1. ಧರ್ಮ, ದೇವರು ಹಾಗೂ ಪ್ರಕೃತಿಗೆ ಇರುವ ಸಂಬಂಧವೇನು?
  2. ಧರ್ಮಾಚರಣೆ ಎಂದರೆ ಇದು ಕೇವಲ ದೇವರ ಪೂಜೆಯೇ?

ಇದೊಂದು ಅತ್ಯಂತ ಗೊಂದಲಕಾರಿಯಾದ ಪ್ರಶ್ನೆ ಹಾಗೂ ವಿಷಯ ಎನ್ನಬಹುದು.ದೇವರು ಇದ್ದಾನೆ ಆತನೇ ಜಗತ್ತನ್ನು ಸೃಷ್ಠಿಸಿದ್ದಾನೆ ಹಾಗೂ ಸರ್ವವನ್ನೂ ನಿಯಂತ್ರಿಸುತ್ತಿರುವುದು ಅವನೇ ಎನ್ನುವುದು ಜಗತ್ತಿನ ಆಸ್ಥಿಕರೆಲ್ಲರೂ ಒಪ್ಪಿರುವ ವಿಚಾರ. ಆತನು ಒಬ್ಬನೇ ಆತನು ಸರ್ವ ಶಕ್ತ, ಸರ್ವ ವ್ಯಾಪಿ, ಸರ್ವಗುಣ ಪರಿಪೂರ್ಣ, ಸಚ್ಚಿದಾನಂದ ಸ್ವರೂಪಿ ಮುಂತಾಗಿ ಅವನನ್ನು ವರ್ಣಿಸಲಾಗಿದೆ, ಅಂತಹ ಸರ್ವ ಶಕ್ತನೂ ನಮ್ಮ ಹುಟ್ಟು ಬದುಕು ಸಾವುಗಳಿಗೆ ಕಾರಣನಾದವನೂ ಆದ ದೇವರನ್ನು ಪೂಜಿಸುವುದು ಗೌರವಿಸುವುದು ಸ್ತುತಿಸುವುದು ಇವೆಲ್ಲವೂ ನಾವು ಅವನಿಗೆ ಸಲ್ಲಿಸುವ ಗೌರವವಾಗಿದೆ, ಅಥವಾ ಕೃತಜ್ಞತೆಯಾಗಿದೆ. ಆದರೆ ದೇವರು ನಮ್ಮಿಂದ ಇವನ್ನೆಲ್ಲಾ ಅಪೇಕ್ಷಿಸುತ್ತಾನೆಯೇ? ಆತನಿಗೆ ಪೂಜೆಮಾಡಿದಾಗ ಖುಷಿಯೂ ಮಾಡದವರ ಮೇಲೆ ಕೋಪವೂ ಬರುವುದೇ? ಎನ್ನುವುದು ಪ್ರಶ್ನೆ. ದೇವರು ಖಂಡಿತವಾಗಿಯೂ ನಮ್ಮಿಂದ ಇವನ್ನು ಅಪೇಕ್ಷಿಸುವುದಿಲ್ಲ, ಅವನಿಗೆ ಖುಷಿ ಆಥವಾ ಸಿಟ್ಟು ಬರಲು ಕಾರಣಗಳಿಲ್ಲ . ಹಾಗಾದರೆ ನಾವು ಪೂಜೆ ಉತ್ಸವಗಳನ್ನೆಲ್ಲಾ ಮಾಡುವುದು ಏಕೆ? ಎನ್ನುವ ಗೊಂದಲ ಏರ್ಪಡುತ್ತದೆ.

ದೇವರಿಂದ ಸೃಷ್ಠಿ ಆಯಿತು, ಸೃಷ್ಠಿ, ಸ್ಥಿತಿ, ಲಯ ಆತನ ಕಾಯಕ. ಇಂತಹಾ ಸೃಷ್ಠಿಯಲ್ಲಿ ಮನುಷ್ಯನೆಂಬ ವ್ಯಕ್ತಿ ಒಂದು ಚಿಕ್ಕ ಅಣುಮಾತ್ರ ಆತನ ಯಾವುದೇ ಕಾರ್ಯದಿಂದ ಭಗವಂತನನಿಗೆ ಹೆಚ್ಚು ಕಡಿಮೆ ಆಗುವಂತಹುದು ಏನೂ ಇಲ್ಲ ಎನ್ನುವುದು ವಾಸ್ತವ. ಹಾಗಾದರೆ ನಮ್ಮ ಆಚಾರ ವಿಚಾರ ಸಂಸ್ಕಾರ ಸಂಪ್ರದಾಯ ಪೂಜೆ ಉತ್ಸವಗಳು ಏಕಾಗಿ? ಇದು ಸಂಶಯದ ಪ್ರಶ್ನೆ.

ಮನುಷ್ಯನನ್ನು ಹೊರತು ಪಡಿಸಿ ವಿಶ್ವದ ಯಾವ ಪ್ರಾಣಿಯೂ ಭಗವಂತನ ನಿಯಮಕ್ಕೆ ವಿರುದ್ಧ ವಾಗಿ ಬದಕುವುದಿಲ್ಲ ಅಥವಾ ನಡೆದುಕೊಳ್ಳುವುದಿಲ್ಲ. ಪ್ರಾಣಿ ಪಕ್ಷಿಗಳು ಪ್ರಕೃತಿನಿಯಮವನ್ನು ಇಂದಿಗೂ ಮೀರಿಲ್ಲ. ಮತ್ತು ಪ್ರಕೃತಿಯನ್ನು ಕಲುಷಿತಮಾಡುತ್ತಿಲ್ಲ , ಅವುಗಳಿಗೆ ಮುಂದಿನ ತಲೆಮಾರಿನ ಚಿಂತೆಯೂ ಇಲ್ಲ ತಮ್ಮ ಬದುಕನ್ನು ಕಳೆಯುವುದೊಂದೆ ಅವುಗಳ ಕಾಯಕ, ಆದರೆ ದೇವರು ಮನುಷ್ಯನಿಗೆ ಬುದ್ದಿ ಎನ್ನುವ ವಿಷೇಷ ಶಕ್ತಿಯನ್ನು ಉಳಿದೆಲ್ಲಾಪ್ರಾಣಿಗಳಿಗಿಂತ ಅತ್ಯುನ್ನತಮಟ್ಟದಲ್ಲಿ ಕೊಟ್ಟಿದ್ದಾನೆ. ಇದರ ಪರಿಣಾಮದಿಂದಾಗಿ ಮನುಷ್ಯ ಇಂದು ಬುದ್ದಿಹೆಚ್ಚಾಗಿ ದುರ್ಬುದ್ದಿಯಿಂದ ದೇವರನ್ನೇ ವಿಮರ್ಷಿಸುತ್ತೇನೆ ಎನ್ನುವಷ್ಟು ಅಹಂಕಾರಿಯಾಗಿ ಬೆಳೆದಿದ್ದಾನೆ, ಹಾಗೂ ಆತನ ನಿಯಮಕ್ಕೆ ವಿರುದ್ದವಾಗಿ ಪ್ರಕೃತಿಯ ನಾಶ ಹಾಗೂ ಜೈವಿಕ ಅಸಮತೋಲನಕ್ಕೆ ಕಾರಣನಾಗುತ್ತಿದ್ದಾನೆ. ನಮ್ಮ ಹಿಂದಿನ ಋಷಿಮುನಿಗಳು ಮನುಷ್ಯನ ವಿಕೃತಿಯನ್ನು ನಿಯಂತ್ರಣದಲ್ಲಿಡಲು ಸೃಷ್ಠಿಯ ರಹಸ್ಯ ವನ್ನು ತಮ್ಮ ಜ್ಞಾನದಿಂದ ಅರಿತು ಜೀವ ಸಂಕುಲ ಮುಂದೆಯೂ ಬದುಕುಳಿಯಬೇಕಿದ್ದರೆ ನಾವು ಹೇಗಿರಬೇಕು ಹೇಗಿರ ಬಾರದು ಎಂಬ ಜ್ಞಾನವನ್ನು ವೇದಗಳ ಮುಖಾಂತರ ಮುಂದಿನ ಜನಾಂಗಕ್ಕೆ ನೀಡಿದರು, ಹೀಗೆ ನೀಡಲ್ಪಟ್ಟ ಜ್ಞಾನ ರಾಷಿಗಳಲ್ಲಿ ಪ್ರಕೃತಿಯೇ ದೇವರಾಗಿದ್ದು ಅಥವಾ ದೇವರ ಸಾಕಾರ ಹಾಗೂ ಗುಣಸ್ವರೂಪಗಳಾಗಿದ್ದು ಪ್ರಕೃತಿಯನ್ನು ರಕ್ಷಸುವುದು ಹಾಗೂ ಬೆಳೆಸಿ ಉಳಿಸಿಕೊಳ್ಳುವುದೇ ದೇವರಿಗೆ ತಾವು ಸಲ್ಲಿಸುವ ಕೃತಜ್ಞತೆ ಎನ್ನುವುದನ್ನು ವಿಷದ ಪಡಿಸಿದರು, ಹೀಗೆ ದೇವರಿಗೆ ಸಲ್ಲಿಸುವ ಕೃತಜ್ಷತೆಯೇ ಪೂಜೆ ಆಯಿತು, ಅಂದರೆ ಪ್ರಕೃತಿಗೆ ಸಲ್ಲಿಸುವ ನ್ಯಾಯವೇ ದೇವರಿಗೆ ಸಲ್ಲಿಸುವ ಪೂಜೆ ಎನ್ನುವುದು ಹಿಂದಿನ ಋಷಿಮನಿಗಳ ಮಾರ್ಗದರ್ನದ ಸಂದೇಶ, ವೇದಗಳ ಸಂದೇಷ, ಪ್ರಕೃತಿ ಎಂದರೆ ನೀರು, ಗಾಳಿ, ಬೆಂಕಿ, ಭೂಮಿ , ಆಕಾಶ ಈ ಪಂಚಭೂತಗಳಿಂದಲೇ ಜಗತ್ತು ಸೃಷ್ಠಿಯಾಗಿದೆ. ಇವುಗಳಿಂದಲೇ ಸಮಸ್ಥ ಜೀವ ಹಾಗೂ ಸಸ್ಯ ಕೋಟಿ ರಚಿತವಾದಗಿದೆ. ಇವುಗಳಿಗೆ ತಪೋವನಗಳಲ್ಲಿ ಯಜ್ಞಯಾಗಾದಿಗಳಮೂಲಕ ನ್ಯಾಯ ಸಲ್ಲಿಸುತ್ತಿದ್ದರು. ಇಂದೀಗೂ ಯಜ್ಞಯಾಗಾದಿಗಳು ಪ್ರಕೃತಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ಆಧುನಿಕ ಸಂಶೋಧನೆಗಳು ಸಾಕ್ಷಿ ಒದಗಿಸಿವೆ.

ಇಂತಹ ಜೀವರಕ್ಷಕ ಪ್ರಕೃತಿಗೆ ಹಾನಿಯಾಗದಂತೆ ಅಥವಾ ನಾಶವಾಗದಂತೆ ಅಥವಾ ಕಲುಷಿತ ವಾಗದಂತೆ ಅಥವಾ ನೋವಾಗ ದಂತೆ ಬದುಕುವ ದಾರಿಯೇ ಧರ್ಮ ವಾಗಿದೆ. ದೇವರ ಸೃಷ್ಠಿಗೆ ಪೂರಕವಾಗಿ ಬದುಕುವುದೇ ಧರ್ಮ ಇದಕ್ಕೆ ವಿರುದ್ಧವಾಗಿ ಬದುಕುವುದೇ ಅಧರ್ಮ, ಆದರ್ಷ ಬದುಕೇ ಧರ್ಮ. ಆದರ್ಷ ಬದುಕೆಂದರೆ ಪ್ರಕೃತಿಗೆ ಪೂರಕವಾಗಿ ಬದುಕುವುದಾಗಿದೆ. ನಿರುಪದ್ರವಿ ಜೀವಿಗಳಿಗೆ ಜನರಿಗೆ ತೊಂದರೆ ಉಂಟುಮಾಡದ ಸಾಧ್ಯವಾದಲ್ಲಿ ಉಪಕಾರ ಸಹಾಯವನ್ನು ಮಾಡುವ ಬದುಕೇ ಆದರ್ಷ ಬದುಕೆನ್ನಬಹುದು. ಬದುಕಿನ ನಿಜವಾದ ಶ್ರೇಷ್ಠತೆ ನಾನು ಪ್ರಕೃತಿಗೆ ಸಮಾಜಕ್ಕೆ ಏನು ನೀಡಿದ್ದೇನೆ ಎನ್ನುವುದರ ಮೇಲೆ ನಿರ್ಧರಿಸಲ್ಪಡಬೇಕು, ಇದುವೇ ಪುಣ್ಯ ಅದುವೇ ದೇವರ ಪೂಜೆ ಹಾಗೂ ದೇವರ ಕಾರ್ಯ. ಪ್ರಕೃತಿಯೇ ದೇವರ ಸಾಕಾರ ರೂಪ. ಪ್ರಕೃತಿಯಿಂದ ಪಡೆದುದೆಲ್ಲವೂ ಭೋಗ ಅದು ನಾವು ದೇವರಿಂದ ಪಡೆದುದು. ಪ್ರಕೃತಿಗೆ ನಾವು ನೀಡುವುದೆಲ್ಲವೂ ತ್ಯಾಗ ಅದು ನಾವು ಭಗವಂತನಿಗೆ ನೀಡುವುದು ಎಂಬುದು ಅರ್ಥವಾದಾಗ ದೇವರು ಹಾಗೂ ಧರ್ಮದ ಬಗ್ಗೆ ಗೊಂದಲ ಇರುವುದಿಲ್ಲ. ಪ್ರಕೃತಿ ನಮ್ಮೆಲ್ಲಾ ಅಪೇಕ್ಷೆಗಳನ್ನೂ ಪೂರೈಸುತ್ತದೆ, ಗಾಂಧೀಜಿ ಒಂದು ಮಾತು ಹೇಳಿದ್ದಾರೆ ಪ್ರಕೃತಿ ನಮ್ಮೆಲ್ಲಾ ಆಸೆಗಳನ್ನೂ ಪೂರೈಸಬಲ್ಲುದು ಆದರೆ ದುರಾಸೆಗಳನ್ನಲ್ಲ ಇದು ಸತ್ಯ ಮಾತು, ಇಂದು ನಾವು ಪ್ರಕೃತಿಯನ್ನು ದುರಾಸೆಯಿಂದ ನಾಶಮಾಡಲು ಹೊರಟಿದ್ದೇವೆ. ಪ್ರಕೃತಿಯನ್ನು ನಾಶಮಾಡುವುದೆಂದರೆ ಆತ್ಮಹತ್ಯೆ ಮಾಡಿಕೊಂಡಂತೆ. ಅಂದರೆ ಪರೋಕ್ಷವಾಗಿ ನಾವೇ ನಾಶ ವಾಗುತ್ತಿದ್ದೇವೆ. ಪ್ರಕೃತಿ ಪೂಜೆಯಲ್ಲಿ ದ್ವೇಷಾಸೂಯೆಗಳಿಗೆ ಸ್ಥಾನ ವಿರುವುದಿಲ್ಲ, ಯಾಕೆಂದರೆ ಪ್ರಕೃತಿಗೆ ನೀಡಿದ ಕೊಡುಗೆ ಕಾಣಿಕೆ ಅದು ಯಾವುದೇ ಜಾತಿ ಜನಾಂಗ ಮತ ಪಂಥ ಬಂಧುಗಳಿಗೆ ಮಾತ್ರ ಸೀಮಿತವಾಗದೆ ಸಮಸ್ಥ ಜೀವಜಂತುಗಳಿಗೂ ಸಮಾಜಕ್ಕೂ ಸರ್ವಪರಿವಾರಕ್ಕೂ ಉತ್ತಮವಾದುದನ್ನೇ ನೀಡುತ್ತದೆ. ಇದನ್ನೇ ನಮ್ಮ ಹಿರಿಯರು ಉಪದೇಷಿಸಿದ್ದು, ನೀಡಿದ್ದು ಹಾಗೂ ಕಲಿಸಿದ್ದು. ನಮ್ಮ ಹಿರಿಯರ ಮಂತ್ರಘೋಷಗಳು ಹೋಮಹವನಗಳು ಪೂಜೆ ಪುನಸ್ಕಾರಗಳೆಲ್ಲವೂ ಪ್ರಕೃತಿಯನ್ನು ರಕ್ಷಿಸಲು ಹಾಗೂ ಶುಧ್ಧೀಕರಿಸುವ ಕ್ರಿಯೆಯೇ ಆಗಿತ್ತು ಎನ್ನುವುದು ಇಂದಿನ ವೈಜ್ಞಾನಿಕ ಸಂಶೋಧನೆಗಳಿಂದಲೂ ಧೃಡಪಟ್ಟಿದೆ. ವಾತಾವರಣದ ಶುದ್ಧೀಕರಣ ಹಾಗೂ ಆತ್ಮದ ಶುದ್ಧೀಕರಣವೇ ನಮ್ಮ ಧರ್ಮಾಚರಣೆಯ ಮೂಲ ಉದ್ದೇಶ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಮಾತೂ ಇದನ್ನೇ ಹೇಳುತ್ತಿದೆ ನಾವು ಪ್ರಕೃತಿಯನ್ನು ರಕ್ಷಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಅಂದರೆ ಪ್ರಕೃತಿಯನ್ನು ರಕ್ಷಸುವುದೇ ಧರ್ಮ . ಧಾರಯತಿ ಇತಿ ಧರ್ಮಃ ಎಂದುದು ಧರ್ಮದ ವಿವರಣೆ ಅಂದರೆ ಯಾವುದು ಸಮಸ್ಥವನ್ನು ಧರಿಸಿದೆಯೋ ಅದುವೇ ಧರ್ಮವಾಗಿದೆ. ಅಂದರೆ ಸಮಸ್ಥವನ್ನೂ ಧರಿಸಿರುವುದು ಪ್ರಕೃತಿಯಾಗಿದೆ ಆದುದರಿಂದ ಧರ್ಮ ಎನ್ನುವುದು ಪ್ರಕೃತಿಯೇ ಆಗಿದೆ. ಪ್ರಕೃತಿ ಪೂಜೆಯೇ ನಿಜವಾದ ಧರ್ಮ ವಾಗಿದೆ. ಹಾಗೂ ಧರ್ಮಾಚರಣೆಯಾಗಿದೆ. ಪ್ರಕೃತಿ ಆರಾಧನೆಯೇ ಹಿಂದೂ ಧರ್ಮದ ತಿರುಳಾಗಿದೆ, ಆದರೆ ಇಂದು ಅದು ಸಾಂಕೇತಿಕ ರೂಪಕ್ಕೆ ಬದಲಾಗಿ ವಿರೂಪಗೊಂಡು ವ್ಯಾಪಾರೀಕರಣ ಹಾಗೂ ಮನೊರಂಜನೆಯ ರೂಪ ಪಡೆದಕೊಂಡು ವಿಕೃತ ವಾಗಿರುವುದು ಅಜ್ಞಾನೀ ಮತ ಪಂಡಿತರುಗಳ ಕೊಡುಗೆ ಎನ್ನಬಹುದು. ಯಾವುದೇ ಪೂಜೆ ಆರಾಧನೆ ಪ್ರಕೃತಿಗೆ ವ್ಯತಿರಿಕ್ತ ವಾಗಿದ್ದರೆ ಅದು ಧರ್ಮಾಚರಣೆ ಅಲ್ಲ . ಅದು ಧರ್ಮದ ವಿಕೃತಿ ಹಾಗೂ ವಿಡಂಬನೆ ಆಗುವುದು, ಧರ್ಮದ ಹೆಸರಿನಲ್ಲಿ ಕರ್ಕಶ ಧ್ವನಿವರ್ಧಕ ಬಳಸಿ ಶಬ್ಧಮಾಲಿನ್ಯ ಹಾಗೂ ನಾಗರಿಕರಿಗೆ ಕಿರಿಕಿರಿ ಮಾಡುವುದು, ಪಠಾಕಿಸಿಡಿಸಿ ವಾತಾವರಣವನ್ನು ಕಲುಷಿತ ಗೊಳಿಸುವುದು, ಹಾಲು ಅಭಿಷೇಕ ಸೀಹಾಳ ಅಭಿಷೇಕ ಎಂದು ನೂರಾರು ಲೀಟರ್ ವಿಗ್ರಹದ ಮೇಲೆ ಸುರಿಯುವುದು ಇವೆಲ್ಲಾ ಧರ್ಮದ ವಿಕೃತ ಆಚರಣೆಯಾಗಿದೆ, ಇವನ್ನೆಲ್ಲಾ ಸಾಂಕೇತಿಕವಾಗಿ ಮಾಡುವುದು ತಪ್ಪಲ್ಲ ಆದರೆ ಅತಿ ಸರ್ವತ್ರ ವರ್ಜಯೇತ್ ಎನ್ನಲಾಗಿದೆ ಹಾಗಾಗ ಬಾರದು, ಇಂತಹ ವ್ಯರ್ಥಮಾಡುವ ಪ್ರಕ್ರಿಯೆ ದೇವರ ಪ್ರಸಾದ ರೂಪದಲ್ಲಿ ವಿತರಣೆಯಾಗುವುದು ಹೆಚ್ಚು ದೇವರಿಗೆ ಪ್ರೀತಿಆಗುವುದು, ನೈವೇದ್ಯವನ್ನು ಹೇಗೆ ಒಂದು ಚಿಕ್ಕ ಹರಿವಾಣದಲ್ಲಿ ತೆಗೆದು ಮಾಡುತ್ತೇವೆಯೋ ಹಾಗೆಯೇ ಅಭಿಷೇಕವನ್ನೂ ಸರ್ವದ್ರವ್ಯಗಳಿಂದ ಸಾಂಕೇತಿಕವಾಗಿ ಮಾಡಿದರೆ ಸಾಕಾಗುವುದು, ವಿಶೇಷ ಸಂದರ್ಭಗಳಲ್ಲಿ ಸಾಂಕೇತಿಕವಾಗಿ ಬಳಸಿ ಉಳಿಯುವ ಅಪಾರವಾದ ದ್ರವ್ಯಗಳನ್ನು ದೇವರಿಗೆ ಸಮರ್ಪಣೆ ಮಾಡಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುವುದು ಸೂಕ್ತ.

ಕೆಲವು ಮೂರ್ಖ ಮತದವರು ಸೃಷ್ಠಿಯನ್ನು ಆರಾಧಿಸಬೇಡಿ ಸೃಷ್ಠಿಕರ್ತನನ್ನು ಆರಾಧಿಸಿರಿ ಎಂಬುದಾಗಿ ಹೇಳುವುದನ್ನು ಕೇಳುತ್ತೇವೆ ಸೃಷ್ಠಿ ಇದ್ದರೆ ಮಾತ್ರ ಸೃಷ್ಠಿಕರ್ತನ ಅಸ್ಥಿತ್ವ ಹಾಗೂ ಆತನನ್ನು ಆರಾಧಿಸುವವರಿರಲು ಸಾಧ್ಯ. ಸೃಷ್ಠಿಯನ್ನು ನಾಶಮಾಡಿದಾಗ ಸೃಷ್ಠಿ ಕರ್ತನ ಆರಾಧಕರು ನಾಶವಾಗದಿರಲು ಸಾಧ್ಯವಿಲ್ಲ ಸೃಷ್ಠಿ ಇದ್ದರೆ ಆರಾಧಿಸುವವರಿಗೂ ಆರಾಧಿಸಲ್ಪಡುವರಿಗೂ ಕೆಲಸ ಇಲ್ಲ. ಇಂತಹ ಸೃಷ್ಟಿಯನ್ನು ಅವಗಣಿಸಿದುದರಿಂದಾಗಿಯೇ ಇವರಿರುವ ಜಾಗಗಳು ಮರಳುಗಾಡಾಗಿವೆ ಸೃಷ್ಟಿಯನ್ನು ಅವಗಣಿಸಿದವರ ಜಾಗದಲ್ಲಿ ಮಳೆಬೆಳೆ ಬೆಳೆಯಲು ಸಾಧ್ಯವಿಲ್ಲ ಎನ್ನುವುದನ್ನು ಇಂತಹ ಅಲ್ಪಮತಿಗಳು ಅರಿಯಬೇಕಿದೆ. ಸೃಷ್ಠಿಯೇ ಸೃಷ್ಠಿಕರ್ತನ ಸ್ಥೂಲ ರೂಪವಾಗಿದೆ. ಅಥವಾ ಸೃಷ್ಠಿಯನ್ನು ಭಗವಂತನ ದೇಹವೆನ್ನಬಹುದು. ದೇಹ ದುರ್ಬಲ ಗೊಂಡರೆ ನಾಶಗೊಂಡರೆ ಎಂತಹ ಜ್ಞಾನಿಯು ಚತುರಮತಿಯೂ ಏನೂ ಸಾಧಿಸಲಾರನು ಆತ್ಮನ ಅಸ್ಥಿತ್ವಕ್ಕೆ ದೇಹ ಹೇಗೆ ಸಾಧನವೋ ಹಾಗೆಯೇ ಸೃಷ್ಠಿಕರ್ತನ ಅಸ್ಥಿತ್ವಕ್ಕೆ ಸೃಷ್ಠಿ ಸಾಧನವಾಗಿದೆ. ದೇಹನಾಶವಾಗುವ ವರೆಗೆ ಮಾತ್ರ ವ್ಯಕ್ತಿಯ ಎಲ್ಲಾ ಸಾದನೆಯೂ ಕ್ರಿಯಾರೂಪದಲ್ಲಿರುತ್ತದೆ ಅಂತೆಯೇ ಪ್ರಕೃತಿ ಕೂಡಾ ಎನ್ನುವುದನ್ನು ನಾವು ಅರಿಯಬೇಕಿದೆ. ಪ್ರಕೃತಿಯ ಪೂಜೆಯೇ ರಕ್ಷಣೆಯೇ ಭಗವಂತನ ಪೂಜೆ ಹಾಗೂ ಆರಾಧನೆ ಎಂಬ ನೈಜ ಸತ್ಯದ ಅರಿವು ಜನರಿಗೆ ಆಗಬೇಕಿದೆ. ಆಗಲೇ ಈವಿಶ್ವ ಶಾಂತಿಯ ನೆಲೆವೀಡಾಗಲಿದೆ.

ನಮ್ಮೆಲ್ಲಾ ಕಥೆ ಕಾವ್ಯ ಪುರಾಣಗಳು ನಮಗೆ ಕಲಿಸುವುದು ಪ್ರಕೃತಿಯನ್ನು ರಕ್ಷಿಸಬೇಕೆನ್ನುವುದಾಗಿಯೇ ಇದೆ. ದೇವರು ರಕ್ಷಿಸುವುದು ಯಾರು ಪ್ರಕೃತಿಗೆ ಪೂರಕವಾಗಿ ಬದಕುತ್ತಿದ್ದಾರೋ ಅಂತಹವರನ್ನೇ ಹೊರತು ಪ್ರಕೃತಿ ನಾಶಕ್ಕಾಗಿ ಶ್ರಮಪಡುವವರನ್ನಲ್ಲ ಇಂತಹವರನ್ನು  ನಾಶಮಾಡುವ ಪುರಾಣ ಕಥೆಗಳನ್ನು ನಾವು ನೋಡುತ್ತೇವೆ, ಅಗ್ನಿ , ವಾಯು, ಭೂಮಿ, ಕಲ್ಲು, ಮಣ್ಣು, ನೀರು, ಮರ, ಪಕ್ಷಿ ,ಪ್ರಾಣಿ, ಇವೆಲ್ಲವನ್ನೂ ಭಗವಂತನ ರೂಪದಲ್ಲಿ ಹಿಂದೂಗಳು ಕಾಣಲು ಹಾಗೂ ಆರಾಧಿಸಲು ಕಾರಣ ನಮಗೆ ನಮ್ಮ ಹಿರಿಯರು ಕಲಿಸಿದ ಸನ್ಮಾರ್ಗ ಸದಾಚಾರವೇ ಆಗಿದೆ, ಪ್ರತಿಜೀವಿಯಲ್ಲೂ ದೈವತ್ವವನ್ನು ಕಂಡವರು ಹಿಂದೂಗಳಾಗಿದ್ದಾರೆ, ಮರಕಡಿಯುವ ಮೊದಲು ಭೂಮಿ ಉಳುವ ಮೊದಲು ಪಾಯ ತೋಡುವ ಮೊದಲು ಪ್ರಕೃತಿಯನ್ನು ಪೂಜಿಸಿ ಪ್ರಕೃತಿಯಲ್ಲಿ ಕ್ಷಮೆ ಕೇಳಿ ತನ್ನ ಅಗತ್ಯಕ್ಕಾಗಿಮಾತ್ರವೇ ಬಳಸುವುದು ನಮ್ಮ ಪ್ರಾಚೀನರು ಹೇಳಿಕೊಟ್ಟ ಧರ್ಮಾಚರಣೆಯಾಗಿದೆ. ಇದು ಬಾರತೀಯರ ದರ್ಷನ ಶಾಸ್ತ್ರವಾಗಿದೆ.

ಆದರೆ ಇಂದು ಪ್ರಕೃತಿಯನ್ನು ಭಗವಂತ ಸೃಷ್ಠಿಸಿರುವುದೇ ಮನುಷ್ಯನ ಭೋಗಕ್ಕೆ ಎನ್ನುವ ಮೂರ್ಖ ಅವಿವೇಕಿ ಜನಗಳು ಮತಗಳು ವಿಶ್ವದಲ್ಲಿ ಬಹುಸಂಖ್ಯಾತರಾಗಿದ್ದು ಅಜ್ಞಾನದಿಂದ ವಿಶ್ವ ನಾಶಕ್ಕೆ ಕಾರಣ ರಾಗುತ್ತಿದ್ದಾರೆ. ಇವರಿಗೆ ಸುಜ್ಞಾನ ವನ್ನು ಬೋಧಿಸುವ ಕೆಲಸವನ್ನು ನಾವು ಹಿಂದುಗಳು ಮಾಡಬೇಕಿದೆ.ಇಂದು ಭಾರತೀಯರು ಮರೆಯುತ್ತಿರುವುದನ್ನು ಪಾಶ್ಚಾತ್ಯರು ಅರಿತು ಆಚರಿಸಲು ಆರಂಭಿಸುತ್ತಿರುವುದು ಒಂದು ಸಂತೋಷದ ವಿಚಾರ, ಭವಿಷ್ಯದಲ್ಲಿ ವಸುದೈವ ಕುಟುಂಬಕಂ ಎಂಬ ವಾಕ್ಯ ನಿಜವಾಗಬಹುದು, ಅಂದು ಹಿಂದೂ ಧರ್ಮದ ನೈಜತೆ ಸರ್ವರಿಗೂ ಅರಿವಾಗುವುದು.

ಪ್ರಕೃತಿಯೇ ದೇವರಾದರೆ ದೇವಸ್ಥಾನಗಳು ದೇವರ ಪೂಜೆ ದೇವರ ವಿಗ್ರಹಗಳು ಉತ್ಸವಗಳು ಇವೆಲ್ಲವೂ ಧಾರ್ಮಿಕ ಆಚರಣೆಗಳು ಅಲ್ಲವೇ? ಅವುಗಳು ಏಕೆ ಬೇಕು? ಇವೆಲ್ಲಾ ಅಥವಾ ವ್ಯರ್ಥವೇ? ಎನ್ನುವುದು ಇನ್ನೊಂದು ಗೊಂದಲ ಹಾಗೂ ಪ್ರಶ್ನೆ.

ಪ್ರಕೃತಿಯ ರಕ್ಷಣೆಯೇ ಧರ್ಮದ ರಕ್ಷಣೆ ಪ್ರಕೃತಿಯ ಆರಾಧನೆಯೇ ದೇವರ ಆರಾಧನೆ ಎಂಬುದಾಗಿ ನಮ್ಮ ಹಿರಿಯರು ತಿಳಿದುಕೊಂಡರು. ಹಾಗೂ ಅದನ್ನು ವೇದಗಳಲ್ಲಿ ತಿಳಿಸಿದರು ಮುಂದೆ ಇದಕ್ಕಾಗಿ ನಾವು ಅನುಸರಿಸಬೇಕಾದ ಮಾರ್ಗ ಹಾಗೂ ಆಚಾರ ವಿಚಾರಗಳನ್ನು ಬದುಕಿನ ವಿಧಾನಗಳನ್ನು ತಿಳಿಸಿದರು ಯಾವುದು ಸಹಜ ಹಾಗೂ ಪ್ರಕೃತಿ ಪೂರಕ ಯಾವುದು ಅಸಹಜ ಹಾಗೂ ಪ್ರಕೃತಿಗೆ ಮಾರಕ ಎಂಬುದಾಗಿ ವಿಭಾಗಿಸಿ ಪೂರಕ ವಾದುದನ್ನು ಧರ್ಮಾಚರಣೆ ಎಂಬುದಾಗಿಯೂ ಮಾರಕವಾದುದನ್ನು ಅಧರ್ಮಾಚರಣೆ ಎಂಬುದಾಗಿಯೂ ವಿಂಗಡಿಸಿ ವಿವರಿಸಿದರು. ಪ್ರಕೃತಿಯ ಪ್ರತಿನಿಧಿಗಳನ್ನು ಸುರರೆಂದೂ ಪ್ರಕೃತಿ ನಾಶಕರನ್ನು ಅಸುರರೆಂದೂ ಕರೆದರು.  ಹಾಗೂ ಸದಾಚಾರದ ಆಚರಣೆಗೆ ಮಾರ್ಗಗಳನ್ನು ಮಾದರಿಗಳನ್ನು ಹಾಕಿಕೊಟ್ಟರು, ಇವುಗಳನ್ನು ವೇದಗಳಲ್ಲಿ ವಿವರಿಸಿದರು ಇಂತಹ ಕ್ರಿಯಾ ಭಾಗಗಳೇ ನಮ್ಮ ಸಂಸ್ಕೃತಿಯಾಗಿ ವೈದಿಕ ಧರ್ಮವಾಗಿ ಬೆಳೆದು ಬಂದಿದೆ. ಹೀಗಿ ಬದುಕಿನ ಮೌಲ್ಯಗಳನ್ನು ವಿವರಿಸುವ ವಿಚಾರಗಳ ಗ್ರಂಥಗಳೇ ಧರ್ಮ ಶಾಸ್ತ್ರಗಳಾಗಿ ಪ್ರಚಾರ ಪಡೆದುವು, ಇಂತಹ ಧರ್ಮಶಾಸ್ತ್ರಗಳನ್ನು ಕಾಲಕ್ಕನುಗುಣವಾಗಿ ಹಲವಾರು ಋಷಿಗಳು ಪರಿಷ್ಕರಣೆಯನ್ನು ಮಾಡಿದ್ದಾರೆ ಹಾಗೂ ಕೆಲವರು ಅಲ್ಪಮತಿಗಳು ತಮ್ಮ ವೈಯುಕ್ತಿಕ ಸ್ವಾರ್ಥದಿಂದ ವಿಕೃತವನ್ನೂ ಗೊಳಿಸಿದ್ದಾರೆ, ಆದರೆ ನಾವು ಇದರಲ್ಲಿ ಸಮಾಜಕ್ಕೆ ಪ್ರಕೃತಿಗೆ ಪೂರಕವಾದುದನ್ನು ಗ್ರಹಿಸಿ ಅದರಂತೆನಡೆಯಬೇಕಿದೆ. ಮಾರಕ ವಾದುದನ್ನು ನಿರ್ಲಕ್ಷಿಸ ಬೇಕಿದೆ. ತೊಡೆಯಬೇಕಾಗಿದೆ. ಧರ್ಮಪ್ರಚಾರ ಹಾಗೂ ತಿಳುವಳಿಕೆಗೆ ಹಿರಿಯರು ಹಾಕಿಕೊಟ್ಟ ಮಾರ್ಗವೇ ನಮ್ಮ ಸಂಸ್ಕೃತಿ ಯಾಗಿದೆ.  ದೇವಾಲಯ, ದೇವರಪೂಜೆ, ಇವೆಲ್ಲವೂ ದರ್ಮರಕ್ಷಣೆಗಾಗಿ ರೂಪಿಸಲ್ಪಟ್ಟ ಸಂಸ್ಕೃತಿಯಾಗಿದೆ. ಸಂಸ್ಕೃತಿ ನಾಶವಾದರೆ ಧರ್ಮ ಶಿಥಿಲ ವಾಗುತ್ತದೆ. ನಮ್ಮ ದೇಶದಮೇಲೆ ಆಕ್ರಮಣ ಮಾಡಿದ ಅನ್ಯ ಮತಗಳು ನಮ್ಮ ಸಂಸ್ಕೃತಿಯನ್ನು ನಾಶಮಾಡುವಲ್ಲಿ ಬಹುವಾಗಿ ಶ್ರಮಿಸಿವೆ. ಇಂದು ಕೂಡಾ ಕ್ರೈಸ್ತಮಿಶನರಿಗಳು ತಾವುನಡೆಸುವ ಶಾಲೆಗಳಲ್ಲಿ ವ್ಯವಸ್ತಿತವಾಗಿ ಹಿಂದೂ ಸಂಸ್ಲೃತಿಯನ್ನು ನಾಶಮಾಡುವ ಕೆಲಸ ಮಾಡುತ್ತಿವೆ. ಎಳೆಮನಸ್ಸುಗಳ ಮೇಲೆ ಅನಿಷ್ಟ ಬಿತ್ತುತ್ತಿವೆ ಹಿಂದೂ ಸಮಾಜ ಇಂದು ಜಾಗ್ರತವಾಗಬೇಕಿದೆ ನಮ್ಮ ಶ್ರೇಷ್ಠ ಶ್ರೀಮಂತ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಬೇಕಿದೆ.

ಹಿರಿಯರು ಧರ್ಮ ರಕ್ಷಣೆಗೆ ಪ್ರೇರಕವಾಗುವಂತೆ ಪ್ರಕೃತಿಗೆ ಪೂರಕವಾಗಿ ಪ್ರೇರಣೆ ಕೊಡುವ ಪಾತ್ರಗಳನ್ನು ಸೃಷ್ಠಿಸಿ ದೇವರು ದೇವತೆಗಳು ದೇವತಾಪರಿವಾರ ಎಂಬುದಾಗಿ ಕಥೆಗಳನ್ನು ಹೆಣೆದರು. ಪ್ರಕೃತಿಗೆ ವಿರುದ್ಧವಾಗಿ ಬದುಕುವ ಜನರನ್ನು ರಾಕ್ಷಸರು ಹಾಗೂ ರಾಕ್ಷಸ ಪರಿವಾರ ಎಂಬುದಾಗಿ ವಿಂಗಡಿಸಿ ಇಂತಹ ಮಾರಕ ವ್ಯಕ್ತಿಗಳನ್ನು ದೇವತೆಗಳು ನಾಶಮಾಡಿ ಲೋಕವನ್ನು ರಕ್ಷಿಸುವದನ್ನು ಕಥೆಗಳಲ್ಲಿ ಮನಮುಟ್ಟವಂತೆ ಚಿತ್ರಿಸಿಕೊಟ್ಟರು. ಇವುಗಳೇ ಪುರಾಣಗಳಾಗಿವೆ.

ವೇದಕಾಲದಲ್ಲಿ ಹೋಮ ಹವನ ಯಜ್ಷ ಯಾಗಗಳ ನೈಜರೂಪದಲ್ಲಿದ್ದ ದೇವತಾರಾಧನೆ ಕಾಲಾನಂತರದಲ್ಲಿ ಅಪಭ್ರಂಶಗೊಳ್ಳುತ್ತಾ ವಿಕೃತಾರ್ಥವನ್ನು ಪಡೆದು ಪ್ರಾಣಿ ಬಲಿ ನರಬಲಿ ಯಂತಹ ಹಿಂಸೆಯ ಅನಿಷ್ಠ ದಿಸೆಯಲ್ಲಿ ಬದಲಾವಣೆಗೊಂಡು ಸಮಾಜಕ್ಕೆ ಮಾರಕವಾಗಿ ಪರಿಗಣಿತವಾಗ ತೊಡಗಿದಾಗ ಸುಮಾರು ಎರಡೂವರೆ ಸಾವಿರ ವರುಷಗಳ ಹಿಂದೆ ಗೌತಮ ಬುದ್ದ ಹಾಗೂ ಜೈನ ತೀರ್ಥಂಕರರು ಜನರನ್ನು ಹಿಂಸೆಯ ಅನಿಷ್ಠ ಮಾರ್ಗದಿಂದ ತಿದ್ದುವಪ್ರಯತ್ನ ಮಾಡಿ ಅಹಿಂಸೆಯನ್ನು ಎತ್ತಿಹಿಡಿದು ಪ್ರಚಾರಮಾಡಿದರು. ಅದರಲ್ಲಿ ಯಶಸ್ಸು ಸಾಧಿಸಲು ವೇದ ವೈದಿಕ ಮಾರ್ಗಗಳನ್ನು ಸಂಪೂರ್ಣ ವಾಗಿ ಧಿಕ್ಕರಿಸಿದರು, ಇದು ಪುನಃ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿತು ಕೆಲವರು ಹೊಸ ಹಾದಿ ತುಳಿದರೆ ಕೆಲವರು ಹಿಂದಿನದನ್ನು ಬಿಡಲಾರದಾದರು ಹೀಗೆ ವೈಚಾರಿಕ ಭಿನ್ನತೆಯಲ್ಲಿ ಬೌದ್ಧ ಹಾಗೂ ಜೈನರಿಗೆ ರಾಜಾಶ್ರಯ ದೊರೆತು ವೈದಿಕ ಪರಂಪರೆ ಅಡ್ಡಹಾದಿ ಹಿಡಿದಾಗ ಅಂದಿನ ವೇದಪಂಡಿತರು ಸಂಸ್ಕೃತಿಯನ್ನು ರಕ್ಷಿಸಲು ಹೊಸ ಮಾರ್ಗಗಳನ್ನು ಕಂಡು ಕೊಂಡರು ಅದುವೇ ದೇವಾಲಯ ಗಳ ಕಲ್ಪನೆ ಹಾಗೂ ವೈದಿಕ ವಿಧಿಗಳನ್ನು ಸಾಂಕೇತಿಕ ವಾಗಿ ನೆರವೇರಿಸುವ ವಿಧಾನ. ಯಜ್ಷಗಳ ಬದಲಾಗಿ ಪೂಜೆಗಳು ಪ್ರಾರಂಭವಾದುವು ಹಾಗೂ ಪ್ರಾಣಿಬಲಿ ಸಂಪೂರ್ಣ ನಿಲ್ಲಿಸಲ್ಪಟ್ಟವು ಸಾಂಕೇತಿಕವಾಗಿ ಕುಂಬಳಕಾಯಿಯನ್ನು ಬಲಿಗೆ ಬದಲಾಗಿ ಬಳಸುವ ಕ್ರಮ ದಕ್ಷಿಣ ಭಾರತದಲ್ಲಿದೆ. ಇಂತಹ ಹೊಸ ವಿಧಾನವು ಎಲ್ಲರಿಗೂ ಹಿತವಾಗ ತೊಡಗಿದ್ದರಿಂದ ಜನಮನ್ನಣೆ ಪಡೆದು ಪ್ರಸಿದ್ಧವಾಯಿತು ಹಾಗೂ ಪುರಾಣಗಳು ರಚಿಸಲ್ಪಟ್ಟು ಪುರಾಣ ಕಥೆಗಳಿಗೆ ಪೂರಕವಾಗಿ ಕ್ಷೇತ್ರಗಳ ರಚನೆ ಆಯಿತು ಹಾಗೂ ಕ್ಷೆತ್ರಗಳಿಗೆ ಪೂರಕವಾಗಿ ಸ್ಥಳಪುರಾಣಗಳು ರಚಿಸಲ್ಪಟ್ಟವು. ಮುಂದೆ ಇದುವೇ ದೇವಾಲಯ ಹಾಗೂ ಪೂಜಾಪದ್ದತಿ ಸಂಸ್ಕೃತಿಯಾಗಿ ಮಾರ್ಪಾಟಾಗಿ ಬೆಳೆಯಿತು, ಇದಕ್ಕೆ ರಾಜಾಶ್ರಯಗಳೂ ದೊರೆಯ ತೊಡಗಿದುವು ಹಾಗೂ ಪ್ರಜೆಗಳೂ ಒಪ್ಪಿಕೊಂಡರು.

ಹೀಗೆ ಸಾಂಕೇತಿಕ ವಿಧಾನಕ್ಕೆ ಮಾರ್ಪಾಟಾದ ಪ್ರಕೃತಿ ಆರಾಧನೆ ಯಜ್ಞ ಯಾಗ ತಪೋ ವನಗಳಿಂದ ಸ್ಥಳಾಂತರ ಗೊಂಡು ಜನರ ವಾಸಮಧ್ಯದಲ್ಲಿ ದೇವಾಲಯಗಳು ನಿರ್ಮಾಣಗೊಂಡು ಯಾಂತ್ರಿಕ ರೀತಿಯಲ್ಲಿ ನಡೆಯತೊಡಗಿತು. ಮೊದಲು ಬಯಲಿನಲ್ಲಿಯೇ ಆರಂಭವಾದ ಆಲಯಗಳು ಮುಂದೆ ಮಂದಿರಗಳಾಗಿ ಬದಲಾದುವು. ಮುಂದೆ ಇದುವೇ ಜನರ ಮನೋರಂಜನಾ ಕೇಂದ್ರವಾಗಿಯೂ ಬದಲಾವಣೆ ಹೊಂದ ತೊಡಗಿತು. ಕಲೆ, ಸಂಗೀತ, ನಾಟ್ಯ ಗಳ ಪೋಷಕ ಸ್ಥಾನ ವಾಗಿ ಸಂಸ್ಕೃತಿಯು ವಿಸ್ತಾರಗೊಳ್ಳುತ್ತಾ ಶ್ರೀಮಂತವಾಗತೊಡಗಿತು ಮುಂದೆ ಹಣ ಅಧಿಕಾರ ಆಡಂಬರದ ತಾಣಗಳಾಗಿ ಬದಲಾಗುತ್ತಾ ಇಂದು ಮೂಲ ಉದ್ದೇಶವನ್ನು ಮರೆತು ಕೇವಲ ಯಾಂತ್ರಿಕವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ಹಾಗೂ ದೇವಾಲಯಗಳು ವ್ಯಾಪಾರೀ ತಾಣಗಳೂ ಪ್ರವಾಸೀಕೇಂದ್ರಗಳೂ ಆಗುತ್ತ ಪ್ರಕೃತಿಗೆ ಮಾರಕವಾಗಿ ಧರ್ಮನಾಶಕ್ಕೆ ಕಾರಣವಾಗುತ್ತಿವೆ. ಹಾಗೂ ಹಲವೆಡೆ ನೈಜ ಉದ್ಧೇಶವೇ ಅರಿಯದ ಸ್ವಾಮಿಗಳ ಪೂಜಾರಿಗಳ ಆಡಳಿತ ಮಂಡಳಿಗಳ ಪ್ರತಿಷ್ಠೆಯ ತಾಣವಾಗಿ ರಾಜಕೀಯ ಶಕ್ತಿಕೇಂದ್ರಗಳಾಗಿ ಇವುಗಳು ದುರ್ಬಳಕೆಯಾಗುತ್ತಿವೆ. ಇಂದಿನ ದೇವಾಲಯಗಳಲ್ಲಿ ಧರ್ಮ ಗಗನ ಕುಸುಮ ವಾಗುತ್ತಿದೆ. ನೈಜ ಧರ್ಮವನ್ನು ಮರೆಮಾಚಿ ತಾವುಮಾಡುತ್ತಿರುವುದೇ ಧರ್ಮ ಎಂಬುದಾಗಿ ಹೆಚ್ಚಿನ ವರು ಜನರನ್ನು ವಂಚಿಸುತ್ತಿದ್ದಾರೆ. ಅಜ್ಞಾನದಿಂದ ಜನರೂ ಪೂಜೆಮಾಡುವುದು ಸ್ವಾಮಿಗಳ ಪಾದತೊಳೆಯುವುದು ದೇವರಿಗೆ ಕಾಣಿಕೆ ಹಾಕುವುದೇ ಧರ್ಮವೆಂದೂ ಪಾಪಪರಿಹಾರ ಮಾರ್ಗವೆಂದೂ ದೀಪದ ಹುಳುಗಳಂತೆ ಬೀಳುತ್ತಿದ್ದಾರೆ. ಹಿಂದೆ ಇಂತಹ ಶ್ರದ್ದಾಕೆಂದ್ರಗಳು ಪ್ರಾಕೃತಿಕ ಕೊಡಿಗೆ ನೀಡುತ್ತಿದ್ದವು ಮತ್ತು ಭಕ್ತಜನರಿಗೆ ಧರ್ಮಾಚರಣೆಗೆ ಮಾರ್ಗದರ್ಷನ ನೀಡುವ ಕೇಂದ್ರಗಳಾಗಿದ್ದುವು, ಆಗ ಭಕ್ತರ ಕಾಣಿಕೆ ಹಣ ಅರ್ಥ ಪೂರ್ಣವಾಗಿ ವಿನಿಯೋಗವಾಗುತ್ತಿತ್ತು ಇಂದು ದೇವಸ್ಥಾನಗಳು ವಾಣಿಜ್ಯ ಮಳಿಗೆ ಹಾಗೂ ತಾಂತ್ರಿಕ ವಿದ್ಯಾಲಯ ಗಳನ್ನುತೆರೆದು ಹಣಮಾಡುವ ಉದ್ದೇಶ ಹೊಂದಿದ್ದು ಪ್ರಕೃತಿನಾಶ ತಥಾ ಧರ್ಮ ನಾಶ ಮಾಡುತ್ತಿವೆ.

ಸಂಸ್ಕೃತಿಯನ್ನು ಉಳಿಸಿಕೊಳ್ಳ ಬೆಕು ಆದರೆ ಅದು ಧರ್ಮನಾಶಕ್ಕೆ ಕಾರಣ ವಾಗಬಾರದು ಧರ್ಮ ಶಾಸ್ತ್ರದ ಮೂಲ ಜ್ಞಾನ ಇಲ್ಲದೆ ಅಜ್ಞಾನದಿಂದ. ಕಷ್ಟಗಳ ಭಯದಿಂದ ಮಾಡುವ ದೇವರ ಪೂಜೆಯಲ್ಲಿ ನಾವು ಗಳಿಸುವ ಪುಣ್ಯ ಇಂದು ಶೂನ್ಯ ಎಂದೇ ಹೇಳಬಹುದು. ಅದಕ್ಕಿಂತ ಸ್ವಚ್ಚ ಪರಿಸರ ಒಂದೆರಡು ಗಿಡ ಮರ ನೆಟ್ಟು ಬೆಳೆಸುವುದು ಒಂದೆರಡು ಪ್ರಾಣಿಗಳನ್ನು ಸಾಕಿ ಉಳಿಸಿವುದು ಕಷ್ಠದಲ್ಲಿರುವವರಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸಹಾಯ ಇದರಿಂದ ನೀವು ಹೆಚ್ಚು ಪುಣ್ಯ ಗಳಿಸಬಹುದು, ಇದುವೇ ನಿಜವಾದ ಧರ್ಮಾಚರಣೆ ಹಾಗೂ ಭಗವಂತನ ಪೂಜೆ ಆಗಿದೆ. ಭಗವಂತನಿಗೆ ಸರಳತೆ ಹಾಗೂ ಶುದ್ಧಮನಸ್ಸಿನ ನಿರ್ಮಲ ಭಕ್ತಿ ಸಮರ್ಪಣೆ ಆಗಬೇಕೆಹೊರತು ನಮ್ಮ ಸಂಪತ್ತಿನ ಒಡ್ಡೋಲಗ ಅಲ್ಲ. ಸಾಲ ಮಾಡಿ ಪೂಜೆಮಾಡಿಸಿ ದೋಶಕಲೆಯುತ್ತೇನೆನ್ನುವಷ್ಟು ದೊಡ್ಡ ಮೂರ್ಖತನ ಇಲ್ಲ. ಪ್ರಕೃತಿ ಪೂಜೆಯೇ ಹಿಂದೂ ಧರ್ಮದ ತಿರುಳು ಪ್ರಕೃತಿಪೂಜೆಯೇ ಸಮಸ್ಥ ಮನುಷ್ಯರು ಅನುಸರಿಸಬೇಕಾದ ನಿಜವಾದ ಧರ್ಮ ಹಾಗೂ ಉತ್ತಮ ಮಟ್ಟದ ಭಗವಂತನ ಆರಾಧನೆ ಯಾಗಿದೆ. ಪಂಚಭೂತಗಳಾದ ಅಗ್ನಿ, ವಾಯು, ನೀರು, ಮಣ್ಣು, ಹಾಗೂ ಆಕಾಶ ಇವುಗಳನ್ನು ರಕ್ಷಿಸುವುದೇ ದೇವರ ಪೂಜೆ, ಇವುಗಳ ಸಂಕೇತವೇ ಅಭಿಶೇಕ ಆರತಿ ಧೂಪ ಗಂಧ ಗಳನ್ನು ದೇವರಿಗೆ ಸಮರ್ಪಿಸುವುದು. ಹಾಲು ಹೂವು ಹಣ್ಣು ಪತ್ರೆಗಳಿಂದ ಅರ್ಚಿಸುವುದು. ದಾರ್ಮಿಕ ಕ್ಷೇತ್ರ ಮನಶಾಂತಿಯ ತಾಣವಾಗಬೇಕೇ ಹೊರತು ಮನರಂಜನೆಯ ತಾಣವಾಗಬಾರದು. ಭಕ್ತಿಕೇಂದ್ರವಾಗಬೇಕೇ ಹೊರತು ಶಕ್ತಿ ಕೇಂದ್ರವಾಗಬಾರದು.

ಹಾಗಾದರೆ ದೇವಸ್ಥಾನಗಳಲ್ಲಿ ದೇವರಲ್ಲಿ ಶಕ್ತಿ ಇಲ್ಲವೇ? ಅಲ್ಲಿಗೆ ಹೋಗುವುದು ವ್ಯರ್ಥವೇ?

ಹೀಗೆ ಅಜ್ಞಾನದಿಂದ ಗೊಂದಲ ಮೂಡಬಹುದು ಇಂತಹ ನಾಸ್ಥಿಕ ಭಾವ ಹೊಂದಬೇಕಿಲ್ಲ. ದೇವಸ್ಥಾನ ಹಾಗೂ ದೇವರುಗಳು ನಂಬಿಕೆಯ ಮೇಲೆ ಅವಲಂಭಿತ ವಾಗಿದೆ.  ಭಕ್ತರ ನಂಬಿಕೆಯನ್ನು ಘಾಸಿಗೊಳಿಸುವುದು ತಿರಸ್ಕರಿಸುವುದು ಮೂರ್ಖತನ ಆದರೆ ಆ ನಂಬಿಕೆ ಆತನ ವ್ಯಕ್ತಿತ್ವವನ್ನು ಬೆಳೆಸಲು ಪೂರಕ ವಾಗಿರಬೇಕು. ಆ ಮೂಲಕ ಆತನ ಕುಟಂಬ ಹಾಗೂ ಸುತ್ತಲ ಸಮಾಜ, ಪರಿಸರ, ಪ್ರಕೃತಿ ಇವುಗಳ ಮೇಲೆ ಉತ್ತಮ ಪರಿಣಾಮ ಬೀರಬೇಕು. ಇವು ಉನ್ನತಿ ಹೊಂದಬೇಕು. ಭಕ್ತನ ನಂಬಿಕೆ ಹೀಗೆ ಸಾತ್ವಿಕ ರೂಪದಲ್ಲಿದ್ದರೆ ಅವನು ದೇವಸ್ಥಾನ ಹಾಗೂ ದೇವರಲ್ಲಿ ಇಟ್ಟ ನಂಬಿಕೆ ಸತ್ಪಲಗಳನ್ನು ಕೊಡುವುದರಲ್ಲಿ ಅನುಮಾನವಿಲ್ಲ ಯಾಕೆಂದರೆ “ಯದ್ಭಾವಂ ತದ್ಭವತಿ” ಎನ್ನುವ ಮಾತಿನಂತೆ ದೇವಸ್ಥಾನದಲ್ಲಿ ದೇವರೆದುರು ನಮ್ಮ ಭಾವ ಏನಿದೆಯೋ ಅದೇ ಸಿದ್ಧಿಸುತ್ತದೆ. ಆದರೆ ನಾವು ಹೋಗುವ ಕ್ಷೇತ್ರ ನಮ್ಮ ದುಷ್ಠತನವನ್ನು ಮರೆಮಾಚುವ ಉದ್ದೇಶದಿಂದಲೋ ಅಥವಾ ಇನ್ನಾರಿಗೋ ಅನ್ಯಾಯ ಮಾಡಲು ಅಥವಾ ಮಾಡಿದ ಅನ್ಯಾಯದಿಂದ ಬಚಾವಾಗುವ ಉದ್ದೇಶವನ್ನೋ ಹೀಗೆ ದುಷ್ಠ ವಿಚಾರದ ಸಲುವಾಗಿ ಹೋಗಿದ್ದರೆ ಅದು ಖಂಡಿತಾ ಸತ್ಫಲವನ್ನು ಕೊಡಲಾರದು ಅದು ವಿರುದ್ಧ ಫಲಿತಾಂಶವನ್ನೇ ನೀಡುವುದು. ಒಬ್ಬ ಸಾತ್ವಿಕ ವ್ಯಕ್ತಿ ಸದಾಚಾರದ ಬದುಕನ್ನೇ ಬದುಕುತ್ತಿದ್ದರೆ ಆತ ದೇವಸ್ತಾನಕ್ಕೆ ಹೋಗದೆಯೂ ಒಂದೂ ಪೂಜೆ ಮಾಡದೆಯೂ ದೇವರ ಕೃಪೆಗೆ ಪಾತ್ರನಾಗ ಬಲ್ಲನು ಆತನ ಹೃದಯ ನಿಷ್ಕಲ್ಮಶವಾಗಿರಬೇಕು ಅಷ್ಟೇ, ಇಲ್ಲಿ ಭಕ್ತಿಯ ಪ್ರದರ್ಷನಕ್ಕಿಂತಲೂ ಬದುಕಿನ ರೀತಿಯೇ ಅತಿಮುಖ್ಯ ಎನಿಸುತ್ತದೆ. ಜನಾರ್ಧನ ರೆಡ್ಡಿಯ ಕಿರೀಟವೂ ವಿಜಯ ಮಲ್ಯನ ಪಲ್ಲಕ್ಕಿಯೋ ಅವರನ್ನು ನೀಚಕರ್ಮದಿಂದ ರಕ್ಷಿಸಲಾಗದು ಸದಾಚಾರದ ವ್ಯಕ್ತಿಯ ಒಂದು ತಳಸಿದಳವೂ ಭಗವಂತನ ಕೃಪೆಯನ್ನು ಗಳಿಸಲು ಸಾಧನವಾಗಬಲ್ಲುದು ಇದುವೇ ಹಿಂದೂ ಧರ್ಮದ ಪ್ರಾಜ್ಞರ ಉಪದೇಶ ವಾಗಿದೆ.

ಧರ್ಮವನ್ನು ಅರಿಯಲು ಸಂಸ್ಕೃತಿಯೇ ಪಾಠಶಾಲೆಯಾಗಿದೆ ಆದುದರಿಂದ ಸಂಸ್ಕೃತಿ ಉಳಿದಲ್ಲಿ ಮಾತ್ರ ಧರ್ಮದ ಅರಿವು ಜನರಿಗೆ ದೊರೆಯುವುದು ಸಾಧ್ಯ ಹಿಂದೂ ಧರ್ಮ ಹಾಗೂ ವಿಚಾರಗಳು ಇನ್ನೂ ಉಳಿದಿರಲು ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಹಿರಿಯರ ದೂರದೃಷ್ಠಿಯ ದೇವಾಲಯ ಮಠ ಮಂದಿರಗಳು ಹಾಗೂ ಅವುಗಳು ಪೋಷಿಸಿಕೊಂಡು ಬಂದ ಗ್ರಂಥ ಜ್ಞಾನಗಳೇ ಕಾರಣ ವಾಗಿದೆ. ಆದುದರಿಂದ ನಾವು ಅಂಧಾನು ಕರಣೆ ಮಾಡುವವರಾಗದೆ ಅಧ್ಯಯನದಿಂದ ಜ್ಞಾನಿಗಳಾಗ ಬೇಕು. ನೈಜ ಧರ್ಮಮಾರ್ಗದ ಧರ್ಮಾಚರಣೆಯಾವುದು? ಸಂಸ್ಕೃತಿ ಯಾವುದು ತೋರಿಕೆಯ ಡಂಬಾಚಾರ ಯಾವುದೆಂಬುದನ್ನು ಜ್ಞಾನದಿಂದ ಅರಿಯಬೇಕು. ಇದನ್ನು ಅರಿತು ನೈಜ ಧರ್ಮಾಚರಣೆಯಲ್ಲಿ ಬದುಕುತ್ತಾ ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ಬಳುವಳಿಯಾಗಿ ಕೊಟ್ಟಾಗಲೇ ನಮ್ಮ ಹುಟ್ಟಿಗೆ ಅರ್ಥವೂ ಜೀವನಕ್ಕೆ ಮೌಲ್ಯವೂ ಬರುವುದು. ಇದುವೇ ನಾವು ತೀರಿಸಬೇಕಾದ ಋಣತ್ರಯಗಳೆಂದು ಹಿರಿಯರು ವಿವರಿಸಿದ್ದಾರೆ ಅವುಗಳು ಪಿತೃಋಣ, ಋಷಿ ಋಣ ಹಾಗೂ ದೇವರುಣ ವಾಗಿವೆ.

ಪಿತೃಋಣ ಎನ್ನುವುದು ಒಬ್ಬ ವ್ಯಕ್ತಿ ವೃದ್ಧಾಪ್ಯದಲ್ಲಿರುವ ತಂದೆ ತಾಯಿಗಳನ್ನು ಉಚಿತ ಆರೈಕೆ ಸತ್ತನಂತರ ಉಚಿತ ಉತ್ತರಾದಿ ಕ್ರಿಯೆ ಮಾಡುವುದಲ್ಲದೆ  ತಾನು ಸತ್ಸಂತಾನವನ್ನು ಪಡೆದು ತನ್ನ ಕುಟುಂಬದ ಹಿರಿಯರಿಂದ ಹಾಗೂ ತಂದೆ ತಾಯಿ ಯಿಂದ ಪಡೆದ ಸಂಸ್ಕಾರವನ್ನು ತನ್ನ ಮಕ್ಕಳಿಗೆ ನೀಡುವುದರಲ್ಲಿ ಕೊನೆಗೊಳ್ಳುತ್ತದೆ.

ಋಷಿಋಣವು – ವೇದಾಧ್ಯಯನ ಮಾಡುವ ಮುಖಾಂತರ ನಮ್ಮ ಋಷಿಮುನಿಗಳಿಂದ ನೀಡಲ್ಪಟ್ಟ ಜ್ಞಾನವನ್ನು ನಿರಂತರ ಆಚರಣೆ ಹಾಗೂ ಪಾಠಪ್ರವಚನ ಗಳನ್ನು ಮಾಡುವ ಮುಖಾಂತರ ಮುಂದಿನ ತಲೆಮಾರಿಗೆ ತಿಳಿಸುವದರಿಂದ ಮುಕ್ತಾಯ ವಾಗುತ್ತದೆ.

ದೇವಋಣವು – ಪ್ರಕೃತಿಯನ್ನು ರಕ್ಷಿಸುವುದರಿಂದ ದೇವರ ಕೊಡುಗೆಗೆ ಕೃತಜ್ಷತೆ ಸಲ್ಲಿಸುವುದರಿಂದ ಹಗೂ ನಾವು ಪ್ರಕೃತಿಯಿಂದ ಪಡೆದುದಕ್ಕಿಂತ ಹೆಚ್ಚು ಪ್ರಕೃತಿಗೆ ಕೊಡುಗೆ ನೀಡಲು ಪ್ರಯತ್ನಿಸುವುದರಿಂದ ತೀರಿಸಲ್ಪಡುತ್ತದೆ.

ಧರ್ಮವೇ ನಮ್ಮ ಬದುಕಾಗಲಿ ಪರಿಸರ ಸಂರಕ್ಷಣೆಯೇ ನಮ್ಮ ಪೂಜೆಯಾಗಲಿ. ಹಿರಿಯರು ನೀಡಿದ ಸಂಸ್ಕಾರ ಸಂಸ್ಕೃತಿಯ ಅರ್ಥವರಿತ ಆಚರಣೆಯೇ ನಮ್ಮ ಜೀವಾಳವಾಗಲಿ. ಜೈ ಹಿಂದ್

  • ಶ್ರೀಜಿ