ಹಿಂದುಗಳಲ್ಲಿ ಬಹುದೇವತಾರಾಧನೆ ಹೇಗೆ ಆರಂಭವಾಯಿತು?
ಹಿಂದೆ ಹೇಳಿದಂತೆ ಹಿಂದೂ ಸಮಾಜ ಪ್ರಕೃತಿ ಪೂಜೆಯಿಂದ ವಿಕೃತಿಗೆ ತಿರುಗಿ ಅಡ್ಡದಾರಿ ಹಿಡಿದಾಗ, ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡುವವರು ಕಡಿಮೆಯಾದರು. ಬೌದ್ಧ ಹಾಗೂ ಜೈನರ ಪ್ರಭಾವ ಹೆಚ್ಚಾಗಿ ವೈದಿಕ ಧರ್ಮಕ್ಕೆ ರಾಜಾಶ್ರಯ ಸಿಗದೆ ಯಜ್ಞ ಯಾಗಾದಿಗಳು ಅವನತಿಯ ಹಾದಿ ಹಿಡಿದವು. ಆಗ ಹಿಂದೂ ಧರ್ಮ ಸೂಕ್ಷ್ಮಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕಥೆಗಳ ಮೂಲಕ ತಿಳಿಸಲು ಪುರಾಣಗಳು ರಚಿಸಲ್ಪಟ್ಟವು. ಇವುಗಳ ಉದ್ದೇಶ ಜನರನ್ನು ಧಾರ್ಮಿಕ ವಿಚಾರಗಳಲ್ಲಿ ತೊಡಗಿಕೊಳ್ಳು ವಂತೆ ಮಾಡುವುದೇ ಆಗಿತ್ತು. ಜೈನ ಹಾಗೂ ಬೌದ್ಧರಿಂದ ಸನಾತನ ವೇದಾಧಾರಿತ ವಿಚಾರಧಾರೆ ನಾಶವಾಗದಂತೆ ತಡೆಯಲು ಪುರಾಣಗಳನ್ನುರಚಿಸಿದು ಸಮಾಜದಲ್ಲಿ ಉತ್ತಮ ನಡತೆಹೊಂದಿದ ಸಜ್ಜನರ ಸಮೂಹವನ್ನು ಸುರರು ಅಥವಾ ದೇವತೆಗಳೆಂದೂ. ಸಮಾಜ ಕಂಠಕರಾದ ದುರ್ಗುಣಗಳನ್ನು ಹೊಂದಿದ ಪ್ರಜಾಪೀಡಕ ಸಮೂಹವನ್ನು ಅಸುರರು ಅಥವಾ ರಾಕ್ಷಸರೆಂದೂ ಪರಿಗಣಿಸಿ ಕಥೆ ಬರೆದರು. ಇದನ್ನು ಸಾಮಾನ್ಯ ಜನ ಸುಲಭವಾಗಿ ಗ್ರಹಿಸಿ ಅನುಸರಿಸುವಂತೆ, ಅನುಕರಿಸುವಂತೆ ಮಾಡಿದರು. ಪುರಾಣಗಳ ರಚನೆ ಯಾವಾಗ ಆಗಿದೆ ಎನ್ನುವುದಕ್ಕೆ ನಿಖರ ಕಾಲಮಾನನಿಗದಿ ಆಗಿಲ್ಲ. ವ್ಯಾಸರು ಬರೆದರೆಂದು ಪ್ರತೀತಿ ಇದ್ದರೂ ಎಲ್ಲಾಪುರಾಣಗಳನ್ನೂ ಅವರೇಬರೆದಿದ್ದಾರೆಂದರೆ ನಂಬುವುದು ಕಷ್ಟ. ವ್ಯಾಸರ ಹೆಸರಿನಲ್ಲಿ ಹಲವರು ಬರೆದಿರಬಹುದು. ಮುಂದೆ ಈ ಪುರಾಣ ಪಾತ್ರಧಾರಿಗಳನ್ನೇ ಅಲ್ಲಿನ ಗುಣಕ್ಕನುಗುಣವಾಗಿ ವರ್ಣನೆಯಂತೆ ಕಲಾವಿದರು ಶಿಲ್ಪದಲ್ಲಿ ಕೆತ್ತಿದರು. ಇಂತಹ ದೇವ ದೇವತೆಗಳ ಶಿಲ್ಪಗಳನ್ನು ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದರು. ಹೀಗೆ ಬಹುದೇವತಾರಾಧನೆ ಹಾಗೂ ವಿಗ್ರಹಾರಾಧನೆಗಳು ಆಚರಣೆಗೆ ಬಂದುವು. ಮುಂದೆ ಹಲವು ದೇವರ ಹೆಸರಿನಲ್ಲಿ ಹಲವು ಪಂಗಡಗಳು ಹುಟ್ಟಿಕೊಂಡು ಬೇರೆ ಬೇರೆ ದೇವರುಗಳು ವೈಭವೀಕರಿಸಲ್ಪಟ್ಟವು. ಹೀಗೆ ವಿಭಿನ್ನ ಸಂಪ್ರದಾಯಗಳು ಬೆಳೆದುವು. ಮುಂದೆ ಶಂಕರಾಚಾರ್ಯರು ಹೀಗೆ ಭಿನ್ನ ಪಂಗಡಗಳಲ್ಲಿ ಒಡೆದಿದ್ದ ಪರಸ್ಪರ ವಿಭಿನ್ನ ದೇವರ ಹೆಸರಿನಲ್ಲಿ ಹೊಡೆದಾಡುತ್ತಿದ್ದ ವಿಘಟಿತ ಸಮಾಜದಿಂದ ಆಗುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಾನಿಯನ್ನು ಮನಗೊಂಡು ಅವರನ್ನೆಲ್ಲಾ ಒಗ್ಗೂಡಿಸಿದರು. ಹಾಗೂ ಪಂಚಾಯತನ ಪೂಜಾಪದ್ದತಿಯನ್ನು ಪರಿಚಯಿಸಿದರು. ಈ ಮೂಲಕ ಹಲವು ದೇವರ ಬದಲಿಗೆ ಪ್ರಮುಖ ಐದುದೇವರನ್ನು ಒಟ್ಟಿಗೆ ಎಲ್ಲರೂ ಪೂಜಿಸುವಂತೆ ಪ್ರೇರೇಪಿಸಿದರು. ಈ ಮೂಲಕ ದೇವರ ಹೆಸರಿನಲ್ಲಿ ಗುಂಪುಕಟ್ಟಿಕೊಂಡು ಪರಸ್ಪರದ್ವೇಶಿಸದಂತೆ ತಡೆದರು. ಸಮಾಜದಲ್ಲಿ ಸಾಮರಸ್ಯ ಮೂಡಿಸಿದರು. ಎಲ್ಲರೂ ಅದನ್ನು ಅನುಸರಿಸುವಂತೆ ಮನಒಲಿಸಿ ಹಿಂದೂಗಳನ್ನು ಏಕೀಕರಣ ಗೊಳಿಸಿದರು. ಬೌದ್ಧ ಜೈನ ಪಂಡಿತರನ್ನು ವಾದದಲ್ಲಿ ಸೋಲಿಸಿ ತಮ್ಮ ಶಿಶ್ಯಷ್ಯರನ್ನಾಗಿಸಿಕೊಂಡರು. ಶಂಕರಾಚಾರ್ಯರೊಂದಿಗೆ ತಾತ್ವಿಕವಾದದಲ್ಲಿ ಸೋತವರು ಅವರ ಶಿಷ್ಯತ್ವವನ್ನು ಸ್ವೀಕರಿಸಿದರು. ಇಂತಹವರು ಪುನಃ ವೇದಾಧಾರಿತ ಧರ್ಮಾನುಯಾಯಿ ಗಳಾಗುವಂತೆ ಮಾಡಿದರು. ಹೀಗೆ ವೈದಿಕ ಪದ್ದತಿ ಪುನರುಜ್ಜೀವನಗೊಂಡು ಬಹುದೇವತಾರಾಧನೆ ಬೆಳೆದು ಬಂದಿತು. ಯಾವಾಗ ಬೌದ್ಧ ಜೈನರ ಅಹಿಂಸಾವಾದ ಪ್ರಚಾರ ಪಡೆಯಿತೋ ಆವಾಗ ವೈದಿಕ ಧರ್ಮದ ತಿರಸ್ಕಾರದಿಂದ ಯಜ್ಞ ಯಾಗ ಹೋಮ ಹವನ ಇವುಗಳು ನಿಲ್ಲಿಸಲ್ಪಟ್ಟವು. ಹಾಗೆಯೇ ಅಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯೇ ಮುಂತಾದ ಅನಿಷ್ಟ ಪದ್ದತಿಗಳು ನಿಂತಾಗ ವೈದಿಕ ಧರ್ಮದ ಉಳಿವಿಗಾಗಿ ಪರ್ಯಾಯ ಮಾರ್ಗವಾಗಿ ದೇವಾಲಯಗಳು ರೂಪುಗೊಳ್ಳಲಾರಂಭಿಸಿದವು. ಶಿವಾಲಯಗಳು, ವೈಷ್ಣವ ದೇವಾಲಯಗಳು, ದೇವಿ ದೇವಾಲಯಗಳು ಹೀಗೆ ಹಲವು ಆಯಾಮಗಳಲ್ಲಿ ದೇವಾಲಯಗಳು ನಿರ್ಮಾಣಗೊಂಡವು. ದೇವಾಲಯಗಳಲ್ಲಿ ನೈವೇದ್ಯ ರೂಪದಲ್ಲಿ ಶಾಖಾಹಾರ ಪರಿಪಾಠ ಬೆಳೆದುಬಂದುದರಿಂದ ಮಾಂಸಾಹಾರಿಗಳು ಇಲ್ಲಿ ಪ್ರವೇಶ ನಿರಾಕರಿಸಲ್ಲಪಟ್ಟರು. ಅಂತಹ ಸಂದರ್ಭದಲ್ಲಿ ಅವರುಗಳು ದೇವಗಣಗಳನ್ನು ದೇವಾಲಯದ ಹೊರಭಾಗದಲ್ಲಿ ತಾವು ಅರ್ಚಿಸಲಾರಂಭಿಸಿದರು ಅವುಗಳಿಗೆ ತಮ್ಮ ಆಹಾರವನ್ನೇ ನೈವೇದ್ಯವಾಗಿ ನೀಡುವ ಪರಿಪಾಠ ಬೆಳೆಸಿಕೊಂಡು ಕುರಿ ಕೋಳಿಗಳನ್ನ ಬಲಿಕೊಡುವ ಕ್ರಮವನ್ನು ಜಾರಿಗೆ ತಂದರು ಇವುಗಳೇ ದೇವಗಣಗಳು ದೇವತಾಪರಿವಾರಗಳು ಎಂತಾಗಿ ಭೂತ ಚೌಡಿ ಯಕ್ಷ ಮಂತಾದ ಹೆಸರಿನಲ್ಲಿ ನಡಾವಳಯಲ್ಲಿ ಬೆಳೆದುಬಂದಿದೆ. ಮುಂದೆ ಹಲವು ಜಾನಪದ ಕಥೆಗಳು ಹುಟ್ಟಿಕೊಂಡು ಅವುಗಳಂತೆಯೂ ದೇವಾಲಯಗಳು ಸ್ಥಾಪಿತವಾದುವು. ಹಲವು ದೇವಾಲಯಗಳಲ್ಲಿ ದೇವಾಲಯದ ಪ್ರಸಿದ್ಧಿಗಾಗಿ ಸ್ಥಳ ಪುರಾಣಗಳು ರಚಿಸಲ್ಲಪಟ್ಟು ಅವು ನಂಬಿಕೆ ನಡಾವಳಿಗಳಾಗಿ ಮುಂದುವರಿದುಕೊಂಡು ಬಂದುವು. ಹೀಗೆ ಬಹುವಿಸ್ತಾರವಾಗಿ ಭಾರತೀಯರಲ್ಲಿ ಬಹುದೇವತಾರಾಧನೆ ಹಾಸುಹೊಕ್ಕಿದ್ದು ಜೀವನದ ಅವಿಭಾಜ್ಯ ಅಂಗವಾಗಿದೆ.
- ಶ್ರೀಜಿ
