ಹಿಂದೂ ಧರ್ಮ ಶಾಸ್ತ್ರಗಳು ತಮ್ಮ ಶಾಸ್ತ್ರದ ಕಾಲಗಣನೆಯಲ್ಲಿ ಲಕ್ಷಾಂತರ ವರ್ಷದ ಇತಿಹಾಸವನ್ನು ಹೇಳುತ್ತವೆ ಆದರೆ ಅವುಗಳಿಗೆ ಸಾಕ್ಷಿ ಒದಗಿಸುವುದು ಅಸಂಭವ ಆಗಿದೆ. ಇಂದಿನ ಇತಿಹಾಸಪಂಡಿತರು ತಮ್ಮ ಜ್ಞಾನದ ಪರಿಧಿಯಲ್ಲಿ ಕಂಡುಕೊಂಡಂತೆ ಕಳೆದ ಐದುಸಾವಿರ ವರುಷಕ್ಕಿಂತ ಹಳೆಯ ನಾಗರೀಕತೆ ಭಾರತೀಯ ನಾಗರೀಕತೆ ಹಾಗೂ ಇಲ್ಲಿನ ಸಂಸ್ಕೃತಿ ಎನ್ನುವುದನ್ನು ಕಂಡುಕೊಂಡಿದ್ದಾರೆ. ಇದನ್ನು ವಿಶ್ವ ಇತಿಹಾಸ ಹಾಗೂ ವಿಜ್ಞಾನ ಎರಡೂ ಒಪ್ಪಿವೆ. ಆಧುನಿಕ ಇತಿಹಾಸಕಾರರ ಲೆಕ್ಕಾಚಾರಕ್ಕೂ ಹಿಂದಿನ ಅನೇಕ ಕುರುಹುಗಳು ಇಂದು ವಿಶ್ವಾದ್ಯಂತ ದೊರೆಯುತ್ತಿದೆ. ಐದುಸಾವಿರ ವರ್ಷವೇ ಆಗಿದ್ದರೂ ಇದು ಕ್ರೈಸ್ತ ಮತ ಹಾಗೂ ಇಸ್ಲಾಂ ಮತಗಳು ಹುಟ್ಟುವುದಕ್ಕಿಂತ ಮೂರು – ನಾಲ್ಕು ಸಾವಿರವರುಷಗಳ ಪ್ರಾಚೀನ ಇತಿಹಾಸ ಹೊಂದಿದ ಕೀರ್ತಿ ಭಾರತೀಯರದ್ದಾಗಿದೆ ಹಾಗೂ ಹಿಂದೂಗಳದ್ದಾಗಿದೆ. ದೇವರೊಬ್ಬ ನಾಮ ಹಲವು (ಏಕಂ ಸತ್ ವಿಪ್ರಾಃ ಬಹುದಾ ವದಂತಿ) ಎನ್ನುವುದು ಹಿಂದೂ ಧರ್ಮದ ಶ್ರೇಷ್ಠವಾಕ್ಯವಾಗಿದೆ ಹಾಗೂ ಎಲ್ಲರೂ ಒಪ್ಪುತ್ತಿರುವ ಸತ್ಯವಾಗಿದೆ. ಅಜ್ಞಾನಿಗಳು ಇದನ್ನು ಅಪಾರ್ಥ ಮಾಡಿಕೊಂಡಿದ್ದಾರೆ.
ಸೃಷ್ಠಿಕರ್ತನು ಒಬ್ಬನೇ ಇದ್ದಾನೆ ಆತನಿಗೆ ಆಕಾರವಿಲ್ಲ ಎಂದು ಹಿಂದೂ ಧರ್ಮಶಾಸ್ತ್ರ ಸಾರಿದಮೇಲೆ ಹಿಂದೂಗಳಲ್ಲಿ ಬಹುದೇವತಾರಾಧನೆ ಹೇಗೆ ಬಂತು ದೇವರುಗಳು ಯಾರು? ಅವರುಗಳಿಗೆ ರೂಪ ಕೊಟ್ಟವರುಯಾರು ? ದೇವರುಗಳ ಸೃಷ್ಠಿ ಹೇಗಾಯಿತು ದೇವರುಗಳಿಂದ ಆಗುವ ಲಾಭ ಏನು? ದೇವಸ್ಥಾನ ಗಳು ಏಕೆ ಇವೆ ? ಇವುಗಳೆಲ್ಲಾ ಅಗತ್ಯವೇ ಅನಗತ್ಯವೇ? ಇವುಗಳನ್ನು ಆಚರಿ ಸಬೇಕೇ ತಿರಸ್ಕರಿಸಬೇಕೇ? ಈ ಎಲ್ಲಾ ಪ್ರಶ್ನೆಗಳು ಗೊಂದಲಗಳು ಉದ್ಭವಿಸುತ್ತದೆ. ಇದಕ್ಕೆಲ್ಲಾ ಉತ್ತರರೂಪದ ಸಮಾಧಾನವನ್ನು ಮುಂದೆ ಕಂಡುಕೊಳ್ಳುವ ಪ್ರಯತ್ನ ಮಾಡೋಣ.
-ಶ್ರೀಜಿ