ದೇವರು ಯಾರು ? ದೇವರಿಗೆ ಆಕಾರ ಇದೆಯೇ ? ದೇವರಿಗೆ ಹುಟ್ಟು ಸಾವುಗಳಿದೆಯೇ? ದೇವರಿಗೆ ಸಂಸಾರ ಇದೆಯೇ ? ದೇವರು ಕರುಣಾಮಯಿಯೋ ಕ್ರೂರಿಯೋ ? ನಾವು ದೇವರನ್ನು ಪೂಜಿಸುವುದು ಆರಾಧಿಸುವುದು ಪ್ರಾರ್ಥಿಸುವುದು ಇವೆಲ್ಲಾ ವ್ಯರ್ಥವೇ? ಇವುಗಳನ್ನೇಲ್ಲಾ ಯಾಕೆ ಮಾಡಬೇಕು? ದೇವರು ಎಷ್ಟುಜನ ಎದ್ದಾರೆ? ನಮ್ಮ ಪುರಾಣಗಳು ಹೇಳುವ ಮೂವತ್ತಮೂರು ಕೋಟಿ ದೇವತೆಗಳು ಯಾರು ? ಅವತಾರಪುರುಷರು ಮಹಾತ್ಮರು ಎಂದರೆ ಯಾರು? ದೇವರಲ್ಲಿ ಸದ್ಗುಣ ಹಾಗೂ ದುರ್ಗುಣ ಎರಡೂ ಇದೆಯೇ? ಪುರಾಣ ಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ? ಇವುಗಳಿಗೆ ಉತ್ತರ ಹುಡುಕೋಣ
ದೇವರು ಯಾರು ?
ದೇವರು ಎಂದರೆ ಶಕ್ತಿ, ದೇವರು ಎಂದರೆ ತತ್ವ, ದೇವರು ಎಂದರೆ ಜ್ಞಾನ, ದೇವರು ಎಂದರೆ ಮನಸ್ಸು, ದೇವರು ಸರ್ವ ವ್ಯಾಪಿ, ದೇವರು ಸರ್ವ ಶಕ್ತ, ದೇವರು ನಿರಾಕಾರ, ನಿರ್ಗುಣ, ಆನಂದ ಸ್ವರೂಪಿ, ಸೃಷ್ಠಿಕರ್ತ, ಪಾಲಕ, ಲಯಕರ್ತ, ಜಗದೊಡೆಯ, ದೇವರು ಜಗತ್ತಿನ ಧಾರಕ. ಎಂದೆಲ್ಲಾ ನಾವು ಅವನನ್ನು ಅರಿಯಬಹುದು. ದೇವರಿಗೆ ಆಕಾರ ಇದೆಯೇ? ಅವನಿಗೆ ಶರೀರ ಇದೆಯೇ? ಅವನಿಗೆ ಹುಟ್ಟು ಸಾವುಗಳಿವೆಯೇ? ಅವನಿಗೆ ಸಂಸಾರ ಇದೆಯೇ? ಅವನು ಪುಲ್ಲಿಂಗನೋ ಸ್ತ್ರೀಲಿಂಗನೋ? ಅವನು ಕರುಣಾಳುವೋ ಕ್ರೂರಿಯೋ? ದೇವರು ಗೋಚರನೇ ಅಗೋಚರನೇ? ಒಬ್ಬನೇಹಲವೇ? ದೇವತೆಗಳು ಯಾರು? ಹೀಗೆ ನಮಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತದೆ.
ದೇವರಿಗೆ ಆಕಾರ ಇದೆಯೇ ?
ದೇವರು ನಿರಾಕಾರನಾಗಿದ್ದಾನೆ ಅವನಿಗೆ ಯಾವುದೇ ನಿರ್ಧಿಷ್ಠ ಆಕಾರ ಇಲ್ಲ ಆದರೆ ದೇವರು ಸರ್ವವ್ಯಾಪಿಯಾಗಿದ್ದಾನೆ ಆದುದರಿಂದ ಅವನು ಎಲ್ಲಾ ಆಕಾರಗಳಲ್ಲಿಯೂ ಇದ್ದಾನೆ. ಆತನು ಪಂಚಭೂತಗಳಲ್ಲಿ ಶಕ್ತಿರೂಪದಲ್ಲಿ ಇದ್ದಾನೆ. ಜೀವರಲ್ಲಿಯೂ ಜಡದಲ್ಲಿಯೂ ದೇವರು ಆವರಿಸಿಕೊಂಡಿದ್ದಾನೆ. ನಮ್ಮ ಸನಾತನ ಋಷಿಮುನಿಗಳು ಅಂತಹಾ ಭಗವಂತನ ಶಕ್ತಿಯನ್ನು ಜ್ಯೋತಿರ್ಬಿಂದು ರೂಪದಲ್ಲಿ ಕಂಡಿದ್ದಾರೆ ಅಂದರೆ ಒಂದು ಬೆಳಕಿನ ಕಿಡಿಯಂತೆ ಅವನನ್ನು ಕಲ್ಪಿಸಿಕೊಂಡಿದ್ದಾರೆ. ಅವನಿಗೆ ನಿರ್ಧಿಷ್ಠ ಶರೀರ ಇಲ್ಲ ಆದರೆ ನಮ್ಮ ಕಲ್ಪನೆಯ ರೂಪದಲ್ಲಿ ಆತ ಪ್ರಕಟಗೊಳ್ಳುತ್ತಾನೆ. ನಾವು ನಂಬಿದಜಾಗದಲ್ಲಿ ನಂಬಿದ ರೂಪದಲ್ಲಿ ನಂಬಿದ ಸಮಯದಲ್ಲೆಲ್ಲಾ ಆತ ನಮ್ಮ ಸಹಾಯಕ್ಕೆ ಬರುತ್ತಾನೆ ಇಲ್ಲಿ ನಂಬಿಕೆಯೇ ನಮಗೆ ಪ್ರಧಾನ ವಾಗಿದೆ.
ದೇವರಿಗೆ ಹುಟ್ಟು ಸಾವುಗಳಿದೆಯೇ?
ದೇವರಿಗೆ ಹುಟ್ಟು ಸಾವುಗಳಿಲ್ಲ ದೈವಿಕ ಚೈತನ್ಯ ಅಮರವಾಗಿದೆ. ಜಡ ವಸ್ತುಗಳು ಮಾತ್ರ ರೂಪಾಂತರ ಗೊಳ್ಳುತ್ತವೆ. ಈ ರೂಪಾಂತರ ಕ್ರಿಯೆಯನ್ನೆ ನಾವು ಹುಟ್ಟುಸಾವು ಎನ್ನುತ್ತೇವೆ. ದೇವರ ಸೃಷ್ಠಿಯಲ್ಲಿ ಜಗತ್ತಿನ ಯಾವ ವಸ್ತುವೂ ನಾಶವಾಗುವುದಿಲ್ಲ ಅವು ಕೇವಲ ರೂಪಾಂತರ ಗೊಳ್ಳುತ್ತವೆ ಅಷ್ಟೆ. ವಿಜ್ಞಾನವೂ ಇದನ್ನೇ ಹೇಳುತ್ತದೆ ಹಿಂದು ತತ್ವಶಾಸ್ತ್ರವೂ ಇದನ್ನೇ ಹೇಳುತ್ತದೆ. ಹೀಗೆ ರೂಪಾಂತರ ಗೊಳ್ಳುವಾಗ ಮೊದಲಿನ ರೂಪ ನಾಶವಾಯಿತು ಎನ್ನುತ್ತೇವೆ ಹೊಸ ವಸ್ತು ಹುಟ್ಟಿಕೊಂಡಿತು ಅಥವಾ ಸೃಷ್ಠಿಯಾಯಿತು ಅಥವಾ ತಯಾರಾಯಿತು ಎನ್ನುತ್ತೇವೆ. ಉದಾ ನಾವು ಸೂರ್ಯ ಹುಟ್ಟಿದ ಸೂರ್ಯ ಮುಳುಗಿದ ಎನ್ನುವಂತೆ, ಅದು ನಮ್ಮಗೆ ಗೋಚರಿಸುವ ಬಗೆಯೇ ಹೊರತು ಆತ ಹುಟ್ಟುವುದೂ ಮುಳುಗುವುದೂ ಯಾವುದನ್ನೂ ಮಾಡುವುದಿಲ್ಲ. ಒಂದು ಕಟ್ಟಿಗೆ ಸುಟ್ಟು ಬೂದಿಯಾಗುತ್ತದೆ ಅದು ಗೊಬ್ಬರದಗುಂಡಿಯಲ್ಲಿ ಗೊಬ್ಬರವಾಗುತ್ತದೆ ಇನ್ನಾವುದೋ ಗಿಡದಲ್ಲಿ ಸೇರಿ ಪುನಃ ಕಟ್ಟಿಗೆ ಯಾಗುವಂತೆ ಅದು ನಿರಂತರವಾಗಿ ಹಲವು ಬಾರಿ ರೂಪಾಂತರ ಗೊಳ್ಳುತ್ತಿರುತ್ತದೆ. ಆದರೆ ದೇವರಿಗೆ ಹುಟ್ಟುಸಾವುಗಳು ಇಲ್ಲ ಆತ ನಿರಂತರ ಅವನಿಗೆ ಆದಿ ಅಂತ್ಯಗಳಿಲ್ಲ ಆತನಿಗೆ ಬದಲಾವಣೆಯೂ ಇಲ್ಲ. ಆದರೆ ಜಗತ್ತಿನ ಎಲ್ಲಾ ಬದಲಾವಣೆಗಳಿಗೆ ಆತನು ಕಾರಣ ನಾಗಿರುತ್ತಾನೆ.
ದೇವರಿಗೆ ಸಂಸಾರ ಇದೆಯೇ ?
ದೇವರಿಗೆ ಶರೀರವಿಲ್ಲ ಎಂದ ಮೇಲೆ ಅವನಿಗೆ ಸಂಸಾರ ಇರುವುದೂ ಸಾಧ್ಯವಿಲ್ಲ. ಅವನಿಗೆ ಹೆಂಡತಿ ಮಕ್ಕಳೂ ಇಲ್ಲ ಆತನಿಗೆ ಲಿಂಗ ಬೇಧವೂ ಇಲ್ಲ ಆತ ಪುರುಷರೂಪದಲ್ಲಿಯೂ ಇಲ್ಲ ಸ್ತ್ರೀರೂಪದಲ್ಲಿಯೂ ಇಲ್ಲ ಆತನು ನಮ್ಮ ಊಹೆಗೆ ನಿಲುಕದ ಶಕ್ತಿಯಾಗಿದ್ದಾನೆ.
ದೇವರು ಕರುಣಾಮಯಿಯೋ ಕ್ರೂರಿಯೋ ?
ಹೀಗೆ ಪ್ರಶ್ನೆಬಂದರೆ ಅವನು ನಿರ್ಗುಣ ನಾಗಿದ್ದಾನೆ ಅಂದರೆ ಅವನಲ್ಲಿ ಯಾವಗುಣಗಳೂ ಇಲ್ಲ ಎನ್ನುವುದು ಒಂದು ಅರ್ಥದಲ್ಲಾದರೆ ಅವನಲ್ಲಿ ಇಲ್ಲದ ಗುಣಗಳು ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲ ಎಂಬುದಾಗಿಯೂ ನಾವು ಅರ್ಥೈಸಬಹುದು. ಅಂದರೆ ಸರ್ವ ಗುಣ ಪರಿಪೂರ್ಣ ನಾಗಿದ್ದಾನೆ. ಒಂದು ಜೀವದ ಹುಟ್ಟುವಿಕೆಯಲ್ಲಿ ಅವನಿಗಿರುವ ಭಾವ ಹಾಗೂ ಒಂದು ಜೀವಿಯ ಸಾವಿನಲ್ಲಿ ಅವನಿಗಿರುವ ಭಾವ ಎರಡೂ ಒಂದೇ ತೆರನಾಗಿರುವುದು. ಆತ ನಿರ್ಭಾವುಕನಾಗಿ ಮೋಹರಹಿತನಾಗಿ ತನ್ನಕರ್ತವ್ಯ ಮಾಡುತ್ತಾನೆ. ಭಾವ ವಿಕಾರಗಳು ನೋವು ನಲಿವುಗಳು ಅಪ್ರಬುದ್ಧರ ಮನಸ್ಸಿನಲ್ಲಿ ನೆಲೆಸಿರುತ್ತವೆ.
ದೇವರಿಗೆ ಕೋಪಬರುವುದು ದೇವರು ಸಂತೋಷಗೊಳ್ಳುವುದು ಇವೆಲ್ಲಾ ಇದೆಯಾ?
ದೇವರು ದಖಂಡಿತಾ ಯಾರಮೇಲೂ ಕೋಪಗೊಳ್ಳ ಲಾರನು. ಅಲ್ಲದೆ ಯಾರಿಂದಲೂ ಸಂತೋಷಗೊಳ್ಳಲಾರನು. ಅವನು ನಿರ್ಲಿಪ್ತ ಭಾವದಿಂದ ಇರುತ್ತಾನೆ ಯಾಕೆಂದರೆ ಜಗತ್ತಿನ ಕಣಕಣವೂ ಅವನ ಸೃಷ್ಠಿಯೇ ಆಗಿರುವುದರಿಂದ ಅವುಗಳಲ್ಲಿ ನಾವು ಭೇಧ ತೋರಬಹುದೇ ಹೊರತಾಗಿ ಭಗವಂತನಿಗೆ ಹೆಚ್ಚು ಕಡಿಮೆ ಮೇಲು ಕೀಳೆಂಬ ಬೇಧ ಇಲ್ಲ. ಹಾಗೆ ಆತನು ಪಕ್ಷಪಾತದಿಂದ ಅನುಗ್ರಹಿಸುವುದಾದಲ್ಲಿ ಆತನು ಭಗವಂತನಾಗಲು ಸಾಧ್ಯವಿಲ್ಲ. ಆದರೂ ಭಗವಂತನ ಮೇಲಿನ ಅಛಲ ಶ್ರಧ್ಧೆ ನಂಬಿಕೆ ಇವುಗಳ ಬಲದಿಂದ ನಾವು ಕೈಗೊಳ್ಳುವ ಪ್ರಖರ ಸಂಕಲ್ಪ ಇವು ಯಾವುದೋ ಒಂದು ಅಗೋಚರ ಶಕ್ತಿಯಿಂದ ಸಿದ್ಧಿಹೊಂದುವುದು ನಮ್ಮ ಅನುಭವಕ್ಕೆ ಬರುತ್ತದೆ. ಶ್ರದ್ಧೆಯೇ ಸಂಕಲ್ಪಕ್ಕೆ ಬಲವಾಗಿದೆ. ಸಂಬಿಕೆಯೇ ಯಶಸ್ಸಿನ ಗುಟ್ಟಾಗಿದೆ. ದೇವರು ನಮ್ಮ ನಂಬಿಕೆಗೆ ವಿಶ್ವಾಸವನ್ನು ತುಂಬುತ್ತಾನೆ.
ನಾವು ದೇವರನ್ನು ಪೂಜಿಸುವುದು ಆರಾಧಿಸುವುದು ಪ್ರಾರ್ಥಿಸುವುದು ಇವೆಲ್ಲಾ ವ್ಯರ್ಥವೇ? ಇವುಗಳನ್ನೇಲ್ಲಾ ಯಾಕೆ ಮಾಡಬೇಕು?
ದೇವರು ಶಕ್ತಿಯಾಗಿದ್ದಾನೆ ಎಂದು ನಾವು ಒಪ್ಪುತ್ತೇವೆ ಆದರೆ ಶಕ್ತಿಯು ಕಣ್ಣಿಗೆ ಕಾಣಿಸುವುದಿಲ್ಲ ಶಕ್ತಿಯು ಕಂಪನ ರೂಪದಲ್ಲಿ ಕಿರಣಗಳ ರೂಪದಲ್ಲಿ ಎಲ್ಲಾಕಡೆ ವ್ಯಾಪಿಸಿರುತ್ತದೆ. ಅದರಿಂದ ಕೆಲಸನಡೆಯುತ್ತಿರುತ್ತದೆ ಉದಾ ಹರಣೆಗೆ ವಿದ್ಯುತ್ ಎನ್ನುವುದು ಒಂದು ಶಕ್ತಿ ಅದನ್ನು ನೋಡಲಾಗುವುದಿಲ್ಲ ಆದರೆ ಮುಟ್ಟಿದರೆ ನಮಗೆ ಶಕ್ತಿಯ ಅರಿವಾಗುತ್ತದೆ. ವಿದ್ಯುತ್ ಶಕ್ತಿಯಿಂದ ಯಂತ್ರಗಳು ಅದ್ಭುತ ಕೆಲಸ ಮಾಡುತ್ತವೆ. ಹೀಗೆ ಒಂದು ಶಕ್ತಿಯು ಕೆಲಸಮಾಡಲು ಸಲಕರಣೆಯ ಅವಶ್ಯಕತೆ ಇರುತ್ತದೆ ಹಾಗೆಯೇ ವಿದ್ಯುತ್ತನ್ನು ಸಂಗ್ರಹಿಸಿ ಅದನ್ನು ಬಳಸುವ ವಿಧಾನವನ್ನೂ ಅರಿತಿರಬೇಕಾಗುತ್ತದೆ. ಹೀಗೆ ಭಗವಂತನ ಶಕ್ತಿಯು ಜಗತ್ತಿನ ಸರ್ವ ಜಡ ಹಾಗೂ ಜೀವಗಳಲ್ಲೂ ಸೂಕ್ಷ್ಮರೂಪದಲ್ಲಿ ಅಡಕವಾಗಿರುತ್ತದೆ. ಇದನ್ನು ನಾವು ನಮ್ಮ ಪ್ರಯತ್ನ , ಜ್ಞಾನ ಹಾಗೂ ಬುದ್ದಿಯಿಂದ ಅರಿತುಕೊಂಡಾಗ ಆಶಕ್ತಿಯು ನಮ್ಮಲ್ಲಿ ಜಾಗ್ರತವಾಗಿ ನಮ್ಮಿಂದ ಅದ್ಭುತ ಕೆಲಸಗಳು ಮಾಡಲ್ಪಡುತ್ತವೆ. ಇಂತಹ ವಿಶೇಷ ಶಕ್ತಿಗಳು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕೆಲ ಒಮ್ಮೆ ಪ್ರಕಟಗೊಳ್ಳುತ್ತವೆ. ಹೆಚ್ಚಿನ ಜನರಲ್ಲಿ ಇವುಗಳು ಅಪ್ರಕಟಿತ ರೂಪದಲ್ಲಿರುತ್ತದೆ. ಹೀಗೆ ನಮ್ಮಲಿ ಸುಪ್ತವಾಗಿರುವ ಶಕ್ತಿಗಳನ್ನು ಉದ್ದೀಪನ ಗೊಳಿಸಲು ನಮ್ಮ ಋಷಿಮುನಿಗಳು ಸಾಧನಾಮಾರ್ಗ, ಉಪಾಸನಾಮಾರ್ಗ, ಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಇಂತಹಾ ಉಪಾಸನಾ ವಿಧಿ ವೀಧಾನಗಳೇ ನಮ್ಮ ಸಂಸ್ಕೃತಿಯಾಗಿ ಬೆಳೆದು ಬಂದಿದೆ. ಅಂದರೆ ನಮ್ಮ ಎಲ್ಲಾ ಉಪಾಸನಾ ಮಾರ್ಗಗಳೂ ಭಗವಂತನು ನಮಗೆ ನೀಡಿದ ಶಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳಲು ಹಾಗೂ ಆಶಕ್ತಿಯನ್ನು ನಮ್ಮಲ್ಲಿ ನಿರಂತರ ಪರಿಣಾಮಕಾರಿಯಾಗಿ ಜಾಗ್ರತ ಸ್ಥಿತಿಯಲ್ಲಿ ಕಾಪಾಡಿ ಕೊಳ್ಳಲು ಹಾಕಿಕೊಟ್ಟ ಶಿಕ್ಷಣ ಮಾರ್ಗವಾಗಿದೆ. ಒಂದೊಂದು ಉಪಾಸನೆಯಿಂದ ಒಂದೊಂದು ಶಕ್ತಿಯನ್ನು ನಾವು ಜಾಗ್ರತಗೊಳಿಸಬಹುದಾಗಿದೆ. ಆದುದರಿಂದ ಪೂಜಿಸುವುದು, ಆರಾಧಿಸುವುದು, ಪ್ರಾರ್ಥಿಸುವುದು, ಇವಾವುದೂ ವ್ಯರ್ಥವಲ್ಲ. ಇವುಗಳಿಂದ ನಾವು ವಿಮುಖರಾದರೆ ನಮ್ಮಲ್ಲಿರುವ ಶಕ್ತಿಯನ್ನು ನಮಗೆ ಅರಿಯಲು ಸಾಧ್ಯವಾಗದೆ ನಾವು ಅಜ್ಞಾನದಿಂದ ಕಷ್ಟ ಅನುಭವಿಸಬೇಕಾಗುತ್ತದೆ. ನಮ್ಮ ಕಷ್ಟಗಳಿಗೆ ಕಾರಣ ತಿಳಿಯಲು ನಮಗೆ ಸಾಧ್ಯವಾಗುವುದಿಲ್ಲ ಇಂತಹ ಶಕ್ತಿಯನ್ನು ಒದಗಿಸುವುದೇ ನಮ್ಮ ಆಧ್ಯಾತ್ಮಿಕ ಉಪಾಸನೆಗಳು.
ದೇವರು ಎಷ್ಟುಜನ ಎದ್ದಾರೆ?
ದೇವರು ಒಬ್ಬನೇ ಇದ್ದಾನೆ. ಹಾಗೂ ಇಡೀ ಭೂಮಂಡಲಕ್ಕೆ ಆತನೊಬ್ಬನೇ ಒಡೆಯ ಅವನನ್ನು ಪರಮಾತ್ಮ , ಪರಭ್ರಹ್ಮ, ಸತ್, ಚಿತ್, ಎಂದೆಲ್ಲಾಕರೆದಿದ್ದಾರೆ. ಸರ್ವದೇವ ನಮಸ್ಕಾರಃ ಕೇಶವಂಪ್ರತಿ ಗಚ್ಚತಿ ಎಂಬುದಾಗಿ ಈ ಅರ್ಥದಲ್ಲಿಯೇ ಹೇಳಿದ್ದಾರೆ. ಅಂದರೆ ದೇವರು ಇರುವುದು ಹೌದು ಎಂದು ನಾವು ಒಪ್ಪುವುದಾದರೆ ( ಯಾಕೆಂದರೆ ಅವನನ್ನು ನಾವು ನೋಡಲಾಗುವುದಿಲ್ಲ ತೋರಿಸಲಾಗುವುದಿಲ್ಲ ಹಾಗೂ ಸಾಕ್ಷಿಸಮೇತ ಶೃತ ಪಡಿಸುವುದಕ್ಕಾಗುವುದಿಲ್ಲ ಅವನನ್ನು ಅನುಭವ ಮತ್ತು ನಂಬಿಕೆಯಿಂದಲೇ ಒಪ್ಪಬೇಕಾಗಿದೆ.) ಹಾಗಾಗಿ ಒಬ್ಬನೇ ಇದ್ದಾನೆ ಎನ್ನುವುದು ಗೊಂದಲಕ್ಕೆ ಎಡೆ ಇಲ್ಲದ ಸತ್ಯವಾಗಿದೆ. ಒಬ್ಬನನ್ನೇ ರುಜುವಾತುಮಾಡಲು ನಮ್ಮಲ್ಲಿ ಸಾಧ್ಯವಿಲ್ಲದಿರುವಾಗ ಅವನಿಗೆ ಹೆಂಡತಿ ಮಕ್ಕಳು ಸಂಸಾರ ಇವನ್ನೆಲ್ಲಾ ಸೃಷ್ಠಿಸಿ ಸಾಧಿಸುತ್ತೇನೆನ್ನುವುದು ಶುದ್ಧ ಮೂರ್ಖತನವೇ ಆದೀತು.
ಹಾಗಾದರೆ ನಮ್ಮ ಪುರಾಣಗಳು ಹೇಳುವ ಮೂವತ್ತಮೂರು ಕೋಟಿ ದೇವತೆಗಳು ಯಾರು ಅವರ ಕಥೆ ಏನು?
ನಾವು ಒಪ್ಪಬೇಕಾಗಿರುವುದು ಪರಮಾತ್ಮ ಒಬ್ಬನೇ ಎನ್ನುವ ವಿಷಯವನ್ನು ವೇದ ಉಪನಿಷತ್ತುಗಳೂ ಇದನ್ನೇ ಹೇಳುತ್ತವೆ. ಹಾಗಾದರೆ ದೇವತೆಗಳು ಎಂದರೆ ಯಾರು? ಎನ್ನುವ ಪ್ರಶ್ನೆ ಬರುತ್ತದೆ. ಇಲ್ಲಿ ನಾವು ದೇವರು ಬೇರೆ ದೇವತೆಗಳು ಬೇರೆ ಎನ್ನುವ ವಿಚಾರವನ್ನು ಗಮನಿಸೋಣ. ಮೂವತ್ತಮೂರು ಕೋಟಿ ದೇವರು ಎನ್ನುವ ಬದಲು ಮೂವತ್ತಮೂರು ಕೋಟಿ ದೇವತೆಗಳು ಎಂದಿದ್ದಾರೆ.
ಈಗ ಈ ದೇವತೆಗಳ ಸ್ವರೂಪವನ್ನು ಅರಿಯೋಣ ನಮ್ಮಪ್ರಾಚೀನರು ನಮ್ಮನ್ನೆಲ್ಲಾನಿಯಂತ್ರಿಸುವ ಶಕ್ತಿ ಒಂದಿದೆ ಎನ್ನುವುದನ್ನು ಒಪ್ಪಿದರು ನಂಬಿದರು ಕೂಡಾ ಅವನನ್ನೇ ಪರಮಾತ್ಮ ಪರಭ್ರಹ್ಮ ದೇವರು ಎಂಬೆಲ್ಲಾ ಹೆಸರಿನಿಂದ ಕರೆದರು. ಅವನು ಸರ್ವ ಶಕ್ತ ಸರ್ವಗುಣ ಪರಿಪೂರ್ಣ ಎಂದೆಲ್ಲಾ ಕರೆದಮೇಲೆ ಅವನಿಂದ ತಮಗಾಗುತ್ತಿರುವ ಉಪಕಾರವನ್ನು ಸ್ಮರಿಸಿಕೊಂಡರು ಅವನಿಗೆ ಕೃತಜ್ಞರಾಗಿದ್ದರು. ಹೀಗೆ ಭಗವಂತನ ಶಕ್ತಿರೂಪಗಳಿಗೆ ಅವರು ಒಂದೊದು ಶಕ್ತಿರೂಪಕ್ಕೂ ಒಂದೊಂದು ಹೆಸರುಕೊಟ್ಟು ಅವುಗಳನ್ನು ದೇವತೆಗಳೆಂದು ಕರೆದರು.
ಹೀಗೆ ತಮಗೆ ಉಪಕಾರಮಾಡುವ ತಮ್ಮ ಸಂತೋಷಕ್ಕೆ ಕಾರಣವಾಗುವ ಶಕ್ತಿಮೂಲಗಳನ್ನು ದೇವತೆಗಳೆಂದು ಗುರುತಿಸಿದರು. ಹೀಗೆ ಬೆಳಕು ಕೊಡುವ ಸೂರ್ಯ, ಬೇಳೆಗಳಿಗೆ ಜೀವತುಂಬುವ ನೀರು ವರುಣ, ಮಣ್ಣು ಭೂದೇವಿ, ಆಹಾರ ಬೇಯಿಸಿಕೊಡುವ ಬೆಂಕಿ , ಉಸಿರಾಡುವ ಗಾಳಿ, ಇವಕ್ಕೆಲ್ಲಾ ಒಂದೊಂದು ದೇವತೆಗಲನ್ನು ಸೃಷ್ಠಿಸಿದರು. ಹೀಗೆ, ಇಂದ್ರ, ಅಗ್ಮಿ, ವಾಯು, ವರುಣ, ಯಮ, ಅಶ್ವಿನಿದೇವತೆಗಳು, ಎಲ್ಲರೂ ಮನುಷ್ಯರ ಮನಸ್ಸಿನಲ್ಲಿ ಹುಟ್ಟಿಕೊಂಡರು. ಅಂದರೆ ಭಗವಂತನ ಅನಂತಗುಣಗಳಲ್ಲಿ ಮನುಷ್ಯನಿಗೆ ಉಪಕಾರವಾಗುವ ಅಥವಾ ಮನುಷ್ಯನ ಸುಖ ಸಂತೋಷಕ್ಕೆ ಕಾರಣವಾಗುವ ಒಂದೊಂದು ಗುಣಗಳಿಗೂ ಒಂದೊಂದು ದೇವತೆಗಳನ್ನು ನಮ್ಮ ಹಿರಿಯರು ಸೃಷ್ಠಿಸಿದರು. ಅಂದರೆ ದೇವತೆಗಳು ಭಗವಂತನ ಪ್ರಧಾನ ಒಂದೊಂದು ಗುಣದ ಪ್ರತಿನಿಧಿಗಳಾಗಿದ್ದಾರೆಯೇ ಹೊರತೂ ಅವರೆಲ್ಲರೂ ಬೇರೆ ಬೇರೆ ಆಗಿದ್ದಾರೆನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಹೀಗೆಯೇ ಮೃತ್ಯುದೇವತೆ ಯಮನಾಗಿದ್ದಾನೆ. ಔಷಧಿಗಳಿಗೆ ಅಶ್ವಿನಿ ದೇವತೆಗಳಾಗಿದ್ದಾರೆ, ಹೀಗೆ ಕಟ್ಟಿಗೆ , ನೆರಳು, ಹಣ್ಣು ಹಂಪಲನ್ನು ಕೊಡುವ ಕಾಡಿಗೆ ವನದೇವತೆಯೂ, ಮಳೆಗೆ ವರುಣನೂ, ನದಿಗೆ ಜಲದೇವತೆಯೂ, ಬೆಂಕಿಗೆ ಅಗ್ನಿದೇವನೂ, ಗಾಳಿಗೆ ವಾಯುದೇವನೂ, ಹೀಗೆ ನಮಗೆ ಉಪಕಾರಮಾಡುವ ಪ್ರಕೃತಿಶಕ್ತಿಗಳನ್ನೆಲ್ಲಾ ದೇವತೆಗಳೆಂದು ಪೂಜಿಸಲು ಆರಾಧಿಸಲು ಆರಂಭಿಸಿದರು ಉಪಕಾರಕ್ಕೆ ಪ್ರತ್ಯುಪಕಾರ ವೆಂಬಂತೆ ಯಜ್ಞ ಯಾಗಗಳನ್ನು ಮಾಡಿ ಹವಿಸ್ಸನ್ನು ಅರ್ಪಿಸಿ ದೇವತೆಗಳನ್ನು ತೃಪ್ತಿಪಡಿಸುತ್ತಾ ಅಂದರೆ ವಾತಾವರಣವನ್ನು ಶುದ್ಧಿಮಾಡುತ್ತಾ ತಾವು ಕೃತಜ್ಞತೆಯಿಂದ ಬದುಕುತ್ತಿದ್ದರು. ಮುಂದೆ ಪ್ರಾಣಿಗಳಿಂದ ತಮಗೆ ಉಪಕಾರವಾಗುವುದನ್ನು ಗುರುತಿಸಿದ ಮೇಲೆ ಅತಿಹೆಚ್ಚು ಉಪಕಾರವಾಗುವ ಗೋವನ್ನು ದೇವತೆಯಂತೆ ತಾಯಿಯಂತೆ ಕಂಡು ಕಾಮಧೇನು ಎಂದು ಪೂಜಿಸತೊಡಗಿದರು, ಅಂದಿನ ದಿನಲ್ಲಿ ಮಾಂಸಾಹಾರ ಸ್ವಾಭಾವಿಕವಾಗಿದ್ದರೂ, ಮನುಷ್ಯನಜೀವನ ಕೃಷಿ ಆಧಾರವಾಗಿದ್ದುದರಿಂದ ಕೃಷಿಗೆ ಸಹಾಯಕ ವಾಗುವ ಪ್ರಾಣಿಗಳನ್ನು ತಿನ್ನುವುದನ್ನು ಬಿಟ್ಟು ಅವುಗಳನ್ನು ಪ್ರಿತಿಸಲು ಆರಂಭಿಸಿದರು. ತಮ್ಮ ಜೀವನದ ಅವಿಭಾಜ್ಯ ಅಂಗಗಳನ್ನಾಗಿ ಪರಿಗಣಿಸಿದರು. ನಮ್ಮ ಬದುಕಿಗೆ ಉಪಕಾರಮಾಡಿದವರನ್ನು ಹಿಂಸಿಸುವುದು ಕೊಲ್ಲುವುದು ಮಹಾ ಪಾಪವೆಂದು ಪರಿಗಣಿಸಿದರು. ಅದರಂತೆ ಸಾಮಾನ್ಯ ಮನುಷ್ಯ ಮನೆಯಲ್ಲಿ ಸಾಕುವ ಪ್ರಾಣಿಗಳಾದ ಹಸು, ಎತ್ತು, ನಾಯಿ, ಬೆಕ್ಕು, ಕುದುರೆ, ಆನೆ, ಎಮ್ಮೆ , ಕೋಣ, ಕತ್ತೆ ಇವುಗಳಾವುದನ್ನೂ ಭಾರತೀಯರು ಅಂದರೆ ಹಿಂದುಗಳು ತಿನ್ನುತ್ತಿರಲಿಲ್ಲ. ನಾಗರೀಕತೆ ಇಲ್ಲದ ಅಸುರರು ಇವುಗಳನ್ನು ಕದ್ದು ತಿನ್ನುತ್ತಿದ್ದರು ಅದು ಈಕಾಲದಲ್ಲಿಯೂ ಬದಲಾಗಿಲ್ಲ. ಅದರಲ್ಲಿಯೂ ಹಾಲು, ಮೊಸರು,ಮಜ್ಜಿಗೆ, ಬೆಣ್ಣೆ, ತುಪ್ಪ, ಗೊಬ್ಬರ, ಔಷಧಿಯುಕ್ತವಾದ ಗೋಮೂತ್ರ ಹೀಗೆ ಸರ್ವವಿಧದಲ್ಲಿಯೂ ಉಪಕಾರಿಯಾದ ಗೋವನ್ನು ಹಿಂದೂ ನಾಗರಿಕ ಸಮಾಜ ಅತಿಪವಿತ್ರಪ್ರಾಣಿಯಾಗಿ ಪೂಜಿಸಿದರು, ಗೋವು ಸಂಪತ್ತಿನ ಪ್ರತೀಕ ವಾಗಿತ್ತು. ಪ್ರಕೃತಿ ಇಲ್ಲದೆ ಮನುಷ್ಯನಿಲ್ಲವೆಂದು ಅರಿತು ಪ್ರಕೃತಿಯ ರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸುತ್ತಿದ್ದರು, ನೀರನ್ನು ಮಲಿನ ಮಾಡುವಂತಿರಲಿಲ್ಲ, ಭೂಮಿಯನ್ನು ಅಗೆಯುವಮೊದಲು ಪೂಜಿಸಿ ಭೂದೇವಿಯನ್ನು ಕ್ಷಮಿಸುವಂತೆ ಕೇಳಿಕೊಂಡು ಕೆಲಸ ಆರಂಭಿಸುತ್ತಿದ್ದರು, ತಮ್ಮ ಉಪಯೋಗಕ್ಕೆ ಮರಗಳನ್ನು ಕಡಿಯುವ ಮೊದಲು ಮರಕ್ಕೆ ಪೂಜಿಸುತ್ತಿದ್ದರು ಹೀಗೆಯೇ ಬೆಟ್ಟಗಳು ಸಮುದ್ರಗಳು ಎಲ್ಲೆಡೆಯೂ ದೇವತೆಗಳನ್ನು ಕಂಡರು ಹಾಗೂ ಸೃಷ್ಠಿಸಿದರು ಪ್ರತಿಯೊಂದಕ್ಕೂ ಹೆಸರನ್ನುಕೊಟ್ಟರು ಹೀಗೆ ಕಲ್ಲು ಮಣ್ಣು ನೀರು ಬೆಟ್ಟ ಗುಡ್ಡ ಗಿಡ ಬಳ್ಳಿ ಹೂವು ಪ್ರಾಣಿಗಳು ಪಕ್ಷಿಗಳು ಎಲ್ಲೆಲ್ಲೂ ಭಗವಂತ ನೆಲೆಸಿದ್ದಾನೆ ಎಲ್ಲಸ್ಥಳಗಳೂ ಭಗವಂತನ ಸನ್ನಿಧಾನ ವೆಂದು ತಿಳಿದು ಪೂಜಿಸಲು ಆರಾಧಿಸಲು ಆರಂಭಿಸಿದರು. ಆದುದರಿಂದಲೇ ಇಡೀ ಭೂಮಂಡಲದ ಸಕಲ ಜೀವ ಜಂತುಗಳೂ ಒಂದೇಕುಟುಂಬದ ಸದಸ್ಯರು ಎಂಬ ಅರ್ಥದಲ್ಲಿ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಹರಸಿದ್ದಾರೆ. ವಸುದೈವ ಕುಟುಂಬಕಂ ಎಂದು ಕರೆದಿದ್ದಾರೆ. ಹೀಗೆ ಬಹುರೂಪಿ ಭಗವಂತನನ್ನೇ ವಿಶ್ವರೂಪಿ, ವಿರಾಟಪುರುಷ, ಎಂದು ವರ್ಣಿಸಿದ್ದಾರೆ. ಸಹಸ್ರಶೀರ್ಷಾ ಪುರುಷಃ ಸಹಸ್ರ ಅಕ್ಷಃ ಸಹಸ್ರ ಪಾತ್ ಎಂದು ವರ್ಣಿಸಿದ್ದಾರೆ. ( ಸಾವಿರಾರುತಲೆಗಳು, ಕಣ್ಣುಗಳು, ಕೈಗಳು ) ಎಂದರೆ ಇಡೀ ಲೋಕದ ಸಮಸ್ತ ಜೀವಿಗಳ ತಲೆ ಕಣ್ಣು ಕೈಗಳೆಲ್ಲಾ ಭಗವಂತನವೇ ಅಥವಾ ಆತನ ದೇಹವೇ ಆಗಿವೆ ಎನ್ನುವ ವಿಶಾಲ ಅರ್ಥ. ಹೀಗೆ ಸೃಷ್ಟಿಯ ಪ್ರತಿ ಸದ್ಗುಣಗಳನ್ನೂ ಒಂದೊಂದು ದೇವತೆಗಳು ಪ್ರತಿನಿಧಿಸಿದ್ದಾರೆ ಎನ್ನುವ ಅರ್ಥದಲ್ಲಿ ಮೂವತ್ತಮೂರು ಕೋಟಿದೇವತೆಗಳಿದ್ದಾರೆ ಎಂದಿದ್ದಾರೆ ಅಂದರೆ ಭಗವಂತನ ಗುಣಗಳನ್ನು ಎಣಿಸುವುದು ಸಾದ್ಯವಿಲ್ಲ. ಅಂದರೆ ಅನಂತ ಗುಣ ಸ್ವರೂಪ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಇಷ್ಟೊಂದು ದೇವತೆಗಳ ಉಲ್ಲೇಖ ಮಾಡಲಾಗಿದೆ. ಮುಂದೆ ವಿದ್ಯೆಗೂ, ಬುದ್ದಿಗೂ, ಶಕ್ತಿಗೂ, ವೇದಗಳಿಗೂ, ಇಂದ್ರಿಯಗಳಿಗೂ, ದೇವತೆಗಳನ್ನು ಹೇಳಿದ್ದಾರೆ, ಮಂತ್ರಗಳಿಗೂ ದೇವತೆಗಳನ್ನು ಹೇಳಿದ್ದಾರೆ ಅಂದರೆ ಯಾವಮಂತ್ರದಿಂದ ಯಾವ ಶಕ್ತಿ ಲಭ್ಯ ಎಂಬುದಕ್ಕೆ ದೇವತೆಗಳು ಗುರುತಾಗಿದ್ದಾರೆ. ಶತಪಥ ಬ್ರಾಹ್ಮಣ 4-5-7-2 ರಲ್ಲಿ ಮೂವತ್ತಮೂರು ದೇವತೆಗಳ ಉಲ್ಲೇಖ ಇದೆ. ಅಗ್ನಿ, ವಾಯು, ಪೃಥ್ವಿ, ಅಂತರಿಕ್ಷ ,ಸೂರ್ಯ, ಚಂದ್ರಮಾ, ಆಕಾಶ ಮತ್ತು ನಕ್ಷತ್ರಗಳೆಂದು ಎಂಟು ವಸುಗಳು, ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ, ನಾಗ ,ಕೂರ್ಮ ,ಕೃಕಿಲಾ, ದೇವದತ್ತ, ಧನಂಜಯ ಮತ್ತು ಜೀವಾತ್ಮಾ ಎಂದು ಹನ್ನೊಂದು ರುದ್ರರು, ಚೈತ್ರ ವೈಶಾಕಾದಿ ಹನ್ನೆರಡು ಮಾಸಗಳು, ಹನ್ನೆರಡು ಆದಿತ್ಯರು, ಯಜ್ಞ , ವಿದ್ಯುತ್ ಅಥವಾ ಇಂದ್ರ , ಇವರೆಲ್ಲರ ಪಾಲಕ ಪ್ರಜಾಪತಿ ಪರಮೇಶ್ವರನು ಮೂವತ್ನಾಲ್ಕನೆಯ ದೇವತೆ ಇದನ್ನೇ ಮೂವತ್ತಮೂರು ಕೋಟಿ ದೇವತೆಗಳೆಂದಿರಲೂ ಬಹುದು. ಏಕಂ ಸದ್ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ – ಋಗ್ವೇದ. ಇಲ್ಲಿ ವಿಶೇಷ ಪ್ರಜ್ಞಾವಂತರು ಒಂದನ್ನೇ ಬಹುವಿಧವಾಗಿ ಅಗ್ನಿ,ಯಮ, ಮಾತರಿಶ್ವ,ಮುಂತಾದ ನಾಮಗಳಿಂದ ಕೆರೆಯುತ್ತಾರೆಂಬುದಾಗಿ ಋಗ್ವೇದ ಹೇಳುತ್ತದೆ.
ಆದುದರಿಂದ ದೇವರ ಬಗ್ಗೆ ಇರುವ ಗೊಂದಲ ತೊರೆದು ಸರ್ವಗುಣ ಪರಿಪೂರ್ಣನಾದ ನಿರಾಕಾರನಾದ ಒಬ್ಬನೇ ಭಗವಂತನನ್ನು ಆರಾಧಿಸಬಹುದು ಇಲ್ಲವೇ ಒಂದೊಂದು ಶಕ್ತಿಗೂ ಅಭಿಮಾನಿದೇವತೆಗಳಾದ ಹಲವಾರು ವಿಭಿನ್ನ ಹೆಸರಿನಿಂದ ರೂಪದಿಂದ ಬೆಳೆದುಬಂದ ಸಂಸ್ಕೃತಿಯಂತೆಯೂ ಗುಣಸ್ವರೂಪಿ ದೇವತೆಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿಯೂ ಪೂಜಿಸಬಹುದು ಆರಾಧಿಸಬಹುದು, ಯಾವುದೂ ತಪ್ಪಲ್ಲ ಆದರೆ ಆರಾಧಿಸುವಾಗ ಅಜ್ಞಾನ ಅಸ್ಪೃಷ್ಯತೆ ಮನಸ್ಸಿನಲ್ಲಿ ಇರಬಾರದು. ನೀವು ಪೂಜಿಸುವ ದೇವರು ಅಥವಾ ದೇವತೆಗಳು ಪರಮಾತ್ಮನ ಶಕ್ತಿಯಿಂದ ಭಿನ್ನರಾದವರಲ್ಲ ಅವನ ಶಕ್ತಿಯ ಒಂದು ರೂಪ ಅಥವಾ ಒಂದು ಗುಣದ ಪ್ರತಿನಿಧಿ ತನ್ನ ಮುಂದಿರುವ ದೇವರ (ವಿಗ್ರಹದ) ರೂಪದಲ್ಲಿ ಅಡಕವಾಗಿರುವ ಶಕ್ತಿ ಎಂಬ ಭಾವ ನಿಮ್ಮಲ್ಲಿರಬೇಕು. ಆ ಶಕ್ತಿಯ ಹಿಂದಿರುವ ಅಗೋಚರವಾದ ಪೂರ್ಣ ರೂಪವೇ ಪರಮಾತ್ಮ. ಸೀಮಿತ ರೂಪವೇ ದೇವತೆ ಆಗಿರುತ್ತದೆ ಎಂದು ತಿಳಿದುಕೊಳ್ಳ ಬೇಕು. ಆ ದೇವತೆಗೆ ಯಾವುದೇ ಹೆಸರಿರಬಹುದು ಯಾವುದೇ ರೂಪವಿರಬಹುದು ಅದು ಕಲ್ಲಿನರೂಪದಲ್ಲಿಯೋ ವಿಗ್ರಹದ ರೂಪದಲ್ಲಿಯೋ ಕಲಶದ ರೂಪದಲ್ಲಿಯೋ ಅಗ್ನಿಯ ರೂಪದಲ್ಲಿಯೋ, ಪ್ರಾಣಿಯ ರೂಪದಲ್ಲಿಯೋ ಪಕ್ಷಿಯ ರೂಪದಲ್ಲಿಯೋ ಪ್ರಕೃತಿಯರೂಪದಲ್ಲಿಯೋ ಯಾವುದೇ ರೂಪದಲ್ಲಿದ್ದರೂ ಅದು ಬಗವಂತನ ರೂಪವೇ ಆಗಿರುವುದೆಂಬುದು ಹಿಂದೂ ಸನಾತನ ಧರ್ಮದ ಕಲ್ಪನೆಯಾಗಿದೆ ಆದರೆ ಆ ವಿಗ್ರಹ ಅಥವಾ ದೇವತೆಯಲ್ಲಿರುವ ಶಕ್ತಿ ಅತವಾ ತತ್ವವನ್ನು ನಾವು ಅರಿಯದೆ ಮಾಡುವ ನಮ್ಮ ಪೂಜೆ ಅತವಾ ನಮಸ್ಕಾರ ನಮಗೆ ಉದ್ದೇಶಿತ ಫಲವನ್ನು ನಿಡಲಾರದು.
ನನಗೆ ದೇವರು ಎಂದರೆ ಸರ್ವಗುಣ ಪೂರ್ಣನಾದ ಒಬ್ಬನೇ ಪರಮಾತ್ಮ . ದೇವತೆಗಳೆಂದರೆ ಅವನ ನಿರ್ದಿಷ್ಟಗುಣದ ಪ್ರತೀಕವಾಗಿರುವ ಪ್ರತಿನಿಧಿಗಳು ಸಾಮಾನ್ಯಜನರು ಎಲ್ಲದೇವತೆಗಳನ್ನೂ ದೇವರು ಎಂದೇ ಕರೆಯುವುದರಿಂದ ಇಲ್ಲಿಯೂ ದೇವರು ಎಂದು ಬಳಸಲಾಗಿದೆ. ಆದರೆ ಅರ್ಥದಲ್ಲಿ ಅದು ದೇವತೆಯೇ ಆಗುವುದು. ಒಂದುವೇಳೆ ನಮ್ಮ ಎದುರಿಗಿರುವ ವಿಗ್ರಹ ಸರ್ವ ಶಕ್ತ ಪರಿಪೂರ್ಣ ಗುಣವಂತ ಎಂದು ನಾವು ಕಲ್ಪಿಸಿಕೊಂಡರೆ ಅದು ಯಾವ ದೇವರ ವಿಗ್ರಹವಾಗಿದ್ದರೂ ಪರಮಾತ್ಮನೇ ಆಗುತ್ತಾನೆ. ಎಲ್ಲದಕ್ಕೂ ನಮ್ಮ ಮನಸ್ಸೇ ಕಾರಣ ಯದ್ಭಾವಂ ತದ್ಭವತಿ ಎಂದಿದ್ದಾರೆ ನಾವು ಹೇಗೆ ಭಾವಿಸಿಕೊಳ್ಳುತ್ತೇವೋ ಹಾಗೆ ಅಲ್ಲಿ ಭಗವಂತನ ಸನ್ನಿಧಾನವಿರುತ್ತದೆ. ನಾವು ಆಕ್ಷೇತ್ರದ ನಿರ್ದಿಷ್ಟದೇವರರೂಪದಲ್ಲಿ ಕಲ್ಪಿಸಿಕೊಂಡರೆ ಅದರ ಗುಣಸ್ವರೂಪವನ್ನೂ ನೆನೆಯಬೇಕಾಗುವುದು.
ಇಷ್ಟು ತಿಳಿದಮೇಲೆ ನಿಮಗೆ ತಿಳಿದಿರುವ ಅಥವಾ ನಿಮ್ಮ ತಾಲೋಕು ಜಿಲ್ಲೆ ರಾಜ್ಯ ದಲ್ಲಿರುವ ದೇವಸ್ಥಾನದ ದೇವರು ಅಥವಾ ದೇವತೆಗಳಪಟ್ಟಿ ತಯಾರಿಸಿಕೊಳ್ಳಿ ಮೂವತ್ತಮೂರು ಕೋಟಿಯಲ್ಲಿ ನಿಮಗೆ ಪರಿಚಯ ಇರುವವರ ಪಟ್ಟಿ ಸಿಕ್ಕಮೇಲೆ ಅವರುಗಳು ಯಾವಗುಣಕ್ಕೆ ಅಧಿದೇವತೆಗಳು ಎನ್ನುವ ಪಟ್ಟಿಮಾಡಿ ನಿಮಗೆ ಎಷ್ಟು ಅರಿವಿದೆ ಎನ್ನುವುದು ಗೊತ್ತಾಗುತ್ತದೆ, ನಿಮಗೆ ತಿಳಿದಿಲ್ಲವಾದರೆ ನೀವು ಹೋಗುವ ದೇವಸ್ಥಾನದಲ್ಲಿರುವ ಅರ್ಚಕರಲ್ಲಿ ಕೇಳಿ ಆಗ ಅವರ ಜ್ಞಾನದ ಅರಿವು ನಿಮಗೂ ಹಾಗೂ ಅವರಿಗೂ ಆಗುತ್ತದೆ. ಹೀಗೆ ಇಂದ್ರಿಯಾಭಿಮಾನಿ ದೇವತೆಗಳನ್ನು ಅರಿತಮೇಲೆ ನೀವು ಯಾವುದೇ ದೇವಸ್ಥಾನಕ್ಕೆಹೋಗಲಿ ಅಲ್ಲಿರುವ ದೇವರೆದುರುನಿಂತಾಗ ಆ ದೇವತೆಯ ಗುಣವು ತನ್ನಲ್ಲಿ ಜಾಗ್ರತವಾಗಲಿ ಅದರಿಂದ ನನ್ನಜೀವನ ಯಶಸ್ಸಾಗಲಿ ನನ್ನ ಕುಟುಂಬದ ಎಲ್ಲಸದಸ್ಯರಲ್ಲಿಯೂ ಅಂತಹ ಸಾತ್ವಿಕ ಗುಣವನ್ನು ಉದ್ಧಿಪನ ಗೊಳಿಸು ಎಂದು ಕೇಳಿಕೊಳ್ಳುವುದು ಉತ್ತಮವಾದ ಕ್ರಮವಾದೀತು. ಅದು ನಿಮ್ಮ ಮನಸ್ಸಿನ ಮೇಲೆ ಕಂಡಿತಾ ಪರಿಣಾಮ ಬೀರೀತು ಇಲ್ಲವಾದಲ್ಲಿ ನೀವು ದೇವರಿಗೆ ಹಾಕುವ ಪ್ರದಕ್ಷಿಣೆಯು ಎತ್ತು ಗಾಣಕ್ಕೆ ಹಾಕುವ ಪ್ರದಕ್ಷಿಣೆಗಿಂತ ವ್ಯತ್ಯಾಸ ಇರಲಾರದು ಎತ್ತು ಗಾಣಕ್ಕೆ ತಿರುಗುವಾಗ ಕನಿಷ್ಠ ಎಣ್ಣೆ ಬರುತ್ತದೆ ಇಲ್ಲಿ ಸಮಯ ವ್ಯರ್ಥ ವಾಗುವುದು. ಆದುದರಿಮದ ಪ್ರತಿಯೊಂದನ್ನೂ ಅರಿತು ಆಚರಿಸುವ ಜ್ಞಾನ ಸಮಾಜಕ್ಕೆ ನೀಡುವುದು ಇಂದಿನ ಅವಶ್ಯಕತೆಯಾಗಿದೆ. ಅಂಧಾನುಕರಣೆ ಅಪಾಯಕಾರಿ.
ಅವತಾರಪುರುಷರು ಮಹಾತ್ಮರು ಎಂದರೆ ಯಾರು?
ಇಡೀ ವಿಶ್ವದಲ್ಲಿ ದೇವರು ಶಕ್ತಿರೂಪದಿಂದ ನಾದರೂಪದಿಂದ ತರಂಗ ರೂಪದಿಂದ ವ್ಯಾಪಿಸಿದ್ದಾನೆ ಎನ್ನುವುದನ್ನು ನಾವು ಒಪ್ಪುತ್ತೇವೆ. ಇಂತಹ ಶಕ್ತಿ ಜಗತ್ತಿನ ಅಣು ಅಣುವಿನಲ್ಲಿಯೂ ಸುಪ್ತವಾಗಿ ಇರುತ್ತದೆ. ಪ್ರತಿಯೊಂದು ಜೀವರಲ್ಲಿಯೂ ಜಡದಲ್ಲಿಯೂ ಶಕ್ತಿ ಇದೆ ಎನ್ನುವುದುವೈಜ್ಞಾನಿಕ ಸತ್ಯವಾಗಿದೆ ವಿಶ್ವವ್ಯಾಪಿಯಾಗಿರುವುದು ಪರಮಾತ್ಮನಾದರೆ ಮನುಷ್ಯನಲ್ಲಿ ಪರಮಾತ್ಮ ಜೀವರೂಪದಲ್ಲಿದ್ದಾನೆ. ಬ್ರಹ್ಮಾಂಡ ಪಿಂಡಾಂಡ ಎಂದು ಕರೆಯುತ್ತೇವೆ ಬ್ರಹ್ಮಾಂಡದಲ್ಲಿ ಏನೆಲ್ಲಾ ಇದೆಯೋ ಅದೆಲ್ಲವೂ ಪಿಂಡಾಂಡದಲ್ಲಿಯೂ ಇದೆ. ಜೀವಿಯಲ್ಲಿರುವ ಶಕ್ತಿ ಸುಪ್ತವಾಗಿದೆ ಇದನ್ನು ಸಾಧನೆಯಿಂದ ಉನ್ನತಿಗೆ ಏರಿಸಿಕೊಳ್ಳ ಬಹುದು ಎಂಬುದನ್ನು ನಮ್ಮ ಋಷಿಮುನಿಗಳು ತಪಸ್ಸಿನಿಂದ ಅರಿತು ಕೊಂಡರು. ಇಂತಹ ಶಕ್ತಿಯನ್ನು ಸಾಧನೆಯಮೂಲಕ ಜಾಗ್ರತ ಗೊಳಿಸಿಕೊಂಡು ನಮ್ಮ ಆತ್ಮ ಶಕ್ತಿ ಯನ್ನು ವಿಶ್ವಶಕ್ತಿಯೊಂದಿಗೆ ಸಂಪರ್ಕಿಸಿಕೊಂಡಾಗ ದೇಹದ ಒಳಗೂ ದೇಹದ ಹೊರಗೂ ಒಂದೇರೀತಿಯ ಕಂಪನವು ಸಮನ್ವಯತೆಯನ್ನು ಸಾಧಿಸಿದರೆ ಅಂತಹ ವ್ಯಕ್ತಿಯಲ್ಲಿ ದೈವಿಕ ಶಕ್ತಿಯು ನೈಜರೂಪದಲ್ಲಿ ಪ್ರಕಟವಾಗುವುದು ಸಾಧ್ಯವಿದೆ. ಉದಾ ಇಂದಿನ ದೂರವಾಣಿ ಯ ತರಂಗಗಳನ್ನು ನಮ್ಮ ಕೈಯ್ಯಲ್ಲಿರುವ ಮೊಬೈಲ್ ಗ್ರಹಿಸಿದಾಗ ಮಾತ್ರ ನಮಗೆ ಮಾತು ಕೇಳಿಸುವುದು ಇಲ್ಲವಾದಲ್ಲಿ ಶಬ್ಧತರಂಗಗಳು ನಮ್ಮ ಸುತ್ತಿದ್ದರೂ ನಮಗದನ್ನು ಅರಿಯುವುದು ಸಾಧ್ಯವಿಲ್ಲ ದೇವತರಂಗಗಳೂ ಹೀಗೆಯೇ ನಮ್ಮ ಸುತ್ತಲೂ ಆವರಿಸಿವೆ ಸಾಧನೆಯಿಂದ ಇದನ್ನು ನಾವು ಅರಿಯಬಹುದು. ಜೀವಿಯು ಇಂದ್ರಿಯಾತೀತ ವಿಶ್ವಶಕ್ತಿಯನ್ನು ಗಳಿಸಿ ಕೊಳ್ಳಬಹುದು ಅತವಾ ಒಲಿಸಿಕೊಳ್ಳಬಹುದು ಎಂಬುದನ್ನು ನಮ್ಮ ಹಿರಿಯರು ಸಾಧಿಸಿ ತೋರಿಸಿದ್ದರು ಇಂತಹ ಅಪಾರ ಶಕ್ತಿ ಸಂಪನ್ನರಾದ ಮಹಾಮಹಿಮರನ್ನೇ ಅವತಾರ ಪುರುಷರು ದೈವಾಂಶಸಂಭೂತರು ಎಂದೆಲ್ಲಾಕರೆದಿದ್ದಾರೆ. ಪ್ರತಿಜೀವಿಯೂ ದೈವಾಂಶ ಸಂಭೂತನೇ ಆಗಿದ್ದಾನೆ ಆದರೆ ಆತಇದನ್ನು ಅರಿತುಕೊಂಡಿಲ್ಲ. ಯಾವಾತನು ಆತ್ಮ ಶಕ್ತಿಯನ್ನು ಅರಿತುಕೊಂಡಿದ್ದಾನೋ ಯಾವ ವ್ಯಕ್ತಿಯಲ್ಲಿ ದೈವಗುಣಗಳು ಪ್ರಕಟವಾಗಿದೆಯೋ ಅವರೇ ಮಹಾತ್ಮರೆನಿಸಿದ್ದಾರೆ. ಅತಿಹೆಚ್ಚು ದೈವಿಕ ಗುಣಗಳನ್ನು ಪ್ರಕಟಿಸಿದವರು ಅವತಾರಪುರುಷರೆಂದು ಪರಿಗಣಿಸಲ್ಪಟ್ಟಿದ್ದಾರೆ. ಶ್ರೀ ರಾಮಚಂದ್ರ , ಶ್ರೀ ಕೃಷ್ಣ ಇವರೆಲ್ಲಾ ಇಂತಹ ಮೇಲ್ಮಟ್ಟದ ಜೀವನವನ್ನು ಪ್ರಕಟಿಸಿ ಬದುಕಿ ಇಂದು ನಮಗೆಲ್ಲರಿಗೂ ದೇವರಾಗಿದ್ದಾರೆ.
ಇಂದಿನ ವಿಜ್ಞಾನವೂ ಮನುಷ್ಯನು ತನ್ನ ಮೆದುಳಿನ ಶಕ್ತಿಯ 10ಶೇ ಬಳಸಿದರೂ ಮಹಾವಿಜ್ಞಾನಿಯಾಗುತ್ತಾನೆಂದಿದೆ. ಎಂದಮೇಲೆ ನಾವು ನೋರುಶೇ ನಮ್ಮ ಶಕ್ತಿಯನ್ನು ಅರಿತರೆ ಅದು ದೈವ ಶಕ್ತಿಯೊಂದಿಗೆ ಅನುರಕ್ತಗೊಂಡಂತೆ ನಾವೂ ಅತಿಮಾನುಷಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಸತ್ಯ. ಇಂದೂ ಕೆಲವು ಪವಾಡಪುರುಷರು ಸಿದ್ದಿಪುರುಷರು ನಮ್ಮೆದುರು ಜೀವಿಸಿರುವುದನ್ನು ನೋಡುತ್ತೇವೆ ಅಂದರೆ ಇಂತಹವರು ವಿಶೇಷ ಸಾಧನೆಯಿಂದ ಅತಿಂದ್ರಿಯ ಶಕ್ತಿಗಳನ್ನು ಗಳಿಸಿಕೊಂಡಿರುತ್ತಾರೆ ಸಾಧನೆ ಮಾಡಿದಲ್ಲಿ ನಾವೂ ನೀವೂ ಇಂತಹ ಸಿದ್ದಿಯನ್ನು ಗಳಿಸಲು ಸಾಧ್ಯವಿದೆ. ಇಂತಹ ಸಾಧನಾ ಮಾರ್ಗವನ್ನು ತಿಳಿಸಿರುವುದು ಹಿಂದೂ ಧರ್ಮ ಮಾತ್ರ. ಹಿಂದೂ ಧರ್ಮಶಾಸ್ತ್ರದ ಅರವತ್ತನಾಲ್ಕು ವಿದ್ಯೆಗಳಲ್ಲಿ ಇವೆಲ್ಲವುಗಳ ರಹಸ್ಯ ಅಡಗಿದೆ. ಆದರೆ ನಾವು ಇಂದು ನಮ್ಮ ಮಕ್ಕಳನ್ನು ಕಾನ್ವೆಂಟ್ ಎಂಬ ವ್ಯಾಪಾರಕಲಿಸುವ ಕಾರ್ಖಾನೆಗೆ ಕಲಿಸಿ ಅಲ್ಲಿ ವಿದ್ಯೆಕಲಿಸುತ್ತಾರೆಂಬ ಭ್ರಮೆಯಿಂದ ಲಕ್ಷ ಕೋಟಿಗಳನ್ನು ಖರ್ಚುಮಾಡಿ ಮಾನವತೆ ಇಲ್ಲದ ಮನುಷ್ಯರೂಪದ ಹಣಮಾಡುವ ಯಂತ್ರಗಳನ್ನು ತಯಾರಿಸುತ್ತಿದ್ದೇವೆ. ಇಂತಹ ಪರದೇಶೀ ವಿದ್ಯೆಯಲ್ಲಿ ಬೆಳೆದ ಮಕ್ಕಳು ಗೋಭಕ್ಷಕರೂ ಮುಕ್ತ ವ್ಯಭಿಚಾರಿಗಳೂ ಹಾಗೂ ಮುದಿತಂದೆತಾಯಿಗಳನ್ನು ಮನೆಯಿಂದ ಹೊರಹಾಕಿ ಆಶ್ರಮಗಳಿಗೆ ಸೇರಿಸುವ ಕಟುಕರೂ ಆಗಿದ್ದು. ಮನುಷ್ಯ ಸಂಬಂಧದ ಭಾವನೆಗಳನ್ನು ಮರೆತು ಲಾಭನಷ್ಟದ ಲೆಕ್ಕಾಚಾರದಲ್ಲಿ ನಿರ್ಧಾರ ಮಾಡುವ ವ್ಯಾಪಾರಿಗಲಾಗಿದ್ದಾರೆ. ಹೀಗೆ ಆಂಗ್ಲಮಾಧ್ಯಮದಲ್ಲಿ ಕಲಿತು ವಿದೇಶೀ ಮತದ ಸಂಸ್ಕಾರ ಪ್ರೇರಿತರಾದವರಿಗೆ ಹೆಂಡತಿ ಕೇವಲ ಹೆಣ್ಣು, ಗಂಡ ಕೇವಲ ಗಂಡು. ದೇವರು ಮೂಢನಂಬಿಕೆ, ತಂದೆತಾಯಿಗಳು ತಲೆ ನೋವು. ಎನ್ನುವ ಮನಸ್ಥಿತಿ ಹೊಂದಿರುತ್ತಾರೆ. ನಾವಿಂದು ನಮ್ಮ ಶ್ರೇಷ್ಟ ಪರಂಪರೆಯ ಸಂಸ್ಕೃತಿಯ ಮೇಲಿನ ಅಧ್ಯಯನ ಜ್ಞಾನವಿಲ್ಲದೆ. ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ. ಸಂಸ್ಕೃತಿಯ ಮೇಲಿನ ನಂಬಿಕೆಯನ್ನು ಬಿಟ್ಟು ಮೂಢನಂಬಿಕೆಯಹಿಂದೆ ಬಿದ್ದಿರುವುದರಿಂದ ಇಂದು ವಿಡಂಬನೆಗೆ ಒಳಗಾಗುತ್ತಿದ್ದೇವೆ. ನಮ್ಮ ತೋರಿಕೆಯ ಆಚರಣೆಗಳೆಲ್ಲಾ ಇಂದು ಅಪಹಾಸ್ಯಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸವಾಗಿದೆ. ನಮ್ಮ ಮಕ್ಕಳಿಗೆ ನಮ್ಮ ಪ್ರಾಚೀನ ಪರಂಪರೆಯ ಶಿಕ್ಷಣ ನಿಕ್ಕರೆ ಪ್ರತಿ ಹಿಂದವಿನ ಮಗುವೂ ಮಹಾಪುರುಷನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಶಿವಾಜಿಯನ್ನು ಬೆಳೆಸಿದ ಜೀಜಾಮಾತೆಯೇ ಇದಕ್ಕೆ ಉತ್ತಮ ಉದಾಹರಣೆ.
ದೇವರಲ್ಲಿ ಸದ್ಗುಣ ಹಾಗೂ ದುರ್ಗುಣ ಎರಡೂ ಇದೆಯೇ?
ದೇವರು ಸಂತೃಪ್ತನಾದರೆ ಸುಖವನ್ನೂ ಅತೃಪ್ತನಾದರೆ ದುಖಃವನ್ನೂ ಕೊಡುತ್ತಾನೆಂಬುದಾಗಿ ನಾವು ನಂಬುತ್ತೇವೆ. ಅಂದರೆ ದೇವರಲ್ಲಿ ಒಳ್ಳೆಯಗುಣಗಳೂ ಇವೆ ಹಾಗೆಯೇ ಭೀಷಣಗುಣಗಳೂ ಇವೆ ಎಂಬುದನ್ನು ಒಪ್ಪಿದಂತೆಯೇ, ಪ್ರವಾಹಗಳು ಭೂಕಂಪಗಳು ಸುನಾಮಿ ಮಾರಣಾಂತಿಕ ಖಾಯಿಲೆಗಳು ಇವುಗಳು ಬಂದಾಗ ದೇವರಿಗೆ ಅಪಚಾರವಾಗಿದೆ ಆತಕೋಪಿಸಿಕೊಂಡು ಅಹಂಕಾರದಿಂದ ವರ್ತಿಸುವ ಮನುಷ್ಯನಿಗೆ ಬುದ್ದಿಕಲಿಸಲು ಹೀಗೆಲ್ಲಾ ಮಾಡುತ್ತಿದ್ದಾನೆ ಎನ್ನುತ್ತೇವೆ. ಸಂಕಟಬಂದಾಗ ವೆಂಕಟರಮಣ ಎನ್ನುವ ಮಾತು ಪ್ರಚಲಿತದಲ್ಲಿದೆ. ಹೀಗೆ ಪರಮಾತ್ಮನ ಒಳ್ಳೆಯಗುಣರೂಪಗಳೇ ದೇವರು ಅಥವಾ ದೇವತೆಗಳಾಗಿವೆ ಇಂತಹ ಸದ್ಗುಣ ಪ್ರಕಟಿಸಿ ಬದುಕಿದಾತನೇ ಅವತಾರಪುರುಷ, ಪ್ರತಿಯೊಬ್ಬವ್ಯಕ್ತಿಯೂ ಭಗವಂತನ ಸ್ವರೂಪವೇ ಆಗಿದ್ದಾನೆ ಅವನು ಒಳ್ಳೆಗುಣವನ್ನು ಉಪಾಸನೆ ಮಾಡಿದರೆ ಮಹಾಪುರುಷನೂ ಅವತಾರಪುರುಷನೂ ಆಗುತ್ತಾನೆ ಕೆಟ್ಟಗುಣಗಳನ್ನು ಪ್ರಕಟಿಸಿದರೆ ಉಪಾಸನೆ ಮಾಡಿದರೆ ಜೀವನದಲ್ಲಿ ಅಳವಡಿಸಿಕೊಂಡರೆ ಅಸುರನೂ ಪಾತಕಿಯೂ ನೀಚನೂ ಆಗುತ್ತಾನೆ. ಅಂತಹವರನ್ನು ರಾಕ್ಷಸರು ಎನ್ನುತ್ತೇವೆ.
ಹೀಗೆ ಉತ್ತಮಗುಣಗಳನ್ನು ಪ್ರಕಟಿಸಲು ಅಳವಡಿಸಿಕೊಳ್ಳಲು ಆಚರಿಸಲು ನಮ್ಮ ಹಿರಿಯರು ಹಾಕಿಕೊಟ್ಟದಾರಿಯೇ ನಮ್ಮೆಲ್ಲಾ ಸಂಪ್ರದಾಯ ಹಾಗೂ ಆಚಾರವಿಚಾರಗಳ ಸಂಸ್ಕೃತಿಯಾಗಿದೆ. ಹೋಮ ಹವನ ಯಜ್ಞ ,ಪೂಜೆಗಳು, ಭಜನೆ, ಧ್ಯಾನ, ಯೋಗ, ಸಂಗೀತ, ನೃತ್ಯ, ಕಲೆ, ತಪಸ್ಸು, ಹೀಗೆ ಅನೇಕ ದಾರಿಗಳನ್ನು ತೋರಿಸಿದ್ದಾರೆ ಈ ದೆಸೆಯಲ್ಲಿ ದೈವ ಚಿಂತನೆಯೊಂದಿಗೆ ಸಾಗುವ ಮಾರ್ಗವನ್ನು ಆಧ್ಯಾತ್ಮ ಮಾರ್ಗ ಎಂದಿದ್ದಾರೆ, ಈ ಮಾರ್ಗದಲ್ಲಿ ನಾವುತಲುಪುವ ಅಂತಿಮ ಗುರಿಯೇ ಮೋಕ್ಷವಾಗಿದೆ. ಅಂದರೆ ಪರಮ ಆನಂದ ವಾಗಿದೆ. ಅಂದರೆ ಮಾನವ ಶಕ್ತಿ ಸಂಪೂರ್ಣವಾಗಿ ದೈವಶಕ್ತಿಯಲ್ಲಿ ಲೀನ ಗೊಳ್ಳುವ ಅಂತಿಮ ಮಟ್ಟವಾಗಿದೆ. ಈ ಹಂತ ತಲುಪಿದ ಮನುಷ್ಯ ಸಾಕ್ಷಾತ್ ದೈವ ಸ್ವರೂಪದಂತೆ ಪ್ರಕಾಶಿಸುತ್ತಾನೆ. ಆತ ನೆನೆಸಿದ್ದು ಘಟಿಸುತ್ತದೆ ಅವನು ಹೇಳಿದ್ದು ನಡೆಯುತ್ತದೆ ಕೇವಲ ಸಂಕಲ್ಪಮಾತ್ರದಿಂದ ಆತ ಪ್ರಕೃತಿಯನ್ನು ನಿಯಂತ್ರಿಸುವಷ್ಟು ಶಕ್ತಿಸಂಪನ್ನನಾಗುತ್ತಾನೆ. ದೇಹತ್ಯಾಗದ ನಂತರ ಭಗವಂತನ ಸನ್ನಿಧಾನವನ್ನು ನೇರವಾಗಿ ಸೇರುತ್ತಾನೆ. ಎಂಬುದಾಗಿ ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಭಗವಂತ ವಿಶ್ವ ಚೇತನವಾದರೆ ಮನುಶ್ಯ ಅಣು ಚೇತನವಾಗಿದೆ ಅಣು ಚೇತನನು ಜ್ಞಾನ ಹಾಗೂ ಸಾಧನೆಯಿಂದ ವಿಶ್ವಚೇತನದ ಮಟ್ಟಕ್ಕೆ ಬೆಳೆದು ಎರಡೂ ಅನುರಕ್ತ ಗೊಂಡು ಲೀನವಾಗುವ ಸ್ಥಿತಿಯೇ ಮೋಕ್ಷವಾಗಿದೆ ದ್ವೈತಿಗಳು ಇದನ್ನು ಭಗವಂತನ ಅತೀಸಾಮೀಪ್ಯವನ್ನು ಹೊಂದುವುದು ಎನ್ನುತ್ತಾರೆ ನಂಬಿಕೆಯಂತೆ ಒಪ್ಪಬಹುದು. ಒಮ್ಮೆ ಈ ಹಂತವನ್ನು ತಲುಪಿದ ಅಣುಚೇತನರು ಮುಂದೆಂದೂ ಅಜ್ಞಾನದ ಬಂದಕ್ಕೆ ಒಳಪಡದೆ ನಿತ್ಯ ಆನಂದ ಸ್ವರೂಪರಾಗಿ ಬದುಕುತ್ತಾರೆ ಇದೇ ಮೋಕ್ಷವಾಗಿದೆ.
ಪುರಾಣ ಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ?
ನಮ್ಮ ಪುರಾಣ ಕಥೆಗಳಲ್ಲಿ ಬರುವ ಅದೃಷ್ಯರಾದರು, ಪ್ರತ್ಯಕ್ಷರಾದರು, ಅಶರೀರವಾಣಿ ಕೇಳಿಸಿತು, ಶಾಪಕೊಟ್ಟರು , ಶಾಪದಿಂದ ಅಹಲ್ಯೆ ಕಲ್ಲಾದಳು, ಯಜ್ಞದಿಂದ ಮಳೆಭರಿಸಿದರು,ಕೋಪದಿಂದ ನೋಡಿದಾಗ ಭಸ್ಮವಾದರು, ತಪಸ್ವಿಗಳು ಆಡಿದ ಮಾತು ಅಥವಾ ಕೊಟ್ಟ ಶಾಪ ಎಂದಿಗೂ ಸುಳ್ಳಾಗಲಾರದು ಎಂಬೆಲ್ಲಾ ಘಟನೆ ಗಳನ್ನು ನೊಡುತ್ತೇವೆ ಇದು ಸುಳ್ಳು ಎನ್ನುವಂತಿಲ್ಲ ಇಂದಿಗೂ ಸಾಧನೆ ಮಾಡಿದರೆ ಸಾಧಕರ ಮಾತಿನಂತೆಯೇ ಪ್ರಕೃತಿ ವರ್ತಿಸುವುದು ಸಾಧ್ಯವಿದೆ, ಇಂತಹ ಪ್ರಕೃತಿಯನ್ನು ದೈವಿಕ ಶಕ್ತಿಯನ್ನು ಒಲಿಸಿಕೊಳ್ಳುವ ರಹಸ್ಯವನ್ನು ಮಂತ್ರಗಳಲ್ಲಿ ಹುದುಗಿಸಿ ನಮ್ಮ ಹಿರಿಯರು ನಮಗೆ ನೀಡಿದ್ದಾರೆ ಇಂತಹ ಮಂತ್ರಸಿದ್ದಿಯಿಂದ ನಾವುಕೂಡಾ ಅತೀಂದ್ರಯವಾದುದನ್ನು ಸಾಧಿಸಬಹುದಾಗಿದೆ. ಕುಳಿತಲ್ಲಿಂದಲೇ ವಿಶ್ವವನ್ನು ನೋಡಬಹುದಾಗಿದೆ. ನೆನೆಸಿದಲ್ಲಿ ಕ್ಷಣ ಮಾತ್ರದಲ್ಲಿ ನಾವು ತಲುಪುವುದೂ ಸಾಧ್ಯವಿದೆ. ಇಂತಹ 64 ವಿದ್ಯೆಗಳು ಭಾರತೀಯ ಪರಂಪರೆಯಲ್ಲಿ ಇವೆ ಹಾಗೆಯೇ ಅಷ್ಠ ಸಿದ್ದಿಗಳೂ ಕೂಡಾ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಸಾಧಕರ ಕೊರತೆ ಇದೆ ಮತ್ತು ವಿದ್ಯೆಯನ್ನು ದರುಪಯೋಗ ಪಡಿಸಿಕೊಳ್ಳವ ನೀಚಜನರು ಅಧಿಕ ವಾಗಿದ್ದಾರೆ ಆದುದರಿಂದ ತಿಳಿದವರೂ ಅದನ್ನು ಇತರರಿಗೆ ಕಲಿಸುವ ಧೈರ್ಯ ಮಾಡುವುದಿಲ್ಲ.
ನೂರುವರುಷಗಳ ಹಿಂದೆ ನಮ್ಮ ಪುರಾಣಗಳಲ್ಲಿ ವರ್ಣಿಸಿದ ದೇವತೆಗಳು ವಿಮಾನದಲ್ಲಿ ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದರು ಎನ್ನುವ ಕಥೆ ಹಾಸ್ಯಾಸ್ಪದವಾಗಿತ್ತು. ಆದರೆ ಇಂದು ಸತ್ಯವಾಗಿದೆ. ಅಶರೀರವಾಣಿ ಕೇಳುತ್ತಿತ್ತು ಎಂದರೆ ಆಕಾಶದಿಂದ ಕೇಳುವ ಮಾತು ಯಾವುದೇ ಶರೀರ ಇಲ್ಲದೆ ಎಲ್ಲಿಂದಲೋ ಹೇಳಿದ ಮಾತು ಎಲ್ಲಿಯೋ ಇರುವವರಿಗೆ ಕೇಳುವುದು. ವಿಚಿತ್ರವಾಗಿತ್ತು ಇಂದು ಮೋಬೈಲ್ ದೂರವಾಣಿಯಿಂದ ಇದು ನಿಜವಾಗಿದೆ. ಅಮೇರಿಕಾದಿಂದ ಹೇಳಿದ ಮಾತು ನಮ್ಮ ಮನೆಯ ಜಗಲಿಯಲ್ಲಿ ಕೇಳುತ್ತದೆ. ವಿದುರ ಅರಮನೆಯಿಂದಲೇ ಯುಧ್ಧಭೂಮಿಯನ್ನು ನೋಡಿ ಯುದ್ಧದ ಗತಿಯನ್ನು ಧೃತರಾಷ್ಟ್ರನಿಗೆ ವಿವರಿಸಿದ ಎನ್ನುವ ಕಥೆ ವಿಚಿತ್ರವಾಗಿ ಕಂಡರೂ ಇಂದಿನ ಟೆಲಿವಿಷನ್ ಆ ಸಾಧ್ಯತೆಯನ್ನು ಸತ್ಯವಾಗಿಸಿದೆ ಎಲ್ಲೋ ಆಡುವ ಕ್ರಿಕೆಟ್ ಆಟ ಎಲ್ಲೋ ಮರುಭೂಮಿಯಲ್ಲಿ ನಡೆಯುವ ಯುದ್ಧವನ್ನು ನಾವು ಇಂದು ನೇರವಾಗಿ TV ಯಲ್ಲಿ ನೋಡುತ್ತಿದ್ದೇವೆ. ಧುರ್ಯೋಧನಾದಿಗಳನ್ನು ವ್ಯಾಸರು ನೂರು ಮಡಕೆಗಳಲ್ಲಿಟ್ಟು ಅದರಿಂದ ಮಕ್ಕಳಾಗಿ ಹೊರಬಂದರು ಎನ್ನುವ ಕಥೆಇದೆ ಇಂದು ಪ್ರಣಾಳ ಶಿಶುಗಳಮೂಲಕ ವಿಜ್ಞಾನಿಗಳು ಗರ್ಭದ ಹೊರಗೇ ಜೀವಸೃಷ್ಠಿಯನ್ನು ಮಾಡುವುದನ್ನು ಸಾಧ್ಯವಾಗಿಸಿದ್ದಾರೆ. ದ್ರೋಣರು ದೊನ್ನೆಯಲ್ಲಿ ಹುಟ್ಟಿದರು, ಅಗಸ್ತ್ಯರು ಮಡಕೆಯಲ್ಲಿ ಹುಟ್ಟಿದರು ಹೆಣ್ಣಿನ ಸಂಪರ್ಕವಿಲ್ಲದೆ ಹುಟ್ಟಿದವರು, ಕೇವಲ ಗಂಡಿನಿಂದಮಾತ್ರ ಹುಟ್ಟಿದವರು, ಕೇವಲ ಹೆಣ್ಣಿನಿಂದ ಹುಟ್ಟಿದವರು, ಯಜ್ಞದಿಂದ ಹುಟ್ಟಿದವರು ಎಂಬೇಲ್ಲಾ ಕಥೆ ಕೇಳುತ್ತೇವೆ ಇಂದು ತದ್ರೂಪಿ ಸೃಷ್ಟಿಯ ಮೂಲಕ ಹೆಣ್ಣಿನ ಅಗತ್ಯವೇ ಇಲ್ಲದೆ ಜೀವ ಸೃಷ್ಠಿಸಾಧ್ಯ ಎನ್ನುವುದನ್ನು ವಿಜ್ಞಾನ ಸಾಧಿಸಿದೆ ಕೇವಲ ಮನುಷ್ಯನ ಒಂದು ಜೀವಕಣದಿಂದ ಅವನಂತಹುದೇ ಇನ್ನೊಂದು ಜೀವಿಯನ್ನು ಸೃಷ್ಟಿಸುವುದು ಅಸಾಧ್ಯವಲ್ಲ ಎನ್ನುವುದು ಇಂದು ಸತ್ಯವಾಗಿದೆ. ಅದನ್ನು ಇಂದು ಅಂಗಾಂಶ ಕೃಷಿ ಎಂಬುದಾಗಿ ಕೃಷಿ ಇಲಾಖೆಯಲ್ಲಿ ಬಳಸಿಕೊಂಡಿದ್ದಾರೆ ಇದನ್ನು ಟಿಶ್ಯೂ ಕಲ್ಚರ್ ಎನ್ನುತ್ತಾರೆ. ಒಬ್ಬ ಮನುಷ್ಯನ ಜೀವ ಕಣಗಳಿಂದ ಅದೇರೂಪದ ಸಾವಿರಾರು ಜೀವಿಗಳನ್ನು ಇಂದಿನ ವಿಜ್ಞಾನದಿಂದ ಸೃಷ್ಟಿಸಬಹುದಾಗಿದೆ. ಇದು ಸತ್ಯವೆಂದ ಮೇಲೆ ಸಗರನಿಗೆ ಐವತ್ತು ಸಾವಿರ ಮಕ್ಕಳಿದ್ದರು ಎನ್ನುವ ಕಥೆ ಸುಳ್ಳು ಎನ್ನಲಾಗುವುದಿಲ್ಲ ಐವತ್ತು ಸಾವಿರ ಮಕ್ಕಳು ಹೇಗೆ ಹುಟ್ಟಿದರು ಎನ್ನುವುದನ್ನು ವಿವರಿಸಿಲ್ಲ ಆದರೂ ರಘುವಂಶದಲ್ಲಿ ಮಡಕೆಗಳಲ್ಲಿ ಅವರನ್ನು ಸಂಸ್ಕಾರ ಮಾಡಿ ಪಡೆಯಲಾಯಿತು ಎನ್ನುವ ಉಲ್ಲೇಖವನ್ನು ಸೂಚಿಸುತ್ತಾರೆ ಪ್ರತಿ ಹತ್ತು ಮಡಕೆಗಳಿಗೆ ಒಬ್ಬೊಬ್ಬರು ದಾಸಿಯರು ನೋಡಿಕೊಂಡರು ಎನ್ನುವ ಉಲ್ಲೇಖವಿರುವುದಾಗಿ ಉಪನ್ಯಾಸಕಾರರೊಬ್ಬರು ಉಲ್ಲೇಖಿಸಿದ್ದಾರೆ ಅಲ್ಲದೆ ಮಗುವಿನ ಜನನವಾಗುವಾಗ ಆಗುವ ರಕ್ತಸ್ರಾವದ ಪ್ರತಿಯೊಂದು ರಕ್ತಕಣದಲ್ಲಿಯೂ ಮಗುವನ್ನು ಪಡೆಯಲುಸಾಧ್ಯವಿದೆ ಎಂಬುದಾಗಿ ಒಂದುಕಡೆ ಹಿಂದೂ ಶಾಸ್ತ್ರಗಳಲ್ಲಿ ಉಲ್ಲೇಖವಿದೆ ಎಂಬೂದಾಗಿಯೂ ಪಂಡಿತರು ಪ್ರವಚನದಲ್ಲೊಮ್ಮೆ ಹೇಳಿದ್ದು ಕೇಳಿದ್ದೇನೆ. ಅಂದರೆ ಇಂದಿನ ವಿಜ್ಞಾನ ಕಂಡುಹಿಡಿದಿರುವ ತಂತ್ರಜ್ಞಾನ ಅಂದೇ ನಮ್ಮ ಋಷಿಮುನಿಗಳಿಗೆ ತಿಳಿದಿತ್ತು ಎನ್ನುವುದು ಸ್ಪಷ್ಠವಾಗುತ್ತದೆ. ಇಂದು ಅದಕ್ಕೆ ಸಾಕ್ಷಿಕೊಡಲಾಗದಿದ್ದರೂ ನಾವು ಅಭಿಮಾನ ಪಡಲು ಹಿಂಜರಿಕೆ ಬೇಕಿಲ್ಲ. ಬೇರೆಯವರ ಅಂಗಾಂಗವನ್ನು ಜೋಡಿಸುವ ಇಂದಿನ ವಿಜ್ಞಾನಕ್ಕೆ ಸವಾಲೋ ಎಂಬಂತೆ ನಮ್ಮ ಗಣಪತಿಯ ಕಥೆ ಇದೆ. ಇಂದಿನ ಎಷ್ಟೋ ಸಾಧ್ಯತೆಯನ್ನು ಅಂದೇ ಸಾಧಿಸಿರುವುದು ಭಾರತೀಯರ ಸಾಧನೆಯಾಗಿದೆ. ಆದರೆ ಅದನ್ನೆಲ್ಲಾನಾವಿಂದು ಮರೆತಿದ್ದೇವೆ. ನಮ್ಮವರ ಬಗ್ಗೆ ನಮಗೆ ಅನಾದರವಿದೆ ಗೊಡ್ಡುಸಂಪ್ರದಾಯವೆಂದು ಅಜ್ಞಾನದಿಂದ ತಿರಸ್ಕರಿಸುತ್ತಿದ್ದೇವೆ ಇದಕ್ಕೆಲ್ಲಾ ಧಾರ್ಮಿಕ ವೈಚಾರಿಕ ಜ್ಞಾನವಿಲ್ಲದೆ ಗೊಡ್ಡು ಸಂಪ್ರದಾಯವಾದಿಗಳೂ ಹಾಗೂ ಮೂರ್ಖ ಅಂಧಾಭಿಮಾನಿಗಳೂ ಕಾರಣರಾಗಿದ್ದಾರೆ. ಮಹಾಸ್ಪೋಟದಿಂದ ಸೃಷ್ಟಿಯಾಯಿತೆನ್ನುವ ಭಾರತೀಯರ ಸಿದ್ದಾಂತವನ್ನು ಇಂದು ವಿಜ್ಞಾನ ಒಪ್ಪುತ್ತಿದೆ. ಸೃಷ್ಟಿಯ ಶಬ್ಧ ಓಂಕಾರ ವೆನ್ನುವುದು ಇಂದು ನಾಸಾ ಕಂಡುಕೊಂಡಿದೆ. ಇಂದಿನ ಗಣಕ ಯಂತ್ರ (computer ) ಕ್ಕೆ ಅತ್ಯಂತ ಸೂಕ್ತ ಜಗತ್ತಿನ ಭಾಷೆ ಸಂಸ್ಕೃತವೆಂದು ಅಮೇರಿಕಾದ ವಿಜ್ಞಾನಿಗಳು ಒಪ್ಪಿದ್ದಾರೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸಂಸ್ಕೃತ ಕಲಿಯುವುದು ಕಡ್ಡಾಯವಾಗಿದೆ ಎಂದರೆ ಸಂಸ್ಕೃತದ ಮಹತ್ವದ ಅರಿವಾಗಬೇಕು. ಶಂಕರಾಚಾರ್ಯರ ಕಥೆಯಲ್ಲಿ ಪರಕಾಯ ಪ್ರವೇಷಮಾಡಿದರು ಎನ್ನುವ ಕಥೆ ಬರುತ್ತದೆ. ಇದು ಅಸಾಧ್ಯವಲ್ಲ ಎಂಬುದು ಸತ್ಯವಾಗಿದೆ. ಅಂತಚಕ್ಷುವಿನಿಂದ ಕುಳಿತಲ್ಲಿಂದಲೇ ಎಲ್ಲವನ್ನೂ ನೋಡಲು ಮನುಷ್ಯನಿಗೆ ಸಾಧ್ಯವಿದೆ . ಜಗತ್ತಿನ ಎಲ್ಲಿಯದೋ ಧ್ವನಿಯನ್ನು ಕೇಳುವುದು ಸಾಧ್ಯವಿದೆ ಎಲ್ಲಿಯೂ ಮಾಯವಾಗಿ ಎಲ್ಲಿಯೋ ಪ್ರತ್ಯಕ್ಷವಾಗುವುದು ಸಾಧ್ಯವಿದೆ. ಇವುಗಳನ್ನು ದೂರ ಶ್ರವಣ, ದೂರಗಮನ, ದೂರ ದರ್ಷನ ಎನ್ನಬಹುದು. ಯಾವುದೇ ಯಂತ್ರದ ಸಾಹಾಯವಿಲ್ಲದೆ ಕೇವಲ ಸಾಧನೆಯಿಂದ ನಮ್ಮ ಇಂದ್ರಿಯಗಳಿಂದಲೇ ಇವುಗಳನ್ನು ಸಾಧಿಸಬಹುದಾಗಿದೆ. ಇಂತಹ ಸಿದ್ದಿಯನ್ನು ಸಾಧಿಸಿಕೊಂಡವರೇ ಮಹಾಮಹಿಮರು ಅವತಾರ ಪುರುಷರು ಆಗಿದ್ದಾರೆ. ಇಂದಿಗೂ ನಮ್ಮ ದೇಶದಲ್ಲಿ ಸಾಂಪ್ರದಾಯಕ ಅಂಜನ ಹಾಕಿ ಎಲ್ಲಿಯೋ ಇರುವವರನ್ನು ತಿಳಿದು ಹೇಳುವ ಕ್ರಮ ಇರುವುದು ಸುಳ್ಳಲ್ಲ. ನಾಗ ಪಾದ್ರಿಗಳು ದರ್ಷನ ಪಾದ್ರಿಗಳು ಭೂಮಿಯಲ್ಲಿ ಹುದುಗಿರುವ ದೇವರ ವಿಗ್ರಹಗಳನ್ನು ಜಾಗಗಳನ್ನು ತೋರಿಸಿ ತೆಗೆಸುವುದನ್ನು ಇಂದೂ ನಾವು ನೋಡುತ್ತಿದ್ದೇವೆ. ಇವುಗಳಿಗೆ ವಿಕೃತವಾದಿಗಳಲ್ಲಿ ಉತ್ತರ ಇಲ್ಲ.
ದೇವರು ಎನ್ನುವ ವಿಷಯ
ಇದೊಂದು ತರ್ಕಕ್ಕೆ ನಿಲುಕದ ಕ್ಲಿಷ್ಟ ವಿಚಾರವಾಗಿದೆ. ಸಾತ್ವಿಕರೂ ಸಾಮಾನ್ಯರೂ ನಾಸ್ತಿಕರೂ ರಾಕ್ಷಸರೂ ಈ ಲೋಕದಲ್ಲಿ ಇದ್ದಾರೆ. ಜಗತ್ತಿನ 95 ಶೇಕಡಾ ಜನ ತಾವು ಒಂದು ಶಕ್ತಿಯ ನಿಯಂತ್ರಣದಲ್ಲಿದ್ದೇವೆಂಬುದನ್ನು ಒಪ್ಪುತ್ತಾರೆ. ಈ ಶಕ್ತಿಯನ್ನೇ ಅಥವಾ ಶಕ್ತಿಯ ಮೂಲವನ್ನೇ ದೇವರು ಎನ್ನಬಹುದು. ಲೋಕದಲ್ಲಿ ಎರಡು ಶಕ್ತಿಗಳು ನಮ್ಮ ಅನುಭವಕ್ಕೆ ಅಭಿವ್ಯಕ್ತವಾಗುತ್ತದೆ ಒಂದು ದೈವ ಶಕ್ತಿ ಇನ್ನೊಂದು ಅಸುರ ಶಕ್ತಿ ಇದನ್ನೇ positive and negative energy ಎಂಬುದಾಗಿ ಕರೆಯಬಹುದು. ಈ ಎರಡೂ ಗುಣಗಳ ಪ್ರಭಾವ ಲೋಕದಲ್ಲಿ ನಿರಂತರ ಇರುತ್ತದೆ ಒಮ್ಮೊಮ್ಮೆ ಒಂದೊಂದು ಶಕ್ತಿಯ ಪ್ರಭಾವ ಗೋಚರ ವಾಗುತ್ತದೆ ಪ್ರಕಟ ಗೊಳ್ಳುತ್ತದೆ. ಈ ಎರಡು ಗುಣಗಳ ಅಥವಾ ಶಕ್ತಿಗಳ ತಿಕ್ಕಾಟವನ್ನೇ ನಮ್ಮ ಪುರಾಣಗಳು ಪುಣ್ಯಕಥೆಗಳು ವಿವರಿಸಿ ಅಂತಿಮ ವಾಗಿ ಒಳ್ಳೆಗುಣ ಗೆಲ್ಲುತ್ತದೆ ಅಥವಾ ಉಳಿಯುತ್ತದೆ ಎನ್ನುವ ಅಂಶವನ್ನು ಪ್ರತಿ ಪಾದಿಸಿವೆ. ಈ ಶಕ್ತಿಯ ಮೂಲವೇ ಪರಮಾತ್ಮ ಅಥವಾ ದೇವರು ಎನ್ನಬಹುದು. ದೇವರನ್ನು ನಮ್ಮ ಪ್ರಾಚೀನ ಋಷಿಮುನಿಗಳು ನಿರಾಕಾರ ನಿರ್ಗುಣ ಸರ್ವವ್ಯಾಪಿ ಎಂದೆಲ್ಲಾ ಹೇಳಿದ್ದಾರೆ ಅಂದರೆ ದೇವರಿಗೆ ಆಕಾರವಿಲ್ಲ ಆದರೂ ಆತ ಎಲ್ಲ ಆಕಾರದಲ್ಲಿಯೂ ನೆಲೆಸಿದ್ದಾನೆ ಅವನಿಗೆ ಗುಣದೋಷಗಳಿಲ್ಲ ಆದರೆ ಎಲ್ಲಾಗುಣದೋಷಗಳಿಗೂ ಆತನು ಕಾರಣನಾಗಿದ್ದಾನೆ ಆತ ಸೂಕ್ಷ್ಮದಲ್ಲಿ ಸೂಕ್ಷನೂ ಮಹತ್ತರದಲ್ಲಿ ಅತಿಮಹತ್ತನೂ ಆಗಿದ್ದಾನೆ. ಅಂದರೆ ದೇವರು ಅಳತೆಗೆ ಯೋಚನೆಗೆ ನಿಲುಕದ ಶಕ್ತಿಯಾಗಿದೆ. ದೇವರನ್ನು ಶಕ್ತಿ ಅತವಾ ತತ್ವ ಎಂದು ನಾವು ಅರಿಯಬೇಕು. ಆತನಿಗೆ ವಿಭಿನ್ನ ರೂಪವು ಇಲ್ಲವಾಗಿದೆ ಆತ ಸಶರೀರಧಾರಿ ಯಲ್ಲ. ಹಾಗಾದರೆ ನಮ್ಮ ಪುರಾಣಗಳಲ್ಲಿ ವಿವರಿಸಿರುವ ದೇವರ ಅವತಾರ ಅಥವಾ ಹಲವಾರು ದೇವತೆಗಳ ಚಿತ್ರವಿಚಿತ್ರಕಥೆಗಳು ನಾವು ಆಚರಿಸುವ ದೇವರವಿಗ್ರಹಗಳು ಇವೆಲ್ಲಾ ವ್ಯರ್ಥವೇ ಸುಳ್ಳೇ ಎನ್ನುವ ಪ್ರಶ್ನೆಬರುವುದು ಸಹಜ. ಹಿಂದೂಗಳಲ್ಲಿ ದಾರ್ಮಿಕ ಶಿಕ್ಷಣದ ಕೊರತೆ ಇದೆ. ಜಿಜ್ಞಾಸುಗಳಿಗೆ ಮಾರ್ಗದರ್ಷಕರ ಕೊರತೆಇದೆ. ಪಂಡಿತರೆನಿಸಿಕೊಂಡವರು ಮತೀಯವಾದದಲ್ಲಿ ತೊಡಗಿಕೊಂಡಿರುತ್ತಾರೆ ಆದುದರಿಂದ ಸಮಾಜಕ್ಕೆ ಸರ್ವಸಮ್ಮತ ದಾರಿ ತೋರುವುದು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಕೊಡುವುದು ಇಂದಿನ ಅತೀ ಅಗತ್ಯ ಅವಷ್ಯಕಥೆಯಾಗಿದೆ.
ನಾವು ಸಮಾಜದ ಏಕತೆ ಹಾಗೂ ಸಾಮರಸ್ಯಕ್ಕಾಗಿ ದೇವರು ಒಬ್ಬನೇ ಎನ್ನುವ ವಿಚಾರಕ್ಕೆ ಬದ್ದರಾಗುವುದು ಅನಿವಾರ್ಯವಾಗಿದೆ. ಬಹುದೇವತಾರಾಧನೆಯಿಂದ ಏಕತೆಗೆ ಧಕ್ಕೆಯಾಗುವಸಂಬವ ಇದೆ. ಹಾಗಾದರೆ ಬಹುದೇವತಾರಾಧನೆಯನ್ನು ನಿಲ್ಲಿಸಬೇಕೇ ಎಂದು ಕೇಳಿದರೆ ಅದನ್ನು ನಿಲ್ಲಿಸಬೇಕಿಲ್ಲ ಇದು ನಮ್ಮ ಸಂಸ್ಕೃತಿಯಾಗಿದೆ ಬಹುದೇವತಾರಾಧನೆಯನ್ನು ನಾವು ಅನುಸರಿಸಿಕೊಂಡು ಹೋಗೋಣ ಆದರೆ ಎಲ್ಲಕಡೆಯಲ್ಲಿಯೂ ತತ್ವದಲ್ಲಿ ಏಕತೆಯನ್ನು ಕಾಣೋಣ. ಇದೇ ಉದ್ದೇಶದಿಂದಲೇ ಶಂಕರಾಚಾರ್ಯರು ಅದ್ವೈತವನ್ನು ಬೋಧಿಸಿದರು. ದೇವನೊಬ್ಬ ನಾಮಹಲವು “ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಚತಿ “ ಎನ್ನುವ ಮಾತು ಇಂದು ಅತೀ ಅವಶ್ಯವಾಗಿದೆ. ಎಲ್ಲರೂ ಇದನ್ನು ಅರಿತು ಬಾಳಬೇಕಾಗಿದೆ. ದೇವರಲ್ಲಿ ಎಲ್ಲಾಗುಣಗಳಿವೆ ಎಂದಾಗ ದೇವರಲ್ಲಿ ಕೆಟ್ಟಗುಣಗಳೂ ಇವೆಯೇ ಎನ್ನುವ ಪ್ರಶ್ನೆ ಬರುವುದು ಸಹಜವಾಗಿದೆ. ದೈವಿಕ ಅಸುರ ಎನ್ನುವ ಎರಡು ಶಕ್ತಿಗಳೂ ದೇವರಲ್ಲಿವೆಯೇ? ಎನ್ನುವ ಪ್ರಶ್ನೆಗೆ ನಾವು ಕೊಡಬಹುದಾದ ಉತ್ತರ ದೇವರಿಗೆ ಈಎರಡೂಗುಣಗಳಿಂದ ಬೇಧವಿಲ್ಲ ಆತನು ಸರ್ವಗುಣ ಪರಿಪೂರ್ಣನಾಗಿದ್ದಾನೆ ರಾತ್ರಿ ಹಗಲು ಗಳು ನಿರ್ಧಿಷ್ಠ ಸ್ಥಳದಲ್ಲಿ ನೆಲೆಸಿರುವ ಮನುಷ್ಯನಿಗೆ ಇದೆ ಆದರೆ ಸರ್ವವ್ಯಾಪಿಯಾದ ಭಗವಂತನಿಗೆ ರಾತ್ರಿಹಗಲು ಗಳೆಂಬ ಬೇಧವಿಲ್ಲ. ಇದು ಜೀವಿಗಳಿಗೆ ರಾತ್ರಿ ಹಗಲಾಗಿದೆಯೇ ಹೊರತು ದೇವರಿಗೆ ಅಲ್ಲ. ಸೂರ್ಯ ಎಂದೂ ಕಪ್ಪಾಗುವುದಿಲ್ಲ. ಹಾಗೆಯೇ ಕತ್ತಲೆ ಎನ್ನುವುದು ಜೀವಿಗಳಿಗೆ ಗೋಚರವಾಗುವ ಅನುಭವವೇ ಹೊರತು ದೇವರಿಗೆ ಕತ್ತಲೆಂಬುದು ಇಲ್ಲ ಹಾಗೆಯೇ ಒಳಿತು ಕೆಡುಕು ಗಳ ಭಾವನೆ ಜೀವಿಗಳಿಗಿದೆಯೇ ಹೊರತು ದೇವರಿಗಲ್ಲ ಸಮಗ್ರ ವಿಶ್ವದಲ್ಲಿದೇವರು ವ್ಯಾಪಿಸಿರುವಾಗ ಹುಟ್ಟು ಸಾವು ಎರಡಕ್ಕೂ ಆತನು ನಿಯಾಮಕನಾಗಿರುವಾಗ ದೇವರಿಗೆ ಪ್ರಕೃತಿಯಲ್ಲಿ ಜೀವಿಯ ಹುಟ್ಟು ಹಾಗೂ ಸಾವಿನಲ್ಲಿ ವಿಶೇಷವೇನೂ ಇಲ್ಲ ಇದು ಮನುಷ್ಯನಿಗೆ ಸಂತೋಷಕ್ಕೆ ಹಾಗೂ ದುಃಖಕ್ಕೆ ಕಾರಣ ವಾಗಬಲ್ಲುದೇಹೊರತು ದೇವರಿಗೆ ಅಲ್ಲ. ಆದುದರಿಂದ ಸಕಾರಾತ್ಮಕ (positive) ಹಾಗೂ ನಕಾರಾತ್ಮಕ (negative) ಎರಡರ ಮೂಲವೂ ಭಗವಂತನೇ ಆಗಿದ್ದರೂ ಬೇಧಕಾಣುವುದು ಜೀವಿಗೆಮಾತ್ರ ಇಂತಹ ಭಗವಂತನ ಸರ್ವಗುಣಗಳನ್ನು ಮನುಶ್ಯನು ತನ್ನದೃಷ್ಠಿಯಲ್ಲಿ ಎರಡುವಿಭಾಗದಲ್ಲಿ ಕಂಡಿದ್ದಾನೆ. ಹೇಗೆ ರಾತ್ರಿ ಹಗಲನ್ನು ವಿಭಾಗಿಸಿದ್ದಾನೋ ಹಾಗೆಯೇ ಕೆಟ್ಟದ್ದು ಒಳ್ಳೆಯದು, ಕಷ್ಟ ಸುಖ, ಸ್ವರ್ಗ ನರಕ ಮುಂತಾಗಿ ವಿಭಾಗಮಾಡಿಕೊಂಡಿದ್ದಾನೆ ಇದು ಕೇವಲ ಮನುಷ್ಯನ ಅನುಭವಕ್ಕೆ ಮಾತ್ರ ಬೇಧವಾಗಿದೆ ಭಗವಂತನಿಗೆ ಇಂತಹ ಬೇಧವಿಲ್ಲವಾಗಿದೆ. ಮನುಜನು ಜ್ಞಾನದಿಂದ ಇವೆಲ್ಲದನ್ನು ಮೀರಿದ ಸ್ಥಿತಿಯನ್ನುಗಳಿಸಿಕೊಳ್ಳುವುದನ್ನೇ ಮೋಕ್ಷ ಎನ್ನಬಹುದು. ನಿರಂತರ ದೈವಚಿಂತನೆಯಲ್ಲಿ ನಡೆಯುವಘಟನೆಗಳೆಲ್ಲವೂ ಭಗವದಿಚ್ಚೆ ಎಂಬ ಭಾವದಿಂದ ಕಷ್ಟ ಸುಖ ಲಾಭ ನಷ್ಟ ನೋವು ನಲಿವು ಎಲ್ಲದರಲ್ಲಿ ಏಕಬಾವವನ್ನು ಹೊಂದುವುದೇ ದೈವತ್ವ ವಾಗಿದೆ ಇಂತಹಸ್ಥಿತಿತಲುಪಿದ ಜ್ಞಾನವಂತರನ್ನು ಮಹಾಮಹಿಮರು ದೈವಾಂಶ ಸಂಭೂತರು ಅವತಾರ ಪುರುಷರು ಎಂದೆಲ್ಲಾಕರೆಯಲಾಗುತ್ತದೆ.
ಭಗವಂತನ ಶಕ್ತಿ ಸರ್ವರಿಗೂ ಏಕಪ್ರಕಾರ ಲಭ್ಯವಿದೆ ಅವನು ಯಾರಿಗೂ ಎಂದೂ ತಾರತಮ್ಯ ಮಾಡಲಾರನು ಆದರೆ ಅದನ್ನು ಅರಿಯಲು ಬುದ್ದಿ ಹಾಗೂ ಜ್ಞಾನದ ಅವಷ್ಯಕತೆ ಇರುತ್ತದೆ. ನೀರು ಗಾಳಿ ಬೆಳಕು ಬೆಂಕಿ ಇವೆಲ್ಲಾ ಭಗವಂತನ ಕೊಡುಗೆ ಯಾಗಿದೆ. ಇವುಗಳನ್ನು ದೇವರು ತನ್ನನ್ನು ನಂಬುವವರಿಗೆ ಉತ್ತಮವಾಗಿಯೂ ದೂರುವವರಿಗೆ ಕಡಿಮೆಯಾಗಿಯೂ ತಾರತಮ್ಯದಿಂದ ವಿತರಿಸಲಾರ ಈ ಪ್ರಕೃತಿ ಶಕ್ತಿಯು ಎಲ್ಲಾಕಡೆಯಲ್ಲಿಯೂ ಮನುಷ್ಯನಿಗೆ ಏಕಪ್ರಕಾರವಾಗಿಲಬ್ಯವಿದ್ದರೂ ಅದರ ಉಪಯೋಗ ಪಡೆಯುವಲ್ಲಿ ಮನಶ್ಯರಲ್ಲಿ ಅವರವರ ಬುದ್ದಿಗನುಗುಣ ವಾಗಿ ಭಿನ್ನತೆ ಇರುತ್ತದೆ. ದೇವರಿಗೆ ತಾರತಮ್ಯ ಮೇಲುಕೀಳೆಂಬ ಭಾವ ಇಲ್ಲ . ಜಗತ್ತಿನ ಪ್ರತಿಯೊಂದು ಸೃಷ್ಠಿಯ ಕಣವೂ ಅವನಿಗೆ ಏಕಪ್ರಕಾರವೇ ಆಗಿದೆ. ಭಗವಂತ ತನ್ನದೇ ಸೃಷ್ಠಿಯ ವಿಭಿನ್ನ ರೂಪಗಳಲ್ಲಿ ಗುಣಬೇಧಗಳನ್ನು ಹುಡುಕಲಾರ. ಆದುದರಿಂದ ದೇವರು ಇದ್ದಾನೆ. ಅವನು ವಿಶ್ವವ್ಯಾಪಿಯಾಗಿದ್ದಾನೆ. ಅವನು ಸರ್ವ ಶಕ್ತನಾಗಿದ್ದಾನೆ. ಅವನನ್ನು ನಾವು ಜ್ಞಾನದಿಂದ ಹಾಗೂ ಬುದ್ದಿಯಿಂದ ತಿಳಿಯಬಹುದು. ಅಜ್ಞಾನಿಗಳಿಗೆ ಅವನನ್ನು ಅರಿಯುವುದು ಸಾಧ್ಯವಿಲ್ಲ. ದೇವರು ತುಂಬಾಜನ ಇದ್ದಾರೆ ಅವರಿಗೆ ಹೆಣ್ಣು ಗಂಡು ಎನ್ನುವ ಲಿಂಗಬೇಧವಿದೆ. ಆತನಿಗೆ ಮದುವೆ ಮಕ್ಕಳು ಇವೆ. ಎನ್ನುವುದೆಲ್ಲಾ ನಾವು ಕಲ್ಪಿಸಿಕೊಂಡ ಚಿತ್ರಣ. ನಮ್ಮಂತೆಯೇದೇವರು ಎಂದು ಭಾವಿಸಿಕೊಂಡು ಆಚರಣೆಯಲ್ಲಿ ತಂದ ಸಂಸ್ಕೃತಿಯಾಗಿದೆಯೇ ಹೊರತು ಅದು ವಾಸ್ಥವ ವಾಗಿಲ್ಲ. ದೇವರು ನಾವು ಅವನಿಗೆ ಏನನ್ನು ಅರ್ಪಿಸುತ್ತೇವೆಯೋ ಅದನ್ನೇ ಆತ ಪ್ರಸಾದ ರೂಪದಲ್ಲಿ ಹಿಂದಿರುಗಿಸುತ್ತಾನೆ. ಹೇಗೆ ಬಿತ್ತಿದ ಬತ್ತ ಬೆಳೆದು ಗಿಡವಾಗಿ ನೂರಾಗಿ ನಮಗೆ ಸಿಗುವಂತೆ ನಾವು ಭಗವಂತನಲ್ಲಿ ಸದ್ಗುಣಗಳನ್ನು ಅರ್ಪಣೆಮಾಡಿದರೆ ಅದುವೇ ನೂರಾಗಿ ನಮಗೆ ಪ್ರಸಾದ ರೂಪದಲ್ಲಿ ಆತನಿಂದ ನೀಡಲ್ಪಡುತ್ತದೆ ಹಾಗೆಯೇ ದುರ್ಗುಣ ರೂಪವಾಗಿ ಅಹಂಕಾರದಿಂದ ಅರ್ಚಿಸಿದರೆ ದುರ್ಗುಣಗಳೇ ನಮಗೆ ನೀಡಲ್ಪಡುತ್ತವೆ, ನಾಮ್ಮ ಕೋರಿಕೆ ದೇವರ ಅನುಗ್ರಹದಿಂದ ಬಲ ಪಡೆಯುತ್ತದೆ ಆದುದರಿಂದಲೇ ಹಿರಿಯರು ಸದಾ ಸದ್ವಿಚಾರಗಳನ್ನೇ ಚಿಂತಿಸುತ್ತಿರಬೇಕೆಂದು ಹೇಳುತ್ತಿದ್ದರು ತತಾಸ್ಥುದೇವತೆಗಳು ಇರುತ್ತಾರೆ ಎನ್ನುವ ಮಾತು ಇದನ್ನೇ ಪುಷ್ಠೀಕರಿಸುತ್ತದೆ. ನಾನು ಒಳ್ಳೆಯದಾಗುತ್ತೇನೆನ್ನುವ ಚಿಂತನೆ ನಮ್ಮನ್ನು ಒಳ್ಳೆಯದು ಮಾಡಿದರೆ, ನಾನು ಹಾಳಾಗುತ್ತಿದ್ದೇನೆನ್ನುವ ಚಿಂತನೆ ನಮ್ಮನ್ನು ಹಾಳುಮಾಡುತ್ತದೆ. ಯದ್ಭಾವಂ ತದ್ಭವತಿ ಇದುವೇ will power ಎನಿಸಿಕೊಂಡಿದೆ ಇದನ್ನೇ ಸಂಕಲ್ಪಶಕ್ತಿ ಎನ್ನುತ್ತೇವೆ. ಸಂಕಲ್ಪ ಧೃಢವಾಗಿದ್ದರೆ ಏನನ್ನೂ ಸಾದಿಸಬಹುದು. ಭಗವದ್ಗೀತೆಯನ್ನು ಕೃಷ್ಣ ಹೇಳಲು ಕಾರಣ ಅರ್ಜುನಲ್ಲಿಯುದ್ಧಮಾಡುವ ಧೃಢಸಂಕಲ್ಪದ ಕೊರತೆ.
ಹಾಗಾದರೆ ಪುರಾಣಗಳು ಹೇಳುವ ದೇವತೆಗಳೆಲ್ಲಾಯಾರು? ಎನ್ನುವುದು ಪ್ರಶ್ನೆ.
ಮನುಷ್ಯ ತಾನು ಭಗವಂತನ ಶಕ್ತಿರೂಪಗಳನ್ನುತನಗೆ ಬೇಕಾಗಿ ವಿಬಾಗಿಸಿ ಅವುಗಳಿಗೆಲ್ಲಾ ವಿವಿಧ ಹೆಸರುಗಳನ್ನು ಕೊಟ್ಟು ದೇವತೆಗಳೆಂದು ಕರೆದ. ಭಗವಂತನ ಗೋಚರ ಶಕ್ತಿರೂಪಗಳು ಮುಖ್ಯವಾಗಿ ಬೆಳಕನ್ನು ನೀಡುವ ಸೂರ್ಯ, ಚಂದ್ರರು, ನೀರು, ಗಾಳಿ, ಬೆಂಕಿ, ಔಷಧಿಗಳು, ವನಸ್ಪತಿಗಳು, ಹುಟ್ಟು ಸಾವು ಮುಂತಾದುವಕ್ಕೆಲ್ಲಾ ದೇವರೇಕಾರಣವೆಂದು ಆತನ ಈ ಒಂದೊಂದು ಶಕ್ತಿಗೂ ಒಂದೊಂದು ಹೆಸರನ್ನುಕೊಟ್ಟು ಅವುಗಳನ್ನು ದೇವತೆಗಳೆಂದು ಹೆಸರಿಸಿದ. ಮನಸ್ಸಿನ ಸಂತೋಷಕ್ಕೆ ಕಾರಣರಾಗುವವರನ್ನು ದೇವತೆಗಳೆಂದೂ ಮನಸ್ಸಿನ ನೋವಿಗೆ ಕಾರಣವಾಗುವ ಶಕ್ತಿಗಳನ್ನು ರಾಕ್ಷಸರೆಂದೂ ಕರೆದ. ಹಾಗೂ ಗುರುತಿಸಿದ. ಹೀಗೆ ವಿಭಾಗಿಸಿ ಅಗ್ನಿ, ವಾಯು, ವರುಣ, ಯಮ, ಅಶ್ವಿನಿ ದೇವತೆಗಳು ಸೂರ್ಯ ಮುಂತಾದವರನ್ನೆಲ್ಲಾ ದೇವತೆಗಳೆಂದೂ ಇವರೆಲ್ಲರಿಗೂ ರಾಜ ಇಂದ್ರನೆಂದೂ ಹೆಸರಿಸಿದ. ಇವರಿಂದ ಆಗುವ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸಲು ಯಜ್ಞ ಯಾಗಾದಿಗಳನ್ನು ಆರಂಭಿಸಿದ. ಹೀಗೆ ಭಗವಂತನ ಉತ್ತಮಗುಣಗಳ ಪ್ರತಿನಿಧಿಗಳೇ ದೇವತೆಗಳೆಂದು ಕರೆಯಲ್ಪಟ್ಟರು. ಹೀಗೆಯೇ ಗ್ರಹಣ ಕಾಲದಲ್ಲಿ ಸೂರ್ಯ ಚಂದ್ರರನ್ನು ಮರೆಮಾಡುವವರು ರಾಕ್ಷಸರು ಎಂದು ಹೆಸರಿಸಿ ಅವರಿಗೆ ರಾಹು ಕೇತುಗಳೆಂದು ಹೆಸರಿಟ್ಟರು ಹಾಗೆಯೇ ತಾನು ಮಾಡುವ ಯಜ್ಞ ಯಾಗಗಳಿಗೆ ತೊಂದರೆ ಕೊಡುವವರನ್ನೆಲ್ಲಾ ರಾಕ್ಷಸರೆಂದು ಕರೆದರು.
ಜಗತ್ತಿನಲ್ಲಿ ಯಾವುದೇ ವಸ್ತುವನ್ನು ಅಥವಾ ಶಕ್ತಿಯನ್ನು ಸೃಷ್ಠಿಸಲು ಸಾಧ್ಯವಿಲ್ಲ ನಾಶಮಾಡಲೂ ಸಾಧ್ಯವಿಲ್ಲ ಅದನ್ನು ರೂಪಾಂತರಿಸಬಹುದಷ್ಟೇ ಇದು ಆಧುನಿಕ ಭೌತ ವಿಜ್ಞಾನಿಗಳೂ ಕಂಡುಕೊಂಡ ಸತ್ಯ mater cannot be create cannot be destroyed ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಇದನ್ನೇ ಹೇಳುತ್ತಾನೆ ಚಿಂತೆಗೆ ಕಾರಣ ವಿಲ್ಲ ಅರ್ಜುನ ಬರುವಾಗ ನೀನೇನನ್ನೂ ತಂದಿಲ್ಲ ಹೋಗುವಾಗ ನೀನೇನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಹಾಗೂ ನಮ್ಮ ಹಿರಿಯರೂ ಇದನ್ನು ಒಪ್ಪಿದ್ದಾರೆ. ಈ ಭೌತಿಕ ಜಗತ್ತು ಪಂಚಭೂತಗಳಿಂದಾಗಿದೆ ಎನ್ನುವುದು ನಮಗೆ ತಿಳಿದಿದೆ ಏನೇ ಆಗುವುದಿದ್ದರೂ ಈ ಪಂಚಭೂತಗಳಿಂದಲೇ ಆಗಬೇಕಿದೆ ಏನೇ ನಾಶವಾದಂತೆ ಕಂಡರೂ ಈ ಪಂಚ ಬೂತಗಳಲ್ಲಿಯೇ ಲೀನವಾಗುತ್ತದೆ ಅಥವಾ ರೂಪಾಂತರ ವಾಗುತ್ತದೆ. ಇದು ಭಗವಂತನ ನಿಯಮ. ಈ ಪಂಚಭೂತಗಳನ್ನು ಮೀರಿದ್ದು ಮನುಷ್ಯನಲ್ಲಿರುವ ಬುದ್ದಿ ಮನಸ್ಸು ಚಿತ್ತ ಅಹಂಕಾರಗಳು. ಇಂತಹ ಶಕ್ತಿಯನ್ನು ನಮ್ಮ ಸಂತೋಷಕ್ಕಾಗಿ ಹೇಗೆ ಬಳಸಬೇಕೆಂಬುದನ್ನು ಕಲಿಸಿಕೊಡುವುದೇ ನಮ್ಮ ಸಂಸ್ಕೃತಿ ಯಾಗಿದೆ ಸನಾತನ ಸಾಹಿತ್ಯ ಹಾಗೂ ಪರಂಪರೆ. ಸನಾತನ ಧರ್ಮದಲ್ಲಿ ಮನುಷ್ಯನ ಸಂತೋಷಕ್ಕೆ ಕಾರಣಗಳನ್ನು ಹುಡುಕುತ್ತಾ ಕಂಡುಕೊಂಡ ವಿಚಾರಗಳೇ ಧರ್ಮ ಶಾಸ್ತ್ರಗಳು ಹಾಗೂ ಧರ್ಮಗ್ರಂಥಗಳು. ವೇದ ಉಪನಿಷತ್ತು ಇತಿಹಾಸಗ್ರಂಥ ಹಾಗೂ ಪುರಾಣಗಳಾಗಿವೆ. ಸಂತೋಷಕ್ಕೆ ಕಾರಣವಾಗುವ ಇಂತಹ ಗುಣಗಳನ್ನು ಪ್ರತಿನಿಧಿಸುವ ಪಾತ್ರಧಾರಿಗಳು, ವ್ಯಕ್ತಿಗಳು ಅವರ ಜೀವನ ಇವುಗಳನ್ನೆಲ್ಲಾ ಆದರ್ಷವಾಗಿಟ್ಟುಕೊಂಡು ಇಂತಹ ಗುಣಗಳನ್ನು ಉತ್ಕೃಷ್ಟವಾಗಿ ಪ್ರಕಟಿಸಿದ ವ್ಯಕ್ತಿಗಳನ್ನು ಪಾತ್ರಗಳನ್ನು ದೇವತೆಗಳು ದೇವರು ದೇವರ ಅವತಾರ ಎಂಬುದಾಗಿಯೆಲ್ಲಾ ಹಿರಿಯರು ಗುರುತಿಸಿ ಕರೆದಿದ್ದಾರೆ. ನಮ್ಮ ಪ್ರತಿಯೊಂದು ದೇವತೆಗಳೂ ಭಗವಂತನ ಒಂದೊಂದು ವಿಷಿಷ್ಠಗುಣಗಳನ್ನು ಪ್ರತಿನಿಧಿಸುವವರಾಗಿದ್ದಾರೆ. ಇವರಿಗೆ ವಿರುದ್ಧವಾದ ಗುಣಗಳನ್ನೇ ಹೆಚ್ಚಾಗಿ ಪ್ರತಿನಿಧಿಸುತ್ತಿದ್ದವರನ್ನು ರಾಕ್ಷಸರು ಎಂಬುದಾಗಿಕರೆದಿದ್ದಾರೆ. ಹಾಗೂ ಗುರುತಿಸಿ ಹೆಸರಿಸಿದ್ದಾರೆ.
ಬದಲಾವಣೆ ಜಗದನಿಯಮ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಇದನ್ನು ಸನಾತನ ಧರ್ಮ ಒಪ್ಪಿದೆ ಹಾಗೂ ತನ್ನಲ್ಲಿ ಮುಕ್ತಮನಸ್ಸಿನಿಂದ ಅಳವಡಿಸಿಕೊಂಡಿದೆ ಆದುದರಿಂದ ಇಂದುಕೂಡಾ ನಾವು ಅಗತ್ಯವಿದ್ದ ವಿಷಯದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ತಪ್ಪಲ್ಲ. ಮೂಲದಲ್ಲಿ ಅಂದರೆ ನಾಗರೀಕತೆಯ ಆರಂಬದಲ್ಲಿ ಮನುಷ್ಯ ಮಾಂಸಾಹಾರಿಯೇ ಆಗಿದ್ದ. ನಮ್ಮ ಋಷಿಮುನಿಗಳ ಕಾಲದ ಕಥೆಗಳಲ್ಲಿ ಕೆಲವೆಡೆ ಕೆಲವರು ಮಾಂಸಾಹಾರಭಕ್ಷಣೆ ಮಾಡಿದ ವಿಚಾರ ತಿಳಿಯುತ್ತೇವೆ ಹಾಗೂ ಬಹುಪತ್ನಿತ್ವ ದೋಷವಾಗಿರಲಿಲ್ಲ. ನಂತರದಲ್ಲಿ ಸುಧಾರಣೆಯಹಂತದಲ್ಲಿ ಅವರೇ ಸರಿ ತಪ್ಪುಗಳನ್ನು ವಿಮರ್ಷಿಸಿ ಸಾಮಾಜಿಕ ಕಟ್ಟುಪಾಡುಗಳನ್ನು ಹಾಕಿಕೊಂಡು ಧರ್ಮ ಶಾಸ್ತ್ರಗಳನ್ನು ರಚಿಸಿಕೊಂಡು ಅದರನಿಯಮಗಳಿಗನುಗುಣವಾಗಿ ಬದುಕ ತೊಡಗಿದರು. ಯಾವುದು ಶ್ರೇಷ್ಠ ಎಂಬುದನ್ನು ಸಾರಿದರು. ಹೀಗೆ ಮೌಲ್ಯಗಳಿಗೆ ಮಹತ್ವ ಕೊಟ್ಟರು ಆದರೂ ಅಭ್ಯಾಸದಿಂದ ಬಂದಿದ್ದನ್ನು ಖಡ್ಡಾಯವಾಗಿ ನಿಷೇಧಿಸಿ ನಿಯಂತ್ರಿಸುವ ಕೆಲಸ ಮಾಡಲಿಲ್ಲ ಏಕೆಂದರೆ ಬಲಾತ್ಕಾರದಿಂದ ಯಾವುದನ್ನೂ ತಡೆಯಲು ಅಥವಾ ಹೇರಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಅರಿತಿದ್ದರು. ಆದುದರಿಂದ ಮೌಲ್ಯಗಳನ್ನು ಪ್ರತಿಪಾದಿಸಲು ಜನರಿಗೆ ಅನುಕರಿಸಲು ಅನುಸರಿಸಲು ಸುಲಭವಾಗುವಂತೆ ಆ ಕಾಲದಲ್ಲಿ ಉನ್ನತ ಮೌಲ್ಯಗಳೋಂದಿಗೆ ಬದುಕಿದ ವ್ಯಕ್ತಿಗಳ ರಾಜರುಗಳ ಬದುಕನ್ನು ಗ್ರಂಥಗಳಲ್ಲಿ ರಚಿಸಿ ಮಾನವೀಯ ಸಾಮಾಜಿಕ ಮೌಲ್ಯಗಳನ್ನು ಅದರಲ್ಲಿ ಪ್ರತಿಪಾದಿಸಿದರು ಅದಕ್ಕೆ ಅಗತ್ಯವಿದ್ದ ಪಾತ್ರಗಳನ್ನು ಸೃಷ್ಠಿಸಿದರು ಸಮಾಜದ ಎಲ್ಲಾವರ್ಗದ ಜನಜೀವನ ಮಾನಸಿಕತೆ ಅವರ ಬದುಕು ಸುಖ ಕಷ್ಟ ಗಳು ಮುಂತಾದ ಎಲ್ಲಾವಿಚಾರವನ್ನೂ ಕಥೆಗಳಲ್ಲಿ ತುಂಬಿಸಿ ನಮಗೆ ಹೇಳಿದರು ಇಂತಹ ಕಥೆಗಳಲ್ಲಿ ಮುಖ್ಯವಾಗಿ ಜನಜೀವನದ ಮೇಲೆ ಅತಿಯಾದ ಪ್ರಭಾವ ಬೀರಿರುವುದು ರಾಮಾಯಣ ಹಾಗೂ ಮಹಾಭಾರತಗಳಾಗಿವೆ ಇವುಗಳು ಕೆಟ್ಟ ಹಾಗೂ ಒಳ್ಳೆಯ ಗುಣಗಳನ್ನು ಸ್ಪಷ್ಠವಾಗಿ ಜನರಿಗೆ ಅರಿಯಲು ಹಾಗೂ ಅನುಕರಿಸಲು ಯೋಗ್ಯವಾಗುವಂತ ಶ್ರೇಷ್ಠಕೃತಿಯಾಗಿವೆ. ಇವು ಭಾರತೀಯರ ಹಾಗೂ ವಿಶ್ವ ಮಾನವರಲ್ಲಿ ಅಚ್ಚಳಿಯದೆ ತಮ್ಮ ಪ್ರಬಾವವನ್ನು ಬೀರಿವೆ. ಹಾಗೆಯೇ ಮುಂದೆ ಪುರಾಣಗಳೂ ರಚಿಸಲ್ಪಟ್ಟು ವಿಗ್ರಹಾರಾಧನೆ ಆರಂಭವಾದನಂತರ ಆಗಮಶಾಸ್ತ್ರಗಳೂ ವಾಸ್ತುಶಾಸ್ತ್ರಗಳೂ ರಚಿಸಲ್ಪಟ್ಟು ಅವುಗಳ ತಳಹದಿಯಮೇಲೆ ನಮ್ಮ ಸಂಸ್ಕೃತಿ ಕಲೆ ನೃತ್ಯ ಸಂಗೀತ ಇವೆಲ್ಲವೂ ಬೆಳೆಯಿತು.
ಇಲ್ಲಿ ಜನರಿಗೆ ರಾಮಾಯಣ ಮಹಾಭಾರತಗಳು ಸತ್ಯಘಟನೆಗಳೋ ಅಥವಾ ಕಾಲ್ಪನಿಕ ಕಥೆಯೋ ಎನ್ನುವ ಜಿಜ್ಞಾಸೆಬರುವುದು ಸಹಜ ನಾವು ಇವುಗಳುಸತ್ಯಘಟನೆಗಳೆಂದೇ ಒಪ್ಪಬೇಕು ಯಾಕೆಂದರೆ ಇವುಗಳನ್ನು ಇತಿಹಾಸಗ್ರಂಥಗಳು ಎಂದು ಗುರುತಿಸಿದ್ದಾರೆ. ಆದರೆ ಇಲ್ಲಿ ಬರುವ ಪ್ರಮುಖಪಾತ್ರಧಾರಿಗಳು ಈ ನೆಲದಲ್ಲಿ ಜೀವಿಸಿದ್ದುಸತ್ಯವಾಗಿದ್ದರೂ ಕೂಡಾ ಹೇಗೆ ಕಾವ್ಯದಲ್ಲಿ ವಿವರಿಸಲಾಗಿದೆ ಹಾಗೆಯೇ ಯತಾವತ್ತಾಗಿ ಎಲ್ಲಾಘಟನೆಗಳು ವರ್ಣನೆಗಳು ನಡೆದಿವೆ ಎಂದು ನಾವು ಒರಟು ವಾದಮಾಡಬೇಕಾಗಿಲ್ಲ ಮುಖ್ಯ ಘಟನೆಗಳನ್ನು ಆಧರಿಸಿ ಕವಿ ಅಥವಾ ಋಷಿಗಳು ತಮ್ಮ ಕಾವ್ಯಚಾತುರ್ಯದಿಂದ ಕೃತಿಯನ್ನು ರಚಿಸಿರುತ್ತಾರೆ ಎನ್ನುವುದು ಹೆಚ್ಚು ಒಪ್ಪಲು ಪ್ರಶಸ್ತವಾದ ಸಂಗತಿಯಾಗಿದೆ ಯಾವೆಲ್ಲಾವಿಚಾರಗಳು ಅಸಾಮಾನ್ಯ ಅಥವಾ ಸ್ವಾಭಾವಿಕತೆಗೆ ವಿರುಧ್ಧವಾಗಿ ಗೋಚರಿಸಿದರೆ ಅದಕ್ಕೆಲ್ಲಾ ಸಮರ್ಥನೆಕೊಟ್ಟು ಅದು ಸತ್ಯ ಎಂದು ವಾದಿಸಿ ನಗೆಪಾಟಲಿಗೀಡಾಗುವ ಬದಲು ಒಪ್ಪಲು ಸೂಕ್ತವಾಗಿರುವುದೆಲ್ಲಾಸತ್ಯವೆಂದು ಒಪ್ಪಿ ಅದಕ್ಕೆ ಕಷ್ಟವಾಗುವ ವಿಷಯದಲ್ಲಿ ಆ ಸನ್ನಿವೇಷದ ತತ್ವವನ್ನು ಗ್ರಹಿಸಿ ಘಟನೆಯನ್ನು ಕವಿಯ ಸೃಷ್ಟಿ ಎಂದು ಒಪ್ಪಿದರೆ ನಮಗೆ ಯಾವುದೇ ತೊಂದರೆ ಇರುವುದಿಲ್ಲ. ಆದುದರಿಂದ ರಾಮಾಯಣ ಮಹಾಭಾರತಗಳು ನಡೆದಘಟನೆಗಳನ್ನು ಆಧರಿಸಿ ಕವಿ ತನ್ನ ಕೌಶಲ್ಯದಿಂದ ರಚಿಸಿದ ಕಾವ್ಯವಾಗಿದೆ ಎಂದು ನಾವು ಬಲವಾಗಿ ಪ್ರತಿಪಾದಿಸಬಹುದು. ಇಲ್ಲಿನ ಕತೆಗಿಂತಲೂ ಕತೆಯಲ್ಲಿನ ಸಂದೇಶ ಹಾಗೂ ಮೌಲ್ಯಗಳು ಮುಖ್ಯವಾಗಬೇಕು. ಅತಿಮಾನುಷ ಎನ್ನುವ ಕತೆಬಂದಲ್ಲಿ ನಾವು ಮೌಲ್ಯಪ್ರತಿಪಾದನೆಗೆ ಒತ್ತುಕೊಡಬೇಕು. ಗ್ರಂಥಗಳಲ್ಲಿ ಕೆಲವು ಉತ್ಪ್ರೇಕ್ಷೆಯೂ ಕೆಲವು ಕಲ್ಪನೆಯೂ ಸೇರಿಸಲ್ಪಟ್ಟಿರಬಹುದು. ವರ್ಣಿಸಲ್ಪಟ್ಟಿರಬಹುದು. ಎಂದುಕೊಂಡಾಗ ನಮಗೆ ಪ್ರತಿಪಾದನೆ ಕಷ್ಟವಾಗುವುದಿಲ್ಲ. ನಮ್ಮ ಎಲ್ಲಾ ಶಾಸ್ತ್ರಗಳಲ್ಲಿ ಹಾಗೂ ಕಥೆ ಪುರಾಣಗಳಲ್ಲಿ ವಿಷಯಕ್ಕೆ ಮಹತ್ವಕೊಡುವುದಕ್ಕಿಂತಲೂ ಅದರಲ್ಲಿನ ವಿಚಾರ ಅಥವಾ ತತ್ವಕ್ಕೆ ಮಹತ್ವಕೊಡುವುದೇ ನಮ್ಮ ಹಿರಿಯರ ಋಷಿಮುನಿಗಳ . ಉದ್ದೇಶವಾಗಿದೆ ಪಂಚತಂತ್ರದಲ್ಲಿ ಪ್ರಾಣಿಗಳನ್ನು ಬಳಸಿಕೊಂಡು ಕಥೆರಚಿಸಲಾಗಿದೆ. ಇಲ್ಲಿ ತತ್ವವೇ ಮುಖ್ಯವಾಗಿದೆ. ಆದರೆ ನಾವಿಂದು ಮೌಢ್ಯದಿಂದ ತತ್ವರಹಿತವಾದ ಮೌಲ್ಯರಹಿತವಾದ ಆಡಂಬರದ ಆಚರಣೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಇದಕ್ಕೆ ಕಾರಣ ಹಿಂದುಗಳಲ್ಲಿ ಸರಿಯಾದ ಮಾರ್ಗದರ್ಷಕರ ಕೊರತೆ ಹಾಗೂ ಧಾರ್ಮಿಕ ಶಿಕ್ಷಣದ ಕೊರತೆ ಹಾಗೂ ವಿಕೃತವಾದಿಗಳ ದುರ್ಭೋಧೆ ಅಲ್ಲದೆ ಸಂಪ್ರದಾಯವಾದಿಗಳ ಮೂರ್ಖತನವೇ ಕಾರಣವಾಗಿದೆ. ನಾವು ಇದರಿಂದ ಹೊರಬರಬೇಕಿದೆ.
ಆದರೆ ಪುರಾಣಗಳನ್ನು ನಮ್ಮ ಹಿರಿಯರು ಎಂದೂ ಇತಿಹಾಸ ಎಂದು ಹೇಳಿಲ್ಲ ಆದುದರಿಂದ ಪುರಾಣಗಳು ತತ್ವಪ್ರತಿಪಾದನೆಗೆಗಾಗಿ ರಚಿಸಿದ ಕಥೆಗಳೆ ಆಗಿವೆ ಎಂದು ನಾವು ಪ್ರಭಲವಾಗಿ ಒಪ್ಪಬಹುದು. ಇದನ್ನು ನಾವು ಸತ್ಯ ಘಟನೆಗಳನ್ನಾಧರಿಸಿದ್ದು ಎಂದು ವಾದಮಾಡುವುದು ತಪ್ಪಾಗುತ್ತದೆ ಮಾಡಿದರೂ ಅದನ್ನು ಸಮರ್ಥಿಸುವಲ್ಲಿ ಸೋಲುತ್ತೇವೆ ಸಾಕಷ್ಟು ಕಡೆಗಳಲ್ಲಿ ವಿರೋಧಾಭಾಸದ ಕತೆಗಳನ್ನು ನಾವು ನೋಡುತ್ತೇವೆ. ಇಂತಹ ಸಮಯದಲ್ಲಿ ಸಮಾಜಕ್ಕೆ ಒಳಿತಾಗುವುದನ್ನು ಆಯ್ಕೆಮಾಡಿಕೊಳ್ಳಬೇಕು. ಅಂದಿನ ಕಾಲದ ಸಾಮಾಜಿಕ ಜನಜೀವನದ ರೀತಿರಿವಾಜುಗಳನ್ನು ಬಳಸಿಕೊಂಡು ಸಾಮಾನ್ಯಜನರಿಗೆ ಜೀವನಮೌಲ್ಯವನ್ನು ತಿಳಿಸಲು ಮನಸ್ಸಿನಲ್ಲಿ ನೆನಪಿರುವಂತೆ ಉಳಿಸಲು, ರಂಜನೀಯಾಗಿ ರಚಿಸಲ್ಪಟ್ಟ ಕಥೆಗಳೇ ಪುರಾಣಗಲಾಗಿವೆ ಎನ್ನುವುದು ಹೆಚ್ಚುಸೂಕ್ತ.
ಮನುಷ್ಯ ಜೀವನದಲ್ಲಿ ಸುಖ ಹಾಗೂ ಸಂತೋಷವನ್ನು ಬಯಸುತ್ತಾನೆ ಈ ಸ್ಥಿತಿಯನ್ನೇ ಸ್ವರ್ಗ ಎನ್ನಬಹುದು. ಆದುದರಿಂದಲೇ ಶಾಶ್ವತ ಸಂತೋಷಕ್ಕೆ ನಮ್ಮ ಹಿರಿಯರು ದಾರಿಹುಡುಕ ತೊಡಗಿ ಹಲವಾರು ಮಾರ್ಗಗಳನ್ನು ನೀಡಿದರು ಅಂತೆಯೇ ದುಖಃವೇ ನರಕವಾಗಿದೆ ಇದಕ್ಕೆ ಕಾರಣವೇನು ಪರಿಹಾರವೇನು ಎನ್ನುವ ಜಿಜ್ಞಾಸೆಯಿಂದ ಧುಃಖದ ನಿವಾರಣೆಗಾಗಿಯೂ ಪ್ರಯತ್ನಿಸತೊಡಗಿದರು ಈ ಪ್ರಯತ್ನದಲ್ಲಿಯೇ ಅನೇಕ ವಿಚಾರಗಳು ಶೋಧಿಸಲ್ಪಟ್ಟು ಅನೇಕ ಗ್ರಂಥಗಳು ಪ್ರಚಲಿತಕ್ಕೆ ಬಂದುವು ಇವೆಲ್ಲದರಮೊತ್ತವೇ ಅಪಾರ ಜ್ಞಾನರಾಷಿಯಾದ ವೇದಗಳು ಉಪನಿಷತ್ತುಗಳು ಆಗಿವೆ. ಇವುಗಳ ಅಗತ್ಯವನ್ನು ಈಡೇರಿಸುವ ಉದ್ದೇಶದಿಂದಲೇ ವಿಶಾಲ ಸಂಸ್ಕೃತಿ ಜನ್ಮತಾಳಿ ಭಾರತದ ನೆಲದಲ್ಲಿ ಬೆಳೆದು ಬಂದಿತು.
ಸನಾತನ ಸಂಸ್ಕೃತಿ ಅಥವಾ ಸನಾತನ ಧರ್ಮ ಎನ್ನುವುದು ಎಂದೂ ನಿಂತ ನೀರಾಗಿಲ್ಲ ಇದು ಎಲ್ಲಾಸಮಯದಲ್ಲಿಯೂ ಉತ್ತಮವಾದುದನ್ನು ಶೋಧಿಸುತ್ತಾ ತನ್ನಲ್ಲಿ ಅಳವಡಿಸಿಕೊಳ್ಳುತ್ತಾ ತನ್ನ ಸಂಪರ್ಕಕ್ಕೆ ಬಂದವರಿಗೆಲ್ಲಾ ಇದರ ಸವಿಯನ್ನು ಉಣಿಸುತ್ತಾ ಬೆಳೆದು ಬಂದ ಧರ್ಮವಾಗಿದೆ. ಆದುದರಿಮದಲೇ ಹಿಂದೂ ಧರ್ಮಕ್ಕೆ ಒಬ್ಬಮೂಲಪುರುಷನೂ ಅಥವಾ ಒಬ್ಬನೇ ದೇವತೆಯೂ ಸೀಮಿತವಾಗಿ ಇಲ್ಲ. ಇಲ್ಲಿ ಧರ್ಮಾಚರಣೆಗೆ ಮುಕ್ತ ಸ್ವಾತಂತ್ರ್ಯವಿದೆ. ಯಾರದ್ದೋ ಅಭಿಪ್ರಾಯವನ್ನು ಒತ್ತಾಯಪೂರ್ವಕವಾಗಿ ಆಮಿಷದಿಂದ ಅಥವಾ ಬಲಾತ್ಕಾರದಿಂದ ಹೇರಲಾಗುವುದಿಲ್ಲ. ಪ್ರತಿಯೊಬ್ಬನ ಬುದ್ದಿಗೂ ತಿಳುವಳಿಕೆಗೂ ಗೌರವನೀಡಲಾಗುತ್ತದೆ ವ್ಯಕ್ತಿ ತನ್ನ ಜ್ಞಾನದಿಂದ ಅರಿತು ಆಚರಿಸುವ ಸತ್ಯವನ್ನು ಗೌರವಿಸಲಾಗುತ್ತದೆ. ಉತ್ತಮವಾದುದನ್ನು ಬೋಧಿಸಲಾಗುತ್ತದೆ ಆದರೆ ಅದನ್ನು ಹೇರಲಾಗುವುದಿಲ್ಲ. ಇದೇ ಸನಾತನ ಧರ್ಮದ ಹೆಗ್ಗಳಿಕೆ ಯಾಗಿದೆ. ಎಲ್ಲಿ ಕಟ್ಟುಪಾಡುಗಳು ಹೆಚ್ಚಿರುತ್ತದೆಯೋ ಎಲ್ಲಿ ನಮ್ಮಬೌಧ್ಧಿಕ ವಿಕಾಸಕ್ಕೆ ಬೇಲಿಹಾಕಲಾಗುತ್ತದೆಯೋ ಎಲ್ಲಿ ಸ್ವತಂತ್ರವಿಚಾರಗಳಿಗೆ ನಿರ್ಭಂದ ವಿರುತ್ತದೆಯೋ ಅಂತಹ ಸ್ಥಳದಿಂದ ತಪ್ಪಿಸಿಕೊಳ್ಳಲು ಜನ ಹಾತೊರೆಯುತ್ತಿರುತ್ತಾರೆ. ಯಾವ ಮತದಲ್ಲಿ ನೈತಿಕತೆಯ ಕೊರತೆ ಇರುವುದೋ ಯಾವ ಮತ ಸಾಂಸ್ಕೃತಿಕ ಬಡತನ ಹೊಂದಿರುವುದೋ ಅಂತಹ ಮತಗಳು ದೀರ್ಘಾವಧಿಯಲ್ಲಿ ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತವೆ. ಅಥವಾ ಉಳಿಸಿಕೊಳ್ಳಲಾಗುವುದಿಲ್ಲ. ವೈಚಾರಿಕ ಕೊರತೆಯಿಂದ ನರಳುತ್ತವೆ. ಅಭದ್ರತೆಯ ಭಯದಿಂದ ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಅಸ್ಥಿತ್ವ ಉಳಿಸಿಕೊಳ್ಳಲು ಅನೈತಿಕ ದಾರಿಯನ್ನು ಅನುಸರಿಸುತ್ತವೆ ಆಮಿಶ ಬಲಪ್ರಯೋಗ ಹಿಂಸೆಮುಂತಾದ ಮಾರ್ಗವನ್ನು ಹಿಡಿಯುತ್ತವೆ ಇದಕ್ಕೆ ಉತ್ತಮ ಉದಾಹರಣೆ ಭಾರತದಲ್ಲಿ ಇರುವ ಕ್ರೈಸ್ಥ ಹಾಗೂ ಇಸ್ಲಾಂ ಮತಗಳಾಗಿವೆ. ಸಾಂಸ್ಕೃತಿಕ ಬಡತನ ನೈತಿಕತೆಯ ಕೊರತೆ ವೈಚಾರಿಕತೆಗೆ ಅವಕಾಶವಿಲ್ಲದ ಧರ್ಮಗ್ರಂಥ ಹಾಗೂ ಒತ್ತಾಯಪೂರ್ವಕವಾಗಿ ಹೇರುವ ಕಟ್ಟಳೆಗಳು ಮುಂತಾದುವುಗಳಿಂದ ಅಸ್ಥಿತ್ವ ಕಳೆದುಕೊಳ್ಳುವ ಭಿತಿಯಲ್ಲಿ ಮತಾಂತರಕ್ಕೆ ಮುಂದಾಗುತ್ತಿವೆ. ಮತಾಂತರ ವಾದವರನ್ನು ಹಿಡಿದಿಟ್ಟುಕೊಳ್ಳಲಾಗದ ಸಾಂಸ್ಕೃತಿಕ ದಾರಿದ್ರ್ಯ ದಿಂದಾಗಿ ಇಸ್ಲಾಂ ತನ್ನ ಅನುಯಾಯಿಗಳನ್ನು ಭಯದಿಂದ ಹಿಡಿದಿಟ್ಟರೆ. ಕ್ರೈಸ್ತಮಿಶನರಿಗಳು ಹಿಂದೂಗಳಸಂಸ್ಕೃತಿಯನ್ನೇ ಅನುಕರಿಸಲು ಶುರು ಮಾಡಿವೆ ಚರ್ಚುಗಳೆಲ್ಲಾ ದೇವಾಲಯಗಳೂ ಅಲ್ಲಿ ಬಲಿಪೂಜೆ ತೀರ್ಥ ಪ್ರಸಾದ ವಿತರಣೆಗಲೂ ನಡೆಯಲಾರಂಭಿಸಿದೆ ಧ್ವಜಸ್ಥಂಭಗಳಜಾಗಲ್ಲಿ ಬಲಿಕಂಬಗಳನ್ನು ನಿಲ್ಲಿಸಲಾಗುತ್ತಿದೆ. ಮುಗ್ಧ ಅಮಾಯಕ ಜನರನ್ನು ಸಾಂಸ್ಕೃತಿಕವಾಗಿ ವಂಚಿಸಲಾಗುತ್ತಿದೆ.
ಇಂದು ನಮ್ಮ ಸಂಸ್ಕೃತಿಯು ಸಂಪ್ರದಾಯವಾದಿಗಳ ಮೌಢ್ಯ ವೀಕೃತವಾದಿಗಳ ಕುತರ್ಕ ಹಾಗೂ ಅನ್ಯ ಮತೀಯರ ದಾಳಿ ಗಳಿಂದ ನಲುಗಿ ಹೋಗಿದ್ದು ಜಿಜ್ಞಾಸುಗಳಿಗೆ ಸರಿಯಾದ ತಿಳುವಳಿಕೆ ಸಿಗದಾಗಿದೆ. ಸಾತ್ವಿಕ ವಿಚಾರವಾದಿಗಳ ಸ್ವರ ಕ್ಷೀಣವಾಗಿದ್ದು ಸೌಮ್ಯವಾದಿಗಳು ಮಾರ್ಗದರ್ಷನದ ಕೊರತೆಯಿಂದ ಕಂಗೆಟ್ಟಿದ್ದಾರೆ. ಇದರಿಂದ ಧರ್ಮವನ್ನು ರಕ್ಷಸಲು ಸರಿಯಾದ ತೀಳುವಳಿಕೆ ಕೊಡುವ ಧರ್ಮ ಪ್ರಚಾರಕರನ್ನು ತರಬೇತು ಗೊಳಿಸುವ ಅವಶ್ಯಕತೆ ಇಂದು ಭಾರತೀಯ ಸನಾತನ ಸಮಾಜಕ್ಕೆ ಇದೆ. ಯಾವುದು ನಂಬಿಕೆ ಯಾವುದು ಮೂಢನಂಬಿಕೆ ಎನ್ನುವುದನ್ನು ವಿಶ್ಲೇಷಿಸಿ ತಿಳಿಸಬೇಕಿದೆ ಯಾವುದು ಆಚಾರ ಯಾವುದು ಅನಾಚಾರ ಯಾವುದು ಧರ್ಮ ಯಾವುದು ಅಧರ್ಮ ಎನ್ನುವುದರ ಸ್ಪಷ್ಟ ಅರಿವು ಪ್ರಜೆಗಳಿಗೆ ಸಿಗಬೇಕಾಗಿದೆ ಈ ದಿಶೆಯಲ್ಲಿ ಹಿಂದೂ ಧರ್ಮ ಪರಿಶತ್ತು ಕಾರ್ಯೋನ್ಮುಖವಾಗಿದೆ. ಹಾಗೂ ನಿಮ್ಮೆಲ್ಲರ ಸಹಕಾರ ಸಹಭಾಗಿತ್ವವನ್ನು ಅಪೇಕ್ಷಸುತ್ತಿದೆ, ಜೈ ಭಾರತ ಮಾತಾ ಜೈ ಸನಾತನ ಧರ್ಮ,
- ಶ್ರೀಜಿ